‘ಸುದ್ದಿ’ಮನೆಯ ಹಿರಿಯಣ್ಣ ಶಶಿಧರ್ ಭಟ್…

Date:

ಇವರು ಹಿರಿಯ ಪತ್ರಕರ್ತರು, ಸುಮಾರು 3ದಶಕಗಳ ಸುಧೀರ್ಘ ವೃತ್ತಿ ಬದುಕಿನ ಪಯಣ ಇವರದ್ದು. ಬೆಟ್ಟದಷ್ಟು ‘ಅನುಭವದ ಸಿರಿತನ’ವಿದ್ದರೂ ಎಳ್ಳಷ್ಟೂ ಅಹಂಕಾರ, ದೊಡ್ಡಸ್ತಿಕೆ ಇರದ ಸರಳಜೀವಿ. ಲೆಕ್ಕವಿಲ್ಲದಷ್ಟು ಪತ್ರಕರ್ತರಿಗೆ ಮಾಧ್ಯಮ ಗುರು. ಪ್ರಶಸ್ತಿಗಳ ಹಿಂದೆ ಹೋದವರಲ್ಲ, ಕೆಲಸವೇ ದೇವರು ಅಂತ ವೃತ್ತಿಧರ್ಮ ಮೆರೆಯುತ್ತಿರುವ ಸಮರ್ಥ ಮಾಧ್ಯಮ ಸಾರಥಿ…! ಇವರೇ ‘ಸುದ್ದಿ’ಮನೆಯ ಹಿರಿಯಣ್ಣ ಶಶಿಧರ್ ಭಟ್.

ಕನ್ನಡ ಪತ್ರಿಕೋದ್ಯಮ ಕಂಡಿರುವ ಶ್ರೇಷ್ಠ ಪತ್ರಕರ್ತರಲ್ಲಿ ಶಶಿಧರ್ ಭಟ್ ಕೂಡ ಒಬ್ಬರು. ಮಾಜಿ ಪ್ರಧಾನಮಂತ್ರಿಗಳಾದ ಇಂಧಿರಾಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಅನೇಕ ದೊಡ್ಡ ದೊಡ್ಡ ರಾಜಕಾರಣಿಗಳ ಸಂದರ್ಶನ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು, ರಾಮಕೃಷ್ಣ ಹೆಗಡೆ, ವೀರಪ್ಪ ಮೊಯ್ಲಿ ಮೊದಲಾದ ಜನನಾಯಕರನ್ನು ಹತ್ತಿರದಿಂದ ಬಲ್ಲವರು.


ಸಿದ್ಧಾಂತಗಳ ವಿಚಾರದಲ್ಲಿ ಇವರ ವಿರುದ್ಧ ಕೆಲವರಲ್ಲಿ ಒಂದಿಷ್ಟು ಭಿನ್ನಾಭಿಪ್ರಾಯಗಳು ಇದೆ. ಆದರೆ, ವ್ಯಕ್ತಿಗತವಾಗಿ ಅಜಾತಶತ್ರು ಎಂದರೆ ತಪ್ಪಾಗಲಿಕ್ಕಿಲ್ಲ. ಕಾರಣ ಇಷ್ಟೇ, ಶಶಿಧರ್ ಭಟ್ ಯಾರಿಗೂ ನೋವಾಗುವಂತೆ ಮಾತಾನಾಡುವ ಜಾಯಮಾನದವರಲ್ಲ. ಕೆಲವೊಂದು ವಿಷಯಗಳ ಕುರಿತ ಪರ-ವಿರೋಧ ಚರ್ಚೆಗಳ ಸಂದರ್ಭದಲ್ಲಿ ಏರುದನಿಯಲ್ಲಿ ಮಾತನಾಡುತ್ತಾರಷ್ಟೇ. ಅದರಿಂದಾಚೆಗೆ ಅವರು ತುಂಬಾ ಮೃದು ಸ್ವಭಾವದವರು. ಉನ್ನತಮಟ್ಟದಲ್ಲಿದ್ದರೂ ಅದ್ಯಾವುದರ ಪರಿವೇ ಇಲ್ಲದಂತೆ ಎಲ್ಲರೊಡನೆ ಬೆರೆಯುವ ಸಹೃದಯಿ.


ಇವರ ಕೈಕೆಳಗೆ ಮಾಧ್ಯಮ ಅ, ಆ, ಇ, ಈ ಕಲಿಯುವ ಅವಕಾಶ ಸಿಕ್ಕಿದ ಯುವಪತ್ರಕರ್ತರು ನಿಜಕ್ಕೂ ಪುಣ್ಯಮಾಡಿದ್ದಾರೆ. ಇದು ನನ್ನ ಅಭಿಪ್ರಾಯವಲ್ಲ, ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ, ಮಾಡುತ್ತಿರುವ ನನ್ನ ಮಿತ್ರರ ಅನುಭವದ ಮಾತು. ಕಲಿಯುವ ಆಸಕ್ತಿಯಿರುವವರಿಗೆ ಶಾಲೆಯಲ್ಲಿ ಮೇಷ್ಟ್ರು ಹೇಳಿಕೊಟ್ಟಂತೆ ಹೇಳಿಕೊಡ್ತಾರೆ. ಹೊಸಮುಖಗಳಿಗೆ ಪ್ರೋತ್ಸಾಹ ನೀಡಿ, ಅವರನ್ನು ಬೆಳೆಸುವುದು, ಅವರ ಯಶಸ್ಸಿನಲ್ಲಿ ತಾನು ಖುಷಿಪಡೋದು ಭಟ್ಟರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.


ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಳಗುಳಿ ಎಂಬಲ್ಲಿ ಹುಟ್ಟಿ, ಬೆಳೆದವರು ಶಶಿಧರ್ ಭಟ್. ತಂದೆ ವೆಂಕಟರಮಣ ಭಟ್ಟರು, ತಾಯಿ ಗೌರಿ ಭಟ್. ತಮ್ಮ ವೆಬ್ ಸೈಟ್‍ನಲ್ಲಿ ಭಟ್ಟರೇ ದಾಖಲಿಸಿರುವಂತೆ, ಇವರ ಮನೆಯೇ ದೊಡ್ಡದಾದ ಗ್ರಂಥ ಭಂಡಾರ. ಸರಸ್ವತಿ ದೇವಿಯೇ ನೆಲೆಸಿರುವ ವಾತಾವರಣದಲ್ಲಿ ಬೆಳೆದ ಇವರಿಗೆ ಜ್ಞಾನದ ಹಸಿವು ಮೊದಲಿಂದಲೂ ಹೆಚ್ಚು…! ಓದಿನ ಬಗೆಗಿನ ಆಸಕ್ತಿ ತಂದೆಯವರಿಂದ ಬಂದ ಬಳುವಳಿ. ಈ ‘ಪುಸ್ತಕ ಪ್ರೇಮ’ವೇ ಭಟ್ಟರನ್ನು ಈ ಮಟ್ಟಕ್ಕೆ ಕರೆತಂದಿದ್ದು.


ಹೋರಾಟ ಇವರ ಹುಟ್ಟುಗುಣ. ಹಾಗಂತ, ಯಾವುದೋ ಅಸಂಬದ್ಧ ವಿಷಯ, ವಿಚಾರಗಳ ವಿರುದ್ಧವಲ್ಲ, ವ್ಯಕ್ತಿಗಳ ವಿರುದ್ಧವೂ ಅಲ್ಲ. ವ್ಯವಸ್ಥೆಯ ವಿರುದ್ಧದ ಹೋರಾಟ. ತಮ್ಮ ಜಾತಿಯ ಗುರುಗಳನ್ನು ಪ್ರಶ್ನಿಸಿ, ಸಾಕಷ್ಟು ಸಂಕಷ್ಟಗಳನ್ನು ಎದುರಿಸಿ ಊರು ಬಿಟ್ಟು ಬಂದವರಂತೆ. ಇದನ್ನು ಸಹ ತಮ್ಮ ವೆಬ್‍ಸೈಟ್ http://www.shashidharbhat.com ಲ್ಲಿ ತೆರೆದಿಟ್ಟಿದ್ದಾರೆ.


ಹುಟ್ಟೂರಿನಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಪಡೆದ ಶಶಿಧರ್ ಭಟ್ ಬೆಳಗಾವಿಯಲ್ಲಿ ಬಿಕಾಂ ಪದವಿ ಪಡೆದರು. ಆ ವೇಳೆಗಾಗಲೇ ವ್ಯವಸ್ಥೆಯನ್ನು ನೇರವಾಗಿ ಖಂಡಿಸುವ ಗುಣವನ್ನು ಬೆಳೆಸಿಕೊಂಡಿದ್ದರು. ವ್ಯವಸ್ಥೆಯನ್ನು ಪ್ರಶ್ನಿಸಿದ ತಪ್ಪಿಗೆ ಊರುಬಿಟ್ಟು ರಾಜಧಾನಿ ಬೆಂಗಳೂರಿನ ಕಡೆಗೆ ಹೊರಟರು. ಆಕಾಶವಾಣಿ ಮೂಲಕ ವೃತ್ತಿ ಬದುಕನ್ನು ಆರಂಭಿಸಿದರು. ಆಕಾಶವಾಣಿಯಲ್ಲಿ ಪ್ರದೇಶ ಸಮಾಚಾರ ಓದ್ತಿದ್ರು. ಹೀಗೆ ಮೀಡಿಯಾಕ್ಕೆ ಎಂಟ್ರಿಕೊಟ್ಟ ಭಟ್ಟರು ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. ಎದುರಾದ ಅಡೆತಡೆಗಳು, ಸಂಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ, ಅವುಗಳಿಗೆ ಸೆಡ್ಡು ಹೊಡೆದು ಮುನ್ನುಗಿದರು.


ಆಕಾಶವಾಣಿಯಿಂದ ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆ ಮೂಲಕ ಮುದ್ರಣ ಮಾಧ್ಯಮಕ್ಕೆ ಕಾಲಿಟ್ಟರು. ಅದಾದ ಬಳಿಕ ‘ಸುದ್ದಿ ಸಂಗಾತಿ’, ‘ಮುಂಜಾನೆ’ ಪತ್ರಿಕೆಗಳಲ್ಲಿ ಕೆಲಸ ಮಾಡಿ ‘ಕನ್ನಡ ಪ್ರಭ’ಕ್ಕೆ ಪಯಣ ಬೆಳೆಸಿದ್ರು. ಇಲ್ಲಿ 11 ವರ್ಷಗಳ ಕಾಲ ಸೇವೆಸಲ್ಲಿಸಿದ್ದರು.
ಹೀಗೆ ಮುದ್ರಣ ಮಾಧ್ಯಮದಲ್ಲಿ ಅಪಾರ ಅನುಭವದ ಬುತ್ತಿಯನ್ನು ಕಟ್ಟಿಕೊಂಡು 2000ನೇ ಇಸವಿಯಲ್ಲಿ ‘ಏಷ್ಯಾನೆಟ್’ ಮೂಲಕ ವಿದ್ಯುನ್ಮಾನ ಪ್ರಪಂಚಕ್ಕೆ ಪಾದಾರ್ಪಣೆ ಮಾಡಿದ್ರು. ನಂತರದಲ್ಲಿ ‘ಕಾವೇರಿ’ ಎಂಬ ಚಾನಲ್ ತೆರೆದರು. ಇಲ್ಲಿ ಇವರು ನಡೆಸಿಕೊಡುತ್ತಿದ್ದ ‘ಮಾತು-ಮಂಥನ’ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.


ತದನಂತರ ‘ಜಿ ನ್ಯೂಸ್’ನ ಬೆಂಗಳೂರು ಬ್ಯೂರೋ ಚೀಫ್ ಆಗಿ ಒಂದಿಷ್ಟು ಕಾಲ ಸೇವೆಸಲ್ಲಿದ್ರು. ಅದಾದ ಬಳಿಕ ‘ಸೌತ್ ಇಂಡಿಯಾ ಟೆಲಿವಿಷನ್ ನೆಟ್‍ವರ್ಕ್’ ಎಂಬ ಸ್ವಂತ ಪ್ರೊಡಕ್ಷನ್ ಹೌಸ್ ಆರಂಭಿಸಿದ್ರು. ಈ-ಟಿವಿಯಲ್ಲಿ ಬರುತ್ತಿದ್ದ ‘ಭಾನಮತಿ’ ಎಂಬ ಜನಪ್ರಿಯ ಕಾರ್ಯಕ್ರಮ ಶಶಿಧರ್ ಭಟ್ಟರ ನಿರ್ಮಾಣ. ಅಷ್ಟೇಅಲ್ಲದೆ ‘ಅಖಾಡ’ ಎಂಬ ಸೂಪರ್ ಹಿಟ್ ಕಾರ್ಯಕ್ರಮವೂ ಕೂಡ ಇವರದ್ದೇ.


ಮುಂದೆ ಮತ್ತೆ ಸುವರ್ಣಬಳಗದಲ್ಲಿ ಅವಕಾಶ ಸಿಕ್ತು. ಸುವರ್ಣ ನ್ಯೂಸ್‍ನ ಮುಖ್ಯಸ್ಥರಾಗಿ, ನಿರ್ದೇಶಕರಾಗಿ ಸಂಸ್ಥೆಯ ಯಶಸ್ಸಿನಲ್ಲಿ ಪ್ರಮುಖಪಾತ್ರವಹಿಸಿದರು. ಸುವರ್ಣದಲ್ಲಿ ಇವರು ನಡೆಸಿಕೊಡುತ್ತಿದ್ದ ‘ನ್ಯೂಸ್ ಅಂಡ್ ವೀವ್ಸ್’ ಜನಪ್ರಿಯತೆ ಬಗ್ಗೆ ಬಿಡಿಸಿ ಹೇಳಬೇಕಿಲ್ಲ.


2010ರಲ್ಲಿ ಏಷ್ಯಾನೆಟ್ ಗ್ರೂಪ್ ಬಿಟ್ಟು ಹೊರಬಂದರು. ನಂತರ 4-5 ತಿಂಗಳುಗಳ ಕಾಲ ಸಮಯ ಚಾನಲ್ ನಡೆಸಿದ್ರು. ಕಾರಣಾಂತರದಿಂದ ಅದನ್ನು ಬಿಟ್ಟರು. ಸ್ವಲ್ಪ ಸಮಯ ಕಸ್ತೂರಿ ವಾಹಿನಿ ಹೊಣೆಗಾರಿಕೆ ನಿಭಾಯಿಸಿ, ಇದೀಗ ನಿಮಗೇ ಗೊತ್ತಿರುವಂತೆ ‘ಸುದ್ದಿ ಟಿವಿ’ಯನ್ನು ಹುಟ್ಟುಹಾಕಿದ್ದಾರೆ. ಇತ್ತೀಚೆಗಷ್ಟೇ ಭಟ್ಟರ ಸಾರಥ್ಯದ ಸುದ್ದಿ ಟಿವಿ ಒಂದು ವರ್ಷದ ಸಂಭ್ರಮವನ್ನು ಆಚರಿಸಿಕೊಂಡಿದೆ. ಸುದ್ದಿ ಟಿವಿಯಲ್ಲಿ ರಾತ್ರಿ 9ಗಂಟೆಗೆ ಬರುವ ‘9ಪಿಎಂ ವಿತ್ ಶಶಿಧರ್ ಭಟ್’- ಪ್ರೈಂ ನ್ಯೂಸ್ ಅನ್ನು ಹೇಗಿದ್ರು, ನೀವು ತಪ್ಪದೇ ನೋಡ್ತಿದ್ದೀರಿ ಅಲ್ವೇ…?

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

10 ನವೆಂಬರ್ 2017 : ಈಶ್ವರ್ ದೈತೋಟ

11 ನವೆಂಬರ್ 2017 : ಭಾವನ

12  ನವೆಂಬರ್ 2017 : ಜಯಶ್ರೀ ಶೇಖರ್

13 ನವೆಂಬರ್ 2017 : ಶೇಷಕೃಷ್ಣ

14 ನವೆಂಬರ್ 2017 : ಶ್ರೀಧರ್ ಶರ್ಮಾ

15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

16 ನವೆಂಬರ್ 2017 : ಅರವಿಂದ ಸೇತುರಾವ್

17 ನವೆಂಬರ್ 2017 : ಲಿಖಿತಶ್ರೀ

18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

19 ನವೆಂಬರ್ 2017 : ಅಪರ್ಣಾ

20 ನವೆಂಬರ್ 2017 :  ಅಮರ್ ಪ್ರಸಾದ್

21 ನವೆಂಬರ್ 2017 :   ಸೌಮ್ಯ ಮಳಲಿ

22 ನವೆಂಬರ್ 2017 :  ಅರುಣ್ ಬಡಿಗೇರ್

23ನವೆಂಬರ್ 2017 :  ರಾಘವ ಸೂರ್ಯ

24ನವೆಂಬರ್ 2017 :  ಶ್ರೀಲಕ್ಷ್ಮಿ

25ನವೆಂಬರ್ 2017 :  ಶಿಲ್ಪ ಕಿರಣ್

26ನವೆಂಬರ್ 2017 :  ಸಮೀವುಲ್ಲಾ

27ನವೆಂಬರ್ 2017 :  ರಮಾಕಾಂತ್ ಆರ್ಯನ್

28ನವೆಂಬರ್ 2017 :  ಮಾಲ್ತೇಶ್

29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

30ನವೆಂಬರ್ 2017 :  ಸುರೇಶ್ ಬಾಬು 

01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

02 ಡಿಸೆಂಬರ್ 2017 : ಶಶಿಧರ್ ಭಟ್

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...