‘ಎದುರಾಗುವ ಕಷ್ಟಗಳು ನಮ್ಮನ್ನು ಮತ್ತಷ್ಟು ಬಲಾಡ್ಯಗೊಳಿಸುತ್ತವೆ. ಸಾಧಿಸುವ ಹಠವಿದ್ದವರಿಗೆ ಮುಳ್ಳಿನ ಹಾದಿಯೂ ಸಹ ಹೂವಿನ ಹಾಸಿಗೆಯೇ ಆಗಿರುತ್ತೆ. ಅಂದುಕೊಂಡಿದ್ದನ್ನು ಸಾಧಿಸುವತ್ತ ದಿಟ್ಟ ಹೆಜ್ಜೆ ಇಡಬೇಕು. ನಮ್ಮ ಮೇಲೆ ನಮಗೆ ನಂಬಿಕೆಯಿದ್ದರೆ ಯಶಸ್ಸು ಒಲಿದು ಬರುತ್ತದೆ’ ಎಂಬುದು ಈ ಬೆಡಗಿಯ ನಂಬಿಕೆ. ಇದು ಅವರು ಆಡುವ ಬರಿ ಮಾತಲ್ಲ, ಸ್ವತಃ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ.

ಈಕೆ ಕೊಡಗಿನ ಚೆಲುವೆ. ಬಾಲ್ಯದ ಕನಸು ನನಸಾಗಿಸಿಕೊಳ್ಳುವತ್ತ ಹೆಜ್ಜೆ ಹಾಕುತ್ತಿರುವ ಸ್ಯಾಂಡಲ್ ವುಡ್ ನ ಭವಿಷ್ಯದ ತಾರೆ.

ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಚಂದನದ ಗೊಂಬೆಯ ಹೆಸರು ‘ರಾಧನ’. ಕೊಡಗು ಇವರೂರು. ಅಪ್ಪ ರಾಜು, ಅಮ್ಮ ಕಮಲ. ಅಣ್ಣ ಕಾಂತರಾಜ್, ತಂಗಿ ಕೀರ್ತಿ, ತಮ್ಮ ಮೋಹನ್.

ಚೆಟ್ಟಳ್ಳಿ ಎಂಬ ಊರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ , ಬಳಿಕ ಕುಶಾಲನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ ರಾಧನ ಎಫ್ ಎಂ ಸಿ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ಬಾಲ್ಯದಿಂದಲೂ ನಟನೆ ಇವರಾಸೆ. ಅಕ್ಕ-ಪಕ್ಕದಲ್ಲೇ ಇದ್ದರೂ ಸಹ ಇವರು ಮತ್ತು ಇವರ ಸ್ನೇಹಿತೆ ಪತ್ರ ವಿನಿಮಯ ಮಾಡಿಕೊಳ್ಳುತ್ತಿದ್ದರು. ‘ನಿನಗೆ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ನನಗೂ ಕೊಡಿಸು. ನಂಗೆ ಸಿಕ್ಕರೆ ನಿಂಗೆ ಕೊಡಿಸುವೆ’ ಎಂದು ಅವರಿಬ್ಬರು ಯಾವಾಗಲೂ ಮಾತಾಡಿಕೊಳ್ತಿದ್ದರಂತೆ. ಶಾಲಾ ದಿನಗಳಲ್ಲಿ ಡ್ಯಾನ್ಸ್ ನಲ್ಲಿ ತುಂಬಾನೇ ಆಸಕ್ತಿಯಿತ್ತು. ಯಾವುದೇ ಕಾರ್ಯಕ್ರಮ ಇರಲಿ ಡ್ಯಾನ್ಸ್ ನಲ್ಲಿ ರಾಧನ ಮುಂದಿರುತ್ತಿದ್ದರು.

ಬರು ಬರುತ್ತಾ ಪತ್ರಿಕೋದ್ಯಮದ ಕಡೆ ಆಸಕ್ತಿ ಮೂಡಿಸಿಕೊಂಡ ರಾಧನ ಅವರು ಪತ್ರಿಕೋದ್ಯಮ ಪದವೀಧರರಾದರು. ಬಳಿಕ ಕೊಡಗಿನ ‘ಚಾನಲ್ 24 ಕರ್ನಾಟಕ’ ಎಂಬ ಟೆಲಿವಿಷನ್ ವಾಹಿನಿಯಲ್ಲಿ ನಿರೂಪಕಿ ಆಗಿ ಪತ್ರಿಕೋದ್ಯಮ ವೃತ್ತಿ ಆರಂಭಿಸಿದರು.

2016ರಲ್ಲಿ ಬೆಂಗಳೂರಿನತ್ತ ಕೊಡಗಿನ ಕುವರಿಯ ಪಯಣ. ಕಸ್ತೂರಿ ವಾಹಿನಿಯಲ್ಲಿ ಸಿನಿಮಾ ವರದಿಗಾರ್ತಿಯಾಗಿ , ನಿರೂಪಕಿಯಾಗಿ ಹೊಸ ಇನ್ನಿಂಗ್ಸ್ ಶುರುಮಾಡಿದರು. ಅಲ್ಲಿ ಕೆಲ ಸಮಯ ಕೆಲಸ ಮಾಡಿ ಸರಳ ಜೀವನ ವಾಹಿನಿ ಸೇರಿದರು. ಅಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದರು.

ಸಿನಿಮಾ ವರದಿಗಾರಿಕೆಯು ಸಿನಿಮಾ ನಟಿ ಆಗಬೇಕೆಂಬ ಬಾಲ್ಯದ ಕನಸನ್ನು ಮತ್ತಷ್ಟು ಜಾಗೃತಗೊಳಿಸಿತು. ನಿಧಾನಕ್ಕೆ ಸದ್ದಿಲ್ಲದಂತೆ ಪತ್ರಿಕೋದ್ಯಮ ಬಿಟ್ಟು ಸಿನಿಯಾನ ಆರಂಭಿಸಿಯೇ ಬಿಟ್ಟಿದ್ದಾರೆ.

ವಿಜಯ್ ಎ. ಎಂ ನಿರ್ದೇಶನದ ‘ಇಲ್ಲದೆ ಇರುವ’ ಮತ್ತು ಪ್ರೀತಿಯಿಂದ ಸಿನಿಮಾ ನಿರ್ದೇಶಕ ರಾಜು ಹಲಗೂರು ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ‘ ಮಳವಳ್ಳಿ ಶಾಂತಿ ಕಾಲೇಜು’ ಎಂಬ ಎರಡು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ತಮಿಳು ಸಿನಿಮಾಗಳಿಂದಲೂ ಆಫರ್ ಗಳು ಬರುತ್ತಿವೆ.ಈಗಿನ್ನೂ ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದೇನೆ.ಇಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು ಎಂಬ ಆಸೆ ಇದೆ ಎನ್ನುವ ರಾಧನ ಅವರಿಗೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಗೆ ನಾಯಕಿಯಾಗಿ ನಟಿಸಬೇಕು ಎಂಬ ಮಹಾದಾಸೆ ಇದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ತಂಗಿಯಾಗಿ ಕಾಣಿಸಿಕೊಳ್ಳಲು ಇಷ್ಟವಂತೆ.
ವಸಿಷ್ಠ ಸಿಂಹ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡು, ಅವರೊಡನೆ ತಾನು ಸಾಫ್ಟ್ ಹುಡುಗಿಯಾಗಿ ಕಾಣಿಸಿಕೊಳ್ಳಬೇಕು ಎನ್ನುತ್ತಾರೆ ರಾಧನ.

ಅಷ್ಟೇ ಅಲ್ಲ ತಾನೇ ಗಡ್ಡ ಮೀಸೆ ಹಾಕಿಕೊಂಡು ರಗಡ್ ಲುಕ್ ನಲ್ಲಿ ತುಂಬಾ ಚಾಲೆಂಜಿಂಗ್ ಆಗಿರೋ ಪಾತ್ರವನ್ನು ಮಾಡಬೇಕು ಎಂಬುದು ಸಹ ರಾಧನ ಅವರ ಹೆಬ್ಬಯಕೆ.

ಸಿನಿಮಾ ಕ್ಷೇತ್ರದ ಯಾವುದೇ ರೀತಿಯ ಹಿನ್ನೆಲೆ ಬಲವಿಲ್ಲದ ರಾಧನ ಸಿನಿರಂಗದಲ್ಲಿ ನಿರೀಕ್ಷೆಗೂ ಮೀರಿ ಬೆಳೆಯಲಿ. ಕಂಡಕಸನುಗಳೆಲ್ಲವೂ ನನಸಾಗಲಿ. ಇವರ ಸಿನಿಜರ್ನಿಗೆ ಶುಭವಾಗಲಿ , ಲೈಫ್ ಸೂಪರ್ ಆಗಿರಲಿ ಎನ್ನುತ್ತಾ…
ಶಶಿಧರ್ ಎಸ್ ದೋಣಿಹಕ್ಲು







