ನಿಮ್ಮ ಪ್ರೀತಿಯನ್ನು ಹಂಚಿ. ಸಾಧ್ಯವಾದಷ್ಟೂ ದಾನಿಗಳಾಗಿ..! ಅದಕ್ಕಾಗಿ ಹಪಾಹಪಿಸುವ ಜೀವಿಯೊಂದು ಕಾದಿರುತ್ತದೆ ಎಂದು ಶುರುವಾಗುವ ಇದು ಸ್ಪ್ರೆಡ್ ಲವ್ ಎಂಬ ಕವಿತೆಯ ಹೆಸರು. ಅದು ಮೂಲತಃ ಇಂಗ್ಲೀಷಿನದ್ದೋ ಅಥವಾ ಫ್ರೆಂಚ್ ಭಾಷೆಯದ್ದೋ ನಮ್ಮವ್ವನಾಣೆ ಗೊತ್ತಿಲ್ಲ. ಆದರೆ ಅದನ್ನು ಓದಿದ್ದು ಮಾತ್ರ ಇಂಗ್ಲಿಷ್ ನಲ್ಲಿ. ಅದರಲ್ಲಿ ಕವಿ ಹೇಳುತ್ತಾನೆ, `ನಿಮಗೆ ಇಂತಹವರ ಪ್ರೀತಿ ಸಿಗಲಿಲ್ಲ ಅಂತ ಕೊರಗಬೇಡಿ. ಯಾಕೆಂದರೆ ನಿಮಗೆ ನಿರ್ದಿಷ್ಟ ವ್ಯಕ್ತಿಗಳ ಪ್ರೀತಿ ಮಾತ್ರ ಸಿಗಲಿಲ್ಲ. ಅದು ದೊಡ್ಡ ನದಿಯೊಂದು ಒಣಗಿ ಹೋದಂತೆ ಎಂಬುದು ನಿಜ. ಆದರೆ ನೆನಪಿಡಿ ಜಗತ್ತಿನಲ್ಲಿ ಯಾರ ಪ್ರೀತಿಯನ್ನು ಪಡೆಯದೆ ಅಸಂಖ್ಯಾತ ಜೀವಿಗಳಿವೆ. ನಿಮ್ಮ ದುಃಖ ನದಿಯಷ್ಟು ದೊಡ್ಡದಾದರೆ, ಅವರ ದುಃಖ ಸಮುದ್ರದಷ್ಟು ವಿಶಾಲ. ಆದರೆ ಅಂತಹವರೂ ದುಃಖ ಮರೆತು ಮೇಲೇಳುತ್ತಾರೆ. ಯಾಕೆಂದರೆ ಯಾವ ವ್ಯಕ್ತಿಯ ಪ್ರೀತಿ ಸಿಗದಿದ್ದರೂ ನೀವು ಒಬ್ಬನಿಗೆ ಮಾತ್ರ ಬೇಕೇ ಬೇಕು. ಯಾಕೆಂದರೆ ನಿಮ್ಮನ್ನು ಈ ಧರೆಗೆ ತಂದವನು ಅವನು. ಅವನನ್ನು ನೀವು ದೇವರೆಂದಾದರೂ ಕರೆಯಿರಿ, ಪ್ರಕೃತಿಯೆಂದಾದರೂ ಕರೆಯಿರಿ. ಒಟ್ಟಿನಲ್ಲಿ ನಿಮ್ಮದು ಆತನಿಗೆ ಬೇಕಾದ ಜೀವಿ. ಅದನ್ನು ಅರಿತುಕೊಳ್ಳಿ. ಇಂದಿನಿಂದ ಇನ್ನೊಬ್ಬರ ಪ್ರೀತಿ ಸಿಗಲಿಲ್ಲ ಎಂದು ಕೊರಗಬೇಡಿ. ನಿಮ್ಮಲ್ಲೇ ದಂಡಿಯಾಗಿರುವ ಪ್ರೀತಿಯನ್ನು ಹಂಚುತ್ತಾ ಹೋಗಿ’ ಎಂಬುದು ಅದರ ಭಾವಾರ್ಥ.
ಅನೇಕ ಬಾರಿ ಇದು ನನ್ನಲ್ಲಿ ಅಭದ್ರ ಭಾವನೆಯನ್ನುಂಟು ಮಾಡಿಬಿಟ್ಟಿರುತ್ತದೆ. ತಿರುಳಿಲ್ಲದ, ಏನೇನೂ ಬುದ್ಧಿವಂತಿಕೆಯಿಲ್ಲದ ಜೀವನದಲ್ಲಿ ಪ್ರವರ್ಧಮಾನಕ್ಕೆ ಬಂದವನನ್ನು ಸುಮ್ಮನೆ ಹತ್ತಿರಕ್ಕೆ ಕರೆದು ನೋಡಿ. ಯಾರೂ ಸಿಗಲಿಲ್ಲವಾ..? ಹಾಗಿದ್ದರೆ ನನ್ನನ್ನೇ ನೋಡಿ. ಯಾವುದೋ ಪ್ರಸವಕ್ಕೆ ಗರ್ಭಧರಿಸಿದವನಂತೆ ಪ್ರೀತಿಯ ತೂಗು ತೊಟ್ಟಿಲ ಮೇಲೆ ಬೋರಲು ಮಲಗಿದವನು ನಾನು. ಅಂಥ ಸಮಯದಲ್ಲಿ ನನ್ನ ಯೋಚನಾಲಹರಿ ಮಿಡಿದದ್ದು ದೇವರ ಮೊರೆ ಹೋಗು ಅಂತ. ನಾನು ದೇವರನ್ನು ನಂಬುವನಲ್ಲ. ಯಾಕೆಂದರೆ ಆತನಿಗಾಗಿ ನಾನು ಹುಡುಕಾಡದ ಜಾಗವಿಲ್ಲ. ಮಾಡದ ಭಜನೆಗಳಿಲ್ಲ, ಹರಕೆ ಕಟ್ಟಿಕೊಂಡ ಅರಳಿ ಮರ, ಗೊಬ್ಬಳಿ ಮರ, ಬೇವಿನ ಮರಗಳಿಲ್ಲ. ಎಲ್ಲೂ ಅವನ ಗುರುತ್ವ ಸಿಗದಿದ್ದಾಗ ಭ್ರಾಂತಿ ಹುಟ್ಟಿಸಿಕೊಂಡು ಹಿರಣ್ಯ ಕಷ್ಯಪ, ಪ್ರಹ್ಲಾದನನ್ನು ಕೇಳುವಂತೆ `ಅಲ್ಲಿದ್ದಾನಾ ದೇವರು, ಇಲ್ಲಿದ್ದಾನಾ ದೇವರು, ಆ ಹುಡುಗಿ ಜಡೆಯಲ್ಲಿ, ಆ ಸ್ಕೂಲ್ ಹುಡುಗನ ಚಡ್ಡಿಯ ಕಿಸೆಯಲ್ಲಿ, ಎಳನೀರ ಗಂಜಿಯಲ್ಲಿ, ಹೋರು ಗಾಳಿಯಲ್ಲಿ, ನನ್ನ ಗಾಡಿಯ ಗಾಲಿಯಲ್ಲಿ, ನಾ ಬರೆವ ಅಕ್ಷರಗಳಲ್ಲಿ, ನನ್ನಲ್ಲಿ, ನಿನ್ನಲ್ಲಿ ಎಂಬಂತೆಲ್ಲ ಗೆಳೆಯ ಚಂದನ್ನನ್ನು ಪ್ರಶ್ನೆ ಕೇಳಿರುವ ದಿನಗಳು ಇದೆ. ಒಂದು ಪ್ರೀತಿ ದಕ್ಕಲಿಲ್ಲ ಎಂಬ ಕಾರಣಕ್ಕಾಗಿ ನನಗೆ ಆ ಪರಿಯ ನೋವು ಆಗಿತ್ತು. ಅದನ್ನು ಪರಿಹರಿಸುವ ಶಕ್ತಿ ಇರುವುದು ದೇವರೊಬ್ಬನಿಗೆ ಅಂದುಕೊಂಡು ಅಲೆದಾಡಿದ್ದೆ. ಹುಡುಕಾಡಿದ್ದೆ, ತಡಕಾಡಿದ್ದೆ. ಆದರೆ ದೇವರು ಎಲ್ಲೂ ಕಣ್ಣಿಗೆ ಕಾಣಲಿಲ್ಲ. ಕೈಗೆ ಸಿಗಲಿಲ್ಲ. ಕಿವಿಯ ಬಳಿ ಬಂದು ನಾನಿದ್ದೇನೆ ಅಂತ ಸ್ಪಷ್ಟವಾಗಿ ಹೇಳಲಿಲ್ಲ. ಅಷ್ಟಾದ ಮೇಲೆ ಕೆಂಗೇರಿ ಸಾಯಿ ಬಾಬಾನ ಸನ್ನಿಧಿಯಲ್ಲಿದ್ದೂ ಅರ್ಥವಿಲ್ಲ ಅನ್ನಿಸಿ ವಾಪಸ್ಸು ಬಂದುಬಿಟ್ಟೆ. ಈ ಮಧ್ಯೆ ನನಗೆ ಅರಿವಾಗಿದ್ದೆಂದರೆ ನನಗೇನೋ ಪ್ರೀತಿಯ ಕೊರತೆ ಕಾಡಿತ್ತು. ಆದರೆ ನನ್ನನ್ನು ಪ್ರೀತಿಸುವ ಜೀವಿಗಳಿಗೆ ನನ್ನ ಸ್ಥಿತಿ ಎಂತಹ ನೋವು ಕೊಟ್ಟಿರಬೇಕು? ಇದು ಅರ್ಥವಾಗಿದ್ದೇ ತಡ, ನಾನು ಮೆಲ್ಲ ಮೆಲ್ಲಗೆ ಚೇತರಿಸಿಕೊಳ್ಳತೊಡಗಿದೆ. ಪ್ರೀತಿಗಾಗಿ ಕೊರಗಬಾರದು, ಕಾಡಬಾರದು, ಮತ್ತೊಬ್ಬರನ್ನು ನೋಯಿಸಬಾರದು ಎಂಬುದನ್ನು ಮನದಟ್ಟು ಮಾಡಿಕೊಳ್ಳತೊಡಗಿದೆ. ಅಂತಹ ಕಾಲದಲ್ಲಿ ನಾನು ಓದಿದ್ದು ಈ ಕವಿತೆ ಸ್ಪ್ರೆಡ್ ಲವ್.
ಅವತ್ತು ಜೋಗದಲ್ಲಿ ನುಗ್ಗಿದ ಈ ಕವಿತೆ ಎಂಬ ಜಲಲ ಜಲಲ ಜಲಧಾರೆ ಇವತ್ತಿಗೂ ನನ್ನಲ್ಲಿ ಭೋರ್ಗರೆಯುತ್ತಲೇ ಇದೆ. ಪ್ರೀತಿಗಾಗಿ ಹಪಾಹಪಿಸಬಾರದು. ನಮ್ಮೆಲ್ಲೇ ಇರುವ ಪ್ರೀತಿಯನ್ನು ಹಂಚಬೇಕು. ಅದರಲ್ಲಿರುವ ಸುಖ ಎಷ್ಟು ದೊಡ್ಡದು ಎಂಬುದನ್ನು ಹೇಳಲು ಹೋದರೆ ಅದು ತೀರ ಕಾಣದ ಕಡಲು. ನಿಜವಾದ ಬದುಕಿನಲ್ಲಿ ನಮಗೆ ಒಬ್ಬರ, ಇಬ್ಬರ, ಬೇಡ ನಾಲ್ಕು ಜನರ ಪ್ರೀತಿ ಸಿಗಲಿಲ್ಲ ಎಂದು ಕೊರಗುವ ಬದಲು, ನಮ್ಮಲಿರುವುದ್ದನ್ನೇ ಹಂಚುತ್ತಾ ಹೋದರೆ ಅದೂ ಅಷ್ಟೇ ಮೊಗೆದಷ್ಟೂ ಚಿಮ್ಮುವ ಒರತೆ. ಮಾಧ್ಯಮ ಸೇರಿದ ಮೇಲೆ, ಅಲ್ಲಿ ನಾಲ್ಕೈದು ಮಂದಿ ಜತೆ ನಿಂತ ಮೇಲೆ, ಹೀಗೆ ಎಷ್ಟು ಜನರಿಗೆ ಪ್ರೀತಿಯನ್ನು ಕೊಟ್ಟೆ, ಕೊಟ್ಟು ಸುಖಪಟ್ಟೇ ಎಂಬುದಕ್ಕೆ ಲೆಕ್ಕವೇ ಇಲ್ಲ. ಅನೇಕರು ನನ್ನನ್ನು ಸದಾ ಖುಷಿಯಿಂದಿರುವ, ಲವಲವಿಕೆಯಿಂದ ಮಾತನಾಡುವ, ವಿಪರೀತ ಉತ್ಸುಕತೆ ಹೊಂದಿರುವ, ಅಳುವೇ ಕಾಣದ ನನ್ನನ್ನು ನೋಡಿದ್ದಾರೆ. ಆದರೆ ಅದರ ಹಿಂದಿನ ಹತಾಶೆಯ ಬಿರುಬಿಸಿಲಿನಲ್ಲಿ ಸುಟ್ಟ ಮನಸಿನ ಕ್ಲಿಷ್ಟ ಪರಿಸ್ಥಿತಿ ಬಲ್ಲವರ್ಯಾರು?. ನನಗೊಬ್ಬನಿಗೆ ಬಿಟ್ಟರೆ. `ಹೇ ಭಲೇ ರಸಿಕ್ ಬಡ್ಡಿಮಗ ಗುರು ಅವನು, ಯಾವ್ ಹುಡ್ಗಿನೂ ಬಿಡಲ್ಲ ನನ್ಮಗ. ನೋಡಮ್ಮ ನೀನು! ಸ್ವಲ್ಪ ಹುಶಾರಾಗಿರಿಬೇಕಮ್ಮ ಅವನತ್ರ, ಸರಿಯಿಲ್ಲ ಅವನು, ಹೋಗ್ತಾ ಬರ್ತಾ ನಿನ್ನನೇ ತಿನ್ನುವಂತೆ ನೋಡ್ತಾನೆ..! ಹೀಗೆಲ್ಲಾ ಮಾತನಾಡುವವರೂ ಇದ್ದಾರೆ. ನಾನು ಎಲ್ಲರೊಂದಿಗೆ ಸಲುಗೆಯಿಂದ ಇರೋದೇ ತಪ್ಪಾ..? ಗಂಡು ಮಕ್ಕಳ ಜತೆ ಸಲುಗೆಯಿಂದಿದ್ದರೆ `ಓಹೋ….! ನೀನ್ ಆ ಟೈಪಾ..! ದೂರ ಇರು’ ಅಂತ ಉದ್ಗರಿಸುತ್ತಾರೆ. ಹೆಣ್ಣು ಮಕ್ಕಳ ಜತೆ ಹೆಚ್ಚೇನಿಲ್ಲ. ಸ್ವಲ್ಪ ಸಲುಗೆಯಿಂದ `ಹಲೋ, ಹಾಯ್’ ಅಂದ್ರೆ ಕಾಮುಕ, ರಸಿಕ, ಹೆಣ್ಣುಬಾಕ, ವುಮನೈಸರ್ ಅನ್ನೋದೇಕೆ..? ಈ ಚಾಂಡಾಲ ಪ್ರಪಂಚದ ಧೋರಣೆ ಅಂತಿಂಥದಲ್ಲ ಬಿಡಿ. ನಾನು ಈ ಮಟ್ಟದ ಬದುಕಿನ ಬಗ್ಗೆ ಹೇಳುವುದಾದರೆ ನಾನು ಧನ್ಯೋಸ್ಮಿ. ಯಾಕೆಂದರೆ ಈ ಪ್ರೀತಿಯನ್ನು ಹಂಚುತ್ತಾ ಹೋದ ನನಗೆ ಎಷ್ಟೋ ಜನರಿಂದ ತಂದೆಯ ಪ್ರೀತಿ, ತಾಯಿಯ ಪ್ರೀತಿ, ಸಹೋದರ, ಸಹೋದರಿಯರ ಪ್ರೀತಿ ದಕ್ಕಿತು. ಒಂದು ವೇಳೆ ನಾನು ಯಾರದ್ದೋ ಪ್ರೀತಿ ನನಗೆ ಸಿಗಲಿಲ್ಲ ಎಂಬುದನ್ನೇ ಜಪ ಮಾಡಿಕೊಂಡು ಮಂಕಾಗಿ, ಅಳುಮುಂಜಿ ಹೊತ್ತು ಕುಳಿತುಬಿಟ್ಟಿದ್ದರೆ ಇಷ್ಟೆಲ್ಲ ಜನರ ಪ್ರೀತಿ ಪಡೆಯುತ್ತಿದ್ದೆನಾ..? ನಿಶ್ಚಿತವಾಗಿಯೂ ಇಲ್ಲ.
ಹೀಗಾಗಿ ಇಂತಹವರ ಪ್ರೀತಿ ನನಗೆ ದಕ್ಕಿಲಿಲ್ಲ ಅಂತ ಕೊರಗುವವರ ಪಟ್ಟಿಯಲ್ಲಿ ನೀವಿದ್ದರೆ ಮೊದಲು ಆ ಪಟ್ಟಿಯಿಂದ ನಿಮ್ಮನ್ನು ಡಿಲೀಟ್ ಮಾಡಿಕೊಂಡು ಬಿಡಿ.
ಏನೇ ಹೇಳ್ರೀ, ಈ ಜಗತ್ತು ತುಂಬ ನಿಷ್ಕರುಣಿ. ಇಲ್ಲಿ ಪ್ರೀತಿಗೆ ಬೆಲೆಯಿಲ್ಲ. ವಂಚನೆಗೇ ಬೆಲೆ ಎಂಬಂತಹ ಮಾತುಗಳನ್ನು ಆಡುತ್ತ ಸಿನಿಕರಾಗಬೇಡಿ. ನಿಜ, ಬದುಕಿನ ವಸ್ತುಸ್ಥಿತಿಯನ್ನು ಎದುರಿಸುವಾಗ ನಾವು ಹಲವು ರೀತಿಯ ಜನರನ್ನು ನೋಡುತ್ತೇವೆ. ಅದರಲ್ಲಿ ಪ್ರೀತಿಸುವವರೂ ಇರುತ್ತಾರೆ, ವಂಚಕರೂ ಇರುತ್ತಾರೆ. ನನಗೆ ದಕ್ಕಿದು ವಂಚನೆಯಾ..? ಪ್ರೀತಿಯಾ..? ಎಂಬುದಕ್ಕೆ ನೋ ರೆಸ್ಪಾನ್ಸ್. ಆದರೆ ಪ್ರೀತಿ ಎಂಬ ವಸ್ತುವನ್ನು ಅದೆಷ್ಟೇ ಮೌಲ್ಯ ಕೊಟ್ಟಾದರೂ ಪಡೆಯುತ್ತೇನೆ ಎಂದು ಹೋದಾಗ ಅದು ವ್ಯವಹಾರವಾಗುತ್ತದೆ. ಆ ವ್ಯವಹಾರದಲ್ಲಿ ನೀವು ಯಶಸ್ವಿಯೂ ಆಗಬಹುದು, ವಂಚನೆಗೂ ಒಳಗಾಗಬಹುದು. ಬೀ ಕೇರ್ ಫುಲ್.
ನಾವೆಲ್ಲರೂ ಬದುಕಿನ ಒಂದು ಹಂತದಲ್ಲಿ ತಂದೆ-ತಾಯಿಯ, ಸಹೋದರ-ಸಹೋದರಿಯರ, ಪ್ರೇಯಸಿಯ, ಗೆಳೆಯರ ಅಥವಾ ಇನ್ಯಾವುದೋ ಜೀವಿಗಳ ಪ್ರೀತಿಯನ್ನು ಕಳೆದುಕೊಂಡವರೇ..! ಒಬ್ಬೊಬ್ಬರ ಬದುಕಿನಲ್ಲಿ ಅದು ಒಂದೊಂದು ರೀತಿಯಲ್ಲಿ ಕಳೆದುಹೋಗಬಹುದು. ಹಾಗಂತ ಸದಾಕಾಲ ಅದಕ್ಕಾಗಿಯೇ ಕೊರಗುತ್ತಾ ಕೂರಬೇಡಿ; ಮೇಲೆದ್ದು ನಿಲ್ಲಿ. ನಿಮ್ಮ ಪ್ರೀತಿಯ ಅಗತ್ಯ ನೂರು ಜನರಿಗಿರುತ್ತದೆ. ಹಾಗಂತ ಲಾಲಿಪಾಪ್ ಥರ ಅದನ್ನು ಕೈಯಲ್ಲಿ ಹಿಡಿದುಕೊಂಡು `ನಾನಿದ್ದೇನೆ ಬನ್ನಿ, ನಾನಿದ್ದೇನೆ ಬನ್ನಿ, ಪ್ರೀತಿ ಕೊಡುತ್ತೇನೆ’ ಅಂತ ಹೇಳಲಾಗುವುದಿಲ್ಲ. ಅದನ್ನು ಪಡೆಯುವ ಅರ್ಹತೆ, ಯೋಗ್ಯತೆ ಇರುವವರು ಮತ್ತು ಪಡೆಯುವ ಯೋಗ ಇರುವವರು ನಿಮ್ಮ ಬಳಿ ಬಂದೇ ಬರುತ್ತಾರೆ ಅಥವಾ ನೀವೇ ಆ ಕಡೆ ಹೋಗುತ್ತೀರಿ. ಒಂದು ಸಲ ನೀವು ಆ ದಾರಿಯಲ್ಲಿ ನಡೆಯತೊಡಗಿದರೆ ನೀವೇ ಇನ್ನಷ್ಟು ಮತ್ತಷ್ಟು ಜನರಿಗೆ ಹೇಳುತ್ತೀರಿ, ಸ್ಪ್ರೆಡ್ ಲವ್. ಹಾಗಾಗಲಿ..!
- ವಿವೇಕ್, ಮಂಡ್ಯ
POPULAR STORIES :
ಜೂನ್ ತಿಂಗಳಿನಲ್ಲಿ ಅನಾವರಣಗೊಳ್ಳಲಿರುವ ಕರ್ನಾಟಕದ ಅತೀ ದೊಡ್ಡ ಮೃಗಾಲಯ
ಐನೂರು ಮಹಿಳೆಯರ ಜೊತೆ ಮಲಗಿದ್ದಾನಂತೆ ಈ ವೆಸ್ಟ್ ಇಂಡೀಸ್ ಕ್ರಿಕೆಟರ್..!
ಗಾನಕೋಗಿಲೆಗೆ ಹುಟ್ಟುಹಬ್ಬದ ಸಂಭ್ರಮ ಆ ಹಾಡನ್ನು ಅವರಿಂದ ಮಾತ್ರ ಹಾಡಲು ಸಾಧ್ಯವಾಗಿತ್ತು..!!
`ಫೋರ್ಜರಿ ಕೇಸ್’, ನಟಿಗೆ ಮೂರು ವರ್ಷ ಜೈಲು..!
ಅಲ್ಟ್ರಾ ಮಾಡರ್ನ್ ಡ್ರೆಸ್ ಗೆ ನೋ ಎಂಟ್ರಿ, ತುಂಡುಡುಗೆ ಹಾಕಿಕೊಳ್ಳುವುದನ್ನ ಅಪರಾಧ ಎಂದು ಪರಿಗಣಿಸಲಾಗುತ್ತಂತೆ
ಬುಕ್ಕಿಗಳ ಫೇವರೆಟ್ ಟೀಮ್ ಯಾವುದು ಗೊತ್ತಾ..? ಈ ಬಾರಿಯ ಐಪಿಎಲ್ ಕಪ್ ಗೆಲ್ಲೋದು ಇದೇ ಟೀಮ್ ಅಂತೆ..!
`ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಓದಲು ಇಷ್ಟ, ನೋಡಲು ಕಷ್ಟ ಕಷ್ಟ..!!
ಯೇ ದೋಸ್ತಿ ಹಮ್ ನಹೀ ಚೋಡೆಂಗೆ – ಕಿಚ್ಚ ದಚ್ಚು ಬೆಸ್ಟ್ ಫ್ರೆಂಡ್ಸ್ ಫಾರ್ ಎವರ್