ರಾಜಧಾನಿ ಬೆಂಗಳೂರಿನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಮಳೆಯ ಪ್ರಕೋಪ ಕೊಂಚ ತಗ್ಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಮುಳುಗಡೆಯಾಗಿದ್ದ ಬಡಾವಣೆ ಹಾಗೂ ಮನೆಗಳನ್ನು ತೊರೆದಿದ್ದ ಜನರು ತಮ್ಮ ಮನೆಗಳತ್ತ ಹೆಜ್ಜೆ ಹಾಕಲಾರಂಭಿಸಿದ್ದಾರೆ. ಜಲಾವೃತ ಬಡಾವಣೆಗಳು ಮತ್ತು ಮನೆಗಳಲ್ಲಿ ಮಳೆ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ತಗ್ಗಲಾರಂಭಿಸಿದ್ದು, ಮಳೆ ಬಾಧಿತ ಪ್ರದೇಶಗಳಲ್ಲಿ ಕೆಸರು ರಾಶಿಯಾಗಿ ಬಿದ್ದಿದೆ. ನೀರು, ಕೆಸರು ತೆರವುಗೊಳಿಸಿ ವಾಸಕ್ಕೆ ಅಣಿಗೊಳಿಸುವಲ್ಲಿ ನಿವಾಸಿಗಳು ನಿರತರಾಗಿದ್ದಾರೆ. ಅಂಡರ್‌ಪಾಸ್‌ಗಳು, ರೈಲ್ವೆ ಕೆಳ ಸೇತುವೆಗಳು, ಸರ್ವಿಸ್ ರಸ್ತೆಗಳಲ್ಲಿ ಕೆರೆಯಂತೆ ನಿಂತಿದ್ದ ಮಳೆ ನೀರನ್ನು ಪಂಪ್‌ಗಳ ಮೂಲಕ ಹೊರ ಹಾಕಲಾಗುತ್ತಿದೆ. ಮುಖ್ಯವಾಗಿ ಸರ್ಜಾಪುರ ಮುಖ್ಯ ರಸ್ತೆ, ಬೆಳ್ಳಂದೂರು ರಸ್ತೆ, ಮಾರತ್‌ಹಳ್ಳಿ – ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆ, ಹೊರ ವರ್ತುಲ ರಸ್ತೆ, ಥಣಿಸಂದ್ರ ಮುಖ್ಯರಸ್ತೆ, ಹೊರಮಾವು ರಸ್ತೆಯ ಜಯಂತಿ ಗ್ರಾಮ ಜಂಕ್ಷನ್, ರಿಚ್ಮಂಡ್ ರಸ್ತೆ, ವೈಟ್‌ಫೀಲ್ಡ್ ಮುಖ್ಯರಸ್ತೆ, ಯಮಲೂರು, ದೊಡ್ಡಕನ್ನಹಳ್ಳಿ ರಸ್ತೆಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ವಾಹನ ಸಂಚಾರ ಯಥಾಸ್ಥಿತಿಗೆ ಮರಳುತ್ತಿದೆ. ಮಳೆಯಿಂದ ಮಂಕಾಗಿದ್ದ ವಾಣಿಜ್ಯ ಚಟುವಟಿಕೆಗಳು ಪುನಾರಂಭವಾಗಿದ್ದು, ಜನ ಮಾರುಕಟ್ಟೆಗಳತ್ತ ಮುಖ ಮಾಡಿದ್ದಾರೆ.
ಸಹಜ ಸ್ಥಿತಿಗೆ ಮರಳಿದ ಜನಜೀವನ
Date: