ಮಲೆನಾಡ ಸಿರಿ ತೀರ್ಥಹಳ್ಳಿಯ ಈ ಬೆಡಗಿಗೆ ಚಿಕ್ಕಂದನಿಂದಲೂ ಒಳ್ಳೆಯ ಹೆಸರು ಸಂಪಾದಿಸಬೇಕು ಎಂಬ ಆಸೆ, ಕನಸಿತ್ತು. ಆದರೆ, ಇಂತಹದ್ದೇ ಕ್ಷೇತ್ರದಲ್ಲಿ ಬೆಳೆಯಬೇಕು… ಇದೇ ನನ್ನ ಆಯ್ಕೆಯ ಕ್ಷೇತ್ರ ಎಂದೇನೂ ಇರಲಿಲ್ಲ. ಹುಟ್ಟಿನಿಂದಲೇ ಒಲಿದಿದ್ದ ಸರಸ್ವತಿ ಸುದ್ದಿಲೋಕಕ್ಕೆ ಬರುವಂತೆ ಮಾಡಿದಳು…! ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಮಾಧ್ಯಮ ಲೋಕದಲ್ಲಿ ತನ್ನದೇ ಛಾಪು ಮೂಡಿಸಿ ಕನ್ನಡಿಗರ ಮನಗೆದ್ದಿದ್ದಾರೆ ಈ ಮಲೆನಾಡ ಚೆಲುವೆ.
ಇವರು ಶರ್ಮಿತಾ ಶೆಟ್ಟಿ. ಚಂದದ ನೋಟ, ಅದಕ್ಕೊಪ್ಪುವ ದನಿ, ನಡೆ-ನುಡಿ. ಸದಾ ಕಲಿಯುವ ತುಡಿತ, ಸ್ಪಷ್ಟ ಕನ್ನಡ, ಭಾಷೆಯ ಮೇಲಿನ ಹಿಡಿತ, ತಾಳ್ಮೆ, ಆತ್ಮವಿಶ್ವಾಸ, ನಿರಂತರ ಓದು.. ಈ ಗುಣಗಳೇ ಇವರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಒಳ್ಳೆಯ ಹೆಸರು, ಕೀರ್ತಿ, ಜನಪ್ರಿಯತೆಯನ್ನು ತಂದುಕೊಟ್ಟಿರೋದು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೂದೂರಿನ ಕೃಷ್ಣ ಬಿ ಶೆಟ್ಟಿ ಮತ್ತು ಭಾರತಿ ಶೆಟ್ಟಿ ದಂಪತಿಯ ಪುತ್ರಿ ಶರ್ಮಿತಾ ಶೆಟ್ಟಿ. ಶಮನ್ ಶೆಟ್ಟಿ ಇವರ ಅಣ್ಣ.
ಹುಟ್ಟೂರು ತೂದೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಶೃಂಗೇರಿಯ ಮಠದ ಹೈಸ್ಕೂಲ್ ನಲ್ಲಿ ಪ್ರೌಢಶಿಕ್ಷಣವನ್ನು, ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಪಿಯುಸಿ (ವಿಜ್ಞಾನ)ಯನ್ನು ಹಾಗೂ ಶಿವಮೊಗ್ಗದಲ್ಲಿ ಬಿಎಸ್‍ಸಿ (ನರ್ಸಿಂಗ್) ಪದವಿಯನ್ನು ಪಡೆದಿದ್ದಾರೆ.
ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಶಿಕ್ಷಕಿ ಸುಧಾ ಅವರು ಶರ್ಮಿತಾ ಅವರಲ್ಲಿ ಪ್ರತಿಭೆಯನ್ನು ಗುರುತಿಸಿ ತುಂಬಾನೆ ಸಪೋರ್ಟ್ ಮಾಡ್ತಿದ್ರು. ಹೈಸ್ಕೂಲ್ ಗೆ ಸೇರಿದ್ಮೇಲೆ ಶಿಕ್ಷಕಿ ಜಾನಕಿಯವರು ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಹಾಡು ಹೇಳಲು, ಕಾರ್ಯಕ್ರಮ ನಿರೂಪಣೆ ಮಾಡಲು ಶರ್ಮಿತಾಗೆ ಹೆಚ್ಚು ಹೆಚ್ಚು ಅವಕಾಶವನ್ನು ಮಾಡಿಕೊಟ್ರು.ಶರ್ಮಿತಾ ಸಂಗೀತ ಕಲಿತಿದ್ದಾರೆ. ಒಳ್ಳೆಯ ಗಾಯಕಿ. ಕಾಲೇಜು ದಿನಗಳಲ್ಲಿ ಗುರುಗಳಾದ ನಾಗರಾಜ್ ಅವರೊಂದಿಗೆ ಸುಗಮ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ಲೆಕ್ಕವಿಲ್ಲದಷ್ಟು ವೇದಿಕೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅನೇಕ ಕಡೆಗಳಲ್ಲಿ ಸ್ಟೇಜ್ ಪ್ರೋಗ್ರಾಂಗಳ ನಿರೂಪಣೆಯನ್ನು ಸಹ ನಡೆಸಿಕೊಟ್ಟಿದ್ದರು ಆ ದಿನಗಳಲ್ಲೇ…!
ನರ್ಸಿಂಗ್ ವೃತ್ತಿಪರ ತರಬೇತಿ ಪಡೆಯೋದು ಶರ್ಮಿತಾ ಅವರಿಗೆ ಇಷ್ಟವಿರ್ಲಲ್ಲಿ. ಆದ್ರೆ, ಆ ಟೈಮ್ನಲ್ಲಿ ಬಿಎಸ್‍ಸಿನ ಇನ್ ನರ್ಸಿಂಗ್ ಅನ್ನೋದು ಟ್ರೆಂಡ್ ಆಗಿಬಿಟ್ಟಿತ್ತು. ಈ ಕೋರ್ಸ್ ಮಾಡಿದ್ರೆ ಫಾರಿನ್ ಗೆ ಹೋಗ್ಬಹುದು, ಲಕ್ಷಗಟ್ಟಲೆ ಸಂಬಳ ಎಣಿಸಬಹುದು ಎಂಬ ಕಲ್ಪನೆಗಳಿದ್ವು. ಇದೊಂದು ಬಹುಬೇಡಿಕೆಯ ಕೋರ್ಸ್ ಅಂತ ತಂದೆ ಶರ್ಮಿತಾ ಅವರನ್ನು ನರ್ಸಿಂಗ್ ಕೋರ್ಸ್‍ಗೆ ಸೇರಿಸಿದ್ರು. ತಂದೆಯ ಆಸೆಯಂತೆ ಅವರ ಒತ್ತಾಯದ ಮೇರೆಗೆ ಶರ್ಮಿತಾ ನರ್ಸಿಂಗ್ ಕೋರ್ಸ್‍ಗೆ ಸೇರಿದ್ರು. ಆದರೆ, ಓದನ್ನು ನಿರ್ಲಕ್ಷಿಸಲಿಲ್ಲ…ರ್ಯಾಂಕ್ ಸ್ಟೂಡೆಂಟ್ ಆಗಿ ಕಾಲೇಜಿನಲ್ಲಿ ಗುರುತಿಸಿಕೊಂಡಿದ್ರು.
ಆಗಿನ್ನೂ ಪದವಿ ಎಕ್ಸಾಮ್ ಮುಗಿದಿರ್ಲಿಲ್ಲ. ಈ-ಟಿವಿಗೆ ನಿರೂಪಕರು ಬೇಕಾಗಿದ್ದಾರೆ ಎಂಬ ವಿಷ್ಯ ಶರ್ಮಿತಾ ಅವರಿಗೆ ತಿಳೀತು. ಆಡಿಷನ್ ಅಟೆಂಡ್ ಮಾಡಲು ಮಂಗಳೂರಿನ ಈ-ಟಿವಿ ಕಚೇರಿಗೆ ಹೋದ್ರು. ಸ್ವಲ್ಪ ದಿನದ ಬಳಿಕ ನೀವು ಆಯ್ಕೆಯಾಗಿದ್ದೀರಿ. ಹೈದರಾಬಾದ್‍ಗೆ ಬನ್ನಿ ಎಂಬ ಸಿಹಿ ಸುದ್ದಿ ಶರ್ಮಿತಾಗೆ ಬಂತು. ಹೀಗೆ ಇವರು 2011ನೇ ಇಸವಿಯಲ್ಲಿ ಈ-ಟಿವಿ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಪ್ರವೇಶಿಸಿದ್ರು. ಈಗಲೂ ಮಾತೃಸಂಸ್ಥೆಯಲ್ಲೇ ಮುಂದುವರೆದಿದ್ದಾರೆ.
ಹೈದರಾಬಾದ್ ನಲ್ಲಿ ಶರ್ಮಿತಾ ವೃತ್ತಿಜೀವನ ಆರಂಭಿಸಿದಾಗ ಅನುಭವಿ ಪತ್ರಕರ್ತೆ ಮಾಧುರಿ ಅವರು ನಿರೂಪಣೆಯ ತರಬೇತಿ ನೀಡಿದ್ರು. ಕೆಲವೇ ದಿನಗಳಲ್ಲಿ ‘ಅಗ್ರರಾಷ್ಟ್ರೀಯ ವಾರ್ತೆ’ ಓದುವ ಮೂಲಕ ಟಿವಿ ಪರದೆ ಮೇಲೆ ಮಿಂಚಿದ್ರು ಶರ್ಮಿತಾ.
ಮೊದಲ ಬಾರಿಗೆ ನ್ಯೂಸ್ ಓದಿದಾಗ ‘ಮಿಂಚದ ಭಾರತೀಯ ಬೌಲರ್ ಗಳು’ ಎಂಬ ಹೆಡ್ ಲೈನ್ ಅನ್ನು ತಪ್ಪಾಗಿ ‘ಮಿಂಚಿದ ಭಾರತೀಯ ಬೌಲರ್ ಗಳು ಎಂದು ಹೇಳಿದ್ದರು. ಬಳಿಕ ಮೀಟಿಂಗ್ ನಲ್ಲಿ ಬೈತಾರೆ ಅಂತ ಭಾವಿಸಿಕೊಂಡು ಆ ಬಗ್ಗೆ ಮಾತಾಡೋ ಮೊದಲೇ ಅತ್ತಿದ್ದರು…! ಅದೇ ಕೊನೆ ಮತ್ಯಾವತ್ತು ಶರ್ಮಿತಾ ತಪ್ ತಪ್ಪಾಗಿ ಓದಿಲ್ಲ…!
2013ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸತತ 8 ಗಂಟೆಗಳ ಕಾಲ ಲೈವ್ ಪ್ರೋಗ್ರಾಂ ನೀಡಿದ್ದ ಶರ್ಮಿತಾ ಅವರಿಗೆ ಅತ್ಯುತ್ತಮ ನಿರೂಪಕಿ ಎಂದು ಈ-ಟಿವಿ ಸಂಸ್ಥೆ ಪ್ರಶಂಸನೀಯ ಪತ್ರ ನೀಡಿ ಶಹಬ್ಬಾಸ್ ಅಂದಿತ್ತು. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಶರ್ಮಿತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಂತೆ ಕಾರ್ಯಕ್ರಮ ನಡೆಸಿಕೊಟ್ಟಿದ್ರು.
2014ರ ಮಾರ್ಚ್ 19ರಂದು ಈ-ಟಿವಿ ನ್ಯೂಸ್ ಆರಂಭವಾದಾಗ ಫಸ್ಟ್ ನ್ಯೂಸ್ ಓದಿದ್ದು ಶರ್ಮಿತಾ ಅವರೇ. 2015ರಲ್ಲಿ ಈ-ಟಿವಿಯ ಹೊಸ ಕಚೇರಿ ಉದ್ಘಾಟನೆಯಾದಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಅನೇಕ ಜನಪ್ರತಿನಿಧಿಗಳ ಇಂಟರ್ ವ್ಯೂ ಮಾಡಿದ್ರು.
ಇದೇ 2017ರ ಸೆಪ್ಟೆಂಬರ್ 29ರಂದು ಈ-ಟಿವಿ ‘ನ್ಯೂಸ್ 18’ ಆಗಿ ಬದಲಾದಾಗ ಹೊಸ ಲೋಗೋದೊಂದಿಗೆ ಕನ್ನಡಿಗರನ್ನು ಮೊದಲು ತಲುಪಿದ್ದು, ಅಂದ್ರೆ ನ್ಯೂಸ್ 18ನ ಮೊದಲ ಬುಲೆಟಿನ್ ಓದಿದ್ದು ಶರ್ಮಿತಾ.
2015ರಲ್ಲಿ ಈ-ಟಿವಿ ನ್ಯೂಸ್ ನಲ್ಲಿ ಮೊದಲ ಬುಲೆಟಿನ್ ಓದುವಾಗ ಇವರ ತಂದೆ ಬಿದ್ದು ಪೆಟ್ಟು ಮಾಡಿಕೊಂಡು ಐಸಿಯುನಲ್ಲಿದ್ದರು. ಶರ್ಮಿತಾ ತಂದೆಯನ್ನು ನೋಡಲು ಹೊರಟು ನಿಂತಿದ್ರು. ಆದ್ರೆ, ಅಮ್ಮ ಮತ್ತು ಅಣ್ಣ ಬೇಡ ಎಂದು ಸಮಾಧಾನ ಮಾಡಿ, ಡಾಕ್ಟರ್ ಹತ್ತಿರ ರಿಕ್ವೆಸ್ಟ್ ಮಾಡಿಕೊಂಡು ತಂದೆಯ ಜೊತೆ ಫೋನ್ ನಲ್ಲಿ ಶರ್ಮಿತಾಗೆ ಮಾತಾಡೋ ಅವಕಾಶ ಮಾಡಿಕೊಟ್ರು. ಆಗ ತಂದೆ, ನಾನು ಆರಾಮಾಗ್ತೀನಿ ಮಗಳೇ, ನನ್ನ ಮಗಳು ಯಾವಾಗಲೂ ಫಸ್ಟ್ ಇರಬೇಕು..ಕೆಲಸದ ಕಡೆ ಗಮನಕೊಡು ಎಂದಿದ್ದರು…! ಈ ನೋವಿನಲ್ಲೂ ನ್ಯೂಸ್ ಓದಿದ ಶರ್ಮಿತಾ ಸ್ಟೂಡಿಯೋದಿಂದ ಹೊರಬಂದಮೇಲೆ ಜೋರಾಗಿ ಅತ್ತು ದುಃಖವನ್ನು ಹೊರಹಾಕಿದ್ರು.
2015 ಮತ್ತು 16ರಲ್ಲಿ ಮೈಸೂರು ದಸರಾ, ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ ಮದುವೆ, ಸ್ಯಾಂಡಲ್ ವುಡ್ ನಟಿ ಅಮೂಲ್ಯ ಮದುವೆ ಸೇರಿದಂತೆ ಒಂದಿಷ್ಟು ಕಾರ್ಯಕ್ರಮಗಳ ವರದಿಗಾರಿಕೆಯನ್ನು ಮಾಡಿದ್ದಾರೆ.
ಪ್ರತಿದಿನ ರಾತ್ರಿ 7ಗಂಟೆಯಿಂದ 8ಗಂಟೆವರೆಗೆ ಬರೋ ‘ಕನ್ನಡ ನಾಡಿ’ ಕಾರ್ಯಕ್ರಮ ನಡೆಸಿಕೋಡದು ಇವರೇ. ಇದು ನ್ಯೂಸ್ 18 ಕನ್ನಡದ ಜನಪ್ರಿಯ ಶೋ ಆಗಿದೆ.
ಈ ವರ್ಷ (2017)ರಲ್ಲಿ ರಾಜ್ಯ ಸರ್ಕಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿರುವ ಶರ್ಮಿತಾ, ಇದಕ್ಕೆ ಅವಕಾಶ ಕೊಟ್ಟ ತಮ್ಮ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಲಿಚ್ಚಿಸುತ್ತಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಸೇರಿದಂತೆ ಲೆಕ್ಕವಿಲ್ಲದಷ್ಟು ಸ್ಟಾರ್ ನಟ, ನಟಿ, ನಿರ್ದೇಶಕ, ಗಾಯಕರ ಇಂಟರ್ ವ್ಯೂ ನಡೆಸಿಕೊಟ್ಟಿದ್ದಾರೆ.
ಐಎಎಸ್ ಅಧಿಕಾರಿ ಡಿ.ಕೆ ರವಿ ಸಾವನ್ನಪ್ಪಿದಾಗ, ನಟರಾದ ಉದಯ, ಅನಿಲ್ ಸಾವಿಗೀಡಾದಾಗ ನಡೆಸಿಕೊಟ್ಟ ಕಾರ್ಯಕ್ರಮಗಳನ್ನು ಮರೆಯೋಕೆ ಆಗಲ್ಲ. ತುಂಬಾ ದುಃಖದಿಂದ ಆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟೆ ಎನ್ನುತ್ತಾರೆ ಶರ್ಮಿತಾ.
ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಘಟನೆಗಳಲ್ಲಿ ಇವರ ವಿರುದ್ಧ ಮಾತುಗಳು ಕೇಳಿಬಂದಿದ್ದು ನಿಮಗೆ ಗೊತ್ತೇ ಇದೆ. ಈ ಟೈಮಲ್ಲಿ ತುಂಬಾ ನೊಂದುಕೊಂಡಿದ್ದರು.
‘ಮೊದಲ ಬಾರಿಗೆ ಅಗ್ರರಾಷ್ಟ್ರೀಯ ವಾರ್ತೆ ಓದಿದ್ದು ಸದಾ ನೆನಪಲ್ಲಿ ಉಳಿದಿರುತ್ತೆ. ರಾಮೋಜಿ ರಾವ್ ಅವರನ್ನು ಭೇಟಿ ಮಾಡಿದ್ದು ಮರೆಯಲಾಗದ ಕ್ಷಣ. ಅವರನ್ನು ನೋಡಿ ನಾವುಗಳು ತುಂಬಾ ಕಲಿಯಲಿಕ್ಕಿದೆ. ದೊಡ್ಡ ಸ್ಥಾನದಲ್ಲಿದ್ದರೂ ದೊಡ್ಡಸ್ಥಿಕೆ ಇಲ್ಲದ ವ್ಯಕ್ತಿ’ ಎಂದು ಹೇಳುತ್ತಾರೆ ಶರ್ಮಿತಾ.
ಇವರಿಗೆ ಸಿನಿಮಾ ಕ್ಷೇತ್ರದಿಂದ ಸಾಕಷ್ಟು ಆಫರ್ ಗಳು ಬಂದಿವೆ, ಬರುತ್ತಲೇ ಇವೆ. ಕಾಲೇಜು ದಿನಗಳಲ್ಲಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಮೇಶ್ ಬೇಗಾರ್ ನಿರ್ದೇಶನದ ‘ಪರಿಭ್ರಮಣ’ ಧಾರವಾಹಿಯಲ್ಲಿ ನಟಿಸಿದ್ದರು. ರಾಮೋಜಿ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ನಿರ್ಮಾಣದ ‘ANGST’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಕ್ರಿಕೆಟ್ ದಂತಕಥೆ ಅಜರುದ್ಧೀನ್ ಜೀವನಾಧಾರಿತ ಈ ಚಿತ್ರದಲ್ಲಿ ಅಜರುದ್ಧೀನ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೀರ್ಥಹಳ್ಳಿ ಹುಡುಗರು ಮಾಡಿದ ಮಲೆನಾಡ ಸಮಸ್ಯೆಗಳನ್ನು ಬಿಂಬಿಸುವ ‘ಹೊಂಬಣ್ಣ’ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.
ಇಷ್ಟೆಲ್ಲಾ ಹೇಳಿದ್ಮೇಲೆ ಕೊನೆಯದಾಗಿ ಇನ್ನೊಂದು ವಿಷ್ಯಾನ ಹೇಳಲೇ ಬೇಕು. ಶರ್ಮಿತಾ ಚಿಕ್ಕವರಿದ್ದಾಗ ಇವರ ಮನೆಗೆ ಒಂದು ಪುಟ್ಟ ಎಮ್ಮೆ ಕರು ತಂದಿದ್ದರು. ಆ ಕರು ಜೊತೆ ಆಟ ಆಡ್ತಿದ್ದ ಶರ್ಮಿತಾ ಅದಕ್ಕೆ ಹುಲ್ಲು ತಂದುಕೊಡ್ತೀನಿ ಅಂತ ಗದ್ದೆಗೆ ಓಡಿ ಹೋಗಿ, ಪಕ್ಕದ ಮನೆಯ ಗದ್ದೆಯಲ್ಲಿ ಸೊಂಪಾಗಿ ಬೆಳೆದು ನಿಂತಿದ್ದ ಭತ್ತದ ಪೈರನ್ನು ಕಿತ್ಕೊಂಡು ಬಂದಿದ್ದರು…! ಇದನ್ನು ಇವತ್ತಿಗೂ ಇವರಮ್ಮ ನೆನಪಿಸಿಕೊಳ್ತಾರೆ…
ಎನಿವೇ ಮಲೆನಾಡ ಗಾನಸಿರಿ ಶರ್ಮಿತಾ ಇವತ್ತು ಸುದ್ದಿಲೋಕದ ಐಸಿರಿ….ಒಳ್ಳೆಯದಾಗ್ಲಿ ಶರ್ಮಿತಾ…ಇನ್ನೂ ಎತ್ತರೆತ್ತರಕ್ಕೆ ಬೆಳೀರಿ. ಶುಭವಾಗ್ಲಿ.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್
37)16ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು
38)17ಡಿಸೆಂಬರ್ 2017 : ಶಿಲ್ಪ ಐಯ್ಯರ್
39)18ಡಿಸೆಂಬರ್ 2017 : ನಾಝಿಯಾ ಕೌಸರ್
40) 19ಡಿಸೆಂಬರ್ 2017 : ಶ್ರುತಿಗೌಡ
41) 20ಡಿಸೆಂಬರ್ 2017 : ಎಂ.ಆರ್ ಶಿವಪ್ರಸಾದ್
42) 21ಡಿಸೆಂಬರ್ 2017 : ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)
43) 22ಡಿಸೆಂಬರ್ 2017 : ಶರ್ಮಿತಾ ಶೆಟ್ಟಿ