ಮಲೆನಾಡು ಜನ ರಕ್ತಕೊಟ್ಟೇವು , ನೀರು ಕೊಡೆವು ಎಂಬ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಬೆಂಗಳೂರಿಗರಿಗೆ ನೀರು ಪೂರೈಸಲು ಶರಾವತಿ ನದಿ ನೀರು ತರ್ತೀವಿ ಎಂದು ಹೇಳಿರುವ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ ಜಿ ಪರಮೇಶ್ವರ್ ಇದೀಗ ಮಲೆನಾಡಿಗರ ಕಂಗೆಣ್ಣಿಗೆ ಗುರಿಯಾಗಿದ್ದಾರೆ.
ಪರಮೇಶ್ವರ್ ಅವರು, ಲಿಂಗನಮಕ್ಕಿಯಿಂದ 425 ಕಿಮೀ ದೂರದಲ್ಲಿರುವ ಬೆಂಗಳೂರಿಗೆ ನೀರನ್ನು ತರುವ ಕುರಿತು ವಿಸ್ತ್ರತ ಯೋಜನಾ ವರದಿ ತಯಾರಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆತ್ಯಾಗರಾಜನ್ ಸಮಿತಿ ವರದಿ ಆಧರಿಸಿ, 151 ಅಡಿ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯದಿಂದ ಮೊದಲ ಹಂತದಲ್ಲಿ 30 ಟಿಎಂಸಿ ಹಾಗೂ ಎರಡನೇ ಹಂತದಲ್ಲಿ 60 ಟಿಎಂಸಿ ನೀರನ್ನು ಬೆಂಗಳೂರಿಗೆ ಪೂರೈಸಲು ಸರ್ಕಾರ ಉದ್ದೇಶಿಸಿದೆ.
ಶರಾವತಿಗೆ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಮಾಡಿದಾಗ ಸುಮಾರು 12 ಸಾವಿರ ಎಕರೆ ದಟ್ಟ ಕಾಡು ಮುಳುಗಡೆ ಆಗಿದೆ. ಇದರಿಂದಾಗಿ ಈ ಭಾಗದಲ್ಲಿ ಮಳೆ ಪ್ರಮಾಣ ಅಗಾಧವಾಗಿ ಕಡಿಮೆ ಆಗಿದೆ. 320 ಇಂಚು ನೀರು ಬರುತ್ತಿದ್ದ ಈ ಪ್ರದೇಶದಲ್ಲಿ ಈಗ ಸರಾಸರಿ 70 ಇಂಚು ಬೀಳುತ್ತಿದೆ. ಇಷ್ಟು ನೀರು ವಿದ್ಯುತ್ ಉತ್ಪಾದನೆಗೆ ಸಾಕಾಗುವುದಿಲ್ಲ. ಇನ್ನು ಬೆಂಗಳೂರಿಗೆ ಕುಡಿಯಲು ನೀರು ಕೊಡಲು ಸಾಧ್ಯವೇ ಎಂದು ಹಿರಿಯ ಸಾಹಿತಿ ನಾ ಡಿಸೋಜ ಪ್ರಶ್ನಿಸಿದ್ದಾರೆ.
ಈ ಯೋಜನೆ ಕೈ ಬಿಡದಿದ್ದರೆ ದೊಡ್ಡ ಚಳುವಳಿ ನಡೆಯಲಿದೆ ಎಂದು ರಂಗಕರ್ಮಿ ಪ್ರಸನ್ನ ಕೂಡ ಎಚ್ಚರಿಸಿದ್ದಾರೆ. ಮಲೆನಾಡಿಗರು ದೊಡ್ಡಮಟ್ಟಿನ ವಿರೋಧ ವ್ಯಕ್ತಪಡಿಸಿದ್ದಾರೆ.