ನನ್ನ ಬದುಕಿನಲ್ಲಿ ಮೊಟ್ಟಮೊದಲ ಬಾರಿಗೆ ತುಂಬ ನೊಂದುಕೊಂಡಿದ್ದ ಘಳಿಗೆ ಅದು. ಬಸವೇಶ್ವರನಗರದಿಂದ ಹೆಚ್ಚೆಂದರೆ ಇಪ್ಪತ್ತು ಕಿಲೋಮೀಟರ್ ದೂರದ ಹುಣಸೆಮರದಪಾಳ್ಯ ಅಂತ ಒಂದು ಜಾಗ. ಅಲ್ಲಿ ಹೋಗಿ ಪ್ರತಿ ಸಲ ನಾವಿಬ್ಬರು ಕೂರುತ್ತಿದ್ದೆ ಕಲ್ಲಿನ ಬೆಂಚಿನ ಮೇಲೆ ಅನಾಥನಂತೆ, ಕಬೋಜಿಯಂತೆ ಬದುಕಬೇಕೆಂಬ ಯಾವುದೇ ಆಸೆ ಉಳಿದಿಲ್ಲದವನಂತೆ ನಿಶ್ಚಲನಾಗಿ ಕುಳಿತುಬಿಟ್ಟಿದ್ದೆ. ಹಾಗೆ ಊರು ಬಿಟ್ಟು ದಿಕ್ಕು ದಾರಿಯಿಲ್ಲದೆ ಹಿಮಾಲಯದ ತಪ್ಪಲಿಗೆ ಹೋಗಿ ತಲುಪಲೇಬೇಕಿತ್ತು. ನನಗೆ ಅವಳನ್ನು ಹೇಗಾದರೂ ಮರೆಯಲೇಬೇಕಿತ್ತು. ಆ ದಿನಗಳಲ್ಲಿ ನನಗೆ ಓದು ಬೇಕಿರಲಿಲ್ಲ. ಅವಳನ್ನೇ ಓದುತ್ತಾ ಇದ್ದೆ. ಕೆಲಸ ಬೇಕಿರಲಿಲ್ಲ. ಅವಳನ್ನು ಪ್ರೀತಿಸುವುದೇ ಒಂದು ಸಂಬಳವಿಲ್ಲದ ಕೆಲಸವಾಗಿತ್ತು. ಮನೆ ಬೇಕಿರಲಿಲ್ಲ. ಅವಳ ಮನದಲ್ಲೇ ಖಾಯಂ ಆಗಿ ನೆಲೆಸಿಬಿಟ್ಟಿದ್ದೆ. ನನ್ನವರು ಅಂತ ಇದ್ದ ಯಾರೂ ಬೇಕಿರಲಿಲ್ಲ. ಅದು ಅಲ್ಲಿನ ದಿನದ ಮಟ್ಟಿಗೆ. ಆದಾದಮೇಲೆ ಆ ಹುಡುಗಿಯನ್ನು ಮರೆತುಬಿಟ್ಟರೆ ಸಾಕಿತ್ತು.. ಅದು ನನ್ನಿಂದ ಸಾಧ್ಯವಾಗುತ್ತಿಲ್ಲ.
`ಹಿಮಾಲಯದ ಚಳಿಗೆ ಮರಗಟ್ಟಿ ಹೋಗಬೇಕು. ಮನಸಿನ ಚಾಂಚಲ್ಯ ನೀಗಬೇಕು. ಈ ಕಣ್ಣಿಂದ ಇನ್ನು ನೀರು ಧುಮುಕಬಾರದು. ಮನಸ್ಸು ಕಲ್ಲಾಗಿ ಹೋಗಬೇಕು. ಅವಳನ್ನು ಶಾಶ್ವತವಾಗಿ ಮರೆತು ಹೋಗಬೇಕು’
ಈ ಪರಿ ಹುಚ್ಚನಂತೆ ಕಂಗೆಟ್ಟು ಕಿರುಚುವಂತೆ, ನಿಷ್ಕ್ರಿಯ ಹಾಗೂ ಅಸಹ್ಯಕರ ಸ್ಥಿತಿಗೆ ತಂದು ನನ್ನನ್ನು ಕೂರಿಸಿದವಳು ಅವಳೇನಾ..? ಅವಳೀಗ ಎಲ್ಲಿದ್ದಾಳೆ..? ಅವಳಿಗೇನಂತೆ, ಇದ್ದೂರಿನಲ್ಲೇ ಇದ್ದಾಳೆ. ಅವಳಿಗೆ ಯಾರನ್ನೂ ಮರೆಯಬೇಕೆಂಬ ಶಾಪವಿಲ್ಲ. ಮರೆತ ನಂತರವೇ ಅವಳು ನನ್ನನ್ನು ತಿರಸ್ಕರಿಸಿದ್ದು. ಧಿಕ್ಕರಿಸಬೇಕೆಂದು ನಿರ್ಧರಸಿದ ನಂತರವೇ ಇನ್ನೊಬ್ಬನನ್ನು ಆಯ್ದುಕೊಂಡಳಾ ಇಲ್ಲವಾ…? ಗೊತ್ತಿಲ್ಲ ಸಪೋಸ್ ಹಾಗೆ ಯಾವತ್ತಾದರೂ ನನ್ನನ್ನು ಧಿಕ್ಕರಿಸಿ ಇನ್ನೊಬ್ಬನನ್ನು ಮದುವೆಯಾಗಲು ಅವಳು ನಿರ್ಧರಿಸಬಹುದು ಅಂತ ಅವಳನ್ನು ಪ್ರೀತಿಸಿದ ಈ ಮೂರು ವರ್ಷಗಳಲ್ಲಿ ಒಂದೇ ಒಂದು ಸಲಕ್ಕೂ ಅನ್ನಿಸಿರಲಿಲ್ಲ. ಇಬ್ಬರ ನಡುವಿನ ಪ್ರೀತಿಗೆ ಮೂರು ವರ್ಷಗಳ ವಯಸ್ಸು.
ಆದರೆ ಅದೆಲ್ಲ ಸುಳ್ಳೇನೋ ಎಂಬಂತೆ “ನನಗೆ ಇಷ್ಟ ಇಲ್ಲ ಹೋಗು” ಅಂದುಬಿಟ್ಟಳಲ್ಲ..? ಅದು ಸಾಧ್ಯವಾದದ್ದಾದರೂ ಹೇಗೆ..? ಓಕೆ. ಅಚ್ಚುಕಟ್ಟಾದ ಕುಟುಂಬ. ಗುಣದಲ್ಲಿ ಶುದ್ಧ ಬಂಗಾರ. ಆದರೆ ಅವಳಿಗೆ ಅವಳ ಅಪ್ಪನ ಭಯ ಸಾಕಾಗಿತ್ತು. ಮದುವೆಯಾದರೆ ಮನೆಯವರ ಮಾನ ಮರ್ಯಾದೆ ಹಾಳು ಎಂಬ ಭ್ರಮೆ ಮೂಡಿಸಿಕೊಂಡು ಈ ಡಿಸೀಷನ್ ಗೆ ಇಳಿದಳು. ಹೀಗೂ ಕೇಳಿದಳು “ನೀನು ಹೆಚ್ಚೆಂದರೆ ಏನು ಮಹಾ ದುಡಿಯಬಲ್ಲೆ..? ಕಾಮರ್ಸ್ ತಗೋಡ್ಡಿದ್ಯಾ..! ನೀನೇನು ಆಗ್ತೀಯಾ? ನಿನ್ನ ತಲೇಲಿ ಏನಿದೆಯೋ ಗೊತ್ತಿಲ್ಲ.. ಏನೇನೂ ಇಲ್ಲ. ಉಸ್ಸೋ ಅನ್ನಬೇಕು. ಬೇಡ..! ಮನಸಿಗೆ ನೋವಾದರೆ ಆಗಲಿ. ನಾನು ಮನೆಯಲ್ಲಿ ಯಾರನ್ನು ತೋರಿಸಿ ಕೊರಳೊಡ್ಡು ಅಂತಾರೋ, ಅವನನ್ನೇ ಮದುವೆ ಆಗ್ತೀನಿ” ಅಂದವಳೇ ನಡೆದುಬಿಟ್ಟಳು.
ನನ್ನ ಭಾಗ್ಯಹೀನ ಬದುಕು ನನಗೆ ಕೊಟ್ಟ ಮೊದಲನೆಯ ಉಡುಗೊರೆ ಅದು. ಆನಂತರ ಅದೆಷ್ಟು ಅವಮಾನ, ಅದೆಷ್ಟು ಹಿಂಸೆ, ಅದೇನೇನೋ ತಲ್ಲಣ, ನಿಂದನೆಗಳು, ಆಪಾದನೆಗಳನ್ನು ಅನುಭವಿಸಿದ್ದೇನೋ ಲೆಕ್ಕ ಇಟ್ಟವರ್ಯಾರು? ಆದರೆ ಇಪ್ಪತ್ತೆರಡರ ಹುಡುಗನಿಗೆ, ಅವತ್ತಿಗೆ ಅದೇ ದೊಡ್ಡ ಯಾತನೆ. ಅರೇ! ಮೂರು ವರ್ಷ ಜೀವಕಿಂತ ಹೆಚ್ಚಾಗಿ ಪ್ರೀತಿಸಿದವನನ್ನು ಒಂದೇ ಒಂದು ಕಾರಣಕ್ಕೆ ನನ್ನನ್ನು ತಿರಸ್ಕರಿಸಿ ನಡೆದುಬಿಟ್ಟಳಲ್ಲ..? ಆ ಯಾತನೆ ನನ್ನನ್ನು ವರ್ಷಗಟ್ಟಲೆ ಬಾಧಿಸಿದೆ. ಬಾಧಿಸುತ್ತಿದೆ.
ಆಮೇಲೆ ಹಿಡಿದ ಮತ್ತೊಂದು ಹಾದಿ ಜಿಮ್. ಅವಳು ನನೆಪಾದಾಗಲೆಲ್ಲಾ, ಮನಸ್ಸಿಗೆ ಬೇಸರವಾದಾಗಲೆಲ್ಲಾ ದೇಹವನ್ನು ದಂಡನೆಗೆ ಹಚ್ಚಿದ್ದೇನೆ. ಯಾರನ್ನೋ ಮರಿಯಬೇಕು ಅಂದುಕೊಂಡು ವಿಸ್ಕಿಯತ್ತ ಕೈಚಾಚುವುದಿದೆಯಲ್ಲ..? ಅದು ಪರಮಮೂರ್ಖ ಪ್ರಯತ್ನ ಅಂತ ನನಗೆ ಯಾವತ್ತೋ ಮನವರಿಕೆಯಾಗಿಹೋಗಿದೆ. ವಿಪರೀತ ಕುಡಿದು, ಕಂಡವರೆದುರು ಅಸಹ್ಯವಾಗಿ, ಬೆಳಗ್ಗೆ ಎದ್ದು ಕೂರಲಾಗದಷ್ಟು ಹಿಂಸೆಯಾಗಿ, ರಾತ್ರಿ ಏನೇನಾಯಿತು ಎಂಬುದೇ ನೆನಪಿಗೆ ಬಾರದಂತಾಗಿ.. ಹೀಗೆಲ್ಲ ಆದಾಗ ಕೂಡ “ಕಡೆಗೆ ಎಲ್ಲಿಗೆ ತಂದಿಟ್ಟೆಯಲ್ಲೇ ಹುಡುಗಿ ನನ್ನ” ಅಂತಲೇ ಅನ್ನಿಸಿದೆ. ಕಡೆಗೊಮ್ಮೆ ಕೈಲಿದ್ದ ಗ್ಲಾಸು ಬಿಸಾಡಿ ಮೈ ಕೊಡವಿಕೊಂಡು ಮೇಲೆದ್ದಿದ್ದು ಕೂಡ ಅವಳ ಮೇಲಿನ ಸಿಟ್ಟಿನಿಂದಲೇ. ಹಾಗೆ ಎದ್ದವನು ನನಗಾಗಿ ದುಡಿಯತೊಡಗಿದೆ. ಆ ದುಡಿಮೆ ಇವತ್ತಿಗೂ ನಿಂತಿಲ್ಲ. ಹಾಗಾದರೆ ಅವತ್ಯಾಕೆ ಮೂರು ವರ್ಷಗಳ ಆ ಪ್ರೀತಿ ಕಳೆದುಕೊಂಡೆ..? ಗೆದ್ದ ಯುದ್ಧದಲ್ಲಿ ಸೋಲುವುದೆಂದರೇ ಇದೇನಾ..?
ಬಹುಶಃ ಅವತ್ತು ಸೋತಿದ್ದರಿಂದಲೇ ಆನಂತರದ ಎಲ್ಲ ಗೆಲುವುಗಳನ್ನು ನನ್ನದಾಗಿಸಿಕೊಳ್ಳಲು ಸಾಧ್ಯವಾಯಿತಾ..? ಗೊತ್ತಿಲ್ಲ. ಒಂದು ಸಂಗತಿಯನ್ನು ಮಾತ್ರ ನಾನು ತುಂಬ ಚೆನ್ನಾಗಿ ಮನವರಿಕೆ ಮಾಡಿಕೊಂಡಿದ್ದೇನೆ. ಬಿದ್ದ ಪೆಟ್ಟನ್ನು ಮರೆಯಬೇಕೆಂದರೆ, ಬೆಳಗ್ಗೆ ಔಷಧಿ ಹಚ್ಚಬೇಕಿಲ್ಲ. ದುಡಿಮೆಯ ಹೊರೆ ಹೊರಿಸಬೇಕು. ಹೊರಲಾರದಷ್ಟು ಭಾರ ಹೊರಿಸಬೇಕು. ಎಷ್ಟೋ ಸಲ ನಮಗೆ ನಾವು ನೆಪ ಹೇಳಿಕೊಳ್ಳುತ್ತೇವೆ. “ಅವಳನ್ನು ನೋಡದೆ ಇರೋಕಾಗಲ್ಲ. ಅವಳು ಬಿಟ್ಟು ಹೋದ ಮೇಲೆ ನಂಗೆ ಬದುಕಿನಲ್ಲಿ ಯಾವುದಕ್ಕೂ ಆಸಕ್ತಿ ಉಳಿದಿಲ್ಲ. `ಅಯ್ಯೋ ಬಿಡ್ರೀ, ನಾನು ಸಾಧಿಸಿ ಏನು ಮಾಡಬೇಕಿದೆ. ಅವಳೇ ಇಲ್ಲದ ಮೇಲೆ..? ಇಷ್ಟಕ್ಕೂ ಯಾರಿಗೇ ಅಂತ ಏನನ್ನಾದರೂ ಮಾಡಲಿ..? ನಾನು ಬದುಕಿದ್ರೂ ಒಂದೇ, ಸತ್ರೂ ಒಂದೇ. ಬಿಡಿ ಬಿಡಿ, ಕುಡಿಯೋದೇ ಸುಖ. ಕುಡಿದೂ ಕುಡಿದೂ ಇವತ್ತಲ್ಲಾ ನಾಳೆ ಸಾಯ್ತೀನಿ. ಅಷ್ಟೇ ತಾನೇ..?” ಹೀಗೆಲ್ಲಾ ಮಾತಾಡುತ್ತಿರುತ್ತೇವೆ. ನಮ್ಮೊಳಗೆ ನಾವೇ ಹೀಗೆಲ್ಲ ಅಂದುಕೊಳ್ಳುತ್ತಿರುತ್ತೇವೆ. ಇವು ನಮಗೆ ನಾವೇ ಹೇಳಿಕೊಳ್ಳಬಯಸುವ ಕಳ್ಳ ಸಮಾಧಾನಗಳು.
ಅವಳೇನು ನಮ್ಮ ಬದುಕಿನ ವೇದಾಂತವಾ..? ಅವಳೊಂದು ಶಾಶ್ವತ ದುಃಖ. ಜೊತೆಗಿರಲಿ ಬಿಡಿ.
- ವಿವೇಕ್, ಮಂಡ್ಯ
POPULAR STORIES :
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಈ ವೀಡಿಯೋ ನೋಡಿದ್ರೆ ನಿಮ್ಮ ತಲೆ ಕೆಟ್ಟು ಹೋಗುತ್ತೆ..! ಇದು ರುಂಡ ಮುಂಡ ಬೇರೆಯಾದ ಜೀವಂತ ಮೀನಿನ ಕಥೆ…
ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?
ಅಪಘಾತವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡ್ತೀರಾ..? ಅಪಲೋಡ್ ಮಾಡಿದ್ರೇ ಜೈಲ್ ಗ್ಯಾರಂಟಿ..!?
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
ಮುಸ್ಲಿಮರ `ಅಜಾನ್’ ವೇಳೆ ಅರ್ಧಕ್ಕೆ ಭಾಷಣ ನಿಲ್ಲಿಸಿದ ಮೋದಿ…! #Video