ಐಪಿಎಲ್ 11ನೇ ಆವೃತ್ತಿಯಲ್ಲಿ ಚೆನ್ನೈ ಮತ್ತು ಹೈದರಾಬಾದ್ ತಂಡಗಳು ಈಗಾಗಲೇ ಪ್ಲೇ ಆಫ್ ಹಂತ ತಲುಪಿವೆ. ಡೆಲ್ಲಿ ಡೇರ್ ಡೆವಿಲ್ಸ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು,ಉಳಿದ ಪಂದ್ಯವನ್ನು ಗೆದ್ದು ಸಮಾಧಾನಪಡುವುದೊಂದೇ ಬಾಕಿ ಇದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು , ಕೋಲ್ಕತ್ತಾ ನೈಟ್ ರೈಡರ್ಸ್ , ಮುಂಬೈ ಇಂಡಿಯನ್ಸ್ ,ಕಿಂಗ್ಸ್ ಇಲೆವೆನ್ ಪಂಜಾಬ್ , ರಾಜಸ್ಥಾನ್ ತಂಡಗಳು ಪ್ಲೇ ಆಫ್ ಹಾದಿಗೆ ಉಳಿದ ಪಂದ್ಯಗಳನ್ನು ಗೆಲ್ಲಲೇ ಬೇಕಿದೆ.
ಇಂದು ನಡೆಯುವ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ಅವರ ತವರು ನೆಲದಲ್ಲಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸಲಿದೆ.
ಜೈಪುರದಲ್ಲಿ ಸಂಜೆ 4 ಗಂಟೆಗೆ ನಡೆಯುವ ರಾಯಲ್ ಕಾಳಗ ಉಭಯತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಎರಡೂ ತಂಡಗಳಿಗೂ ಈ ಪಂದ್ಯದ ಗೆಲುವು ಮುಖ್ಯವಾಗುತ್ತದೆ.
ಈ ಪಂದ್ಯವನ್ನು ಗೆದ್ದ ಮೇಲೆ ಉಳಿದ ತಂಡಗಳ ಸೋಲು ಗೆಲುವು, ರನ್ ರೇಟ್ ಆಧಾರದ ಮೇಲೆ ಪ್ಲೇ ಆಫ್ ಹಂತ ತಲುಪಲು ಅವಕಾಶವಿದೆ.
ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ಬೆಂಗಳೂರು ಹ್ಯಾಟ್ರಿಕ್ ಗೆಲುವಿನೊಂದಿಗೆ ಪ್ಲೇ ಆಫ್ ಗೆ ಬರಲು ಪೈಪೋಟಿ ನೀಡಿದೆ.
ಆರ್ ಆರ್ ಮತ್ತು ಆರ್ ಸಿಬಿ ಎರಡೂ ತಂಡಗಳು ಆಡಿರುವ 13 ಪಂದ್ಯಗಳಿಂದ ತಲಾ 6 ಪಂದ್ಯಗಳ ಗೆಲುವು 7 ಪಂದ್ಯಗಳ ಸೋಲಿನೊಂದಿಗೆ 12 ಪಾಯಿಂಟ್ ಪಡೆದಿವೆ.
ಬೆಂಗಳೂರಿಗೆ ನಾಯಕ ವಿರಾಟ್ ಕೊಹ್ಲಿ, ಎ ಬಿ ಡಿವಿಲಿಯರ್ಸ್, ಉಮೇಶ್ ಯಾದವ್ ಬಲವಿದೆ.