ಮನಸ್ಸಿನಲ್ಲಿ ಏನೋ ಗೊತ್ತಿಲ್ಲಾ ಒಂತರಾ ತಳಮಳ, ಗೊಂದಲಗಳು. ಏನೋ ನನ್ನಿಂದ ಕಳೆದುಕೊಂಡಿರೋ ಭೀತಿ ಸದಾ ನನ್ನ ಕಾಡ್ತಾ ಇದೆ. ಒಂದು ಕ್ಷಣವೂ ಬಿಟ್ಟಿರಲಾರದ ಈ ಮನ ಈಗ್ಯಾಕೋ ಆಕೆಯನ್ನು ಪ್ರತಿ ದಿನ ನೆನಪಿಸುತ್ತಿದೆ. ಜೊತೆಯಲ್ಲಿ ಇದ್ದಾಗ ಆಗದ ಈ ಸಂಕಟ ವೇದನೆ ದೂರವಿದ್ದಾಗ ಅದರ ನೋವು ಭಾಸವಾಗ್ತಾ ಇದೆ. ದೂರ ಉಳಿದ ಕೆಲವೇ ದಿನ ಕಳೆದಿದೆ ಅಷ್ಟೇ…! ಎಂದು ನನ್ನಾಕೆಯೊಂದಿಗೆ ಮತ್ತೆ ಎಂದು ಸೇರುತ್ತೇನೋ ಎಂಬ ಕೊರಗು ಮನದಲ್ಲಿ… ದೇವ್ರಾಣೆ ಹೇಳ್ತೀನಿ ಅವಳಿಲ್ಲದ ಜೀವನ ತುಂಬಾ ಬೋರು ಕಣ್ರೀ…
ನಾವಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸಲು ಶುರುಮಾಡಿ ಇಂದಿಗೆ 7 ವರ್ಷ ಕಳೆದಿದೆ. ಆದರೂ ನೆನ್ನೆ ಮೊನ್ನೆ ಪ್ರಪೋಸ್ ಮಾಡಿದ ಹೊಸ ಲವ್ ಸ್ಟೋರಿ ತರಾನೆ ಅದೆ. ಅದೇ ಪ್ರೀತಿಯ ಮಾತು, ಅದೇ ಒಡನಾಟಗಳು ಎಲ್ಲವು ಹೊಸತನ ರೀತಿಯಲ್ಲೇ ಇದೆ. ನಮ್ಮಿಬ್ಬರ ಜಾತಿ ಬೇರೆಯಾದರೂ ಪ್ರೀತಿ ಮಾತ್ರ ಜಾತಿಗಿಂತಲೂ ಮಿಗಿಲಾದದ್ದು.. ಒಂದೇ ಏರಿಯಾದಲ್ಲೇ ವಾಸವಿರುವ ನಾವಿಬ್ಬರೂ ಎಷ್ಟೇ ಜಗಳವಾಡಿದರೂ ಒಬ್ಬರನ್ನೊಬ್ಬರು ನೋಡದೇ ಒಂದು ದಿನವೂ ಇರಲಿಲ್ಲ ಬಿಡಿ. ನಾನವಳನ್ನ ನೋಡ್ಬೇಕು ಅಂತ ಅವಳ ಮನೆಯ ಮುಂದೆ ಒಂದು ಶಿಳ್ಳೆ ಒಡೆದರೆ ಸಾಕು ರಿ.. ಥಟ್ ಅಂತ ಪ್ರತ್ಯಕ್ಷವಾಗಿಬಿಡ್ತಾ ಇದ್ಲು.. ಅಷ್ಟು ಪ್ರೀತಿ ಅವಳಿಗೆ ನನ್ನ ಮೇಲೆ. ದ್ವಿತೀಯ ಪಿಯುಸಿಯಲ್ಲಿ ಶುರುವಾದ ನಮ್ಮಿಬ್ಬರ ಪ್ರೇಮ ಪ್ರಯಾಣ ಇಂದಿಗೂ ನಾನ್‍ಸ್ಟಾಪ್ ಆಗಿ ಸಾಗ್ತಾ ಇದೆ. ಜೊತೆಯಲ್ಲೆ ವಿದ್ಯಾಬ್ಯಾಸ ಮಾಡಿದ್ದ ನಾವಿಬ್ಬರೂ ಸ್ನಾತಕೋತ್ತರ ಪದವಿ ಮುಗಿಯುವವರೆಗೂ ಒಟ್ಟಿಗೆ ಹೋಗುವುದು ಒಟ್ಟಿಗೆ ಬರುವುದು. ಇದು ಮಾತ್ರ ಎಂದೂ ತಪ್ಪಿರಲಿಲ್ಲ ಬಿಡಿ.
ನಮ್ಮಿಬ್ಬರ ಜೋಡಿ ಇಡೀ ಊರಿಗೆ ಮೆಚ್ಚಿಗೆಯಾಗಿದ್ದರೆ ನಮ್ಮಲ್ಲೇ ಇದ್ದ ಕೆಲವು ಸ್ನೇಹಿತರಿಗೆ ನಮ್ಮನ್ನು ಬೇರ್ಪಡಿಸುವ ಎಲ್ಲಾ ಪ್ರಯತ್ನವನ್ನೂ ಮಾಡಿದ್ದರು. ಆದರೆ ನಿಜವಾದ ಪ್ರೀತಿಗೆ ಯಾರ ಅಡತಡೆಗಳು ಬಂದರೂ ನಿಭಾಯಿಸುವ ಶಕ್ತಿ ಇದೆ ಎಂಬ ಅರಿವು ಅವರಿಗಿಲ್ಲ ಎಂದನಿಸುತ್ತೆ ಬಿಡಿ.
ನನ್ನ ಹುಡುಗಿ ನಂದಿನಿಗೆ(ಹೆಸರು ಬದಲಾಯಿಸಿದೆ) ಅದೆಷ್ಟೋ ಬಾರಿ ಪೋಷಕರಿಂದ ವಾರ್ನ್ ಗಳೂ ಬಂದಿವೆ. ಆತನ ಜೊತೆ ನಿನಗೇನು ಕೆಲಸ. ಅವ್ನು ಹುಡ್ಗ ಅದು ನೆನಪಿರ್ಲಿ ನಿಂಗೆ ಎನ್ನುವ ಮಾತುಗಳು ಹಲವು ಬಾರಿ ಹೇಳಿದ್ದಾರೆ.. ಅಷ್ಟೇ ಏಕೆ ಧರ್ಮದೇಟುಗಳೂ ಬಿದ್ದಿದೆ ಬಿಡಿ. ಆತನ ತಮ್ಮ ಕಿಶೋರ್ ನನ್ನ ಬಳಿ ಬಂದು ಇದು ಸರಿ ಅಲ್ಲ ಅಣ್ಣಾ ಮುಂದೆ ಪರಿಣಾಮ ಸರಿ ಇರಲ್ಲ ಇಲ್ಲಿಗೆ ಬಿಟ್ಟು ಬಿಡಿ ಎಂದು ಒಂದೆರಡು ಪಿಳ್ಳೆಗಳೊಂದಿಗೆ ಬೆದರಿಕೆ ಹಾಕಿದ್ದೂ ಇದೆ. ಆದರೂ ಅವಕ್ಕೆಲ್ಲಾ ಸೊಪ್ಪು ಹಾಕಿಲ್ಲ ನಾವಿಬ್ರು.
ಅದೆಷ್ಟೇ ದೊಡ್ಡ ಜಗಳವಾದರೂ ಕೆಲವೇ ಗಂಟೆಯಲ್ಲಿ ಒಂದಾಗಿ ಬಿಡುತ್ತಿದ್ವಿ. ನನ್ನ ಈ ಬದಲಾವಣೆಗೆ ಸ್ಪೂರ್ತಿಯೇ ನಂದಿನಿ. ನನ್ನ ಪ್ರತಿ ಹೆಜ್ಜೆಗೂ ಆಕೆಯ ಸಲಹೆ ಸಹಕಾರಗಳಿದ್ದವು. ಸಂತೋಷಕ್ಕೆ ನಗುವಾಗಿ ದುಃಖದಲ್ಲಿ ಕಣ್ಣೀರಾಗಿ ಹಂಚಿಕೊಳ್ಳುತ್ತಾಳೆ. ಇನ್ನೊಂದು ಖುಷಿ ಅಂದ್ರೆ ನಮ್ಮಿಬ್ಬರ ಪ್ರೀತಿಗೆ ಯಾವ ಅಡೆತಡೆಗಳೂ ಬಾರದ ಹಾಗೆ ಸಹಕಾರಿಯಾಗಿ ನಮ್ಮ ಬೆನ್ನ ಹಿಂದೆ ಇದ್ದಾರೆ ನನ್ನ ಸ್ನೇಹಿತರು. ಆಕೆಗೆ ನಾನೇನಾದರೂ ಮಾಡಿದರೆ ಅದಕ್ಕೆ ಒಂದು ದೊಡ್ಡ ಸಭೆಯನ್ನೇ ಕರೆಸಿ ತೀರ್ಮಾನ ಮಾಡ್ತಾ ಇದ್ರು. ಕೆಲವೊಮ್ಮೆ ಬಾಯ್ಮಾತಲ್ಲಿ ಬುದ್ದಿ ಹೇಳಿದರೆ ಇನ್ನು ಕೆಲವೊಮ್ಮೆ ಕೈಗೆ ಕೆಲಸಕೊಡ್ತಾ ಇದ್ರು ಬಿಡಿ. ಅಂತಹ ಅದ್ಭುತ ಗೆಳೆಯರು ನನ್ನ ಪ್ರೀತಿಗೆ ಬೆಂಬಲ ನೀಡ್ತಾ ಇದ್ದಾರೆ.
ಆದರೂ ನಾನು ಸ್ವಲ್ಪ ಮೊಂಡ ಬುದ್ದಿಯವ ಸಿಟ್ಟು ನೆತ್ತಿಗೇರಿಸಿಕೊಂಡು ನನ್ನಾಕೆಗೆ ಕೊಡಬಾರದ ಶಿಕ್ಷೆ ಕೊಟ್ಟಿದ್ದೇನೆ. ಆಕೆಯನ್ನು ಮನಬಂದಂತೆ ಬೈದದ್ದೂ ಉಂಟು, ಥಳಿಸಿದ್ದು ಇದೆ. ಅಷ್ಟೇ ಏಕೆ ತಿಂಗಳುಗಟ್ಟಲೆ ಮಾತು ಬಿಟ್ಟಿದ್ದೂ ಇದೆ. ಆದರೆ ಆಕೆ ತಪ್ಪನ್ನೆಲ್ಲಾ ತನ್ನ ಮೇಲೆಯೇ ಹೊರಿಸಕೊಂಡು ತಪ್ಪಾಯಿತು ಎಂದು ಅಂಗಲಾಚಿದಾಗಲೂ ಕರಗಲಿಲ್ಲ ಈ ಪಾಪಿ ಹೃದಯ.
ಅದೆಷ್ಟೋ ಬಾರಿ ಅವಳ ಕಣ್ಣೀರಿಗೆ ನಾನು ಕಾರಣನಾಗಿದ್ದೇನೆ. ಗೆಳೆಯರೂ ಕೂಡ ಇದರಿಂದ ಬೇಸತ್ತು ನಮ್ಮ ಸಹವಾಸಕ್ಕೇ ಬರುತ್ತಿರಲಿಲ್ಲ, ಕಾರಣ ಮತ್ತೆ ಒಂದಾಗುತ್ತಾರೆ ಅನ್ನೋ ಭರವಸೆ ಅವರದ್ದು. ಇಷ್ಟೆಲ್ಲಾ ನೋವು ಕೊಡುತ್ತಿದ್ದ ನಾನು ಇಂದಿಗೂ ಆಕೆ ನನ್ನ ವಿರುದ್ದ ರಿವೇಂಜ್ ತೀರಿಸಿಲ್ಲ ರೀ.. ನನಗೆ ಮರು ಉತ್ತರ ಎಂದೂ ನೀಡಿದ ನೆನಪು ನನಗಿಲ್ಲ. ಅಷ್ಟೇ ಏಕೆ ನನ್ನತ್ರ ಅಷ್ಟೆಲ್ಲಾ ಒಡೆತ ತಿಂದರೂ ಇಂದಿಗೂ ಕೈ ಎತ್ತಲಿಲ್ಲ ಆಕೆ. ಆಕೆಗೆ ಅದೆಷ್ಟು ಹೊಗಳಿದರೂ ಸಾಲದು ಬಿಡಿ.
ಅದೆಷ್ಟೋ ಬಾರಿ ನನ್ನ ಕಾಲೇಜಿನ ಡೊನೇಷನ್ ಆಕೆಯೇ ಕಟ್ಟಿದ್ದಾಳೆ, ಫೀಸು, ಎಕ್ಸಾಮ್ ಫೀಸ್ ಎಲ್ಲವೂ ಆಕೆಯದ್ದೆ. ಬದಲಿಗೆ ಅವಳಿಗಾಗಿ ಇಂದಿಗೂ ನಾಕಾಣಿ ಗಿಫ್ಟ್ ಸಹ ಕೊಟ್ಟಿಲ್ಲ ನಾನು. ಜೊತೆಯಲ್ಲಿದ್ದಾಗ ಒಂದು ಹೆಣ್ಣಿನ ಪ್ರೀತಿ ಏನೂ ಅಂತ ಗೊತ್ತಾಗ್ದೇ… ಇಂದು ಅದರ ಅರಿವಾಗ್ತಾ ಇದೆ. ಪ್ರತಿ ದಿನ ಆಕೆಗೆ ಗೋಳೋಯ್ಕೋತ್ತಾ ಇದ್ದೆ ಈಗ ಯಾರಿದ್ದಾರೆ??. ಪ್ರತಿ ದಿನ ಆಕೆಯೊಂದಿಗೆ ಕಾಲ ಕಳೆಯುತ್ತಿದ್ದ ನಾನು ಈಗ ನಾನು ಒಂಟಿ ಎಂಬ ಭಾವ ನನ್ನಲ್ಲಿ. ಎಂದು ನಾನು ಈ ಬೆಂಗ್ಳೂರೆಂಬ ಜೈಲಿಂದ ಬಿಡುಗಡೆಯಾಗಿ ನನ್ನಾಕೆಯನ್ನು ನೋಡುತ್ತೇನೋ? ಅರಿವಿಲ್ಲದೇ ನಾ ಮಾಡಿದ ತಪ್ಪುಗಳಿಗೆ ಈಗ ಪ್ರಾಯಶ್ಚಿತವಾಗಿದೆ. ಅವಳನ್ನು ಬಿಟ್ಟು ಒಂದೂ ದಿನವೂ ಇರದ ಈ ಹೃದಯವೀಗ ತಾತ್ಕಾಲಿಕ ಅಗಲಿಕೆಯ ನೋವು ಅರಗಿಸಿಕೊಳ್ಳಲು ಸಾಧ್ಯವಾಗ್ತಾ ಇಲ್ಲಾ…
- ಪ್ರಮೋದ್ ಲಕ್ಕವಳ್ಳಿ.
Like us on Facebook The New India Times
POPULAR STORIES :
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!
ಐಫೋನ್-7 ಮೋಬೈಲ್‍ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್‍ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?