ಅವಳ `ಆತ್ಮ' ಅತೃಪ್ತಿಯಿಂದ ನರಳುತ್ತಿದೆ..! ಭಾರತ ಚಿತ್ರರಂಗ ಕಂಡ ಅಪ್ಪಟ `ಸೌಂದರ್ಯ'

Date:

raaa
ಅವಳ ಸ್ವಭಾವಕ್ಕೆ ಸೂಕ್ತವಾಗಿತ್ತು ಆ ಹೆಸರು; ಸೌಮ್ಯ. ಅವಳ ಅಪಾರ ಅಂದಕ್ಕೆ ಇಟ್ಟ ಹೆಸರು ಕೂಡ ಅಷ್ಟೇ ಸೂಕ್ತ; ಸೌಂದರ್ಯ..! ಕನ್ನಡಿಗರ ಪಾಲಿಗೆ ಅವಳು ಪಕ್ಕದಮನೆ ಹುಡುಗಿ. ಪರರಾಜ್ಯದವರ ಪಾಲಿಗೆ ಅವಳು ವಲಸೆ ಬಂದ ಹಕ್ಕಿ. ಆ ಹಕ್ಕಿ ಇಲ್ಲಿಗಿಂತ ಅಲ್ಲಿ ಹಾರಿದ್ದೇ ಹೆಚ್ಚು. ಅವಳ ಯಶಸ್ಸು, ಅಪಾರ ಪ್ರತಿಭೆಯನ್ನು ಆ ಒಂದು ಸಂದರ್ಭ ಮಾತ್ರ ಸಹಿಸಲಿಲ್ಲ. ಆ ಸಾಂಧರ್ಭಿಕ ಅನ್ಯಾಯದ ಹೆಸರು ವಿಧಿ..!’

ಏಪ್ರಿಲ್ 17, 2004, ದೇಶದಲ್ಲಿ ಚುನಾವಣಾ ಪ್ರಕ್ರಿಯೇ ಜೋರಾಗಿತ್ತು. ಹೇಗಾದರೂ ಕಾಂಗ್ರೆಸ್ ಪಕ್ಷವನ್ನು ಮೂಟೆ ಕಟ್ಟಲು ಎದುರಾಳಿ ಬಿಜೆಪಿ ಸಿದ್ದತೆ ನಡೆಸಿತ್ತು. ಚುನಾವಣೆ ಬಂತೆಂದರೇ ಸೆಲೆಬ್ರಿಟಿಗಳನ್ನು ಪ್ರಚಾರಕ್ಕೆ ಬಳಸಿ ಜನರ ಪ್ರೀತಿಗಳಿಸುವ ತಂತ್ರಗಳು ಹುಟ್ಟಿಕೊಳ್ಳುವುದು ಇಂತಹ ಸಂದರ್ಭಗಳಲ್ಲೇ..!? ಅತ್ತ ಆಂಧ್ರದಲ್ಲೂ ಚುನಾವಣೆಯ ಕಾವು ಮಿತಿಮೀರಿತ್ತು. ಬಿಜೆಪಿ ಪರ ಬ್ಯಾಟ್ ಬೀಸಲು ಈ ಪ್ರತಿಭಾನ್ವಿತ ನಟಿಗೆ ಕರೆಬಂದಿತ್ತು. ಜಕ್ಕೂರು ವಿಮಾನ ನಿಲ್ದಾಣದಿಂದ ಆಂಧ್ರಕ್ಕೆ ಹೊರಟ ಆ ನಟಿಯನ್ನು ಹೊತ್ತ ಹೆಲಿಕಾಫ್ಟರ್, ಏರ್ಪೋರ್ಟ್ ನಿಂದ ಕೇವಲ ಐನೂರು ಮೀಟರ್ ದೂರ ಕ್ರಮಿಸಿತ್ತಷ್ಟೇ..!! ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಒಂದು ಸಣ್ಣ ಚೀತ್ಕಾರಕ್ಕೂ ಆಸ್ಪದವಿರಲಿಲ್ಲ, ನೋಡ ನೋಡುತ್ತಿದ್ದಂತೆ ಮುಗ್ಗರಿಸಿಬಿದ್ದ ಹೆಲಿಕಾಪ್ಟರ್, ಸುಟ್ಟು ಬೂದಿಯಾಗಿತ್ತು. ಅದರಲ್ಲಿ ಕುಂತಿದ್ದ ಆ ನಟಿಯೂ ಸಹ ಕರಟಿಹೋದಳು.

ಅವಳ ಹೆಸರು ಸೌಂದರ್ಯ. ಪಂಚಭಾಷ ತಾರೆ. ಲಕ್ಷಾಂತರ ಅಭಿಮಾನಿಗಳ ಪಾಲಿಗೆ ಎಂದೂ ಮರೆಯದ ಧ್ರುವತಾರೆ. ಅದೆಲ್ಲಕ್ಕಿಂಥ ಹೆಚ್ಚಾಗಿ ಅವಳು ನಮ್ಮ ಕನ್ನಡದ ಹುಡುಗಿ. ಕೇವಲ ಮೂವತ್ತೆರಡನೇ ವಯಸ್ಸಿನಲ್ಲಿ ವಿಧಿಲಿಖಿತಕ್ಕೆ ಶರಣಾಗಿಹೋದಳು. ಸೌಂದರ್ಯದ ಖನಿಯಂತಿದ್ದ ಆ ನಟಿಗೆ ಬಂದೆರಗಿದ ಸಾವಾದರೂ ಎಂಥದ್ದು..? ಗುರುತು ಹಿಡಿಯದಂತೆ ಕರಟಿಹೋಗಿತ್ತು ಅವಳ ಸೌಂದರ್ಯ ತುಂಬಿಕೊಂಡಿದ್ದ ತನು..! ಅವಳದ್ದು ಅಪ್ಪಟ ಸೌಂದರ್ಯ. ಮೇಕಪ್ ರಹಿತವಾದ ಸೊಗಸು. ನಕ್ಕರೇ ಸ್ವರ್ಗ ಅಲ್ಲಿಯೇ ಅಡಗಿದಂತೆ ಭಾಸ. ಮೂಲ ಹೆಸರಿಗೆ ತಕ್ಕಂತೆ ಸೌಮ್ಯ ಸ್ವಭಾವದ ಈ ಹೆಣ್ಣುಮಗಳ ಯಶೋಗಾಥೆ ಅಷ್ಟೇ ಅದ್ಭುತ, ಅಷ್ಟೇ ಯಾತನಮಯ..!

ಅದು 1972ನೇ ಇಸವಿ, ಜುಲೈ 18ನೇ ತಾರೀಕು. ಕೋಲಾರ ಜಿಲ್ಲೆ, ಮುಳುಬಾಗಿಲು ತಾಲ್ಲೂಕಿನ ಅಷ್ಟ ಗ್ರಾಮದ ಆ ಮಧ್ಯಮವರ್ಗದ ಕುಟುಂಬದಲ್ಲಿ ಆತಂಕಭರಿತ ಸಂಭ್ರಮದ ಕ್ಷಣ. ಚಿತ್ರನಿರ್ಮಾಪಕ ಹಾಗೂ ಸ್ವತಃ ಬರಹಗಾರರಾಗಿದ್ದ ಕೆ. ಎಸ್ ಸತ್ಯನಾರಾಯಣ್ ಅವರ ಮನೆಯಲ್ಲಿ ಕೂಸುಹುಟ್ಟುವ ಸಂಭ್ರಮವಿತ್ತು. ಅತ್ತ ಅವರ ಪತ್ನಿ ಮಂಜುಳಾ ಹೆರಿಗೆ ಬೇನೆ ಸಹಿಸದೇ ನರಳುತ್ತಿದ್ದರು. ವಿಧಿ ಆವತ್ತು ಮುನಿಯಲಿಲ್ಲ: ಕೃಪೆ ತೋರಿತ್ತು. ಸುಂದರವಾದ ಹೆಣ್ಣುಮಗುವೊಂದು ಜನಿಸಿತ್ತು. ಅವಳೇ ಸೌಮ್ಯ, ಅರ್ಥಾತ್ ಸೌಂದರ್ಯ. ಸತ್ಯನಾರಾಯಣ್ರವರಿಗೆ ಒಟ್ಟು ಇಬ್ಬರು ಮಕ್ಕಳು. ಮೊದಲನೇ ಮಗ ಅಮರನಾಥ್, ಎರಡನೇ ಮಗಳು ಸೌಮ್ಯ. ಮುದ್ದು ಮುದ್ದಾಗಿದ್ದ ಸೌಮ್ಯ ಬಾಲ್ಯದಲ್ಲೇ ಚೂಟಿ. ಅಣ್ಣನ ಅಂಗಿ ಜಗ್ಗಿಕೊಂಡೇ ಬೆಳೆದಿದ್ದಳು. ಓದಿನಲ್ಲೂ ಬುದ್ದಿವಂತೆ. ಎಂಬಿಬಿಎಸ್ ಪ್ರಥಮ ವರ್ಷದಲ್ಲಿದ್ದಾಗಲೇ, ಅವಳ ಅಪಾರ ಸೌಂದರ್ಯಕ್ಕೆ ಮಾರುಹೋದ ಚಿತ್ರರಂಗ ಅವಳನ್ನು ಕೈ ಬೀಸಿ ಕರೆಯಿತು. ಅಪ್ಪನ ಮೂಲಕ ಅವಕಾಶ ಹುಡುಕಿ ಬಂದಾಗ ಒಲ್ಲೆ ಅನ್ನಲಿಲ್ಲ ಸೌಮ್ಯ. ಓದಿಗೆ ತಿಲಾಂಜಲಿ ಇಟ್ಟು, 1992ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಳು. ಆಕೆ ನಟಿಸಿದ ಮೊಟ್ಟ ಮೊದಲ ಕನ್ನಡ ಚಿತ್ರದ ಹೆಸರು ಗಂಧರ್ವ.

ಚಿತ್ರರಂಗ ಸೌಮ್ಯಳ ಸೌಂದರ್ಯಕ್ಕೆ ಅದ್ಯಾವ ಪರಿ ಬೆರಗಾಗಿತ್ತೆಂದರೇ, ಇವಳಿನ್ನೂ ಸೌಮ್ಯ ಅಲ್ಲ, ಸೌಂದರ್ಯ ಅಂತ ಚಿತ್ರರಂಗ ಮುಲಾಜಿಲ್ಲದೇ ಹೆಸರಿಟ್ಟುಬಿಟ್ಟಿತ್ತು. ಆನಂತರ ನಡೆದದ್ದೆಲ್ಲಾ ಸೌಂದರ್ಯಪರ್ವ. `ಗಂಧರ್ವ’ ಚಿತ್ರದ ಬೆನ್ನಿಗೆ `ಬಾ ನನ್ನ ಪ್ರೀತಿಸು’ ಚಿತ್ರದಲ್ಲಿ ನಟಿಸಲು ಕರೆಬಂದಿತ್ತು. ಆ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡ ಸೌಂದರ್ಯ, ಚಿತ್ರರಂಗಕ್ಕೆ ಪಾದಾರ್ಪಣೆಗೈದ ವರ್ಷವೇ ತೆಲುಗು ಚಿತ್ರವೊಂದನ್ನು ನಟಿಸಲು ಒಪ್ಪಿಕೊಂಡಳು. ಆ ಚಿತ್ರದ ಹೆಸರು `ನಂಬರ್ ಒನ್’. ಬಹುಶಃ `ನಂಬರ್ ಒನ್’ ಚಿತ್ರದ ಅದೃಷ್ಟವೇ, ಸೌಂದರ್ಯ ಬದುಕಿನ ದಿಶೆಯನ್ನ ಬದಲಾಯಿಸಿತ್ತು. ಮುಂದೊಂದು ದಿನ ಇದೇ ಸೌಂದರ್ಯ, ತೆಲುಗು ಚಿತ್ರರಂಗದಲ್ಲಿ ನಂಬರ್ ಒನ್ ಪಟ್ಟಕ್ಕೇರಿದಳು. ಸೌಂದರ್ಯ ಕೇವಲ ಸೊಗಸಿನ ಸರಕಾಗಿದ್ದರೇ ಈ ಮಟ್ಟಿಗೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಅವಳು ಅಪ್ಪಟ ಪ್ರತಿಭೆ. ಅವಳಿಗೆ ನಟನೆ ಕರಗತವಾಗಿತ್ತು. ಎಂಥಾ ಕಠಿಣ ದೃಶ್ಯಗಳನ್ನು ಸರಾಗವಾಗಿ ನಟಿಸಿ ಚಪ್ಪಾಳೆಗಿಟ್ಟಿಸಿಕೊಳ್ಳುತ್ತಿದ್ದಳು. ಬಹುಶಃ ಆ ಕಾರಣಕ್ಕೇನೋ ಸೌಂದರ್ಯಳ ಕಾಲ್ಶೀಟ್ಗೆ ನಿರ್ಮಾಪಕರ ತಂಡವೇ ಸರತಿ ನಿಲ್ಲತೊಡಗಿತ್ತು. ಸತ್ಯನಾರಾಯಣ್ ಅವರಿಗೆ ಮಗಳು ಚಿತ್ರರಂಗದಲ್ಲಿ ಗಟ್ಟಿಯಾಗಿ ತಳವೂರುವುದು ಖಾತ್ರಿಯಾಗಿತ್ತು. ಅವಳಿಗೆ ಅಣ್ಣ ಅಮರನಾಥ್ ಸಾಥ್ ಕೊಟ್ಟ. ಮುಂದೆ ನಡೆದದ್ದೆಲ್ಲಾ ಇತಿಹಾಸ.

ಚಿತ್ರರಂಗವೆಂದರೇ ಹರಿಯುವ ನದಿ, ಹಳೇ ನೀರು ಹರಿದಂತೆಲ್ಲಾ ಹೊಸನೀರಿನ ಆಗಮನವಾಗುತ್ತದೆ. ಅದು ಸಾಂಧಭರ್ಿಕ ನ್ಯಾಯವೂ ಹೌದು. ಯಾವುದೇ ನಟಿ ಜನಪ್ರಿಯತೆಯ ಸುಳಿಗೆ ಸಿಕ್ಕ ಕೆಲವರ್ಷ ಅಂಕುಶವಿಲ್ಲದಂತೆ ಹರಿಯುತ್ತಾಳೆ. ಒಂದು ದಿನ ಸಡನ್ನಾಗಿ ಬೇಡಿಕೆ ಕಳೆದುಕೊಂಡು ನೇಪಥ್ಯಕ್ಕೆ ಸರಿದುಬಿಡುತ್ತಾಳೆ. ನಟರ ವಿಚಾರದಲ್ಲಿ ಈ ಪ್ರಕ್ರಿಯೇ ತೀರಾ ಅಪರೂಪ. ನಿದರ್ಶನವೆಂದರೇ ಐವತ್ತು ದಾಟಿದ ಶಿವಣ್ಣ ಇವತ್ತಿಗೂ ಬಹುಬೇಡಿಕೆಯ ನಟ. ರವಿಚಂದ್ರನ್ ಕಲ್ಲಂಗಡಿ, ದ್ರಾಕ್ಷಿ ಹಿಡಿದುಕೊಂಡು ಬಂದರೇ ಜನ ಮುಗಿಬಿದ್ದು ಸಿನಿಮಾ ನೋಡುತ್ತಾರೆ. ಇವರಿಗೆ ಇಪ್ಪತ್ತರ ಆಸುಪಾಸಿನ ಮೊಗ್ಗಿನಂಥ ನಾಯಕಿಯರೇ ಬೇಕು. ಆದರೆ ನಟಿಯರು ಮೂವತ್ತರ ಹೊಸ್ತಿಲು ಕ್ರಮಿಸುತ್ತಿದ್ದಂತೆ, ಅಕ್ಕ, ಅತ್ತಿಗೆ, ಅಮ್ಮನ ಪಾತ್ರಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕು. ಬರೀ ಕನ್ನಡ ಚಿತ್ರರಂಗದ ಬಗ್ಗೆ ಹೇಳುವುದಾದರೇ ಲೀಲಾವತಿ, ಕಲ್ಪನಾ, ಭಾರತಿ, ಆರತಿ, ಮಂಜುಳಾ ಅವರಂತಹ ಗಾಡ್ಗಿಫ್ಟ್ ನಾಯಕಿಯರು ನಮಗೆ ದಕ್ಕಿದ್ದಾರೆ. ಇಂಥವರ ಸಾಲಿಗೆ ಬಂದು ನಿಂತವಳೇ ಸೌಂದರ್ಯ. ಸೌಂದರ್ಯ ಒಂಥರಾ ಕಾವೇರಿ ನದಿಯ ಹಾಗೇ..?. ಇಲ್ಲಿ ಹುಟ್ಟಿ ಮತ್ತೆಲ್ಲೋ ಹರಿದು, ಅದ್ಯಾರದ್ದೋ ಸ್ವತ್ತಿನಂತೆ ಭಾಸವಾಗುತ್ತಾಳೆ. ಸೌಂದರ್ಯ ಹುಟ್ಟಿಬೆಳೆದದ್ದು ಕರ್ನಾಟಕದಲ್ಲಾದರೂ, ಅವಳು ಪರಿಪೂರ್ಣವಾಗಿ ಸಲ್ಲಿದ್ದು ತೆಲುಗು ಚಿತ್ರರಂಗಕ್ಕೆ. ಇವತ್ತಿಗೂ ಅವಳು ಆಂಧ್ರದ ಮನೆಮಗಳು. ಅವಳನ್ನು ಅಲ್ಲಿನ ಪ್ರತಿಯೊಬ್ಬ ಚಿತ್ರರಸಿಕರು ನೆನೆಯುತ್ತಾರೆ. ಕಣ್ಣೀರು ಹಾಕುತ್ತಾರೆ. ಸೌಂದರ್ಯ ತಾಕಿ ಹೋದ ಸೂಕ್ಷ ಸಂವೇಧನೆಗಳು ಕೂಡ ಅಂತಹದ್ದೇ..!

ಸೌಂದರ್ಯ ಎಂಬ ಅಭಿಜಾತೆ ಕಲಾವಿದೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಯಶಸ್ಸಾಗಿದ್ದೇ ಅವಳ ಭವಿಷ್ಯಕ್ಕೆ ಇಡೀ ಕುಟುಂಬವೇ ಆಸ್ಥೆವಹಿಸಿತ್ತು. ಅಪ್ಪ, ಅಮ್ಮ, ಅಣ್ಣನ ಸಾಥ್ ಸಿಕ್ಕಿದ್ದೇ ಸೌಂದರ್ಯ ಮುಗಿಲೆತ್ತರಕ್ಕೆ ಕೈ ಚಾಚಿದಳು. ಗೆದ್ದು ಬೀಗಿದಳು. ಅಪಾರ ಅಭಿಮಾನಿಗಳ ಹೃದಯವನ್ನು ಕದ್ದಳು. ಎಂದೂ ಸೋಲದ ಅವಳು ಒಂದು ದಿನ ಸೋಲನ್ನು ಒಪ್ಪಿಕೊಳ್ಳಲೇಬೇಕಾಯ್ತು; ಅದು ವಿಧಿಯ ಮುಂದೆ..!. 1992ನೇ ಇಸವಿಯಲ್ಲಿ ಚಿತ್ರಂಗದತ್ತ ನಡೆದುಬಂದ ಸೌಂದರ್ಯ, 1993ರಲ್ಲಿ ಅನಾಮತ್ತು ಒಂಬತ್ತು ಚಿತ್ರಗಳಲ್ಲಿ ನಟಿಸಿಬಿಟ್ಟಿದ್ದಳು. ಅದರಲ್ಲಿ ಒಂದೇ ಒಂದು ಕನ್ನಡ ಚಿತ್ರ. ನಟ ದೇವರಾಜ್ ತಂಗಿಯಾಗಿ ನಟಿಸಿದ ಆ ಚಿತ್ರದ ಹೆಸರು `ನನ್ನತಂಗಿ’. ಪೊನ್ನುಮಣಿ, ರಾಜೆಂದ್ರುಡು ಗಜೇಂದ್ರುಡು, ಅಮ್ಮಾ ನಾ ಕೊಡಲಾ, ಮೇಡಮ್, ಮಯಲೋಡು, ಇನ್ಸ್ಪೆಕ್ಟರ್ ಜಾನ್ಸಿ, ಅಸಲೈ ಪಲ್ಲೈನಾ ವನ್ನಿ, ದೊಂಗಾ ಅಲ್ಲುಡು- ಇವು ಸೌಂದರ್ಯ 1993ರಲ್ಲಿ ನಟಿಸಿದ ತೆಲುಗು ಚಿತ್ರಗಳು. ಇವುಗಳ ಪೈಕಿ ಆರು ಚಿತ್ರಗಳು ಬಾಕ್ಸ್ ಆಫೀಸನ್ನು ಚೋರಿ ಮಾಡಿತ್ತು. ಇನ್ನು 1994ರ ಆರಂಭದಲ್ಲಿ ಕನ್ನಡದ `ತೂಗುವೇ ಕೃಷ್ಣನಾ…’ ಚಿತ್ರದಲ್ಲಿ ನಟಿಸಿದ ಸೌಂದರ್ಯ, ಅದೇ ವರ್ಷ ತೆಲುಗಿನಲ್ಲಿ ಬರೋಬ್ಬರಿ ಆರು ಚಿತ್ರಗಳಲ್ಲಿ ನಟಿಸಿದಳು. 1995ರಲ್ಲಿ ಹತ್ತು, 1996ರಲ್ಲಿ ಒಂಬತ್ತು, 1997ರಲ್ಲಿ ಏಳು, 1998ರಲ್ಲಿ ಅನಾಮತ್ತು ಹನ್ನೆರಡು ಚಿತ್ರಗಳಲ್ಲಿ ನಟಿಸಿದಳು. ವಿಶ್ರಾಂತಿಯಿಲ್ಲದೇ ದುಡಿದ ಸೌಂದರ್ಯ ಬರೀ ಹಣವನ್ನು ಮಾತ್ರ ಸಂಪಾದಿಸಲಿಲ್ಲ. ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಳು.

ಸೌಂದರ್ಯಳ ಚಿತ್ರಯಾನದ ಮಧ್ಯೆ ಆಘಾತವೊಂದು ಎದುರಾಗಿತ್ತು. ಅದು 1995ನೇ ಇಸವಿಯಲ್ಲಿ ನಡೆದ ದುರಂತ. ತನ್ನ ಬದುಕನ್ನು ತಹಬಂಧಿಗೆ ತರಲು ಶ್ರಮಿಸಿದ್ದ ಪ್ರೀತಿಯ ತಂದೆ ಸತ್ಯನಾರಾಯಣ್ ಹೃದಯಘಾತವಾಗಿ ಮರಣವನ್ನಪ್ಪಿದ್ದರು. ಅಪ್ಪನನ್ನು ಕಳೆದುಕೊಂಡು ಕಂಗೆಟ್ಟ ಈ ಹೆಣ್ಣುಮಗಳಿಗೆ ಅಣ್ಣ ಅಮರನಾಥ್ ಸಾಂತ್ವಾನ ಹೇಳಿದ. ಸಾಥ್ ಕೊಟ್ಟ. ಸೌಂದರ್ಯಪರ್ವ ಮುಲಾಜಿಲ್ಲದೇ ಮುಂದುವರಿದಿತ್ತು. 1999ರಲ್ಲಿ ರಾಜ, ಆರ್ಯಭಟ, ಅರುಂಧತಿ ಸೇರಿದಂತೆ ಒಟ್ಟು ಹತ್ತು ಚಿತ್ರಗಳಲ್ಲಿ ನಟಿಸಿದ ಸೌಂದರ್ಯ, 2004ನೇ ಇಸವಿಯ ಹೊತ್ತಿಗೆ ಅನಾಮತ್ತು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿಬಿಟ್ಟಿದ್ದಳು. ಅದರಲ್ಲಿ ಶೇಕಡಾ ತೊಂಭತ್ತಕ್ಕಿಂತ ಅಧಿಕ ತೆಲುಗು ಚಿತ್ರಗಳು, ಬೆರಳೆಣಿಕೆಯಷ್ಟು ಕನ್ನಡ ಚಿತ್ರಗಳು. ತಮಿಳು, ಹಿಂದಿ, ಮಲಯಾಳಂನಲ್ಲೂ ಆಕೆ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಸೌಂದರ್ಯ ಒಂದೇ ಸೀಮೆಯ ತಾರೆಯಲ್ಲ, ಅವಳು ಐದು ರಾಜ್ಯಕ್ಕೆ ಮೀಸಲಾಗಿದ್ದ ನಕ್ಷತ್ರವಾಗಿದ್ದಳು. ಕನ್ನಡದ ರಜನಿಕಾಂತ್ ರೀತಿಯದ್ದೇ ಸೌಂದರ್ಯಳ ಬದುಕು, ಭವಿಷ್ಯ..! ಮೊದಲೇ ಹೇಳಿದಂತೆ ಅವಳು ಕಾವೇರಿ ನದಿಯ ಹಾಗೇ…!

ಇನ್ನು ಕನ್ನಡ ಚಿತ್ರರಂಗದ ಪರಿಸ್ಥಿತಿ ಮೊದಲಿನಿಂದಲೂ ಹೇಗಿತ್ತೆಂದರೇ ಅಂಗೈ ಹುಣ್ಣಿಗೆ ಕನ್ನಡಿ ಹುಡುಕುವ ಪ್ರಯತ್ನವಾಗುತ್ತಿತ್ತು. ಅವರಿಗೆ ಸ್ವನೆಲದ ಸೌಂದರ್ಯ ಕಾಣಿಸುತ್ತಿರಲಿಲ್ಲ. ಪಕ್ಕದ ಮನೆ ಪದ್ಮಳ ಸಾಂಗತ್ಯಕ್ಕೆ ಹಾತೊರೆಯುತ್ತಿದ್ದರು. ಕನ್ನಡಿಗರ ಈ ದೌರ್ಬಲ್ಯವನ್ನು ಎನ್ಕ್ಯಾಶ್ ಮಾಡಿಕೊಂಡಿದ್ದು ಕಾಲಿವುಡ್, ಟಾಲಿವುಡ್ ಹಾಗೂ ಬಾಲಿವುಡ್ ಚಿತ್ರರಂಗ. ಆದಷ್ಟು ಸೌಂದರ್ಯವನ್ನು ಅವರು ಅಕ್ಷರಶಃ ಅನುಭವಿಸಿದರು. ಸೌಂದರ್ಯ ಅದೆಂಥಾ ಅಪ್ಪಟ ಪ್ರತಿಭೆ ಎಂದರೇ, ತೆಲುಗಿನ ಖ್ಯಾತ-ವಿಖ್ಯಾತ ನಟರಿಗೆಲ್ಲಾ ಸೌಂದರ್ಯಳೇ ನಾಯಕಿಯಾಗಬೇಕಿತ್ತು. ಇವತ್ತಿಗೂ ಆಂಧ್ರಪ್ರದೇಶದ ಚಿತ್ರರಸಿಕರನ್ನು `ನಿಮ್ಮ ಫೇವ್ರೆಟ್ ಜೋಡಿ ಯಾರು..?’ ಅಂತ ಕೇಳಿ ನೋಡಿ, ಥಟ್ಟ್ ಅಂತ ವೆಂಕಟೇಶ್-ಸೌಂದರ್ಯ ಅವರ ಹೆಸರನ್ನು ಹೇಳಿಬಿಡುತ್ತಾರೆ. ಅಷ್ಟರಮಟ್ಟಿಗೆ ಜನಪ್ರಿಯವಾಗಿತ್ತು ಈ ಜೋಡಿ. ಸೌಂದರ್ಯ ನಟಿಸಿದ ಕನ್ನಡ ಚಿತ್ರಗಳನ್ನು ಲೆಕ್ಕ ಹಾಕಿದರೇ ಅದರ ಸಂಖ್ಯೆ ಕೇವಲ ಹದಿಮೂರು. ಗಂಧರ್ವ, ಬಾ ನನ್ನ ಪ್ರೀತಿಸು, ನನ್ನ ತಂಗಿ, ತೂಗುವೇ ಕೃಷ್ಣನಾ, ಸಿಪಾಯಿ, ದೋಣಿಸಾಗಲಿ, ಆರ್ಯಭಟ, ನಾನು ನನ್ನ ಹೆಂಡ್ತೀರು, ನಾಗದೇವತೆ, ಶ್ರೀ ಮಂಜುನಾಥ, ದ್ವೀಪ, ಶ್ವೇತಾನಾಗ, ಆಪ್ತಮಿತ್ರ ಬಿಟ್ಟರೇ ಸೌಂದರ್ಯ ಕನ್ನಡೇತರ ಸಿನಿಮಾಗಳಲ್ಲಿ ನಟಿಸಿದ್ದೇ ಹೆಚ್ಚು.

ಸೌಂದರ್ಯ ಬರೀ ಅಂದಗಾತಿಯಲ್ಲ, ಅವಳು ಅಪ್ಪಟ ಪ್ರತಿಭೆ ಎನ್ನುವುದಕ್ಕೆ ಅವಳು ನಟಿಸಿದ ಚಿತ್ರಗಳಿಗಿಂಥ ಬೇರೆ ನಿದರ್ಶನ ಬೇಕಿಲ್ಲ. ಅದಕ್ಕೆ ಪೂರಕವಾಗಿ ಹಲವಾರು ಪ್ರಶಸ್ತಿಗಳು ಅವಳ ಮುಡಿಗೇರಿದ್ದವು. 1995ರಲ್ಲಿ ತೆಲುಗಿನಲ್ಲಿ ತೆರೆಕಂಡ ಸೂಪರ್ಹಿಟ್ `ಅಮ್ಮೋರು’ ಚಿತ್ರದ ನಟನೆಗೆ ನಂದಿ ಅವಾರ್ಡ್ ಹಾಗೂ ಫಿಲ್ಮ್ಫೇರ್ ಅವಾರ್ಡ್ ಪಡೆದುಕೊಂಡರೇ, ಇದಾದ ಒಂದೇ ವರ್ಷಕ್ಕೆ ವೆಂಕಟೇಶ್ ಜೊತೆ ನಟಿಸಿದ `ಪವಿತ್ರಬಂಧಂ’ ಚಿತ್ರಕ್ಕೂ ಫಿಲ್ಮ್ಫೇರ್ ಅವಾರ್ಡ್ ಪಡೆದುಕೊಂಡಳು. 1998ರಲ್ಲಿ ಕನ್ನಡದ `ದೋಣಿಸಾಗಲಿ’ ಹಾಗೂ ತೆಲುಗು-ತಮಿಳಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿ ಯಶಸ್ವಿಯಾದ `ಅನಂತಪುರಂ’ ಚಿತ್ರಕ್ಕೆ ಆಯಾ ರಾಜ್ಯದ ಫಿಲ್ಮ್ಫೇರ್ ಅವಾರ್ಡ್ ಗಳು ಸಿಕ್ಕಿದವು. ಹಾಗೆಯೇ ತೆಲುಗಿನ ರಾಜ, ಹಿಂದಿಯ ಸೂರ್ಯವಂಶಂ, ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾದ ಬಹು ಯಶಸ್ವಿ ಚಿತ್ರ `ಶ್ರೀಮಂಜುನಾಥ’ ಚಿತ್ರಕ್ಕೂ ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡಳು. ತೆಲುಗಿನ `ಪ್ರೇಮದೊಂಗ’, `ಸೀತಯ್ಯ’ ಚಿತ್ರಕ್ಕೂ ಫಿಲ್ಮ್ ಫೇರ್ ಅವಾರ್ಡ್ ಸಿಕ್ಕಿತ್ತು. ಆದರೆ ಸೌಂದರ್ಯಳ ಒಳಗಿದ್ದ ಅಪ್ಪಟ ಪ್ರತಿಭೆಯೊಂದು ಅರಳಿದ್ದು, ಕನ್ನಡದಲ್ಲೇ ತಾನೇ ಸ್ವತಃ ನಿರ್ಮಿಸಿದ `ದ್ವೀಪ’ ಚಿತ್ರದಲ್ಲಿ. ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ `ದ್ವೀಪ’ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆಯಾಗಿತ್ತು. ನ್ಯಾಶ್ನಲ್ ಫಿಲ್ಮ್ ಅವಾರ್ಡ್, ಬೆಸ್ಟ್ ಫ್ಯೂಚರ್ ಫಿಲ್ಮ್, ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್, ಬೆಸ್ಟ್ ಆ್ಯಕ್ಟರ್- ಹೀಗೆ ಹಲವಾರು ಪ್ರಶಸ್ತಿಗಳನ್ನು `ದ್ವೀಪ’ ಚಿತ್ರದ ಪಡೆದುಕೊಂಡಿತ್ತು. ಆಕೆ ನಟಿಸಿದ ಕಟ್ಟ ಕಡೆಯ ಕನ್ನಡ ಚಿತ್ರ `ಆಪ್ತಮಿತ್ರ’ಕ್ಕೂ ಬೆಸ್ಟ್ ಆಕ್ಟ್ರೆಸ್ ಪ್ರಶಸ್ತಿ ಪಡೆದುಕೊಂಡಿದ್ದಳು.

ಸೌಂದರ್ಯ ಚಿತ್ರರಂಗಕ್ಕೆ ಸಲ್ಲಿದ್ದು ಕೇವಲ ಹನ್ನೆರಡು ವರ್ಷಗಳು ಮಾತ್ರ, ಅಭಿನಯಿಸಿದ್ದು ಅನಾಮತ್ತು ನೂರಕ್ಕೂ ಹೆಚ್ಚು ಚಿತ್ರಗಳು. ಅವುಗಳಲ್ಲಿ ಬಹುಪಾಲು ಚಿತ್ರಗಳು ಬಾಕ್ಸಾಫೀಸಿನಲ್ಲಿ ಯಶಸ್ಸುಗಳಿಸಿತ್ತು. ಕೋಟ್ಯಾಂತರ ರೂಪಾಯಿ ಸಂಪಾದಿಸಿದಳು. ಅಪಾರ ಆಸ್ತಿಯನ್ನು ಖರೀದಿಸಿದಳು. ಬೆಂಗಳೂರಿನ ಆರ್ಎಂವಿ ಬಡಾವಣೆಯಲ್ಲಿ ಕೋಟಿಗೆ ಬೆಲೆಬಾಳುವ ನಿವಾಸ, ಹನುಮಂತನಗರ ರಾಮಾಂಜನೇಯ ಬಡಾವಣೆಯಲ್ಲಿ ಮನೆ, ಭವಾನಿಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ ಹಾಗೂ ಹೆಚ್ಬಿಆರ್ ಲೇ ಔಟ್ನಲ್ಲಿ ತಲಾ ಎರಡು ಸೈಟು, ಹೈದರಾಬಾದ್ ನ ಬಂಜಾರ ಹಿಲ್ಸ್ ನಲ್ಲಿ 3772 ಚದರ ಅಡಿಯ ಆಫೀಸು, ಬೆಂಗಳೂರಿನ ಆರ್ಎಂವಿ ಬಡಾವಣೆಯಲ್ಲಿ ಮನೆ, ಅಪಾರ ನಗದು, ಒಡವೆಗಳನ್ನು ಸೌಂದರ್ಯ ಸಂಪಾದಿಸಿದ್ದಳು. ಎಲ್ಲವೂ ಅವಳ ಹೆಸರಿನಲ್ಲಿತ್ತು. ಹೀಗಿರುವಾಗ 1996ರಲ್ಲಿ ಸೌಂದರ್ಯಳ ಮದುವೆ ಪ್ರಸ್ತಾಪವಾಗಿತ್ತು. ಸಂಬಂಧಿ ರಘು ಜೊತೆ ಮದುವೆ ನಿಶ್ಚಯವಾಗಿತ್ತು. ಈ ಹಂತದಲ್ಲೇ ಸೌಂದರ್ಯ ದೂರಾಲೋಚನೆ ಮಾಡಿದ್ದಳು. ಮದುವೆ ನಂತರ `ಸೌಂದರ್ಯ ಕೈಬಿಟ್ಟು ಹೋದಳು’ ಎಂಬ ಆರೋಪ ತನ್ನ ಮೇಲೆ ಬರಬಾರದು ಅಂತ ಫ್ಯಾಮಿಲಿ ಲಾಯರ್ ಧನರಾಜ್ ನನ್ನು ಕರೆಸಿ ವಿಲ್ ಬರೆಸಿಟ್ಟಳು. ಒಂದು ವೇಳೆ ತಾನು ಅಕಾಲಿಕ ಮರಣಕ್ಕೀಡಾದರೇ ಎಲ್ಲರಿಗೂ ತನ್ನ ಸಂಪಾದನೆಯ ಬಿಡಿಗಾಸು ಕೂಡ ಉಪಯೋಗವಾಗಲಿ, ಸಮಾನಾಗಿ ಹಂಚಿಕೆಯಾಗಲಿ ಎಂಬರ್ಥದ ವಿಲ್ ಬರೆಸಿಟ್ಟಳು. ತನ್ನ ಕುಟುಂಬ ಸದಸ್ಯರೆಲ್ಲರೂ ಒಟ್ಟಿಗೆ ವಾಸವಿರಬೇಕು ಎನ್ನುವುದು ಅವಳಿಗಿದ್ದ ಬಹುದೊಡ್ಡ ಆಸೆ. ಅದರಲ್ಲೂ ತನ್ನ ಏಳಿಗೆಗಾಗಿ ತನ್ನ ಜೀವನವನ್ನು ಮುಡಿಬಿಟ್ಟ ಅಣ್ಣ ಅಮರನಾಥ್ಗೂ ತನ್ನ ಸಂಪಾದನೆಯಲ್ಲಿ ಏನೆಲ್ಲಾ ಸಲ್ಲಬೇಕು ಎನ್ನುವುದನ್ನು ಬರೆದಿಟ್ಟಿದ್ದಳು.

2003ರಲ್ಲಿ ಸಂಬಂಧಿ ರಘು ಜೊತೆ ಮದುವೆಯಾದ ಸೌಂದರ್ಯ, ಒಂದು ವರ್ಷ ಸಂಸಾರ ಮಾಡಿದ್ದಳು. ಹೊಟ್ಟೆಯಲ್ಲಿ ಎರಡು ತಿಂಗಳ ಮಗು ಬೆಳೆಯುತ್ತಿತ್ತು. ಇದೇ ಹೊತ್ತಿಗೆ ದೇಶದಲ್ಲಿ ಚುನಾವಣೆಯ ಕಾವು. ಬಿಜೆಪಿ ಪರವಾಗಿ ಬ್ಯಾಟಿಂಗ್ ನಡೆಸಲು ಸೌಂದರ್ಯಗೆ ಬುಲಾವ್ ಬಂದಿತ್ತು. ಏಪ್ರಿಲ್ 17, 2004ರಂದು ಆಂಧ್ರಕ್ಕೆ ಹೊರಟು ನಿಂತವಳು ಜಕ್ಕೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಳು. ಬಿಜೆಪಿ ಪರವಾಗಿ ಪ್ರಚಾರಕ್ಕೆ ಹೊರಟ ಸೌಂದರ್ಯ ಹಾಗೂ ಆಕೆಯ ಅಣ್ಣ ಅಮರನಾಥ್, ಬೆಳಿಗ್ಗೆ 11 ಘಂಟೆ 5 ನಿಮಿಷಕ್ಕೆ ಹೆಲಿಕಾಪ್ಟರ್ ಏರಿದ್ದರು. ಮೇಲೆ ಹಾರಿದ ಹೆಲಿಕಾಪ್ಟರ್ ಕೇವಲ ಐನೂರು ಮೀಟರ್ ದೂರ ಕ್ರಮಿಸಿತ್ತಷ್ಟೇ..!! ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕಾಪ್ಟರ್ ಪತನವಾಗಿತ್ತು. ಸೌಂದರ್ಯ, ಅವಳಣ್ಣ ಅಮರನಾಥ್ ಹಾಗೂ ಪೈಲಟ್ ಎಲ್ಲರೂ ಸುಟ್ಟು ಕರಕಲಾಗಿದ್ದರು. ಸೌಂದರ್ಯ ಸತ್ತನಂತರ, ಆಕೆಯ ಪತಿ ರಘು ಹಾಗೂ ಅಮರನಾಥ್ ಪತ್ನಿ ನಿರ್ಮಲಾಳ ಮಧ್ಯೆ ಆಸ್ತಿಗಾಗಿ ಕಿತ್ತಾಟ ಶುರುವಾಗಿತ್ತು. ಇಬ್ಬರೂ ಕೋರ್ಟ್ ಮೆಟ್ಟಿಲೇರಿದರು. `ಸೌಂದರ್ಯ ಬರೆದ ವಿಲ್ ಸುಳ್ಳು’ ಅಂತ ರಘು ವಾದ ಮಾಡಿದ್ರೆ, ಅಮರನಾಥ್ ಪತ್ನಿ ನಿರ್ಮಲಾ, `ತನ್ನ ಪತಿಗೆ ಸೇರಬೇಕಾದ ಆಸ್ತಿ, ಹಣವನ್ನು ರಘು ಹಾಗೂ ಸೌಂದರ್ಯಳ ತಾಯಿ ಮಂಜುಳಾ ದುರುಪಯೋಗಪಡಿಸಿಕೊಂಡಿದ್ದಾರೆ ಅಂತ ಹುಯಿಲೆಬ್ಬಿಸಿದಳು. ಈ ವಿಚಾರದಲ್ಲಿ ಸೌಂದರ್ಯ ಫ್ಯಾಮಿಲಿ ಲಾಯರ್ ಧನರಾಜ್ ಮೇಲೂ ಸುಳ್ಳು ಆರೋಪವಾಗಿತ್ತು.

ಚಿತ್ರರಂಗದ ಸಾರ್ಥಕಪಯಣದಲ್ಲಿ ಹಗಲು ರಾತ್ರಿ ದುಡಿದು ಲಕ್ಷಾಂತರ ಅಭಿಮಾನಿಗಳು ಹಾಗೂ ಕೋಟ್ಯಾಂತರ ಆಸ್ತಿಯನ್ನು ಸಂಪಾದಿಸಿ ದಿಢೀರ್ ಅಂತ ಹೊರಟು ಹೋದ ಸೌಂದರ್ಯಳಿಗಿದ್ದ ಆಸೆಯೊಂದೇ..! ಒಂದು ವೇಳೆ ನಾನು ಅಕಾಲಿಕ ಮರಣಕ್ಕೀಡಾದರೇ, ನನ್ನ ಆಸ್ತಿಗಾಗಿ ಯಾರೂ ಕಿತ್ತಾಡಬಾರದು, ಎಲ್ಲರೂ ಸಮಾನಾಗಿ ಹಂಚಿಕೊಳ್ಳಬೇಕು. ಇವೆಲ್ಲಕ್ಕಿಂತ ಮಿಗಿಲಾಗಿ ಎಲ್ಲರೂ ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಿರಬೇಕು. ಆದರೆ ಸೌಂದರ್ಯ ದುರಂತದಲ್ಲಿ ಮೃತಪಟ್ಟು ಅವಳ ನೆನಪು ಸಂಪೂರ್ಣ ಮಾಸುವ ಮುನ್ನವೇ ರಘು, ಅರ್ಪಿತ ಎಂಬಾಕೆಯನ್ನು ಮದುವೆಯಾಗಿದ್ದ. ಈಗ ಸೌಂದರ್ಯಳ ಆಸ್ತಿಗಾಗಿ ಇಡೀ ಕುಟುಂಬ ಬಡಿದಾಡಿಕೊಂಡಿದೆ. ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿದೆ. ಮನುಷ್ಯನ ಸ್ವಾರ್ಥ ಸಾವಿನಲ್ಲೂ ಕವಡೆ ಆಡುತ್ತೆ ಎನ್ನುವುದು ಇದಕ್ಕೇನಾ…? ಒಂದಂತೂ ನಿಜ, ಇವರೆಲ್ಲರ ಕಿತ್ತಾಟದಿಂದ ಸೌಂದರ್ಯಳ ಆತ್ಮ ಅತೃಪ್ತಿಯಿಂದ ನರಳುತ್ತಿದೆ. ಅಂದಹಾಗೆ ನಿನ್ನೆಗೆ ಸೌಂದರ್ಯ ಸಾವನ್ನಪ್ಪಿ ಹನ್ನೆರಡು ವರ್ಷ. .

POPULAR  STORIES :

ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?

ನಿದ್ದೆಗೆಟ್ಟರೇ ಸಾಯೋದು ಗ್ಯಾರಂಟಿ..!! ನಿದ್ದೆ ಬರ್ತಿಲ್ಲಾ.. ಯಾಕೋ ನಿದ್ದೆ ಬರ್ತಿಲ್ಲಾ..!!

ಐಪಿಎಲ್ ನಲ್ಲಿ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಸ್ಯಾಲರಿ ಎಷ್ಟು ಗೊತ್ತಾ..?

ಚಂದ್ರನ ಮೇಲೆ ಬಾವುಟ ನೆಟ್ಟಿದ್ದ ಆರ್ಮ್ ಸ್ಟ್ರಾಂಗ್..! ಗಾಳಿಯೇ ಇಲ್ಲದೆ ಬಾವುಟ ಹಾರುತ್ತಾ ಸ್ವಾಮಿ.!?

ಮೂರರ ಪೋರನ ಸಿಟ್ಟಿಗೆ ಪೊಲೀಸರೇ ಕಂಗಾಲು..! ಅಬ್ಬಾ..!! ಮಕ್ಕಳು ಹೀಗೂ ಇರ್ತಾರಾ..!?

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

ಇರಾಕಿ ರ್ಯಾಂಬೋ ಸತ್ತು ಹೋದ್ನಾ..!? ಐಸಿಸ್ ಉಗ್ರರನ್ನು ಕೊಲ್ಲುತ್ತಿದ್ದ ಹೀರೋ ಇನ್ನಿಲ್ಲ..!?

9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!

ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!

ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗೆ ದಾವೂದ್ ಫಿನಿಶ್..! ಭೂಗತ ಡಾನ್ ನನ್ನು ಕೆಡವಲು ಮೋದಿ ಪ್ಲಾನ್ ಏನು..?

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...