ಬೆಂಗಳೂರು : ಪರಮ ಪೂಜ್ಯ ಶ್ರೀ ಶಿವಕೃಪಾನಂದ ಸ್ವಾಮೀಜಿಯವರು ಇಂದು ನೆಲಮಂಗಲದ ಅರೆಬೊಮ್ಮನಹಳ್ಳಿಯಲ್ಲಿರುವ ಶ್ರೀ ಶಿವಕೃಪಾನಂದ ಸ್ವಾಮೀಜಿ ಮಠಕ್ಕೆ ಭೇಟಿ ನೀಡಿದರು.ಪೂಜ್ಯ ಸ್ವಾಮಿಜಿಯವರ ಜೊತೆಗೂಡಿ ಪರಮ ಪೂಜ್ಯ ಗುರುಮಾ ಅವರು ಕೂಡ ಆಗಮಿಸಿದ್ದರು.
ಪೂಜ್ಯ ಗುರೂಜಿ ಮತ್ತು ಗುರುಮಾ ಬೆಳಿಗ್ಗೆ ಮಠಕ್ಕೆ ಆಗಮಿಸುತಿದ್ದಂತೆ ಕೇರಳದ ಪ್ರಸಿದ್ಧ ಚಂಡೆ ವಾದ್ಯ ಮೊಳಗುತ್ತಿತ್ತು. ಮತ್ತೊಂದೆಡೆಯಲ್ಲಿ ಸಾಧಕರು ಭಕ್ತಿಯಿಂದ ಪುಷ್ಪ ವೃಷ್ಟಿ ಅರ್ಪಿಸುವ ಮೂಲಕ ಸ್ವಾಮೀಜಿಯನ್ನು ಬರ ಮಾಡಿ ಕೊಂಡರು.
ಬೆಂಗಳೂರಿನ ಹಲವು ಕಡೆ ಹಿಮಾಲಯದ ಧ್ಯಾನ ಶಿಬಿರ ನಡೆಸಿ ಕೊಡಲು ಆಗಮಿಸಿರುವ ಪರಮ ಪೂಜ್ಯ ಗುರೂಜಿ ಹಾಗೂ ಗುರುಮಾ ಅವರು ಈ ತಿಂಗಳ ೧೬ರ ವರೆಗೆ ವಿವಿಧ ಕಡೆಯಲ್ಲಿ ಶಿಬಿರ ನಡೆಸಿ ಕೊಡಲಿರುವರು.
ಶ್ರೀ ಶಿವ ಕೃಪಾನಂದ ಮಠದಲ್ಲಿ ನೂತನವಾಗಿ ಅಳವಡಿಸಿರುವ ಸೋಲಾರ್ ವಿದ್ಯುತ್ ಸಂಪರ್ಕವನ್ನು ಉದ್ಘಾಟಿಸಿದ ಗುರುಗಳು ಮಠದಲ್ಲಿ ನಿರ್ಮಿಸಬೇಕಾಗಿರುವ ಗುರು ಶಕ್ತಿ ಧಾಮ ಕೇಂದ್ರ ಹಾಗೂ ಮುಂದಿನ ದಿನಗಳಲ್ಲಿ ನಡೆಯಬೇಕಾಗಿರುವ ಕಟ್ಟಡ ನಿರ್ಮಾಣ ಕಾರ್ಯಗಳ ಬಗ್ಗೆ ಸಾಧಕರಿಗೆ ಒಂದಷ್ಟು ಸಲಹೆಗಳನ್ನು ನೀಡಿ ಮಾರ್ಗದರ್ಶನ ಮಾಡಿದರು.
ಪೂಜ್ಯ ಗುರುಮಾ ಅವರು ಆಶ್ರಮದಲ್ಲಿ ಮಾವು, ಹಲಸಿನ ಸಸಿಗಳನ್ನು ನೆಡುವ ಮೂಲಕ ಸಾಧಕರಿಗೆ ಶುಭಾಶೀರ್ವಾದ ಮಾಡಿದರು. ಮಠದ ಟ್ರಸ್ಟಿ ಸುರೇಶ ಪಟೇಲ್ , ವ್ಯವಸ್ಥಾಪಕ ಶ್ರೀಧರ ಮಣಿ, ಆಚಾರ್ಯ ಅರುಣ್ ಕುಮಾರ್, ಸಾಧಕರಾದ ರವಿ ಕಿರಣ್ ಶಿರಾಲಿ, ಮ್ಯಾನೇಜರ್ ಎನ್ ಆರ್ ಜ್ಯೋತಿಕಿರಣ್, ಇಂದುಮತಿ ಶೆಟ್ಟಿ, ಇನ್ನಿತರ ಸಾಧಕರು ಗುರುಕಾರ್ಯದಲ್ಲಿ ಭಾಗವಹಿಸಿದ್ದರು.