ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚುತ್ತಿದೆ. ಇದರ ಬೆನ್ನಲ್ಲೇ ದೇಶದ ನಾನಾ ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ನಡೆಸಿದ್ದು ಬರೋಬ್ಬರಿ 14.48 ಕೋಟಿ ರೂ ವಶಪಡಿಸಿಕೊಂಡಿದೆ. ಇವೆಲ್ಲ ಯಾವುದೇ ದಾಖಲೆ ಇಲ್ಲದ ಹಣ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಎಟಿಎಂ ಗಳಲ್ಲಿ ಹಣ ಅಲಭ್ಯವಾಗುತ್ತಿದ್ದು ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ.
ಕರ್ನಾಟಕದಲ್ಲಿ ಚುನಾವಣೆ ಕಾವು ಹೆಚ್ಚುತ್ತಿರುವ ಬೆನ್ನಲ್ಲೇ ದೇಶದ ವಿವಿಧೆಡೆ ಆದಾಯ ತೆರಿಗೆ ಇಲಾಖೆ(ಐಟಿ)ನಡೆಸಿದ ದಾಳಿ ಯಲ್ಲಿ ಬರೋಬ್ಬರಿ 14.48 ಕೋಟಿರೂ. ವಶ ಪಡಿಸಿ ಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಶಪಡಿಸಿಕೊಂಡ ನಗದು
ಮೊತ್ತದಲ್ಲಿ 2000 ಮತ್ತು 500 ರೂ.ಗಳ ನೋಟುಗಳೇ ಜಾಸ್ತಿ ಇವೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ದಾಳಿಯ ವೇಳೆ ಸಿಕ್ಕಿರುವ ಮೊತ್ತ ಪಿಡಬ್ಲ್ಯುಡಿ ಗುತ್ತಿಗೆದಾರರಿಗೆ ಸೇರಿದ್ದಾಗಿದೆ. ಕರ್ನಾಟಕದ ಚುನಾವಣೆ ಹಿನ್ನೆಲೆಯಲ್ಲಿ ಅವರ ಮೂಲಕ ಹಣ ಒಂದೆಡೆಯಿಂದ ಇನ್ನೊಂದೆಡೆ ಸಾಗಿಸಲಾಗುತ್ತಿತ್ತು.
ಜನವರಿ-ಮಾರ್ಚ್ ನಲ್ಲಿ ಇವರಿಗೆ ಗುತ್ತಿಗೆ ನೀಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿ ಇನ್ನೂ ಕೆಲವು ರಾಜ್ಯಗಳ ಗಡಿ ಪ್ರದೇಶದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಅಕ್ರಮ ಹಣ ಸಾಗಾಟಕ್ಕೆ ಅವಕಾಶ ನೀಡದಂತೆ ಕೆಲ ಮುಖಂಡರು, ಉದ್ಯಮಿಗಳು, ಗುತ್ತಿಗೆದಾರರ ಚಲನವಲನಗಳ ಮೇಲೂ ನಿಗಾ ಇಟ್ಟಿದೆ.
ರಾಜ್ಯದ 11 ಮಂದಿ ಗುತ್ತಿಗೆದಾರರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 6.76 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಏ.24ರಂದು ಮೈಸೂರಿನ 10 ಮಂದಿ ಮತ್ತು ಬೆಂಗಳೂರಿನ ಒಬ್ಬ ಗುತ್ತಿಗೆದಾರನ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು.
ಈ ವೇಳೆ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಸಂದರ್ಭದಲ್ಲಿ ಮೈಸೂರಿನ ನಾಲ್ವರು ಗುತ್ತಿಗೆದಾರರ ನಿವಾಸದಲ್ಲಿ ದಾಖಲೆ ಇಲ್ಲದೇ ಸಂಗ್ರಹಿಸಿಟ್ಟಿದ್ದ 6.7 ಕೋಟಿ ರೂ. ನಗದು ಪತ್ತೆ ಹಚ್ಚಿದೆ. ಆ ಪೈಕಿ 500 ಹಾಗೂ 2000 ಮುಖಬೆಲೆಯ ನೋಟುಗಳು ಹೆಚ್ಚಾಗಿವೆ. ಈ ಹಣಕ್ಕೆ ಗುತ್ತಿಗೆದಾರರ ಬಳಿ ಯಾವುದೇ ದಾಖಲೆಗಳಿಲ್ಲ.
ಅಲ್ಲದೇ ಅವರ ವ್ಯವಹಾರದ ಪುಸ್ತಕದಲ್ಲೂ ಉಲ್ಲೇಖವಿಲ್ಲ. ಅಷ್ಟೇ ಅಲ್ಲದೇ, ದಾಳಿ ವೇಳೆ ವಶಪಡಿಸಿಕೊಂಡ ದಾಖಲೆಗಳ ಪರಿಶೀಲಿಸಿದಾಗ, 11 ಮಂದಿ ಗುತ್ತಿಗೆದಾರರು ಬೇನಾಮಿ ಹೆಸರುಗಳಲ್ಲಿ ಆಸ್ತಿ ಸಂಪಾದನೆ, ಲಾಕರ್‌ಗಳಲ್ಲಿ ಕೋಟ್ಯಂತರ ರೂ. ಹಣ ಮತ್ತು ಅಘೋಷಿತ ಆಸ್ತಿ ಹಾಗೂ ಹಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.