ಬೆಂಗಳೂರಿನ ಜನರಿಗೆ ಮಳೆರಾಯ ಭಾರಿ ಅವಾಂತರ ಸೃಷ್ಟಿ ಮಾಡಿದ್ದಾನೆ. ಮನೆಗಳಿಗೆ ಮತ್ತು ಅಪಾರ್ಟ್ಮೆಂಟ್ನ ನೆಲಮಹಡಿಗಳು ಮಳೆ ನೀರಿನಿಂದ ತುಂಬಿ ಜನಜೀವನ ಅತಂತ್ರವಾಗಿದೆ. ಅದೇ ರೀತಿ ಬೆಂಗಳೂರು ಹೊರವಲಯದ ಬೆಳ್ಳಂದೂರು ಹೊರ ವರ್ತುಲ ರಸ್ತೆಯ ಇಕೋ ಸ್ಪೇಸ್ ಬಳಿ ಮಳೆ ನೀರು ತುಂಬಿ ರಸ್ತೆಗೆ ಹರಿದ ಪರಿಣಾಮ, ಬೆಂಗಳೂರಿನ ಹೊರವಲಯದಲ್ಲಿರುವ ಟೆಕ್ ಪಾರ್ಕ್‌ಗಳಿಗೆ ನಗರವನ್ನು ಸಂಪರ್ಕಿಸುವ ಹೊರ ವರ್ತುಲ ರಸ್ತೆ ಮುಳುಗಡೆಯಾಗಿದ್ದು, ಭಾರಿ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಸರ್ಜಾಪುರ ರಸ್ತೆಯಲ್ಲಿನ ರೈಂಬೋ ಡ್ರೈವ್ ಲೇಔಟ್ ಸಂಪೂರ್ಣ ಜಲಾವೃತಗೊಂಡು ಬೋಟ್ ಮೂಲಕ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಸರ್ಜಾಪುರ ರಸ್ತೆ ಒಂದೇ ತಿಂಗಳಲ್ಲಿ ಮೂರನೇ ಬಾರಿ ಕೆರೆಯಂತಾಗಿದೆ. ನಿನ್ನೆ ರಾತ್ರಿ ಸುರಿದ ಮಳೆಗೆ ಎಕೋ ಸ್ಪೇಸ್, ಮುನ್ನೇಕೊಳಲಿನ ಶಾಂತಿನಿಕೇತನ, ತೂಬರಪಾಳ್ಯದ ಬಿಇಎಂಎಲ್, ವೈಟ್ ಫೀಲ್ಡ್ ನ ಡಿಎನ್ಎ ಇಂಡಸ್ ವ್ಯೂವ್ ಸೇರಿದಂತೆ ಹಲವೆಡೆ ಅಪಾರ್ಟ್ಮೆಂಟ್ಗಳಿಗೆ ಮಳೆ ನೀರು ನುಗ್ಗಿದ್ದರ ಬಗ್ಗೆ ತಿಳಿದ ಶಾಸಕ ಅರವಿಂದ ಲಿಂಬಾವಳಿ ಭೇಟಿ ನೀಡಿ ಪರಿಶೀಲಿಸಿದರು. ಕ್ಷೇತ್ರದಲ್ಲಿ ರಾಜಕಾಲುವೆಗಳು ಒತ್ತುವರಿಯಾದ ಜಾಗವನ್ನು ತೆರವುಗೊಳಿಸಿ, ತ್ವರಿತವಾಗಿ ಸಮಸ್ಯೆಗಳಿಗೆ ಮುಕ್ತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಭಾರಿ ಅವಾಂತರ ಸೃಷ್ಟಿಮಾಡಿದ ಮಳೆರಾಯ
Date: