ಬಿಟ್ಟು ಹೋಗಿದ್ದ.. ಸೌಜನ್ಯಕ್ಕೆ ತಿರುಗಿಯೂ ನೋಡದೆ ಬೈಕ್ ಸ್ಟಾರ್ಟ್ ಮಾಡಿದವನು ಭರ್ರನೆ ಹೊಗೆಯೆಬ್ಬಿಸಿ ಹೊರಟುಹೋಗಿದ್ದ. ಹಸಿರು ಹುಲ್ಲು ಹಾಸಿನ ಮೇಲೆ ಕುಳಿತಿದ್ದವಳ ಕನಸು ಸುಡುತ್ತಿತ್ತು.
ಇಷ್ಟಕ್ಕೂ ಅವಳು ಮಾಡಿದ ತಪ್ಪಾದರೂ ಏನು? ಮೊನ್ನೆ ಕಾಲೇಜಿಗೆ ಹೋಗಲು ಬಸ್ ತಪ್ಪಿಸಿಕೊಂಡಾಗ ಅವಳದೇ ತರಗತಿಯ ವಿಕ್ರಾಂತ್ ಬೈಕಿನಲ್ಲಿ ಹೋಗೋಣ ಬಾ ಅಂತ ಕರೆದಿದ್ದ, ತರಗತಿಯ ಹುಡುಗನಾದ್ದರಿಂದ ಇವಳೂ ಕೂಡ ಹೆಚ್ಚು ಯೋಚಿಸದೆ ಬೈಕ್ ಹತ್ತಿದ್ದಳು. ಎಡವಟ್ಟಾಗಿದ್ದೇ ಅಲ್ಲಿ.. ವಿಕ್ರಾಂತ್ ಪಾಪದ ಹುಡುಗನಾದರೂ ಆತನಿಗೂ ಇವಳ ಪ್ರಿಯಕರ ಮನೋಹರನಿಗೂ ಸಣ್ಣ ಮನಸ್ತಾಪವಿತ್ತು. ಮೇಲ್ನೋಟಕ್ಕೆ ತೋರಿಸಿಕೊಳ್ಳುತ್ತಿರಲಿಲ್ಲವಾದರೂ ಒಳಗೊಳಗೇ ದ್ವೇಷಿಸುತ್ತಿದ್ದರು. ಇದಕ್ಕೆಲ್ಲಾ ಮೂಲ ಕಾರಣ ವಿಕ್ರಾಂತ್ ಪ್ರಿಯಾಳಿಗೆ ಸದ್ದಿಲ್ಲದೇ ಕಾಳು ಹಾಕುತ್ತಿದ್ದ. ಮನೋಹರ್ ಮತ್ತು ಪ್ರಿಯಾ ಒಬ್ಬರನ್ನೊಬ್ಬರು ಮೆಚ್ಚಿಕೊಂಡು ಅದಾಗಲೇ ಎರಡು ವರ್ಷ ಕಳೆದಿತ್ತು, ಅವರ ಪ್ರೇಮ ಪುರಾಣ ಇಡೀ ಕಾಲೇಜಿಗೇ ಗೊತ್ತಿದ್ದರಿಂದ ಯಾರೂ ಆ ವಿಷಯಕ್ಕೆ ತಲೆ ಹಾಕುತ್ತಿರಲಿಲ್ಲ. ಹೀಗಿರುವಾಗಲೇ ವಿಕ್ರಾಂತನಿಗೆ ಪ್ರಿಯಾಳ ಮೇಲೆ ಆಕರ್ಷಣೆ ಹುಟ್ಟಿದ್ದು. ಹೇಳಿ ಕೇಳಿ ವಿಕ್ರಾಂತ್ ಶ್ರೀಮಂತರ ಮನೆಯ ಹುಡುಗ, ಇಡೀ ಕಾಲೇಜೇ ಅವನತ್ತ ತಿರುಗಿ ನೋಡುವಂತೆ ದಿನಕ್ಕೊಂದು ಬಗೆಯ ಬೈಕು, ಬಟ್ಟೆ, ಶೂಗಳೊಂದಿಗೆ ಬರುತ್ತಿದ್ದ. ಇವನಿಗೆ ಪ್ರಿಯಾ ಮತ್ತು ಮನೋಹರರ ಕಥೆ ಗೊತ್ತಿತ್ತಾದರೂ ಹಣದ ಮದ ಏರಿದ್ದರಿಂದ ಭಾವನೆಗಳ ವಿರುದ್ಧ ಯುದ್ಧ ಸಾರಿದ್ದ. ಹೇಗಾದರೂ ಮಾಡಿ ಪ್ರಿಯಾಳನ್ನು ತನ್ನ ತೆಕ್ಕೆಗೆ ಬೀಳಿಸಿಕೊಳ್ಳಬೇಕೆಂದು ಪಣ ತೊಟ್ಟು, ಮನೋಹರನಿಗೆ ಸೆಡ್ಡು ಹೊಡೆದಿದ್ದ. ಅವನ ಮಾತು ಕೇಳಿ ಮನೋಹರನಿಗೆ ಕಸಿವಿಸಿಯಾದರೂ ಪ್ರಿಯಾಳಿಗೆ ಈ ವಿಚಾರ ತಿಳಿಸದಿರಲು ನಿರ್ಧರಿಸಿ, ಸ್ನೇಹಿತರೊಡನೆ ಸೇರಿ ವಿಕ್ರಾಂತನನ್ನು ಹಣಿಯಲು ಸಿದ್ಧತೆ ನಡೆಸುತ್ತಿದ್ದ. ಇದ್ಯಾವುದರ ಪರಿವೆಯೇ ಇಲ್ಲದ ಪ್ರಿಯಾ ಎಂದಿನಂತೇ ಮನೋಹರನ ಜೊತೆ ನಗುನಗುತ್ತಾ ಓಡಾಡಿಕೊಂಡಿದ್ದಳು. ಅವಳು ಮನೋಹರನ ಕೈ ಹಿಡಿದಾಗಲೆಲ್ಲಾ ವಿಕ್ರಾಂತ ಉರಿದು ಬೀಳುತ್ತಿದ್ದರೆ, ಮನೋಹರ ಜಗತ್ತನ್ನೇ ಗೆದ್ದವನಂತೆ ಬೀಗುತ್ತಿದ್ದ. ಬರುಬರುತ್ತಾ ಇದು ವಿಕ್ರಾಂತನಿಗೆ ಸೇಡು ತೀರಿಸಿಕೊಳ್ಳಬೇಕೆಂಬ ಮಟ್ಟಕ್ಕೆ ದ್ವೇಷ ಹುಟ್ಟುಹಾಕಿತು.
ಅಸಲಿಗೆ ಸುಮಾರು ವಾರಗಳಿಂದ ವಿಕ್ರಾಂತ ಪ್ರಿಯಾಳನ್ನು ಹಿಂಬಾಲಿಸಲು ಶುರುಮಾಡಿದ್ದ, ಆಗಾಗ ಪ್ರಿಯಾಳ ಜೊತೆ ನಗುತ್ತಾ ಮಾತನಾಡುವುದು ಅದೂ ಇದೂ ಅನ್ನುತ್ತಾ ಸೇಡಿನ ಮೊದಲ ಹೆಜ್ಜೆ ಇಟ್ಟಿದ್ದ. ಇತ್ತ ಮನೋಹರ ಪ್ರಿಯಾಳಿಗೆ ವಿಷಯ ಹೇಳಲೂ ಆಗದೆ, ಸುಮ್ಮನಿರಲೂ ಆಗದೆ ಒದ್ದಾಡತೊಡಗಿದ್ದ. ವಿಕ್ರಾಂತನ ಜೊತೆ ಇವಳು ನಕ್ಕು ಮಾತಾನಾಡಿದಾಗೆಲ್ಲಾ ಮನೋಹರನಿಗೆ ಒಳಗೊಳಗೆ ಅಸೂಯೆ ಹುಟ್ಟಿ, ಪ್ರಿಯಾಳ ಮೇಲೆ ಅನುಮಾನ ಪಡುವಂತೆ ಮಾಡಿತು.
ಇದಕ್ಕೆ ಮತ್ತಷ್ಟು ಇಂಬು ನೀಡುವಂತೆ ಪ್ರಿಯಾ ಅವತ್ತು ವಿಕ್ರಾಂತನ ಗಾಡಿಯಲ್ಲಿ ಬಂದಿದ್ದಳು. ಕಾಲೇಜಿನ ಗೇಟಿನಲ್ಲಿ ನಿಂತು ಪ್ರಿಯಾಳಿಗಾಗಿ ಕಾಯುತ್ತಿದ್ದ ಮನೋಹರ ಆ ದೃಶ್ಯವನ್ನು ನೋಡಿ ದಿಗ್ಭ್ರಾಂತನಾಗಿದ್ದ. ಬೈಕಿಳಿದು ಬಳಿ ಬಂದ ಪ್ರಿಯಾ ಹಾಯ್ ಎಂದರೂ ಇವನು ಮೌನವಾಗಿದ್ದ. ಅವತ್ತು ಸಂಜೆಯ ತನಕವೂ ಯಾವುದಕ್ಕೂ ಸರಿಯಾಗಿ ಉತ್ತರಿಸದ ಮನೋಹರ, ತರಗತಿಗಳೆಲ್ಲಾ ಮುಗಿದ ಮೇಲೆ ಪ್ರಿಯಾಳ ಕೈ ಹಿಡಿದು ಪಾರ್ಕಿಗೆ ಎಳೆದುಕೊಂಡು ಹೋಗಿದ್ದ. ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ಪ್ರಿಯಾಳ ಕೆನ್ನೆಯ ಮೇಲೆ ಬರೆ ಬಿದ್ದಿತ್ತು. ನೋವಿನಿಂದ ಕಿರುಚಿ ಕುಸಿದು ಬಿದ್ದ ಪ್ರಿಯಾಳಿಗೆ ಬಾಯಿಗೆ ಬಂದಂತೆ ಬೈದ ಮನೋಹರ ಕೈ ಮುಗಿದು ಹೊರಟೇಬಿಟ್ಟ.
ಮಾತೇ ಬಾರದಂತಾಗಿದ್ದ ಪ್ರಿಯಾ ಕಣ್ಣೀರು ಸುರಿಸುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ ಇದೆಲ್ಲವನ್ನೂ ದೂರದಿಂದಲೇ ಗಮನಿಸಿದ ವಿಕ್ರಾಂತ್ ಗಹಗಹಿಸಿ ನಗುತ್ತಿದ್ದ. ಅಲ್ಲಿಗೆ ಅನುಮಾನವೆಂಬ ಪಿಶಾಚಿಗೆ ಸಿಕ್ಕು ಶುದ್ಧ ಪ್ರೀತಿಯೊಂದು ಒಡೆದು ಹೋಗಿತ್ತು, ದುಡುಕದೇ ಕುಳಿತು ಮಾತನಾಡಿದ್ದರೂ ಸಾಕಿತ್ತು ವಿಕ್ರಾಂತನ ಕುತಂತ್ರವನ್ನು ಕೊನೆಗಾಣಿಸಬಹುದಿತ್ತು. ಆದರೆ.. ಊಹ್ಞೂಂ ಮನೋಹರ ದುಡುಕಿದ್ದ, ಅಮಾಯಕ ಪ್ರಿಯಾ ಸೋತು ಹೋದಳು.
- ಸ್ಕಂದ ಆಗುಂಬೆ