ನೀವ್ ಈ ಸ್ಟೋರಿ ಓದಿದ ಮೇಲೆ ಇಂಥವ್ರೂ ಇರ್ತಾರಾ ಅಂತ ನಿಮಗೆ ಖಂಡಿತ ಅನ್ಸುತ್ತೆ..! ಅಷ್ಟೇ ಅಲ್ಲ ಇಂತವ್ರು ಸಿಕ್ಕಿದ್ರೆ ಕಪಾಳಕ್ಕೆ ಹೊಡೆದು ಆಮೇಲೇ ಮಾತಿಗಿಳಿಯೋದು. ಅದಂತೂ ಪಕ್ಕಾ..!
ಏನಪ್ಪಾ? ಎಂಥವ್ರ್ ಇರ್ತಾರೆ..? ಕಪಾಳಕ್ಕೆ ಯಾರಿಗೆ ಹೊಡೀಬೇಕು..? ಅಂತೆಲ್ಲಾ ಯೋಚನೆ ಮಾಡ್ತಿದೀರಾ..? ನಾ ತಡಮಾಡಲ್ಲ. ಸ್ಟೋರಿ ಹೇಳ್ತೀನಿ ಕೇಳಿ, ಯಾವ್ ಊರು ಅನ್ನೋದೆಲ್ಲಾ ಇಲ್ಲಿ ಅನವಶ್ಯಕ. ಯಾವ್ ಮೀಡಿಯಾದಲ್ಲೂ ಇಲ್ಲೀ ತನಕ ಬಂದಿಲ್ಲ ! ಈಗ ಬಂದ್ರೂ ಶಿಕ್ಷೆ ಅನುಭವಿಸೋಕ್ಕೆ ಅವರ್ಯಾರೂ ಉಳಿದಿಲ್ಲ! ಕಥ ಈಗ ಶುರುವಾಗುತ್ತೆ..!
ಬಿಡುವು ಸಿಕ್ಕಾಗೆಲ್ಲ ಗೆಳೆಯನೊಬ್ಬನ ಊರಿಗೆ ಹೋಗ್ತಾ ಇರ್ತೀನಿ. ತುಂಬಾ ಟೈಂ ಆಗಿತ್ತು ಅಲ್ಲಿಗೆ ಹೋಗ್ದೆ. ಮೊನ್ನೆ ಮೊನ್ನೆ ಬೆಂಗಳೂರಿಗೆ ಬರುವಾಗ ಮತ್ತೆ ಇನ್ಯಾವಾಗ ಗೆಳೆಯನನ್ನು ನೋಡೋದೋ? ಇವಾಗ್ಲೆ ಒಂದ್ ಸಣ್ ಟ್ರಿಪ್ ಹೋಗಿ ಬರೋಣ ಅಂತ ಹೋಗಿದ್ದೆ. ಅದೇನಾಯಿತೋ ಗೊತ್ತಿಲ್ಲ. ಆ ಊರಿನ ಬಸ್ ಇಳಿದ ಕೂಡಲೇ ಏನೇನೋ ಯೋಚನೆಗಳು. ಅದ್ಯಾವತ್ತೋ ಗೆಳೆಯನ ಊರಿನಲ್ಲಿ ನಡೆದ ಘಟನೆ ಮತ್ತೆಮತ್ತೆ ನೆನಪಾಗಿ ಕಾಡುತ್ತೆ..!
ತಂದೆ ಇಲ್ಲದ ಮಗಳನ್ನು ಊಟ , ನಿದ್ರೆ ಬಿಟ್ಟು ಸಾಕಿದ್ದ ತಾಯಿ ಬೀದಿ ಹೆಣವಾಗಿ ಹೋದಳು..! ತಾಯಿಯನ್ನು ಮರೆತು, ಮೆರೆದ ಮಗಳು ಕೊಲೆ ಆಗಿಬಿಟ್ಲು.. ಅದೂ ಸ್ವಂತ ಮಗನಿಂದಲೇ!
ಅದೊಂದು ಕಾಡುಕೊಂಪೆ, ಅಲ್ಲಿರೋದು ಎಂಟತ್ತು ಮನೆ ಮಾತ್ರ. ಮನೆಯಲ್ಲಿರೋದು ನಾಲ್ಕೈದು ಜನ! ಈ ಹಳ್ಳೀಲಿ ತಾಯಿ ಮಗಳಿಬ್ಬರೇ ಗುಡಿಸಲಲ್ಲಿ ಜೀವನ ಸಾಗಿಸ್ತಾ ಇದ್ರು. ಮಗಳು ಹುಟ್ಟಿದ ಕೆಲವೇ ತಿಂಗಳಲ್ಲಿ ಗಂಡನನ್ನು ಕಳೆದು ಕೊಂಡಿದ್ದ ಆ ತಾಯಿ ಬಡತನದಲ್ಲೂ ಮಗಳನ್ನ ರಾಣಿಯಂತೆ ಬೆಳೆಸಿದ್ರು! ಇರೋದೇ ನಾಲ್ಕೈದು ಮನೆ, ಆ ಮನೆಗಳ ಕೂಲಿ ಮಾಡಿ ಮಗಳನ್ನ ಸಾಕೋದು ಕಷ್ಟ ಆಗಿತ್ತು. ಇರೋ ಸ್ವಲ್ಪ ಭೂಮೀಲಿ ಬೆಳೆ ಬೆಳೆಯೋಕೂ ಆಗ್ಲಿಲ್ಲ. ಹಂಗೋ ಹಿಂಗೋ ಮಾಡಿ ಊರಲ್ಲಿ ಮಗಳಿಗೆ ಎಸ್ಎಸ್ಎಲ್ಸಿವರೆಗೆ ಶಿಕ್ಷಣ ಕೊಡ್ಸಿದ್ರು. ಪಟ್ಟಣಕ್ಕೆ ಹೋಗಿ ಮಗಳನ್ನ ಹೆಚ್ಚಿಗೆ ಓದ್ಸಿ, ಒಳ್ಳೆ ಆಫೀಸರ್ ಮಾಡ್ಬೇಕೆಂಬ ಕನಸಿನ ಬುತ್ತಿ ಕಟ್ಕೊಂಡು ನಗರಕ್ಕೂ ಬಂದ ತಾಯಿ, ಅಲ್ಲಿ ಇಲ್ಲಿ ಕೆಲಸ ಮಾಡಿ ಮಗಳಿಗೆ ಹೈಯರ್ ಎಜುಕೇಷನ್ ಕೊಡ್ಸಿದ್ದು ಉಪಯೋಗಕ್ಕೆ ಬರಲೇ ಇಲ್ಲ..! ಅದಕ್ಕೆ ಕಾರಣ ಹೇಳ್ತೀನಿ, ಆದ್ರೆ ಮಗಳ ಶಿಕ್ಷಣಕ್ಕೆ ಕಾಸು ಹೊಂಚೊದು ಕಷ್ಟವಾದಾಗ ಆ ಮಹಾತಾಯಿ ಏನ್ ಮಾಡಿದ್ರು ಗೊತ್ತಾ..? ಒಬ್ಬ ವೇಶ್ಯೆಯಾಗಿ ಬದಲಾದ್ಲು..!
ಹೋಟೇಲ್ನಲ್ಲಿ, ಅವ್ರಿವ್ರ ಮನೆಯಲ್ಲಿ ಪಾತ್ರೆ ತೊಳ್ದು, ಬಟ್ಟೆ ಒಗೆದು, ಕಸ ಮುಸರೆ ಬಾಚಿ, ದುಡ್ಡು ಸಾಲದೇ ಇದ್ದಾಗ ಮೈಮಾರಿ ಮಗಳನ್ನ ಓದ್ಸ್ತಾ ಇದ್ರೆ, ಮಗಳು ಮಾತ್ರ ಸಿಕ್ಕಾಪಟ್ಟೆ ಶೋಕಿ ಮಾಡೋಕೆ ಶುರು ಮಾಡಿದ್ಲು.! ಅಮ್ಮಾ ಕಷ್ಟಾಪಡ್ತಾ ಇದ್ದಾಳೆ ಅಂತ ಗೊತ್ತಿದ್ರೂ ಕೂಡ ಚಿತ್ರವಿಚಿತ್ರ ಬಟ್ಟೆ ಹಾಕ್ಕೊಂಡು ಊರೂರು ತಿರುಗೋಕೆ ಶುರು ಮಾಡಿದ್ಲು..!. ಶ್ರೀಮಂತರ ಮನೆ ಹುಡ್ಗೀರ್ ರೀತಿ ಪಾರ್ಟಿ ಪಬ್ ಅಂತ ಅಲೆಯೋಕೆ ಶುರು ಇಟ್ಟಿದ್ಲು. `ಮಗ್ಳೆ ಇವೆಲ್ಲ ಬೇಡಮ್ಮಾ, ಸರಿ ಆಗೋಲ್ಲ’ ಅಂತ ತಾಯಿ ಹೇಳಿದ್ರೆ `ನಿನಗೇನ್ ಗೊತ್ತು, ಎಲ್ಲಾ ಹೇಗ್ ಬರ್ತಾರೆ ಗೊತ್ತಾ? ನನಗೆ ಇಷ್ಟು ದುಡ್ಡು ಬೇಕು ಅಂದ್ರೆ ಬೇಕು ಅಷ್ಟೆ! ಇಲ್ದಿದ್ರೆ ಸತ್ತೋಗ್ತೀನಿ’ ಅಂತ ಹೆದ್ರಿಸ್ತಾ ಇದ್ಲು..! ಹಾಗೆ ಹೇಳಿದಾಗಲೇ `ಹೋಗಿ ಸಾಯಿ’ ಅಂತ ಆ ತಾಯಿ ಹೇಳಿದ್ದಿದ್ರೆ ಎಲ್ಲಾ ಅರಿ ಇರ್ತಿತ್ತೇನೋ..!
ಹೀಗಿರುವಾಗ ಅವನ್ಯಾವನೊಬ್ಬ ನೀಚನ ಸಲಹೆಯಂತೆ ತಾಯಿ ಶೀಲ ಮಾರ್ಕೊಂಡ್ಲು! ದಿನಾ ಯಾರ್ಯಾರೋ ಮನೆಗೆ ಬಂದೋಗೋದು ಗೊತ್ತಾದ್ರೂ ಕೂಡ ಮಗಳು ತುಟಿಕ್, ಪಿಟಿಕ್ ಅಂತ ಹೇಳ್ತಾ ಇರಲಿಲ್ಲ..! ಮಗಳ ಈ ವರ್ತನೆ ನೋಡಿ ತಾಯಿಗೆ ಶಾಕ್ ಆಗುತ್ತೆ..! ಮಗಳೂ ಸಹ ತನ್ನ ಹಾಗೇ ತಪ್ಪು ದಾರಿ ಹಿಡಿತಾಳೋ ಅನ್ನೋ ಭಯಕ್ಕೆ ತಾಯಿ ಒಂದು ಇಳಿ ಸಂಜೆಯಲ್ಲಿ ಹೇಳ್ತಾಳಂತೆ “ಕಂದಾ, ಕ್ಷಮಿಸಿ ಬಿಡು, ನಾನೂ ನಿನಗೋಸ್ಕರ ಸೆರಗು ಹಾಸ್ತಾ ಇದ್ದೀನಿ. ನಿಂಗೊಂದು ಕೆಲಸ ಸಿಕ್ರೆ ಸಾಕು ಬೇರೆ ಊರಿಗೆ ಹೋಗಿ ಒಳ್ಳೆ ರೀತಿ ಜೀವ್ನ ಮಾಡೋಣ” ಅಂತ..! ಆಗ ಮಗಳು ಏನೂ ಹೇಳ್ದೇ ಸುಮ್ನೆ ಹೋಗ್ತಾಳೆ. ಅವಳಿಗೆ ಬೇಕಾಗಿದ್ದಿದ್ದು ದುಡ್ಡು ಅಷ್ಟೆ..! ತಾಯಿ ಅಲ್ಲ..!
ಆ ದಿನ ಯಾಕಾದ್ರೂ ಬಂತೋ? ಮಗಳ ಡಿಗ್ರಿ ಮುಗಿಯಿತು. ಆದ್ರೆ ಅವಳು, ತಾಯಿ ಅಂದ್ಕೊಂಡ ಹಾಗೆ ಕೆಲಸ ಹುಡುಕಲಿಲ್ಲ. ಬದಲಾಗಿ ಸಂಸಾರ ನಡೆಸಲು ತಯಾರಾಗಿದ್ಲು. ಅವಳ ಕಾಲೇಜಿನಲ್ಲೇ ಓದಿದ, ಅವಳಿಗಿಂತಲೂ ಎರಡು ವರ್ಷ ಸೀನಿಯರ್ ಆಗಿದ್ದ ಶ್ರೀಮಂತ ಹುಡುಗನನ್ನು ಮದ್ವೆ ಆಗಿಯೇ ಬಿಟ್ಟಿದ್ದಳು..! ತಾಯಿ ಪ್ರಶ್ನೆ ಮಾಡೋ ಸ್ಥಿತಿಯಲ್ಲಿರಲಿಲ್ಲ. ಮಗಳು ಕೈಬಿಟ್ಟು ಹೋದ ಮೇಲೆ, ವೇಶ್ಯೆಯಾಗಿಯೇ ಸಾಯೋ ತನಕ ಬದುಕ ಬೇಕಲ್ಲಾ ಅನ್ನೋ ನೋವಲ್ಲೇ ಬದುಕ್ಕಿದ್ದಳು. ಹೀಗಿದ್ರೂ ಮಗಳ ಕಣ್ಣಿಗೆ ತಾಯಿಯ ಬಗ್ಗೆ ಕನಿಕರವೇ ಹುಟ್ಟಲಿಲ್ಲ..!
ಅಮ್ಮನ ದುಡ್ಡಿನಲ್ಲಿ ಶೋಕಿ ಮಾಡಿಕೊಂಡು ಕಾಲಕಳೆದಿದ್ದ ಮಗಳಿಗೆ, ಗಂಡನ ಮನೆಯಲ್ಲಿ `ಅಲ್ಪನಿಗೆ ಐಶ್ವರ್ಯ ಬಂದಹಾಗೆ’ ಅನ್ನೋರೀತಿ ಆಯ್ತು. ಗಂಡನಿಗೆ ಇವಳ ವರ್ತನೆ ಹಿಡಿಸಲಿಲ್ಲ..! ನಿತ್ಯವೂ ಜಗಳವಾಗ್ತಾ ಇತ್ತು. ಅದಕ್ಕೊಂದು ಬಲವಾದ ಕಾರಣ ಅಂದ್ರೆ ಮನೆಯಲ್ಲಿ ತಿಂದು-ಉಣ್ಣೋಕೆ ಬರವಿಲ್ಲದೇ ಹೋದ್ರೂ ಸಹ ಅತಿಯಾದ ದುಡ್ಡಿನ ವ್ಯಾಮೋಹಕ್ಕೆ ಬಿದ್ದುಬಿಟ್ಲು.. ಕೇಳಿದಾಗೆಲ್ಲಾ ಗಂಡ ದುಡ್ಡು ಕೊಡದೇ ಇದ್ದಾಗ ತಾಯಿ ತನ್ನ ಬದುಕ ರೂಪಿಸಲು ಕಂಡುಕೊಂಡ ದಾರಿಯಲ್ಲೇ ಸಾಗಿದ್ಲು! ತಾನೂ ಸಹ ಸಿಕ್ಕಸಿಕ್ಕವರ ಜೊತೆ ದೇಹ ಹಂಚಿಕೊಳ್ಳೋಕೆ ಶುರು ಮಾಡಿದ್ಲು..! ಮಗುವಿನ ತಾಯಿಯಾದರೂ ದುಡ್ಡಿನ ಅಮಲೂ ಇಳಿಯಲಿಲ್ಲ. ಎಲ್ಲೆಲ್ಲೋ ಮೈಮಾರಿಕೊಂಡಿದ್ದು ಗೊತ್ತಾದ ಮೇಲೆ ಗಂಡನಿಂದಲೂ ಒಂದು ದಿನ ದೂರಾಗಿಯೇ ಬಿಟ್ಟಳು..! ಹೀಗೆ ಹತ್ತಿಪ್ಪತ್ತು ವರ್ಷ ಸಾಗಿತ್ತು..! ಗಂಡನನ್ನು ಬಿಡುವಾಗ ಬಗಲಲ್ಲಿ ಎತ್ತಿಕೊಂಡು ಬಂದಿದ್ದ ಮಗನಿಗೆ 25 ವರ್ಷ ಆಯ್ತು! ಇವಳಿಗೆ ಹೆಚ್ಚು ಕಡಿಮೆ 50, ಅಷ್ಟೊತ್ತಿಗೆ ಆಕೆಯ ತಾಯಿಗೆ ಎಪ್ಪತ್ತು ದಾಟಿತ್ತು..! ಬರಬಾರದ ಕಾಯಿಲೆಯಿಂದ ಬಳಲಿ ತನ್ನ ಹಳ್ಳಿಯ ಬೀದಿಯಲ್ಲಿ ಆ ತಾಯಿ ಹೆಣವಾಗಿದ್ದಳು! ಅವಳ ಹೆಣ ಕೂಡ ನೋಡೋಕೆ ಮಗಳಾಗಿ ಇವಳು ಹೋಗಲಿಲ್ಲ! ಇದಾಗಿ ಕೇವಲ ಹತ್ತೇ ಹತ್ತು ದಿನಕ್ಕೆ ದೇವರು ವ್ಯಘ್ರನಾಗಿದ್ದ ಅನ್ಸುತ್ತೆ..! ಕಷ್ಟಪಟ್ಟು ಸಾಕಿದ ತಾಯಿಯನ್ನು ಅನಾಥ ಶವವಾಗಿಸಿದ ತಪ್ಪಿಗೆ ಅನ್ನೋ ಹಾಗೆ ಸ್ವಂತ ಮಗನಿಂದಲೇ ಕೊಲೆಯಾಗಿಬಿಡ್ತಾಳೆ..! ಮಗನಿಗೆ ತನ್ನ ಫ್ಯಾಮಿಲಿ ಸ್ಟೋರಿ ತಿಳಿದಿತ್ತು. ಅವನ ಅಜ್ಜಿ ಮತ್ತು ತಾಯಿಯನ್ನು ಕೆಟ್ಟ ಕೆಲಸಕ್ಕೆ ತಳ್ಳಿದ ಆ ನೀಚನೇ ಕುಡಿದ ಅಮಲಲ್ಲಿ ಎಲ್ಲಾ ಕತೆ ಹೇಳಿ ಮುಗಿಸಿದ್ದ! ವಿಷಯ ಗೊತ್ತಾದ ಕೂಡಲೇ ಕೋಪ ತಾಳಲಾರದೇ ಹೆತ್ತಮ್ಮನನ್ನೇ ಕೊಂಚಿಕೊಂದುಬಿಟ್ಟ..! ತಾಯಿಯನ್ನು ಬೀದಿ ಹೆಣವಾಗಿಸಿದ ಮಗಳು ಮಗನಿಂದಲೇ ಕೊಲೆಯಾದಳು..! ಈ ಕಡೆ ತಾಯಿಯನ್ನು ಕೊಲೆ ಮಾಡಿದವನು ತಾನು ಪ್ರೀತಿಸಿದ ಹುಡುಗಿ ಸಿಗಲಿಲ್ಲ ಅಂತ ವಿಷ ಕುಡಿತು ಪ್ರಾಣಬಿಟ್ಟ..! ಈ ಕತೆ ಸುಮಾರು ಹದಿನೈದು ವರ್ಷದ ಹಿಂದಿನದು. ನನಗೆ ಗೊತ್ತಾಗಿದ್ದು ಐದಾರು ವರ್ಷದ ಹಿಂದೆ. ಅವತ್ತೇ ಬರೀಬೇಕು ಅನ್ಕೊಂಡಿದ್ದೆ, ಆಗಿರ್ಲಿಲ್ಲ. ಇವತ್ತೂ ಹೇಳೋಕೆ ಕಷ್ಟ ಆದ್ರೂ ಹೇಳ್ಲೇಬೇಕು ಅನ್ನಿಸ್ತು, ಅದಕ್ಕೇ ಹೇಳ್ದೆ..!
ಈ ರೀತಿ ತಂದೆ-ತಾಯಿಯನ್ನ ಕಡೆಗಾಣಿಸಿರೋರು ಯಾರಾದ್ರೂ ಆಗ್ಲಿ, ಅವರ ಲೈಫ್ ಹೀಗೇ ಕೊನೆಯಾಗುತ್ತೆ..! ಹೆತ್ತಮ್ಮನಿಗೆ ಕಣ್ಣೀರು ಹಾಕ್ಸೋರು ಯಾರ್ ತಾನೇ ಉದ್ಧಾರ ಆಗ್ತಾರೆ, ಅಲ್ವಾ..?
-ಶಶಿಧರ ಡಿ ಎಸ್ ದೋಣಿಹಕ್ಲು