ಬೆಂಗಳೂರು : ಸಾಲುಮರದ ತಿಮ್ಮಕ್ಕ ಅವರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 50X80 ಅಳತೆಯ ನಿವೇಶನವನ್ನು ನಿನ್ನೆ ನೀಡಲಾಗಿದೆ. ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಮತ್ತು ಆಯುಕ್ತರಾದ ರಾಜೇಶ್ ಗೌಡ ನಿವೇಶನದ ನೋಂದಣಿ ಪತ್ರವನ್ನು ಹಸ್ತಾಂತರಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆಯ ಮೇರೆಗೆ ಬುಧವಾರ ಕೆಂಪೇಗೌಡ ಬಡಾವಣೆಯ 7ನೇ ಬ್ಲಾಕ್ನಲ್ಲಿರುವ ನಿವೇಶನದ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ನಂತರ ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರು ಪರಿಸರ ಪ್ರೇಮಿ, ಶತಾಯುಷಿ ತಿಮ್ಮಕ್ಕರನ್ನು ಸನ್ಮಾನಿಸಿ ನಿವೇಶನದ ನೋಂದಣಿ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಾಲುಮರದ ತಿಮ್ಮಕ್ಕ, ನನಗೆ ಬಿಡಿಎ ವತಿಯಿಂದ ನಿವೇಶನವನ್ನು ನೀಡಿರುವುದಕ್ಕೆ ಸಂತಸವಾಗುತ್ತಿದೆ. ಎಲ್ಲರೂ ಪರಿಸರ ರಕ್ಷಣೆಯತ್ತ ಕಾಳಜಿ ವಹಿಸಬೇಕು ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರಲ್ಲಿ ಪರಿಸರ ಕಾಳಜಿ ಮೂಡುವಂತೆ ಮಾಡಬೇಕೆಂದು ಹಾರೈಸಿದರು.