RCBಗೆ ಎರಡನೇ ಗೆಲುವು: ಡೆಲ್ಲಿ ವಿರುದ್ಧ ಭರ್ಜರಿ ಜಯ ದಾಖಲಿಸಿದ ಬೆಂಗಳೂರು!
ವುಮೆನ್ಸ್ ಪ್ರೀಮಿಯರ್ ಲೀಗ್ನ 4ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಯ ಸಾಧಿಸಿದೆ.
ವಡೋದರಾದ ಕೋಟಂಬಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 19.3 ಓವರ್ಗಳಲ್ಲಿ 141 ರನ್ಗಳಿಗೆ ಆಲೌಟ್ ಮಾಡಿತ್ತು. ಈ ಆಲೌಟ್ನೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಅತೀ ಹೆಚ್ಚು ಬಾರಿ ಎದುರಾಳಿ ಪಡೆಯನ್ನು ಸರ್ವಪತನಗೊಳಿಸಿದ ತಂಡವೆಂಬ ಕೀರ್ತಿ ಆರ್ಸಿಬಿ ಪಾಲಾಯಿತು.
ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಆರ್ ಸಿಬಿ ಬಿಗಿ ಬೌಲಿಂಗ್ ಎದುರು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಯಿತು. 19.3 ಓವರ್ ಗಳಲ್ಲಿ 141 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಜೆಮಿಮಾ ರೋಡ್ರಿಗಸ್ 22 ಎಸೆತಗಳಲ್ಲಿ 34 ರನ್ ಗಳಿಸಿ ಡೆಲ್ಲಿ ಪರ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡರು. ಸಾರಾ ಬ್ರೈಸ್ 24 ರನ್ ಗಳಿಸಿದರೆ, ಅನ್ನಾಬೆಲ್ ಸದರ್ಲ್ಯಾಂಡ್ 19 ರನ್ ಗಳಿಸಿದರು ಆರ್ ಸಿಬಿ ಬೌಲಿಂಗ್ ದಾಳಿಯ ಮುಂದೆ ಯಾವ ಡೆಲ್ಲಿ ಬ್ಯಾಟರ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
ಆರ್ ಸಿಬಿ ವೇಗಿ ರೇಣುಕಾಸಿಂಗ್ ಠಾಕೂರ್ 4 ಓವರ್ ಗಳಲ್ಲಿ 23 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಜಾರ್ಜಿಯಾ ವೇರಂ 4 ಓವರ್ ಗಳಲ್ಲಿ 25 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಕಿಮ್ ಗಾರ್ಥ್ ಮತ್ತು ಏಕ್ಯಾ ಬಿಷ್ತ್ ತಲಾ ಎರಡು ವಿಕೆಟ್ ಪಡೆದರು.
142 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಾಯಕಿ ಸ್ಮೃತಿ ಮಂಧಾನ ಮತ್ತು ಡೇನಿಯಲ್ ವ್ಯಾಟ್ ಹಾಡ್ಜ್ ಮೊದಲ ಓವರ್ ನಿಂದಲೇ ಅಬ್ಬರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 10.5 ಓವರ್ ಗಳಲ್ಲಿ 107 ರನ್ ಕಲೆ ಹಾಕಿ ಆರ್ ಸಿಬಿ ಗೆಲುವನ್ನು ಖಚಿತಪಡಿಸಿದರು.
ಡೇನಿಯಲ್ ವ್ಯಾಟ್ ಹಾಡ್ಜ್ 33 ಎಸೆತಗಳಲ್ಲಿ 7 ಬೌಂಡರಿ ಸಿಹಿತ 42 ರನ್ ಗಳಿಸಿ ಔಟಾದರು. ನಾಯಕಿಯ ಆಟವಾಡಿದ ಸ್ಮೃತಿ ಮಂಧಾನ 47 ಎಸೆತಗಳಲ್ಲಿ 10 ಬೌಂಡರಿ 3 ಭರ್ಜರಿ ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದರು. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಇದು ಸ್ಮೃತಿ ಮಂಧಾನ ಅವರ ಅಧಿಕ ವೈಯಕ್ತಿಕ ಸ್ಕೋರ್ ಆಗಿದೆ.
16.2 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿದ ಆರ್ ಸಿಬಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ರಿಷಾ ಘೋಷ್ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಫೆಬ್ರವರಿ 21ರಂದು ನಡೆಯುವ ಮುಂದಿನ ಪಂದ್ಯದಲ್ಲಿ ಆರ್ ಸಿಬಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ