ರಣಜಿ ಟ್ರೋಫಿ ಫೈನಲ್: ಕರ್ನಾಟಕಕ್ಕೆ ತವರಿನಲ್ಲಿ ಸೋಲು, ಜಮ್ಮು-ಕಾಶ್ಮೀರ ಚೊಚ್ಚಲ ಚಾಂಪಿಯನ್
ಧಾರವಾಡ: ದೈತ್ಯ ಕರ್ನಾಟಕ ತಂಡವನ್ನು ಮಣಿಸಿ ಜಮ್ಮು-ಕಾಶ್ಮೀರ ತಂಡವು ಚೊಚ್ಚಲ ರಣಜಿ ಟ್ರೋಫಿ ಪ್ರಶಸ್ತಿಗೆ ಮುತ್ತಿಟ್ಟಿದೆ. ತವರಿನ ಹುಬ್ಬಳ್ಳಿಯ ಕೆಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ನಲ್ಲಿ ಕರ್ನಾಟಕ ಸೋಲಿನ ಕಹಿ ಅನುಭವಿಸಿದೆ.
ರಣಜಿ ಟ್ರೋಫಿ ಫೈನಲ್ ಪಂದ್ಯದ 5ನೇ ದಿನ ಜಮ್ಮು-ಕಾಶ್ಮೀರ ತಂಡ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಆದರೆ ಮೊದಲ ಇನ್ನಿಂಗ್ಸ್ ಲೀಡ್ ಆಧಾರದಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
4ನೇ ದಿನದಾಟದ ಅಂತ್ಯಕ್ಕೆ 57 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 186 ರನ್ಗಳಿಸಿ 477 ರನ್ಗಳ ಮುನ್ನಡೆ ಕಾಯ್ದುಕೊಂಡಿದ್ದ ಜಮ್ಮು-ಕಾಶ್ಮೀರ, ಕೊನೆಯ ದಿನವೂ ಶಿಸ್ತಿನ ಬ್ಯಾಟಿಂಗ್ ಪ್ರದರ್ಶಿಸಿತು. ನಾಲ್ಕನೇ ದಿನ 94 ರನ್ಗಳಿಸಿದ್ದ ಖಮ್ರಾನ್ ಇಕ್ಬಾಲ್ ಅಂತಿಮ ದಿನ ಶತಕ ಪೂರೈಸಿ 311 ಎಸೆತಗಳಲ್ಲಿ ಅಜೇಯ 160 ರನ್ ಕಲೆಹಾಕಿದರು. ಸಾಹಿಲ್ ಲೋತ್ರಾ ಕೂಡ ಅಜೇಯ 101 ರನ್ ಗಳಿಸಿದರು.
ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ಜಮ್ಮು-ಕಾಶ್ಮೀರ ತಂಡ 113 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 342 ರನ್ ಗಳಿಸಿದ ಬಳಿಕ ಪಂದ್ಯವನ್ನು ‘ಡ್ರಾ’ ಎಂದು ಘೋಷಿಸಲಾಯಿತು. ಮೊದಲ ಇನ್ನಿಂಗ್ಸ್ನಲ್ಲಿ ಪಡೆದ ಮುನ್ನಡೆಯ ಆಧಾರದ ಮೇಲೆ ಜಮ್ಮು-ಕಾಶ್ಮೀರವನ್ನು ಚಾಂಪಿಯನ್ ಎಂದು ಘೋಷಿಸಲಾಯಿತು.
1959-60ರ ಋತುವಿನಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿಯಲ್ಲಿ ಭಾಗವಹಿಸಿದ್ದ ಜಮ್ಮು-ಕಾಶ್ಮೀರ ತಂಡ, 67 ವರ್ಷಗಳ ಬಳಿಕ ಮೊದಲ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಪರಾಸ್ ಡೋಗ್ರಾ ನೇತೃತ್ವದ ತಂಡವು 2025-26ರ ಋತುವಿನ ಟ್ರೋಫಿಯನ್ನು ಗೆದ್ದುಕೊಂಡಿದೆ.
ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಂಡವನ್ನು ಹುರಿದುಂಬಿಸಲು ಹುಬ್ಬಳ್ಳಿಗೆ ಆಗಮಿಸಿದ್ದರು. ಫೈನಲ್ ತಲುಪುವ ಮೂಲಕವೇ ತಂಡ ಲಕ್ಷಾಂತರ ಜನರಲ್ಲಿ ಹೆಮ್ಮೆ ಮೂಡಿಸಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಪಂದ್ಯಾನಂತರ ಆಟಗಾರರನ್ನು ಅಭಿನಂದಿಸಿದರು.
ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್ ಹಾಗೂ ಕರುಣ್ ನಾಯರ್ರಂತಹ ಅನುಭವಿ ಆಟಗಾರರು ಕರ್ನಾಟಕ ತಂಡದಲ್ಲಿದ್ದರಿಂದ ಹೆಚ್ಚಿನವರು ಕರ್ನಾಟಕವೇ ಮೇಲುಗೈ ಸಾಧಿಸುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ ರಣಜಿ ಫೈನಲ್ ಪಂದ್ಯಗಳು ಕಾಗದದ ಮೇಲೆ ಗೆಲ್ಲುವುದಿಲ್ಲ ಎಂಬುದನ್ನು ಜಮ್ಮು-ಕಾಶ್ಮೀರ ತಂಡ ಮತ್ತೊಮ್ಮೆ ಸಾಬೀತುಪಡಿಸಿದೆ.






