ಇವರು ಸಂಜುಕ್ತಾ ಪರಾಶರ್ ಭಾರತದ ಅತ್ಯಂತ ಧೈರ್ಯಶಾಲಿ ಐಪಿಎಸ್ ಅಧಿಕಾರಿ. ಅಸ್ಸಾಂನ ಪ್ರಥಮ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಗೆ ಇವರದು. ಬೋಡೊ ಉಗ್ರರ ಹುಟ್ಟಡಗಿಸುತ್ತಿರುವ ಇವರನ್ನು ಅಸ್ಸಾಂನ ಉಕ್ಕಿನ ಮಹಿಳೆ ಎಂದೇ ಗುರುತಿಸಿಕೊಂಡಿದ್ದಾರೆ. ಇವರು ಕೇವಲ 15 ತಿಂಗಳ ಕ್ಷಿಪ್ರ ಕಾರ್ಯಾಚರಣೆಯಲ್ಲಿ 16 ಭಯೋತ್ಪಾದಕರನ್ನು ಕೊಂದು, 64 ಉಗ್ರರು ಮತ್ತು ಕುಖ್ಯಾತ ಕ್ರಿಮಿನಲ್ ಗಳನ್ನು ಬಂಧಿಸಿದ್ದಾರೆ.
2006ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾದ ಸಂಜುಕ್ತಾ 85ನೇ ಅಖಿಲ ಭಾರತ ರ್ಯಾಂಕ್ ವಿಜೇತೆ. ಬಾಲ್ಯದಿಂದಲೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಅಭಿಲಾಷೆ ಹೊಂದಿದ್ದ ಇವರು ಐಪಿಎಸ್ ತರಬೇತಿ ನಂತರ 2008ರಲ್ಲಿ ಸಂಜುಕ್ತಾ ಅವರು ಅಸ್ಸಾಂನ ಮಾಕುಮ್ಗೆ ಸಹಾಯಕ ಪೊಲೀಸ್ ಆಯುಕ್ತರಾಗಿ ಸೇವೆಗೆ ನಿಯೋಜನೆಗೊಂಡರು.
ಸಂಜುಕ್ತಾ ಅವರ ದಕ್ಷತೆ ಮತ್ತು ನಿರ್ಭೀತ ಕಾರ್ಯಗಳಿಂದಾಗಿ ಅಸ್ಸಾಂ ನ ಉದಾಲ್ಗುರಿಗೆ ಅವರನ್ನು ವರ್ಗಾವಣೆ ಮಾಡಲಾಯಿತು. ಆಗ ಆ ಪ್ರದೇಶದಲ್ಲಿ ಬೋಡೋ ಉಗ್ರರು ಮತ್ತು ಬಾಂಗ್ಲಾದೇಶಿ ವಲಸಿಗರ ನಡುವೆ ಭಯಾನಕ ಕೋಮುಗಲಭೆ ನಡೆಯುತ್ತಿತ್ತು. ಕೆಲವೇ ಗಂಟೆಗಳಲ್ಲಿ ಅಲ್ಲಿನ ಪರಿಸ್ಥಿತಿಯನ್ನು ತಹಬಂದಿಗೆ ತಂದು ದುಷ್ಕರ್ಮಿಗಳನ್ನು ಬಂಧಿಸಿ ಶಾಂತಿ-ಸುವ್ಯವಸ್ಥೆ ನೆಲೆಗೊಳ್ಳುವಂತೆ ಮಾಡಿದ ದಿಟ್ಟ ಪೊಲೀಸ್ ಅಧಿಕಾರಿ.
ಇನ್ನು ಸಂಜುಕ್ತಾ ಕೇವಲ 15 ತಿಂಗಳ ಕಾರ್ಯಾಚರಣೆಯಲ್ಲಿ 16 ಭಯೋತ್ಪಾದಕರನ್ನು ಕೊಂದು, 64 ಉಗ್ರರು ಮತ್ತು ಕುಖ್ಯಾತ ಕ್ರಿಮಿನಲ್ ಗಳನ್ನು ಬಂಧಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಸಂಜುಕ್ತಾ ಎಕೆ-47 ರೈಫಲ್ ಹೊತ್ತು ಕಾರ್ಯಾಚರಣೆಗೆ ಇಳಿದರೆ ಪಾಪಿ ಉಗ್ರರ ಖತಂ ಖಚಿತ. ನೋಡಿ, ಬೋಡೋ ಉಗ್ರರ ನಿಗ್ರಹ ಕಾರ್ಯಾಚರಣೆಗಳಿಗಾಗಿ ತಮ್ಮ ಸೇವೆಯನ್ನು ಮೀಸಲಿಟ್ಟಿದ್ದಾರೆ ಸಂಜುಕ್ತಾ ಅವರು. ಈಗಾಗಲೇ ನೂರಾರು ಉಗ್ರಗಾಮಿಗಳು ಮತ್ತು ಕುಖ್ಯಾತ ಕ್ರಿಮಿನಲ್ಗಳ ಎದೆಯಲ್ಲಿ ನಡುಕು ಹುಟ್ಟಿಸಿದ್ದಾರೆ.
ಸಂಜುಕ್ತಾ ರಾಜಕೀಯ ವಿಜ್ಞಾನದಲ್ಲಿ ದಿಲ್ಲಿಯ ಇಂದ್ರಪ್ರಸ್ಥ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ನಂತರ ಜೆಎನ್ಯುನಿಂದ ಇಂಟರ್ನ್ಯಾಶನಲ್ ರಿಲೇಶನ್ಶಿಪ್ನಲ್ಲಿ ಪಿಜಿ ಮತ್ತು ಯುಎಸ್ ಫಾರಿನ್ ಪಾಲಿಸಿಯಲ್ಲಿ ಎಂಫಿಲ್ ಮತ್ತು ಪಿಎಚ್ಡಿ ಮಾಡಿದ್ದಾರೆ. ಜೊತೆಗೆ ಸಂಜುಕ್ತಾ ಐಎಎಸ್ ಅಧಿಕಾರಿ ಪುರುಗುಪ್ತಾರನ್ನು ಮದುವೆಯಾಗಿದ್ದಾರೆ. ದಂಪತಿಗೆ ಒಂದು ಮಗು ಇದೆ. ಅಸ್ಸಾಮ್ನ ಪುತ್ರಿ ಸಂಜುಕ್ತಾ ಈಗ ಎಲ್ಲರಿಗೂ ಮಾದರಿಯಾಗಿದ್ದಾರೆ.
ಸಂಜುಕ್ತಾ ಅವರ ದಕ್ಷ ಮತ್ತು ದಿಟ್ಟ ಸೇವಾ ಮನೋಭಾವ ಅಪಾರ ಪ್ರಶಂಸೆಗೆ ಪಾತ್ರವಾಗಿದೆ. ನೋಡಿ, ದಕ್ಷ ಈ ಪೊಲೀಸ್ ಅಧಿಕಾರಿ ಸಂಜುಕ್ತಾ ಅವರು ಎರಡು ತಿಂಗಳಲ್ಲಿ ಒಮ್ಮೆ ಮಾತ್ರ ತಮ್ಮ ಕುಟುಂಬದೊಂದಿಗೆ ಕೆಲಕಾಲ ಕಳೆಯುತ್ತಾರೆ. ಇನ್ನು ಇವರು ಜನಾನುರಾಗಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಉಗ್ರರ ದಾಳಿಯಿಂದ ತಮ್ಮವರನ್ನು ಆಸ್ತಿ ಕಳೆದುಕೊಂಡ ಜನರನ್ನು ಸಂತೈಸಿ ಸಹಾಯಹಸ್ತ ಚಾಚುತ್ತಾರೆ. ಪರಿಹಾರ ಶಿಬಿರಗಳಲ್ಲಿ ನೆರವು ನೀಡಿ ಮಾನವೀಯತೆ ತೋರಿದ್ದಾರೆ.
ಈ ವೀರನಾರಿಗೆ ಭಯೋತ್ಪಾದಕರ ಸಂಘಟನೆಗಳಿಂದ ಪ್ರಾಣ ಬೆದರಿಕೆ ಕರೆಗಳೂ ಬಂದಿವೆ. ತೀರಾ ಇತ್ತೀಚೆಗೆ ನ್ಯಾಷನಲ್ ಡೆಮೊಕ್ರಾಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ ಇವರನ್ನು ಕೊಲ್ಲುವುದಾಗಿ ಧಮಕಿ ಹಾಕಿತ್ತು. ಆದರೆ ಈ ನಿರ್ಭೀತ ಅಧಿಕಾರಿಗೆ ಭಯವೆಂಬುದೇ ಗೊತ್ತಿಲ್ಲ. ಭಯೋತ್ಪಾದನೆ ವಿರುದ್ಧ ಸಮರಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಇಂಥ ವೀರಾಗ್ರಣಿಯರ ಅಗತ್ಯ ಇಂದು ನಮ್ಮ ದೇಶಕ್ಕೆ ಅಗತ್ಯವಿದೆ ಅಲ್ಲವೇ?