ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

Date:

ಪ್ರಪಂಚದ ಏಳು ಅದ್ಭುತಗಳಲ್ಲೊಂದೆನಿಸಿರುವ ತಾಜ್ ಮಹಲ್ ಹಿಂದೆ ಕೇವಲ ಪ್ರೇಮ ಕಥೆಯಿಲ್ಲ, ನೋವಿನ ಕಥೆಯೂ ಇದೆ. ನಮ್ಮ ದೇಶದ ಹೆಮ್ಮೆ ಎನಿಸಿಕೊಂಡಿರುವ ಈ ಮಹಲ್ ಮೇಲೆ ಬ್ರಿಟೀಷರು ಕಣ್ಣಿಟ್ಟಿದ್ದರು. ಅದನ್ನು ಬೀಳಿಸುವ ಹುನ್ನಾರ ಮಾಡಿದ್ದರು. ಒಂದು ಹಂತದಲ್ಲಿ ತಾಜ್ ಮಹಲ್ ಹರಾಜು ಕೂಡ ಆಗಿತ್ತು. ಏನೆಲ್ಲಾ ರಾಜಕೀಯ ನಡೆದರೂ ತಾಜ್ ಮಹಲ್ ಇವತ್ತಿಗೂ ಗತವೈಭವವನ್ನು ಕಾಯ್ದಿರಿಸಿಕೊಂಡಿದೆ.

ತಾಜ್ ಮಹಲ್; ಅದೊಂದು ಬರೀ ಕಟ್ಟಡವಷ್ಟೇ ಅಲ್ಲ. ಕಟ್ಟಡ ರೂಪದಲ್ಲಿರುವ ಅಮರಪ್ರೇಮ ಕಾವ್ಯ. ಮೊಘಲರ ದೊರೆ ಷಹಜಹಾನ್ ತನ್ನ ಮೂರನೇ ಹೆಂಡತಿ ಮುಮ್ತಾಜ್ಳ ಮೇಲಿನ ಪ್ರೀತಿಯಿಂದ ನಿರ್ಮಾಣ ಮಾಡಿದ ಈ ಭವ್ಯ ಸ್ಮಾರಕ ಅಂದಿನಿಂದ ಇಂದಿನವರೆಗೂ ಪ್ರೀತಿಯ ಸಂಕೇತವಾಗಿ ಗುರುತಿಸಿಕೊಂಡಿದೆ. ಮಹಾರಾಜನ ಪ್ರೀತಿಯ ಪತ್ನಿಯಾದ ಮುಮ್ತಾಜ್ ತನ್ನ ನಾಲ್ಕನೇ ಮಗುವಿನ ಹೆರಿಗೆಯ ವೇಳೆಯಲ್ಲಿ ಸಾವನ್ನಪ್ಪುತ್ತಾಳೆ. ಆದರೆ ಕೊನೆಯುಸಿರು ಎಳೆಯವ ಮುಂಚೆ ತನ್ನ ಗಂಡನ ಬಳಿ ತನಗಾಗಿ ಹಿಂದೆಂದೂ ಕಂಡಿರದಂತ ಒಂದು ಅದ್ಭುತವಾದ ಮಹಲೊಂದನ್ನ ನಿರ್ಮಿಸುವಂತೆ ಕೇಳಿಕೊಳ್ಳುತ್ತಾಳೆ. ತನ್ನ ಪತ್ನಿಯ ಅಗಲಿಕೆಯನ್ನ ಸಹಿಸಲಾರದ ಷಹಜಹಾನ್ ಅವಳ ಕೋರಿಕೆಯಂತೆಯೇ ಆಕೆಯ ಸಮಾಧಿಯ ಮೇಲೆ ಈ ತಾಜ್ ಮಹಲ್ ಸೃಷ್ಟಿಸಿದ.

ಮುಮ್ತಾಜ್ ಮರಣಿಸಿದ ಒಂದು ವರ್ಷಗಳ ಕಾಲ ಆಕೆಯ ನೆನಪಿನಲ್ಲಿಯೇ ಕೊರಗುತ್ತ ಕುಳಿತಿದ್ದ ಷಹಜಹಾನ್, ಆಕೆಯ ಕೋರಿಕೆಯಂತೆಯೇ ಇಡೀ ಜಗತ್ತೇ ಕಂಡರಿಯದಂತಹ ಅದ್ಭುತವನ್ನ ಸೃಷ್ಠಿಸಲು ಶುರು ಮಾಡಿದ. 1632ರಲ್ಲಿ ಶುರುಮಾಡಿದ ನಿರ್ಮಾಣ ಕಾರ್ಯ 1648ರವರೆಗೂ ಅಂದರೆ ಸರಿ ಸುಮಾರು ಹದಿನೇಳು ವರ್ಷಗಳ ಕಾಲ ನಡೆಯಿತು. ಅಂತಹದ್ದೊಂದು ಐತಿಹಾಸಿಕ ಸ್ಮಾರಕ ನಿರ್ಮಾಣಕ್ಕಾಗಿ ನಡೆದ ಸಿದ್ದತೆಗಳು ಕೂಡಾ ಏನೂ ಕಡಿಮೆಯದ್ದಾಗಿರಲಿಲ್ಲ. ಸುಮಾರು ಮೂರು ಎಕರೆಯಷ್ಟು ಜಾಗದಲ್ಲಿ ಭೂಶೊಧನೆ ಮಾಡಲಾಗಿತ್ತು. ನದಿ ದಡದಿಂದ ಐವತ್ತು ಮೀಟರ್ ಗಳಷ್ಟು ಎತ್ತರದ ಪ್ರದೇಶವನ್ನು ಸಮತಟ್ಟು ಮಾಡಲಾಯಿತು. ನಿರ್ಮಾಣ ಸ್ಥಳಕ್ಕೆ ಅಮೃತಶಿಲೆ ಮತ್ತಿತರ ವಸ್ತುಗಳನ್ನ ಸಾಗಿಸುವುದಕ್ಕೆಂದೇ ಸುಮಾರು ಹದಿನೈದು ಕಿಲೋಮೀಟರ್ ಉದ್ದದ ಗಟ್ಟಿಯಾದ ರಸ್ತೆಯನ್ನು ನಿರ್ಮಿಸಲಾಯಿತು. ಮರದ ದಿಮ್ಮಿಗಳನ್ನು ಸಾಗಿಸುವುದಕ್ಕೆ ಮೂವತ್ತು ಎತ್ತುಗಳಿಂದ ಎಳೆಯಲಾಗುತ್ತಿದ್ದ ವಿಶೇಷವಾಗಿ ನಿರ್ಮಿಸಿದ ಬಂಡಿಗಳು ಕೆಲಸ ನಿರ್ವಹಿಸುತ್ತಿದ್ದವು. ಉಪನದಿಗಳಿಂದ ನೀರನ್ನ ಎತ್ತಲಿಕ್ಕೆಂದೇ ಪ್ರಾಣಿಗಳನ್ನ ಬಳಸಿಕೊಳ್ಳಲಾಗುತ್ತಿತ್ತು. ಇಡೀ ಕಟ್ಟಡ ನಿರ್ಮಾಣ ಮಾಡಲು ಸೆರೆಯಾಳುಗಳನ್ನ ಬಳಸಿಕೊಳ್ಳಲಾಯಿತೆಂಬ ಮಾಹಿತಿಯೂ ಇದೆ.

ಪ್ರಮುಖ ಆಕರ್ಷಣೆಯಾದ ಪೀಠ ಮತ್ತು ಸಮಾಧಿಯ ನಿರ್ಮಾಣಕ್ಕಾಗಿ ಸುಮಾರು ಹನ್ನೆರಡು ವರ್ಷಗಳು ಹಿಡಿದಿದ್ದವು. 1648ರಲ್ಲಿಯೇ ಸಂಪೂರ್ಣ ಕಟ್ಟಡದ ಕೆಲಸ ಮುಗಿದಿದ್ದರೂ ಸುತ್ತಲಿನ ಉದ್ಯಾನವನ ಮತ್ತಿತರ ಕಟ್ಟಡದ ಭಾಗಗಳನ್ನು ಪೂರ್ತಿ ಮಾಡುವುದಕ್ಕೆ ಐದು ವರ್ಷಗಳು ಹಿಡಿದಿತ್ತು. ಅಂದಾಜು ವೆಚ್ಚವನ್ನ ಕರಾರುವಕ್ಕಾಗಿ ಹೇಳುವುದು ಕಷ್ಟವಾದ್ರು ಆಗಿನ ಕಾಲಕ್ಕೇ ಸುಮಾರು ಮೂವತ್ತೆರಡು ದಶಲಕ್ಷ ರೂಪಾಯಿಗಳೆಂದು ಲೆಕ್ಕ ಹಾಕಲಾಗಿದೆ. ತಾಜ್ಮಹಲ್ ನಿರ್ಮಾಣದಲ್ಲಿ ಕೇವಲ ಭಾರತವಷ್ಟೇ ಅಲ್ಲದೇ ಏಷ್ಯಾದ ಇತರ ಭಾಗಗಳಿಂದಲೂ ಹಲವಾರು ವಸ್ತುಗಳನ್ನು ತರಿಸಿಕೊಳ್ಳಲಾಗಿತ್ತು. ರಾಜಾಸ್ತಾನದಿಂದ ಅಪ್ಪಟ ಬಿಳಿ ಅಮೃತಶಿಲೆಯನ್ನೂ, ಚೀನಾದಿಂದ ಜೇಡ್ ಮತ್ತು ಸ್ಫಟಿಕವನ್ನೂ ತರಿಸಲಾಗಿತ್ತು. ಟಿಬೇಟ್ನಿಂದ ವೈಢೂರ್ಯ, ಶ್ರೀಲಂಕಾದಿಂದ ನೀಲಮಣಿ ಮತ್ತು ಅರೇಬಿಯಾದಿಂದ ಕ್ಯಾಲ್ಸಡೆನಿಯನ್ನು ತರಿಸಿ ಕೊಳ್ಳಲಾಗಿತ್ತು. ಇಪ್ಪತ್ತೆಂಟು ನಾನಾ ವಿಧದ ಅಮೂಲ್ಯ ರತ್ನಗಳನ್ನು ಬಿಳಿ ಅಮೃತಶಿಲೆಯಲ್ಲಿ ಕೊರೆಸಿ ಇಡಲಾಗಿತ್ತು. ಇಂಥದ್ದೊಂದು ಪ್ರೇಮಸೌಧ ನಿರ್ಮಿಸಲು ಶ್ರಮಿಸಿದ ಕಾರ್ಮಿಕರ ಸಂಖ್ಯೆ ಸಾವಿರಗಳ ಲೆಕ್ಕದಲ್ಲಿದೆ. ಉತ್ತರ ಭಾರತದ ಇಪ್ಪತ್ತು ಸಾವಿರ ಕಾರ್ಮಿಕರು ಕಟ್ಟಡ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಸಿರಿಯಾ ಹಾಗೂ ಪರ್ಷಿಯಾದಿಂದ ಲಿಪಿಗಾರರು, ದಕ್ಷಿಣ ಭಾರತದಿಂದ ವಾಸ್ತುಶಿಲ್ಪಿಗಳು, ಬಲೂಚಿಸ್ತಾನದಿಂದ ಕಲ್ಲು ಕಡೆಯುವವರೂ ತಾಜ್ ಮಹಲ್ ನಿರ್ಮಾಣ ಮಾಡುವುದಕ್ಕೆ ಬೆವರು ಸುರಿಸಿದ್ದಾರೆ..

ಇದು ನಮ್ಮೆಲ್ಲರಿಗೂ ಗೊತ್ತಿರುವ ಸತ್ಯ. ಆದರೆ ಇತ್ತೀಚೆಗೆ ಬೇರೆಯದೇ ಕಥೆಗಳು ಹುಟ್ಟಿಕೊಂಡಿವೆ. ಪ್ರೊಫೆಸರ್ ಪಿ.ಎನ್. ಓಕ್ ಪ್ರಕಾರ ತಾಜ್ ಮಹಲ್ ಷಹಜಹಾನ್ ನಿರ್ಮಾಣದ ಕಟ್ಟಡವೇ ಅಲ್ಲ. ಅದೊಂದು ಹಿಂದೂಗಳಿಗೆ ಸೇರಿದ ತೇಜೋಮಹಲ್. ಅಂದರೇ ಶಿವನ ದೇವಾಲಯ ಎಂಬುದು ಅವರ ವಾದ. ಅದಕ್ಕೆ ಸಾಕಷ್ಟು ಪುರಾವೆಗಳನ್ನೂ ಒದಗಿಸುತ್ತಾರೆ. ಕಟ್ಟಡದಲ್ಲಿ ಅಲ್ಲಲ್ಲಿ ಕಂಡುಬರುವ ಓಂ ಗುರುತುಗಳೂ ಸೇರಿದಂತೆ ಹಿಂದೂ ಶೈಲಿಯ ವಾಸ್ತುಗಳನ್ನೂ ಅವರು ಪುರಾವೆಯಾಗಿ ಒದಗಿಸುತ್ತಾರೆ. ಇಂತಹ ವಿತಂಡವಾದಗಳಿಗೆ ಅರ್ಥವಿಲ್ಲ.

ಅದೆಲ್ಲಾ ಇರ್ಲಿ.. ಬೆಚ್ಚಿ ಬೀಳಿಸುವ ಇನ್ನೊಂದು ವಿಚಾರವಿದೆ. ಬ್ರಿಟೀಷರು ತಾಜ್ ಮಹಲ್ ಅನ್ನು ಬಿಕರಿ ಮಾಡಲು ನಿರ್ಧರಿಸಿದ್ದರು ಎಂಬ ಸುದ್ದಿಯದು. ಬ್ರಿಟಿಷರ ಯೋಜನೆಯ ಪ್ರಕಾರವೇ ಎಲ್ಲವೂ ನಡೆದು ಹೋಗಿದ್ದಿದ್ದರೆ, ಇಂದು ನಾವು ಕಾಣುತ್ತಿರುವ ನಮ್ಮ ಹೆಮ್ಮೆಯ ಪ್ರತೀಕ ತಾಜ್ ಮಹಲ್ ನಮ್ಮ ದೇಶದಲ್ಲಿರುತ್ತಿರಲಿಲ್ಲ. ನಿಮಗೆ ಇದನ್ನು ಕೇಳಿ ಆಶ್ಚರ್ಯವಾಗಬಹುದು. ಮುಮ್ತಾಜ್ಳ ನೆನಪಿನ ಸಂಕೇತವಾಗಿ ಕಟ್ಟಿದ್ದ ಈ ಪ್ರೇಮಸೌಧವನ್ನು ಬ್ರಿಟೀಷರು ಮಾರಾಟಕ್ಕಿಟ್ಟಿದ್ದರು. ಬ್ರಿಟೀಷರು ತಾಜ್ ಮಹಲ್ ಕಟ್ಟಡವನ್ನು ಕೆಡವಿ, ಅದನ್ನು ಕಟ್ಟಲು ಬಳಸಲಾಗಿದ್ದ ಅಮೂಲ್ಯವಾದ ಕಲ್ಲುಗಳನ್ನು ತಮ್ಮ ದೇಶಕ್ಕೆ ಸಾಗಿಸುವ ಹುನ್ನಾರ ಮಾಡಿದ್ದರು. ಮಾರ್ಬಲ್ ಶಿಲೆಗಳನ್ನು ಮಾರಿ ತಮ್ಮ ಸರ್ಕಾರದ ಬೊಕ್ಕಸವನ್ನು ತುಂಬಿಕೊಳ್ಳುವ ಉಪಾಯದಲ್ಲಿದ್ದರು.

1828ರಲ್ಲಿ ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ವಿಲಿಯಂ ಬೆಂಟಿಕ್, ಕೋಲ್ಕತ್ತಾದ ವೃತ್ತಪತ್ರಿಕೆಯೊಂದರ ಕೊನೆಯ ಪುಟದಲ್ಲಿ ಈ ಬಗ್ಗೆ ಟೆಂಡರ್ ಕರೆದಿದ್ದ. ಆ ಸಂದರ್ಭದಲ್ಲಿ ಮಥುರಾದ ಉದ್ಯಮಿಯಾದ ಸೇಠ್ ಲಕ್ಷ್ಮಿಚಂದನ್ ತಾಜ್ ಮಹಲ್ ಅನ್ನು ಏಳು ಲಕ್ಷಕ್ಕೆ ಖರೀದಿಸಿದ್ದ. ಆದರೆ ಆನಂತರ ಯಾವುದೋ ಘಟನೆ ಸಂಭವಿಸಿ ಅದನ್ನು ಆತನಿಂದ ಮಾರಲು ಆಗಿರಲಿಲ್ಲ. ಹಾಗಾಗಿ ನಾವಿಂದಿಗೂ ತಾಜ್ ಮಹಲನ್ನು ನಮ್ಮ ದೇಶದಲ್ಲಿ ಹೆಮ್ಮೆಯ ಪ್ರತೀಕವಾಗಿ ಉಳಿಸಿಕೊಂಡಿದ್ದೇವೆ. ತಜ್ಞರ ಅಭಿಮತ ಪ್ರಕಾರ ತಾಜ್ ಮಹಲ್ ಕುರಿತು ಕಾಳಜಿಯಿದ್ದ ಕೆಲವು ಹಳೆ ತಲೆಮಾರಿನ ವ್ಯಕ್ತಿಗಳಿಗೆ ಬ್ರಿಟಿಷ್ ಆಡಳಿತಗಾರರು ಅದನ್ನು ಕೆಡವಿಹಾಕಲು ಯೋಜನೆಯನ್ನು ರೂಪಿಸಿದ್ದರ ಸುಳಿವು ಸಿಕ್ಕಿತ್ತು. ಈ ಮಾಹಿತಿಯು ಲಂಡನ್ ತಲುಪಿತ್ತು. ಲಂಡನ್ ಅಧಿವೇಶನದಲ್ಲಿ ತಾಜ್ ಮಹಲ್ ಹರಾಜಿನ ಕುರಿತು ಹಲವು ಪ್ರಶ್ನೆಗಳೆದ್ದಿದ್ದವು. ಆ ಸಂದರ್ಭದಲ್ಲಿ ಗವರ್ನರ್ ಜನರಲ್ ಲಾರ್ಡ್ ವಿಲಿಯಂ ಬೆಂಟಿಕ್ ತಾಜ್ ಮಹಲ್ ಹರಾಜಿನ ಯೋಜನೆಯನ್ನು ರದ್ದುಪಡಿಸಿದ್ದ.

ಇತಿಹಾಸಕಾರ ಪ್ರೊಫೆಸರ್ ರಾಮ್ನಾಥ್ ತಮ್ಮ `ತಾಜ್ ಮಹಲ್’ ಕೃತಿಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ. ಬ್ರಿಟಿಷ್ ಲೇಖಕ ಹೆಚ್. ಜಿ ಕ್ಯಾನೆಸ್ ತಮ್ಮ `ಆಗ್ರಾ ಆಂಡ್ ನೇಬರ್ ಹುಡ್ಸ್’ ಪುಸ್ತಕದಲ್ಲಿಯೂ ಈ ಕುರಿತು ಪ್ರಸ್ತಾಪಿಸಿದ್ದಾರೆ. ಅಲ್ಲಿಗೆ ತಾಜ್ ಮಹಲನ್ನು ಮಾರಾಟ ಮಾಡಲು ಎಲ್ಲಾ ಕಸರತ್ತುಗಳು ನಡೆದಿತ್ತು ಎನ್ನುವುದಕ್ಕೆ ಪುರಾವೆ ಸಿಗುತ್ತದೆ. ಕೋಲ್ಕತ್ತಾ ಅಂದಿನ ಬ್ರಿಟಿಷ್ ಸರ್ಕಾರದ ರಾಜಧಾನಿಯಾಗಿತ್ತು. ಹಾಗೆಯೇ ಆಗ ಕೋಲ್ಕತ್ತಾ ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿಯೂ ಆಗಿತ್ತು. ತಾಜ್ ಮಹಲ್ ಕಟ್ಟಡವನ್ನು ಮಾರಾಟ ಮಾಡುವುದರ ಕುರಿತಾದ ಜಾಹಿರಾತೊಂದು 1831ನೇ ಇಸವಿಯ ಜುಲೈ 26ರಂದು `ಜನ್ ಬಲ್’ ಎಂಬ ಆಂಗ್ಲ ದಿನಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿತ್ತು. ಹಾಗಾಗಿ ತಾಜ್ ಮಹಲನ್ನು ಮಾರಾಟ ಮಾಡುವ ಎರಡನೇ ಪ್ರಯತ್ನವಾಗಿ ಈ ಸುದ್ದಿ ಪ್ರಕಟವಾಗಿತ್ತು.

Taj

ಹಲವು ಬಾರಿ ಹರಾಜಿಗೆ ಇಟ್ಟರು ತಾಜ್ ಮಹಲ್ ಅನ್ನು ಭಾರತ ಬಿಟ್ಟು ಕದಲಿಸುವ ಯೋಜನೆ ಮಾತ್ರ ಕೈಗೂಡಲಿಲ್ಲ. ಆದರೂ ಅನೇಕ ಹಳೆಯ ಕಲಾತ್ಮಕವಾದ ವರ್ಣಚಿತ್ರಗಳು ಹಾಗೂ ಅಮೂಲ್ಯವಾದ ಕೆತ್ತನೆಯ ಶೀಲೆಗಳನ್ನು ವಿಲಿಯಂ ಬೆಂಟಿಕ್ನು ಹರಾಜು ಹಾಕಿದ್ದ. ಕೆಲವೊಂದು ಶಿಲೆಗಳನ್ನು ಲಾರ್ಡ್ ಹೆಸ್ಟಿಂಗ್ ಲಂಡನ್ ಗೆ ಕಳುಹಿಸಿಕೊಟ್ಟ. 1857ರ ಭಾರತದ ಸ್ವಾತಂತ್ರ್ಯ ದಂಗೆಯ ಸಮಯದಲ್ಲಿ ಬ್ರಿಟಿಷ್ ಸೈನಿಕರು ಮತ್ತು ಸರ್ಕಾರಿ ಅಧಿಕಾರಿಗಳು ತಾಜ್ ಮಹಲ್ ಗೋಡೆಗಳಿಂದ ಅಮೂಲ್ಯ ರತ್ನಗಳನ್ನು ಮೋಸದಿಂದ ಕದ್ದೊಯ್ದಿದ್ದರು.

19ನೇ ಶತಮಾನ ಅಂತ್ಯದ ವೇಳೆಗೆ ಕಟ್ಟಡ ದುರಸ್ತಿ ಕಾಣದ ಹಿನ್ನೆಲೆ ಸ್ಮಾರಕದ ಕೆಲ ಭಾಗಗಳು ಕುಸಿದು ಬಿದ್ದಿದ್ದವು. ಬ್ರಿಟೀಷರ ಕುತಂತ್ರದಿಂದ ತಾಜ್ ಮಹಲ್ ಅಂದವನ್ನು ಹಾಳುಗೆಡವಲಾಗಿತ್ತು. 1908ರಲ್ಲಿ ಬ್ರಿಟಿಷ್ ವೈಸ್ರಾಯ್ ಲಾರ್ಡ್ ಕರ್ಜನ್ ಭಾರಿ ಪ್ರಮಾಣದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಿದ್ದ. ಅದಾಗಿಯೂ ಸುಮಾರು 360ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ತಾಜ್ ಮಹಲ್ ಶ್ವೇತ ಗೋಡೆಗಳಲ್ಲಿ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಹಾಗೆ ಪ್ರೇಮಸೌಧದ ಪರಿಶುದ್ಧ ಬಿಳುಪು ದಿನೇ ದಿನೆ ಕಳೆಗುಂದುತ್ತಿದೆ.

ಇವೆಲ್ಲಾ ಇತಿಹಾಸವಾದರೇ, ಈ ಪ್ರೀತಿ ಮಹಲನ್ನು ಭಾವನಾತ್ಮಕವಾಗಿ ನೋಡಬೇಕಾಗುತ್ತದೆ. ವಿಶ್ವವಿಖ್ಯಾತ ಪ್ರೇಮಸೌಧ ತಾಜ್ ಮಹಲ್ ನೆತ್ತಿಮೇಲೆ ಕರಿ ಮೋಡಗಳು ಆವರಿಸಿದ್ರೆ, ಇತ್ತ ಬೆಳದಿಂಗಳ ಬೆಳಕಲ್ಲಿ ಮೈಚೆಲ್ಲಿ ನಿಂತಿರುವ ಈ ಮಹಲ್ ಅನ್ನು ನೋಡುವುದೇ ಪರಮಾನಂದ. ದೇಶ ವಿದೇಶದ ಪ್ರವಾಸಿಗರಿಗೆ ಛಾಯಾಗ್ರಹಕರಿಗೆ ಇದು ನೆಚ್ಚಿನ ತಾಣ. ವಾರ್ಷಿಕ 2-3 ದಶಲಕ್ಷ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಪ್ರವಾಸಿಗರ ದಂಡು ಜಾಸ್ತಿಯಾಗುತ್ತಿದ್ದಂತೆ ಸ್ಮಾರಕದ ಸ್ಥಿರತೆಗೆ ಧಕ್ಕೆ ಬರುತ್ತಿದೆ. ವಾಯು ಮಾಲಿನ್ಯ ಜಾಸ್ತಿಯಾದಂತೆ ತಾಜ್ ಮಹಲ್ ತನ್ನ ಶುಭ್ರ ಬಿಳಿ ಬಣ್ಣವನ್ನು ಕಳೆದುಕೊಳ್ಳುತ್ತಿದೆ.

ಪ್ರವಾಸಿಗರ ಕಣ್ಮನ ಸೆಳೆಯುತ್ತಿರುವ ಪ್ರೇಮಸೌಧ ಮಂಕಾಗುತ್ತಿದೆ ಎಂದು ಹಿಂದೊಮ್ಮೆ ತುಳಸಿ ಗಿಡಗಳ ಮೊರೆಹೋಗಲಾಗಿತ್ತು. ಕಟ್ಟಡದ ಸುತ್ತಮುತ್ತ ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ವಾತಾವರಣ ಶುದ್ದಿಗೊಳಿಸಲು ಪವಿತ್ರ ಸಸ್ಯ ಎನಿಸಿರುವ ತುಳಸಿಯನ್ನು ನೆಡಲಾಗಿದೆ. 1983ರಲ್ಲೇ ತಾಜ್ ಮಹಲ್ ಅನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಿ ಮಾನ್ಯ ಮಾಡಿತ್ತು. ಹಾಗಾಗಿ ಇದನ್ನು ಉಳಿಸೋದು, ಬೆಳೆಸೋದು ನಮ್ಮ ಕೈಯ್ಯಲ್ಲಿದೆ. ವಾಯು ಮಾಲಿನ್ಯ ಜಾಸ್ತಿಯಾಗುತ್ತಿರುವ ಹಿನ್ನೆಲೆ ಸಂಕೀರ್ಣದ ಸಮೀಪ ಮಾಲಿನ್ಯಕಾರಕ ಪ್ರವಾಸಿ ವಾಹನಗಳನ್ನು ನಿಷೇಧಿಸಲಾಗಿದೆ.

ಅತಿಯಾದ ಕೈಗಾರಿಕೆಗಳ ಸ್ಥಾಪನೆ ಹಾಗೂ ವಾಹನಗಳು ಉಗುಳುವ ಹೊಗೆಯಿಂದಾಗಿ ಐತಿಹಾಸಿಕ ತಾಜ್ ಮಹಲ್ ಪರಿಸರದಲ್ಲಿ ಸಮಸ್ಯೆಗಳು ಕಾಣಿಸುತ್ತಿದೆ. ಸ್ಮಾರಕಕ್ಕೆ ಆಗುತ್ತಿರುವ ಧಕ್ಕೆ ತಪ್ಪಿಸಲು ಉತ್ತರಪ್ರದೇಶ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆಯಾದರು ಗಿಟ್ಟುತ್ತಿಲ್ಲ. ತುಳಸಿಗಿಡ ಔಷಧಿಯ ಸಸ್ಯ. ಇದು ಅತ್ಯಧಿಕ ಪ್ರಮಾಣದಲ್ಲಿ ಹೊರಸೂಸುವ ಆಮ್ಲಜನಕ ಮಾರ್ಬಲ್ನಿಂದ ನಿರ್ಮಾಣವಾಗಿರುವ ತಾಜ್ ಮಹಲ್ ಗೆ ಆಗುತ್ತಿರುವ ಧಕ್ಕೆ ತಡೆಹಿಡಿಯಲಿದೆ ಎಂಬ ಕಾರಣಕ್ಕೆ ತುಳಸಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.

ತುಳಸಿ ಗಿಡವನ್ನೇನೋ ಸರ್ಕಾರ ನೆಡಿಸಿತ್ತು. ಆದರೆ ಅದರ ಪ್ರಯೋಜನ ಅಷ್ಟರಮಟ್ಟಿಗೆ ಯಶ ಕಾಣಲಿಲ್ಲ. ಹಾಗಾಗಿ ಯುಪಿ ಸರ್ಕಾರ ಮತ್ತೆ ಹೊಸ ಉಪಾಯ ಮಾಡಿತು. ಪರಿಸರ ಮಾಲಿನ್ಯದ ಬಿಸಿ ಸ್ಮಾರಕಕ್ಕೆ ತಟ್ಟಿದ್ದರಿಂದ ಹಳದಿ ಬಣ್ಣಕ್ಕೆ ತಿರುಗುತ್ತಿತ್ತು ಶಿಲೆಯ ಬಣ್ಣ. ಮಹಲ್ನ ಬಣ್ಣ ಉಳಿಸಲಿಕ್ಕಾಗಿ ಪಾಕಿಸ್ತಾನದ ಮಣ್ಣಿನ ಮೊರೆ ಹೋಗಲಾಗಿತ್ತು. ವಾಯುಮಾಲಿನ್ಯ ವಿಪರೀತ ಜಾಸ್ತಿಯಾಗಿರುವುದರಿಂದ ತಾಜ್ಮಹಲ್ನ ಶಿಲೆಗಳು ತನ್ನ ನೈಜ ಬಣ್ಣ ಕಳೆದುಕೊಳ್ಳುತಿದೆ. ಹಾಗಾಗಿ ಭಾರತೀಯ ಪುರಾತತ್ವ ಇಲಾಖೆ ತಾಜ್ ಮಹಲ್ ಮುಲ್ತಾನಿನ ಮಣ್ಣು ಬಳಿಯಲು ಮುಂದಾಗಿತ್ತು. ಅಮೃತ ಶಿಲೆಗಳ ಮೇಲೆ ಮುಲ್ತಾನಿ ಮಿಟ್ಟಿಯನ್ನು ಹಚ್ಚಿ ಹಳದಿ ಬಣ್ಣವನ್ನು ತೆಗೆಯುವ ಯೋಜನೆ ಹಾಕಿತ್ತು.

ಮುಲ್ತಾನಿ ಮಿಟ್ಟಿ ಲೇಪನ ಹಾಕಿ ಬಳಿಕ ಡಿಸ್ಟಿಲ್ ವಾಟರ್ ನಿಂದ ಗೋಡೆಗಳನ್ನು ತೊಳೆಯಲಾಗಿತ್ತು. 1994, 2001 ಮತ್ತು 2008ರಲ್ಲಿ ತಾಜ್ ಮಹಲ್ ಇದೇ ಮುಲ್ತಾನಿ ಮಿಟ್ಟಿ ಚಿಕಿತ್ಸೆಯನ್ನು ನೀಡಲಾಗಿತ್ತು…! ಆದರೆ ಇದು ಶಾಶ್ವತ ಪರಿಹಾರವಾಗುವ ಸಾಧ್ಯತೆ ಕಡಿಮೆ. ಸುಪ್ರೀಂ ಕೋರ್ಟ್ ಈ ಹಿಂದೆ ಸುಮಾರು 200ಕ್ಕೂ ಹೆಚ್ಚು ಕೈಗಾರಿಕಾ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಿ ಪರಿಸರ ಮಾಲಿನ್ಯ ಮಾಡದಂತೆ ಎಚ್ಚರಿಕೆ ನೀಡಿತ್ತು. ಆದರೆ ಆಗ್ರಾದಲ್ಲಿ ಯಮುನಾ ನದಿಯನ್ನು ಕಾರ್ಖಾನೆಗಳು ಚರಂಡಿ ನೀರಿನಂತೆ ಕಲುಷಿತ ಮಾಡಿವೆ. ಹಾಗಾಗಿ ಮಾಲಿನ್ಯ ನಿಯಂತ್ರಣವಾಗದೆ ತಾಜ್ ಮಹಲ್ ಜತೆಗೆ ಸುತ್ತಲಿನ ಪರಿಸರವೂ ಹಾಳಾಗುತ್ತಿದೆ.

ಒಟ್ಟಿನಲ್ಲಿ ಷಹಜಹಾನ್ ಕಟ್ಟಿಸಿದ ಈ ಪ್ರೇಮಸೌಧ, ಭಾರತದ ಹೆಮ್ಮೆಯ ಪ್ರತೀಕ. ಅದನ್ನು ಉಳಿಸುವುದು ನಮ್ಮ ಹೊಣೆ. ಈ ಪ್ರೇಮ ಮಹಲ್ಲಿನ ಮೇಲೆ ಧರ್ಮದ ಪೇಂಟ್ ಬಳಿಯುವುದೂ ತರವಲ್ಲ.

  •  ರಾ ಚಿಂತನ್.

POPULAR  STORIES :

ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!

ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?

ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!

ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!

ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’

`ಚಾನೆಲ್ ಸಂಪಾದಕ ಜೈಲುಪಾಲು..!?’ ಯಾರು ಆ ಸಂಪಾದಕ..?

ಈ ವೀಡಿಯೋ ನೋಡಿದ್ರೆ ನಿಮ್ಮ ತಲೆ ಕೆಟ್ಟು ಹೋಗುತ್ತೆ..! ಇದು ರುಂಡ ಮುಂಡ ಬೇರೆಯಾದ ಜೀವಂತ ಮೀನಿನ ಕಥೆ…

ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?

ಅಪಘಾತವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡ್ತೀರಾ..? ಅಪಲೋಡ್ ಮಾಡಿದ್ರೇ ಜೈಲ್ ಗ್ಯಾರಂಟಿ..!?

ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’

ಸಿಯಾಚಿನ್ ಎಂಬ ಸಾವಿನ ಕಣಿವೆ..! ರಣಚಳಿಗೆ ದೇಹ ಮರಗಟ್ಟಿ ಪುಡಿಯಾಗುತ್ತದೆ..!

Share post:

Subscribe

spot_imgspot_img

Popular

More like this
Related

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...