ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ವಿದೇಶಕ್ಕೆ ತೆರಳಲು ಷರತ್ತುಬದ್ಧ ಅನುಮತಿ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ದುಬೈನಲ್ಲಿ ತಮ್ಮ ಸೊಸೆಯ ಸಹೋದರನ ವಿವಾಹವಿರುವ ಹಿನ್ನೆಲೆಯಲ್ಲಿ ತೆರಳಲು ಅನುಮತಿ ಕೋರಿ ರೋಷನ್ ಬೇಗ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ವಿಮಾನ ಬೋರ್ಡಿಂಗ್ ಪಾಸ್ ಹಾಜರುಪಡಿಸಬೇಕು ಹಾಗೂ ಮೊಬೈಲ್ ಸಂಖ್ಯೆ, ಪ್ರಯಾಣದ ವಿವರ ಸಲ್ಲಿಸಬೇಕೆಂದು ಸೂಚಿಸಿತು. ಅಲ್ಲದೇ, ನ್ಯಾಯಾಲಯ ಆದೇಶಿಸಿದರೆ ಪ್ರಯಾಣ ಮೊಟಕುಗೊಳಿಸಿ ಹಾಜರಾಗಬೇಕು ಎಂಬ ಷರತ್ತುಗಳೊಂದಿಗೆ 15 ದಿನಗಳ ಅವಧಿಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಿ ಆದೇಶಿಸಿದೆ. ಷರತ್ತು ಉಲ್ಲಂಘಿಸಿದರೆ ಜಾಮೀನು ರದ್ದುಪಡಿಸುವುದಾಗಿಯೂ ನ್ಯಾಯಾಧೀಶ ಬಿ.ಜಯಂತ ಕುಮಾರ್ ತಮ್ಮ ಆದೇಶದಲ್ಲಿ ತಿಳಿಸಿದ್ಧಾರೆ.