ಮುಂದಿನವಾರ ರಘುಭಟ್ ನಟನೆಯ 2 ಸಿನಿಮಾ ರಿಲೀಸ್…!
ಶೀಘ್ರದಲ್ಲೇ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡುತ್ತಿರೋ ನಟ ರಘುಭಟ್ ಅವರ ಅಭಿನಯದ ಎರಡು ಸಿನಿಮಾಗಳು ಒಂದೇ ದಿನ ತೆರೆಕಾಣಲಿವೆ.
ಕಳೆದ ಡಿಸೆಂಬರ್ ನಲ್ಲಿ ಒಂದೇ ವಾರದ ಅಂತರದಲ್ಲಿ ರಘುಭಟ್ ನಾಯಕ ನಟನಾಗಿ ಅಭಿನಯಿಸಿದ್ದ ಅನ್ವೇಷಿ ಹಾಗೂ ಡ್ರೀಂ ಗರ್ಲ್ ಸಿನಿಮಾಗಳು ತೆರೆಕಂಡಿದ್ದವು. ಇದೀಗ 13 ರಂದು (ಜುಲೈ 13) ಲವ್ ಯು 2 ಮತ್ತು ಎಂಎಂಸಿಎಚ್ ಸಿನಿಮಾಗಳು ರಿಲೀಸ್ ಆಗಲಿವೆ.
ಬಿ ಕೆ ಮಹೇಶ್ (ಜಸ್ಟ್ ಬಿ.ಕೆ) ನಿರ್ದೇಶನದ ಲವ್ ಯು 2 ನಲ್ಲಿ ನಾಯಕರಾದ ರಘುಭಟ್ ಮತ್ತು ಪವನ್ ಕುಮಾರ್ ಇಬ್ಬರಿಗೂ ಒಬ್ಬರೇ ನಾಯಕಿ. ಆದ್ರೆ , ಈಕೆ ಕೊನೆಯಲ್ಲಿ ಯಾರನ್ನು ಒಪ್ಪಿಕೊಳ್ತಾಳೆ ಅನ್ನೋದಕ್ಕೆ ಸಿನಿಮಾ ನೋಡಲೇಬೇಕು. ನಾಯಕಿ ಕೀರ್ತಿಲಕ್ಷ್ಮಿ ಚಿತ್ರರಂಗಕ್ಕೆ ಹೊಸಬರು. ಒಂದೆರಡು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವವಿರುವ ಜಸ್ಟ್ ಬಿ.ಕೆ (ಮಹೇಶ್) ನಿರ್ದೇಶನದ ಚೊಚ್ಚಲ ಚಿತ್ರವಿದು. ಇದಕ್ಕೆ ಬಂಡವಾಳ ಹಾಕಿರೋರು ಸಹ ಚಿತ್ರರಂಗಕ್ಕೆ ಹೊಸಮುಖ. ಪವನ್ ಕುಮಾರ್ ಈ ಚಿತ್ರವನ್ನನಿರ್ಮಿಸುತ್ತಿರುವುದಲ್ಲದೆ ರಘುಭಟ್ ಜೊತೆಗೆ ಇನ್ನೊಬ್ಬ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ.
ಇನ್ನು ಎಂಎಂಸಿಎಚ್ ಮುಸ್ಸಂಜೆ ಮಹೇಶ್ ನಿರ್ದೇಶನದ ಚಿತ್ರ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದೆ.
ನಟಿ ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮಾ, ಪ್ರಮೀಳಾ ಜೋಷಾಯ್ ಅವರ ಪುತ್ರಿ ಮೇಘನಾ ರಾಜ್, ಸುಧಾ ಬೆಳವಾಡಿ ಅವರ ಪುತ್ರಿ ಸಂಯುಕ್ತ ಹೊರನಾಡು ಹಾಗೂ ಹಿರಿಯ ನಟಿ ಸುಮಿತ್ರಾ ಅವರ ಪುತ್ರಿ ದೀಪ್ತಿ (ನಕ್ಷತ್ರ) ನಾಯಕಿಯರಾಗಿ ನಟಿಸಿದ್ದಾರೆ.
ಈ ಚಿತ್ರದಲ್ಲಿ ರಾಗಿಣಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ರಘುಭಟ್ ಮತ್ತು ಯುವರಾಜ್ ಚಿತ್ರದ ನಾಯಕರು. ಎಸ್ ಪುರುಷೋತ್ತಮ್ , ಜಾನಕಿ ರಾಮ್ ಮತ್ತು ಅರವಿಂದ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.
ಮೈಸೂರಿನ ಪ್ರತಿಷ್ಠಿತ ಕಾಲೇಜ್ ವೊಂದರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂಎಂಸಿಎಚ್. ಇದೊಂದು ಮಹಿಳಾ ಪ್ರಧಾನ ಚಿತ್ರ.
ತಾನು ಓದುತ್ತಿದ್ದ ವೇಳೆಯಲ್ಲಿ ನಡೆದ ಘಟನೆಯನ್ನು ಆಧರಿಸಿ ಮುಸ್ಸಂಜೆ ಮಹೇಶ್ ಚಿತ್ರ ಮಾಡಿದ್ದಾರೆ. ಅವರು ಹೇಳುವಂತೆ ಆಗ ನಡೆದ ಘಟನೆ ಸುದ್ದಿ ಆಗಿರಲಿಲ್ಲ.ಪೊಲೀಸ್ ಅಧಿಕಾರಿಗಳು ಸುದ್ದಿಯಾಗದಂತೆ ನೋಡಿಕೊಂಡಿದ್ದರಂತೆ.
ಈ ವಿಷಯ ಯಾರಿಗೂ ಗೊತ್ತಿಲ್ಲವಂತೆ. ಹೇಳಬೇಕೆಂದುಕೊಂಡಿರುವುದನ್ನು ಸಿನಿಮಾ ಮೂಲಕ ಹೇಳುತ್ತಿದ್ದಾರಂತೆ. ಎಂಎಂಸಿಎಚ್ ಅಂದರೇನು ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕಂತೆ.
ಹೀಗೆ ರಘುಭಟ್ ಅಭಿನಯದ ಎರಡು ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗಲಿವೆ.
ಕೃಷ್ಣಲೀಲೆ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಬಾಲ ನಟನಾಗಿ ಕಾಣಿಸಿಕೊಂಡಿದ್ದ ರಘುಭಟ್ ಈಗ ಹಂತಹಂತವಾಗಿ ಚಿತ್ರರಂಗದಲ್ಲಿ ನೆಲೆಯೂರುತ್ತಿದ್ದಾರೆ.
ರಾಮ ಕೃಷ್ಣ ಗೋವಿಂದ ಸಿನಿಮಾ ಮೂಲಕ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಇವರು. ಆ ನಂತರ ತಾರೆ , ಪಾರು ವೈಫ್ ಆಫ್ ದೇವದಾಸ್, ರಘುವೀರ ಚಿತ್ರಗಳಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ತೆರೆಕಂಡ ಅನ್ವೇಷಿ, ಡ್ರೀಂಗರ್ಲ್ ಚಿತ್ರದ ನಾಯಕನಾಗಿ ಮಿಂಚಿದ್ದಾರೆ. ದಾದಾ ಈಸ್ ಬ್ಯಾಕ್ ಸಿನಿಮಾದಲ್ಲಿ ನೆಗಿಟೀವ್ ಶೇಡ್ ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಕರ್ವ, ನನ್ನ ನಿನ್ನ ಪ್ರೇಮಕಥೆ, ಬಕಾಸುರ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.