ಬಲಾಢ್ಯ ದೇಹವೈಕರಿ, ಎದೆ ಝಲ್ಲೆನಿಸುವ ಡೈಲಾಗ್, ವಿಲನ್ ಗಳ ಪಾಲಿಗೆ ಈತ ಯಮನೂ ಹೌದು, ಭಾವುಕ ಮನಸ್ಸುಗಳಿಗೆ ಹಿಡಿದ ಕನ್ನಡಿಯೂ ಹೌದು. ಬಹುಭಾಷ ನಟನೊಬ್ಬನ ಅಂತ್ಯ ಅಷ್ಟೊಂದು ಯಾತನಮಯ ಆಗಬಾರದಿತ್ತು, ಆಗಿಹೋಯಿತು. ಅವರೀಗ ಇಲ್ಲ, ಅದೇ ವಾಸ್ತವ..!
ಟೈಗರ್ ಪ್ರಭಾಕರ್, ಹೆಸರಿನಲ್ಲೇ ಹುಲಿ ಇದೆ. ಮನಸ್ಸು ಮಾತ್ರ ಮಗುವಿನಂಥದ್ದು. ಪ್ರಭಾಕರ್ ನಟಿಸಿದ ಚಿತ್ರಗಳಲ್ಲಿ ಹೆಚ್ಚಾಗಿ ಅವರು ಮಾಡಿದ್ದೆಲ್ಲಾ ಕೇಡಿ ಪಾತ್ರಗಳೇ…! ಇವು ಅವರ ಚಿತ್ರಯಾನದ ಆರಂಭಿಕ ದಿನಗಳು. ಮುಳ್ಳು ಮುಖ, ದೊಡ್ಡ ಮೀಸೆ, ಗುಂಗುರು ಕೂದಲು, ತಿಂದು ಹಾಕುವಂತಹ ನೋಟ, ವಜ್ರಮುನಿಯಂತೆ ಪ್ರಭಾಕರ್ ಕೂಡ ಒಂದು ಕಾಲದಲ್ಲಿ ವಿಲನ್ ಕ್ಯಾರೆಕ್ಟರ್ಗೆ ಸೂಟೆಬಲ್ ಆಗಿದ್ದರು. ಆದರೆ ಅಪ್ಪಟ ಕಲಾವಿದ ಯಾವುದೇ ಒಂದು ವರ್ಗಕ್ಕೆ ಎಷ್ಟು ದಿನ ಸಲ್ಲುತ್ತಾರೆ ಹೇಳಿ..? ಅದರಲ್ಲೂ ಪ್ರಭಾಕರ್..!. ಖಳನಟ, ನಾಯಕನ ಗೆಟಪ್ ಧರಿಸಿದ್ದ.
ಇನ್ನು ಪ್ರಭಾಕರ್ ಜೀವನಗಾಥೆಯನ್ನು ಹೇಳುವ ಮುನ್ನ ಅವರ ಬದುಕಿನ ಮಜಲುಗಳನ್ನ ವಿವರಿಸಲೇಬೇಕು. ಶಿವಮೊಗ್ಗದ ಸಾಗರದಲ್ಲಿ ಅರವತ್ತಾರು ವರ್ಷಗಳ ಹಿಂದೆ ಜನಿಸಿದ ಪ್ರಭಾಕರ್ ಪಿಳ್ಳೆಯಾರ್ ಜಾತಿಗೆ ಸೇರಿದವರು. ಇವರ ತಂದೆ ಸುಂದರ್ ರಾಜ್ಗೆ ಸ್ವಂತಕ್ಕೊಂದು ಸೈಕಲ್ ಷಾಪ್ ಇತ್ತು. ತಾಯಿ ಡೆಬೋರಾ ಮೂಲತಃ ಲಿಂಗಾಯಿತರಾದರೂ, ಸ್ವತಂತ್ರಪೂರ್ವದಲ್ಲಿ ಹಾವಳಿಯಿಟ್ಟ ಕ್ರೈಸ್ತರ ಆಮಿಷಕ್ಕೆ ಕಟ್ಟುಬಿದ್ದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಸುಂದರ್ ರಾಜ್- ಡೆಬೋರಾ ದಂಪತಿಗಳು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಅವರ ದಾಂಪತ್ಯಕ್ಕೆ ಕುರುಹಾಗಿ ಮೊದಲು ಹುಟ್ಟಿದ್ದು ಹೆಣ್ಣುಮಗಳು; ಹೆಸರು ಲಲಿತ, ಎರಡನೇಯವನು ಗಂಡು ಮಗ, ಹೆಸರು ಪ್ರಭಾಕರ್. ಮೂರನೇಯದಾಗಿ ಹೆಣ್ಣುಮಗು ಜನಿಸಿದರೂ ಅದು ಬದುಕುಳಿಯಲಿಲ್ಲ.
ಯಾವುದೇ ಮಗು ಬೆಳೆಯುವ ವಾತಾವರಣಕ್ಕೆ ಪೂರಕವಾದ ಗುಣಗಳನ್ನು ಹೊಂದಿರುತ್ತವೆ ಎನ್ನುವುದು ಜಾಗತಿಕ ಸತ್ಯ. ಪ್ರಭಾಕರ್ ವಿಚಾರದಲ್ಲೂ ಅದು ಸುಳ್ಳಾಗಲಿಲ್ಲ. ಪ್ರಭಾಕರ್ ಹೆತ್ತವರು ಕಾಲಕ್ರಮೇಣ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೂ ಮೂಲತಃ ಹಿಂದೂಗಳಾಗಿದ್ದರಿಂದ ಅವರು ಎಲ್ಲಾ ಧರ್ಮದ ದೇವರನ್ನು ಆರಾಧಿಸುತ್ತಿದ್ದರು. ಆ ಕಾರಣಕ್ಕೇನೋ ಪ್ರಭಾಕರ್ ಎಲ್ಲಾ ಧರ್ಮವನ್ನು ಪ್ರೀತಿಸುತ್ತಿದ್ದರು.
ಪ್ರಭಾಕರ್ ಬಾಲ್ಯವನ್ನು ಕಳೆದದ್ದು ಬೆಂಗಳೂರಿನ ಫ್ರೆಜರ್ಟೌನ್ನ ನಸರ್್ ಕ್ವಾಟ್ರ್ರಸ್ನಲ್ಲಿ. ಅವರ ಹೆತ್ತವರು ತೀರಾ ಬಡತನದ ಮದ್ಯೆಯೂ ಇಂಗ್ಲೀಷ್ ಕಾನ್ವೆಂಟ್ ನಲ್ಲಿ ಅವರನ್ನು ಓದಿಸಿದ್ದರು. ಅಮ್ಮನಿಗೆ ಪ್ರಭಾಕರ್ ಮೇಲೆ ಇನ್ನಿಲ್ಲದ ಪ್ರೀತಿ. ತಿಂಡಿಪೋತ ಮಗನ ಅದೃಷ್ಟವೆಂದರೇ ಹಾಗೇ, ಅಮ್ಮನ ಅಕ್ಕರೆಯಿಂದ ದಷ್ಟ-ಪುಷ್ಟವಾಗಿ ಬೆಳೆದ ಈ ದೈತ್ಯ ಚಿತ್ರರಂಗವನ್ನು ಕೆಣಕಿದ್ದ. ಮನೆಯಲ್ಲಿ ತಮಿಳು ಮಾತನಾಡುತ್ತಿದ್ದರಿಂದ ಪ್ರಭಾಕರ್ಗೆ ಕನ್ನಡ ಅಷ್ಟಾಗಿ ಬರುತ್ತಿರಲಿಲ್ಲ. ಮುಂದೇ ಅದೆಷ್ಟು ಇಷ್ಟಪಟ್ಟು ಕನ್ನಡ ಕಲಿತುಬಿಟ್ಟರೆಂದ್ರೆ ಕನ್ನಡದಲ್ಲಿ ಅವರ ಡೈಲಾಗ್ ಕೇಳುವುದಕ್ಕೆ ಸೊಗಸಾಗಿತ್ತು.
ಪ್ರಭಾಕರ್ ಬಗ್ಗೆ ನಿಮಗೆ ಗೊತ್ತಿಲ್ಲದ ಇನ್ನೊಂದು ವಿಚಾರವೆಂದರೇ ಪ್ರಭಾಕರ್ ಅಡುಗೆ ಮಾಡೋದ್ರಲ್ಲಿ ಎತ್ತಿದ ಕೈ. ಅದರಲ್ಲೂ ಮಾಂಸದ ಅಡುಗೆಯನ್ನ ಚಕಾಚಕ್ ಅಂತ ಮಾಡಿ ಮುಗಿಸುತ್ತಿದ್ದರು. ಚಿಕನ್, ಮಟನ್ ಬಿರಿಯಾನಿ ಪ್ರಭಾಕರ್ ಕೈಯ್ಯಲ್ಲಿ ಅದ್ಭುತವಾಗಿ ರೂಪುಗೊಳ್ಳುತ್ತಿತ್ತು. ದೇಹರ್ದಾಢ್ಯಕ್ಕೆ ತಕ್ಕಂತೆ ಪ್ರಭಾಕರ್ಗೆ ಜಿಮ್ಗೆ ಹೋಗುವ ಖಯಾಲಿಯೂ ಇತ್ತು. ಎಷ್ಟರ ಮಟ್ಟಿಗೆ ಅಂದ್ರೆ ನೂರು ಡಿಗ್ರಿ ಮೀರಿದ ಜ್ವರ ಭಾದಿಸುತ್ತಿದ್ದರು, ಇವರು ಜಿಮ್ಗೆ ಹೋಗುವುದನ್ನು ನಿಲ್ಲಿಸಿರಲಿಲ್ಲ.
ಪ್ರಭಾಕರ್ ಒಮ್ಮೊಮ್ಮೆ ಅದೆಂಥಾ ಹಠಕ್ಕೆ ಬೀಳುತ್ತಿದ್ದರೆಂದ್ರೆ, ಎಂಥಾ ಪರಿಸ್ಥಿತಿಯಲ್ಲೂ ತನಗೆ ಬೇಕೆನ್ನಿಸಿದ್ದನ್ನು ದಕ್ಕಿಸಿಕೊಳ್ಳದೆ ಇರುತ್ತಿರಲಿಲ್ಲ. ಅದಕ್ಕೊಂದು ತಾಜಾ ಉದಾಹರಣೆ ಅಂದ್ರೆ, ಅಪ್ಪ ಸೈಕಲ್ ಶಾಪ್ ಇಟ್ಟುಕೊಂಡು, ದೈನಂದಿನ ಜೀವನಕ್ಕೂ ಕಷ್ಟಪಡುತ್ತಿರುವಾಗ ಮಗ ಪ್ರಭಾಕರ, ನನಗೊಂದು ಬುಲ್ಲೆಟ್ ಬೈಕ್ ಕೊಡಿಸು ಅಂತ ಹಠಕ್ಕೆ ಬಿದ್ದಿದ್ದರು. ಅಪ್ಪ ಸುಮ್ಮನಾದರು, ಆದರೆ ಅಮ್ಮನನ್ನು ಸುಮ್ಮನಾಗಲು ಬಿಡಲಿಲ್ಲ ಪ್ರಭಾಕರ್. ಕೊನೆಗೂ ಗೆದ್ದಿದ್ದು ಮಗನ ಹಠವೇ. ಸಾಲ-ಸೋಲ ಮಾಡಿ ಮಗನಿಗೆ ಬುಲ್ಲೆಟ್ ಕೊಡಿಸುವಾಗ ಅಮ್ಮ ಡೆಬೋರಾ ಫುಲ್ ಸುಸ್ತಾಗಿದ್ದರು. ಆದರೆ ಅದೇ ಬುಲ್ಲೆಟ್ ಮೇಲೆ ಕಟ್ಟುಮಸ್ತಾದ ಮಗ ಹೋಗುತ್ತಿರುವುದನ್ನು ನೋಡಿ ನಿಟ್ಟುಸಿರು ಬಿಟ್ಟಿತ್ತು ಆ ತಾಯಿ ಹೃದಯ! ಮಗನ ದೃಷ್ಟಿ ತೆಗೆಯೋದನ್ನ ಯಾವತ್ತೂ ಮರೆಯಲಿಲ್ಲ ಆ ಮಹಾತಾಯಿ. ಅದು ಪ್ರತಿ ಸಂಜೆಯ ನಿರಂತರ ಪ್ರಕ್ರಿಯೇ..!
ಶೋಕಿಗೆ ಯಾವ ಬಡತನದ ಅಂಕುಶ! ಆದರೆ ಅದು ಕೆಲವೇ ದಿನಗಳಿಗೆ ಸೀಮಿತ. ಅದನ್ನು ಬಡತನದ ಶಾಪ ಎಂದರೂ ಸುಳ್ಳಲ್ಲ. ಬದುಕು ಹಂತಹಂತಕ್ಕೂ ಮಗ್ಗಲು ಬದಲಾಯಿಸಲೇಬೇಕು. ಅಕ್ಕ ಲಲಿತಾ ಸೆಕೆಂಡ್ ಪಿಯುಸಿ ಮುಗಿಸಿ ಪರಿಚಾರಿಕೆಯಾದಳು. ಗುಂಡ್ರಗೋವಿ ಮಗನಿಗೆ ಸಿಕ್ಕಿದ್ದು ಅಗ್ರಿಕಲ್ಚರ್ ಇನ್ಸ್ ಟಿಟ್ಯೂಟ್ನಲ್ಲಿ ಗುಮಾಸ್ತನ ಕೆಲಸ. ನಿಜ, ಮುಂದೊಂದು ದಿನ `ಟೈಗರ್’ ಎನಿಸಿಕೊಂಡ ಈ ಅಭಿಜಾತ ಕಲಾವಿದ ತನ್ನ ವೃತ್ತಿ ಜೀವನದಲ್ಲಿ ಮೊದಲು ಗುಮಾಸ್ತನಾಗಿ ಕೆಲಸ ಆರಂಭಿಸಿದ್ದರು.
ಅಗ್ರಿಕಲ್ಚರ್ ಇನ್ಸ್ಟಿಟ್ಯೂಟ್ನಲ್ಲಿ ಕೆಲಸ ಸಿಕ್ಕಿದ ನಂತರ ಬುಲ್ಲೆಟ್ ರೊಂಯ್ಗುಡಿಸುತ್ತ ಕೆಲಸಕ್ಕೆ ಹೋಗಿಬರುತ್ತಿದ್ದ ಪ್ರಭಾಕರ್ಗೆ ನಾಲ್ಕು ಗೋಡೆಗಳ ಮಧ್ಯೆ ಕುಂತು ಲೆಕ್ಕ ಬರೆಯೋದು ಪಥ್ಯವಾಗಲಿಲ್ಲ. ಮಾಲೀಕನ ಜೊತೆ ಕಿರಿಕ್ಕು ತೆಗೆದರು. ಅವರು ಕೆಲಸದಿಂದ ಕಿತ್ತುಹಾಕಿದರು. ಮಗನ ಸಬೂಬು ಕೇಳದ ತಾಯಿ ಮತ್ತೆ ಅವರ ಕೈಕಾಲು ಹಿಡಿದು ಅದೇ ಕೆಲಸ ಕೊಡಿಸಿದರು. ಈ ಮಧ್ಯೆ ಪ್ರಭಾಕರ್ ಕಂಠಪೂರ್ತಿ ಕುಡಿಯುತ್ತಿದ್ದರು. ಮಧ್ಯರಾತ್ರಿಯವರೆಗೂ ಬಾರ್ ನಲ್ಲಿ ಸ್ನೇಹಿತರ ಜೊತೆ ಕಾಲ ಕಳೆಯುತ್ತಿದ್ದರು. ಆದರೆ ಅದೆಷ್ಟೇ ಹೊತ್ತಾದ್ರೂ ಮನೆಗೆ ಬಂದೇ ಊಟ ಮಾಡುತ್ತಿದ್ದರು. ಅಮ್ಮನೇ ಊಟ ಬಡಿಸಬೇಕಿತ್ತು. ಅಷ್ಟರ ಮಟ್ಟಿಗೆ ಅನ್ಯೋನ್ಯವಾಗಿತ್ತು ಅಮ್ಮ-ಮಗನ ಸಂಬಂಧ.
ಇಲ್ಲೊಂದು ವಿಚಾರವನ್ನ ಹೇಳಬೇಕು. ಪ್ರಭಾಕರ್ ಅವರ ಕಾಲಿಗೆ ರಕ್ತ ಸರಬರಾಜು ನಿಂತು ಕೊಳೆಯುವ ಮೂಲಕ ಅವರ ಸಾವಿನ ದಿನಗಳು ಶುರುವಾಗಿತ್ತು. ಕಾಲು ಕತ್ತರಿಸದಿದ್ದರೇ ಬದುಕಲ್ಲ ಎಂದರೂ ಕೇಳದೇ ಸಾವಿಗೆ ಗೋಣೊಡ್ಡಿದ್ದರು. ಆದರೆ ದಶಕಗಳ ಹಿಂದೆ ಅಂಥದ್ದೊಂದು ಪರಿಸ್ಥಿತಿ ಅವರಿಗೆ ತಂದೊಡ್ಡಿದ್ದು, ಬೆಂಗಳೂರಿನ ಸೇಂಟ್ ಮಾರ್ಥಸ್ ಆಸ್ಪತ್ರೆಯ ವೈದ್ಯ!. ಅದಕ್ಕೆ ಪೂರಕವಾದ ಘಟನೆಯೊಂದು ಅವತ್ತು ನಡೆದಿತ್ತು. ಅದೊಂದು ದಿನ ಕಂಠಪೂರ್ತಿ ಕುಡಿದು ಪ್ರಭಾಕರ್ ಮನೆಗೆ ವಾಪಾಸಾಗುತ್ತಿದ್ದಾಗ ರಸ್ತೆಯ ಗುಂಡಿಗೆ ಬೈಕ್ ಚಕ್ರ ಸಿಲುಕಿ ಅಪಘಾತ ಸಂಭವಿಸಿತ್ತು. ಬಿದ್ದ ರಭಸಕ್ಕೆ ಪ್ರಭಾಕರ್ ಕಾಲಿನ ಮೂಳೆ ಮುರಿದಿತ್ತು. ನೈಟ್ ಬೀಟ್ ಪೊಲೀಸರು ಪ್ರಭಾಕರ್ ಅವರನ್ನು ಸೇಂಟ್ ಮಾರ್ಥಸ್ ಆಸ್ಪತ್ರೆಗೆ ಸೇರಿಸಿದ್ದರು. ಪ್ರಭಾಕರ್ ಹೆತ್ತವರು ಆಸ್ಪತ್ರೆಗೆ ಓಡಿದರು. ಆದರೆ ಸೇಂಟ್ ಮಾರ್ಥಸ್ ಆಸ್ಪತ್ರೆಯ ವೈದ್ಯ, ಮುರಿದ ಮೂಳೆ ಜೋಡಿಸಲು ಲಂಚ ಕೇಳಿದ್ದ. ಆತನಿಗೆ ಲಂಚ ಭರಿಸುವಷ್ಟು ಸಶಕ್ತರಾಗದ ಪ್ರಭಾಕರ್ ಹೆತ್ತವರ ಮೇಲೆ ಕೋಪಗೊಂಡ ವೈದ್ಯ, ಕಾಲಿಗೆ ಬೇಕಾಬಿಟ್ಟಿ ಹೊಲಿಗೆ ಹಾಕಿದ್ದ. ಹೀಗಾಗಿ ಕಾಲಿನ ರಕ್ತನಾಳ ಕಟ್ಟಾಗಿತ್ತು. ತುಂಡಾದ ರಕ್ತನಾಳವನ್ನು ಸರಿಪಡಿಸಲಾಗದೇ ಬ್ಯಾಡೇಜ್ ಹಾಕಿ ಸುಮ್ಮನಾಗಿದ್ದ ಆ ಕಳ್ಳ ವೈದ್ಯ. ಪ್ರಭಾಕರ್ ಕಾಲಿನಲ್ಲಿ ರಕ್ತಸ್ರಾವ ಶುರುವಾಗಿತ್ತು. ವಿಚಾರಿಸಿದಾಗ ವೈದ್ಯನ ನಿರ್ಲಕ್ಷ್ಯ ಗೊತ್ತಾಗಿತ್ತು, ಅವನ ಹತ್ತಿರ ಗಲಾಟೆ ಮಾಡಿದ ನಂತರ ಬೇರೆ ಡಾಕ್ಟರ್ ಬಳಿ ತೋರಿಸಿ ರಕ್ತಸ್ರಾವ ನಿಲ್ಲಿಸಲಾಯಿತು. ಆದರೆ ಜೀವನದುದ್ದಕ್ಕೂ ಪ್ರಭಾಕರ್ಗೆ ಆ ಕಾಲಿನ ಊನ ಮಾಯಲೇ ಇಲ್ಲ, ಕೊನೆಗೊಂದು ದಿನ ಅದೇ ಮೃತ್ಯುವಾಗಿತ್ತು.
ಆ ಕಾಲಕ್ಕೆ ಕನ್ನಡಚಿತ್ರಗಳು ಅಂತರಾಷ್ಟ್ರಿಯ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು. ಒಂದರ ಹಿಂದೆ ಒಂದು ಪೈಪೋಟಿಗೆ ಬಿದ್ದಂತೆ ಅತ್ಯುತ್ತಮ ಚಿತ್ರಗಳು ಜನ್ಮ ತಾಳುತ್ತಿದ್ದವು. ಈ ಹೊತ್ತಿಗೆ ನಟ, ನಿರ್ಮಾಪಕ, ನಿರ್ದೇಶಕ ಎಂ.ಪಿ ಶಂಕರ್ ಕಾಡಿನ ರಹಸ್ಯ ಚಿತ್ರದ ತಯಾರಿಯಲ್ಲಿದ್ದರು. ಆ ಚಿತ್ರಕ್ಕೆ ಅತ್ಯುತ್ತಮ್ಮ ದೇಹರ್ದಾಢ್ಯಪಟುಗಳ ಅವಶ್ಯಕತೆಯಿತ್ತು. ಸಹಕಲಾವಿದರನ್ನು ಪೂರೈಸುತ್ತಿದ್ದವನಿಗೆ ಆ ಕೆಲಸ ವಹಿಸಿಕೊಟ್ಟರು. ಆತ ಬೆಂಗಳೂರಿನ ಫ್ರೆಜರ್ಟೌನ್ ನಿವಾಸಿ. ಅಲ್ಲಿಯೇ ಆತನ ಕಣ್ಣಿಗೆ ಬುಲ್ಲೆಟ್ನಲ್ಲಿ ಓಡಾಡುತ್ತಿದ್ದ ಪ್ರಭಾಕರ್ ಕಾಣಿಸಿದ್ದರು. `ಸಿನಿಮಾದಲ್ಲಿ ನಟಿಸ್ತೀಯಾ’ ಅಂತ ಕೇಳಿದ್ದೇ ಮರುಮಾತಾಡದೇ ಒಪ್ಪಿಕೊಂಡರು. ತಾಯಿಯ ವಿರೋಧದ ನಡುವೆಯೂ ಸಿನಿಮಾ ಬದುಕಿನ ಆರ್ರಂಗ್ರೇಟ್ರಂ ಆರಂಭಿಸಿದ ಪ್ರಭಾಕರ್ಗೆ ಕನ್ನಡ ಕಲಿತುಕೊಳ್ಳಲು ಹೇಳಿದ್ದು ಎಂ.ಪಿ ಶಂಕರ್. ಕಾಡಿನ ರಹಸ್ಯ ಚಿತ್ರದಲ್ಲಿ ಅವರ ಜೀವನ ರಹಸ್ಯ ಕೂಡ ಇತ್ತು. ಅದು ವಿಧಿಲಿಖಿತ.
ಕಾಡಿನ ರಹಸ್ಯ ಚಿತ್ರದ ನಂತರ ಪುಣ್ಯಪುರುಷ, ಮಾತೃಭೂಮಿ, ಶ್ರೀ ಕೃಷ್ಣದೇವರಾಯ, ಬಾಳುಬೆಳಗಿತು, ಮಹಡಿ ಮನೆ, ಕಾಸಿದ್ರೆ ಕೈಲಾಸ ಚಿತ್ರಗಳಲ್ಲಿ ನಟಿಸೋ ಅವಕಾಶ ಸಿಕ್ಕಿತ್ತು. ಎಲ್ಲವೂ ಸಣ್ಣಪುಟ್ಟ ಪಾತ್ರಗಳೇ. ಎಲ್ಲವೂ ಒದೆ ತಿನ್ನುವ ಪಾತ್ರಗಳು. ದೊಡ್ಡ ದೇಹ, ಗುಂಗುರು ಕೂದಲು, ಸಂಧಿಬಿಟ್ಟ ಹಲ್ಲಿರುವ ಮುಳ್ಳು ಮುಖದವನಿಗೆ ಯಾರು ತಾನೇ ನಾಯಕನ ಪಾತ್ರ ಕೊಡುತ್ತಾರೆ. ಅದಲ್ಲದೇ ಈವರೆಗೆ ಮಾಡಿದ ಪಾತ್ರಗಳಿಗೆ ಸಿಕ್ಕ ಸಂಭಾವನೆ ಕೇವಲ ಐನೂರು ರೂಪಾಯಿ. ಬೇಸರಗೊಂಡ ಪ್ರಭಾಕರ್ ತಾಯಿ, `ಸಿನಿಮಾ ಸಾಕು, ಕೆಲಸ ಮಾಡು’ ಅಂತ ಬುದ್ದಿ ಹೇಳಿದರು. ಆ ಕ್ಷಣಕ್ಕೆ ಅಮ್ಮನ ಮಾತು ಸರಿಯೆನಿಸಿ, ಆಫೀಸಿನಲ್ಲಿ ಪಟ್ಟಾಗಿ ಕೂತು ಲೆಕ್ಕ ಬರೆಯತೊಡಗಿದರು.
ಆದರೆ ಸಿನಿಮಾ ಪ್ರಪಂಚ ಪ್ರಭಾಕರ್ ಎಂಬ ಅಜಾನುಬಾಹುವಿಗೆ ಗುಮಾಸ್ತನ ಕೆಲಸ ಮಾಡಲು ಬಿಡಲಿಲ್ಲ. ಚಿತ್ರಬದುಕಿನ ಎರಡನೇ ಹೆದ್ದಾರಿಯಲ್ಲಿ ಅತ್ಯುತ್ತಮ ಅವಕಾಶ, ವಿಸ್ತಾರ ಪಾತ್ರಗಳು ಸಿಗಲಾರಂಭಿಸಿದವು. ಕಲ್ಪನಾ ಅಭಿನಯದ ನಾರಿಮುನಿದರೇ ಮಾರಿ, ತ್ರಿವೇಣಿ, ಕೌಬಾಯ್ ಕಳ್ಳ, ಗಂಧದಗುಡಿ ಚಿತ್ರಗಳಲ್ಲಿ ಗಮನಾರ್ಹ ಪಾತ್ರ ಮಾಡಿ ಸೈ ಎನಿಸಿಕೊಂಡರು.
ಮುಂದೇ, ದ್ವಾರಕೀಶ್-ವಿಷ್ಣುವರ್ಧನ್ ಜೊತೆ ಕಳ್ಳ-ಕುಳ್ಳ, ವಿಷ್ಣು-ಭಾರತಿ ಅಭಿನಯದ ಭಾಗ್ಯಜ್ಯೋತಿ, ರಾಜ್ಕುಮಾರ್ ನಟಿಸಿದ ಸೂಪರ್ಹಿಟ್ ಚಿತ್ರ ಮಯೂರದಲ್ಲಿ ನಟಿಸಿದ್ದೇ ಪ್ರಭಾಕರ್ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ, ತಮಿಳು, ತೆಲುಗು ಚಿತ್ರರಂಗಕ್ಕೂ ಅನಿವಾರ್ಯವಾದರು. 1977ರಲ್ಲಿ ತೆರೆಕಂಡ ಒಲವು ಗೆಲುವು, ಗಿರಿಕನ್ಯೆ, ಕಿಟ್ಟುಪುಟ್ಟು, ಸಹೋದರರ ಸವಾಲ್ ಚಿತ್ರಗಳಲ್ಲಿ ಪ್ರಭಾಕರ್ ಬಹುಮುಖ್ಯ ಪಾತ್ರಗಳನ್ನು ನಿಭಾಯಿಸಿದರು. ಮುಂದೇ ರಾಜ್ಕುಮಾರ್ ಜೊತೆ ಆಪರೇಷನ್ ಡೈಮಂಡ್ ರಾಕೇಟ್, ತಾಯಿಗೆ ತಕ್ಕ ಮಗ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಆದರೆ ಪ್ರಭಾಕರ್ಗೆ ಸಂಪೂರ್ಣ ನ್ಯಾಯ ಸಿಕ್ಕಿದ್ದು ಅಂಬರೀಶ್ ಅಭಿನಯದ `ಅಂತ’ ಚಿತ್ರದಲ್ಲಿ. `ಅಂತ’ ಚಿತ್ರದ ಟೋಪಿವಾಲ ಪಾತ್ರದಲ್ಲಿ ಮಿಂಚಿದ ಪ್ರಭಾಕರ್ ಜನಪ್ರಿಯತೆ ಹಿಂದಿ, ತಮಿಳು, ತೆಲುಗು ಚಿತ್ರರಂಗಕ್ಕೂ ವಿಸ್ತರಿಸಿತ್ತು. ಯಾಕೆಂದರೇ `ಅಂತ’ ಚಿತ್ರ ಆ ಮೂರು ಭಾಷೆಗಳಲ್ಲೂ ಡಬ್ ಆಗಿತ್ತು. ಆದ್ರೆ ಪ್ರಭಾಕರ್ ದೊಡ್ಡಮಟ್ಟದಲ್ಲಿ ಮಿಂಚು ಹರಿಸಿದ್ದು ತೆಲುಗು ಚಿತ್ರರಂಗದಲ್ಲಿ.
ಎಲ್ಲೋ ಅಗ್ರಿಕಲ್ಚರ್ ಇನ್ಸ್ಟಿಟ್ಯೂಟ್ನಲ್ಲಿ ಲೆಕ್ಕ ಬರೆದುಕೊಂಡಿದ್ದ ಗುಮಾಸ್ತ ಪ್ರಭಾಕರ್ ಎಲ್ಲಿ, ಡಾ ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಎನ್ಟಿ ರಾಮರಾವ್, ಅಕ್ಕಿನೇನಿ ನಾಗೇಶ್ವರರಾವ್, ಕೃಷ್ಣ, ಚಿರಂಜೀವಿ, ರಜನಿಕಾಂತ್, ಮೋಹನ್ ಬಾಬುವಿನಂಥ ಘಟಾನುಘಟಿಗಳ ಜೊತೆ ನಟಿಸಿದ ಈ ಟೈಗರ್ ಪ್ರಭಾಕರ್ ಎಲ್ಲಿ..? ಅದೃಷ್ಟ ಅಂದ್ರೆ ಹೀಗಿರಬೇಕು. ಆದರೆ ಇಷ್ಟಕ್ಕೆ ಪ್ರಭಾಕರ್ ಓಟ ನಿಲ್ಲಲಿಲ್ಲ. ಅವರ ಚೆಲ್ಲಿದ ರಕ್ತ, ನ್ಯಾಯ ಗೆದ್ದಿತು, ಮುತ್ತಿನಂಥ ಅತ್ತಿಗೆ ಚಿತ್ರಗಳು ಜಯಭೇರಿ ಬಾರಿಸಿತು. ತೆಲುಗಿನ ಸೂಪರ್ ಸ್ಟಾರ್ ಶಿವಾಜಿಗಣೇಶನ್ ಅಭಿನಯದ ಚಿತ್ರವೊಂದರ ಕನ್ನಡ ಅವತರಣಿಕೆಗೆ ಪ್ರಭಾಕರ್ ನಾಯಕನಾಗಿ ಆಯ್ಕೆಯಾದಾಗ ಗಹಗಹಿಸಿದವರು ಹಲವು ಜನ. ಆದರೆ ಅದು ಕನ್ನಡದಲ್ಲಿ `ಮುತ್ತೈದೆ ಭಾಗ್ಯ’ ಹೆಸರಿನಲ್ಲಿ ನಿಮರ್ಾಣಗೊಂಡು ರಜತೋತ್ಸವ ಆಚರಿಸಿದ್ದೇ, ಅಟ್ಟಹಾಸಗೈದ ಅದೇ ಮಂದಿ ತೆಪ್ಪಗಾದರಂತೆ.
ಇದಾದ ಮೇಲೆ ಗೆಲುವು ನನ್ನದೇ, ಹಸಿದ ಹೆಬ್ಬುಲಿ, ಗಾಯತ್ರಿ ಮದುವೆ, ಕರುಣೆ ಇಲ್ಲದ ಕಾನೂನು, ಪ್ರೇಮ ಯುದ್ದ, ರಕ್ತತಿಲಕ, ಜಿದ್ದು, ಆದಿಮಾನವ, ಕಾಡಿನ ರಾಜ, ಯಮ ಕಿಂಕರ, ಶಕ್ತಿ, ಗಂಧದಗುಡಿ ಭಾಗ 2, ಕರುಳಿನ ಕೂಗು ಚಿತ್ರಗಳು ಯಶಸ್ವಿಯಾದವು. ಹಣ, ಕಾರು, ಬಂಗಲೆ ಎಲ್ಲವೂ ಬಂದಿತ್ತು. ಅಪ್ಪ ತೀರಿಕೊಂಡಿದ್ದರು. ಅಮ್ಮ ಮಾತ್ರ ತನ್ನ ಪುತ್ರನನ್ನು ಈ ಕ್ಷಣಕ್ಕೂ ತನ್ನ ಮಡಿಲಲ್ಲೇ ಮಲಗಿಸುತ್ತಿದ್ದಳು. ವಾಸ್ತವ ಬದಲಾದರೂ ಅವಳು ಬದಲಾಗಲಿಲ್ಲ. ಯಾಕೆಂದರೇ ಅವಳು ತಾಯಿ.
ಇನ್ನು ಪ್ರಭಾಕರ್ ಚಕ್ರವ್ಯೂಹದಿಂದ, ಪ್ರೇಮಲೋಕದವರೆಗೂ ಪೋಷಕನಟನಾಗಿ, ಸ್ನೇಹಿತನಾಗಿ, ಸಹನಟನಾಗಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ವಿಲನ್, ನಾಯಕ, ಹಾಸ್ಯಪಾತ್ರ ಊಹುಂ ಪ್ರಭಾಕರ್ ಪರಾಕಾಯ ಪ್ರವೇಶ ಮಾಡದ ಪಾತ್ರಗಳೇ ಇರಲಿಲ್ಲ. ಇನ್ನು ವೈಯುಕ್ತಿಕ ಜೀವನದ ವಿಚಾರಕ್ಕೆ ಬಂದರೇ, ಪ್ರಭಾಕರ್ ಎರಡೆರಡು ಮದುವೆಯಾಗಿದ್ದರು. ಮೊದಲ ಹೆಂಡತಿ ಸರಿಹೊಂದಿಲ್ಲ ಅಂತ ಅವಳಿಗೆ ಡೈವೋರ್ಸ್ ಕೊಟ್ಟಿದ್ದರು. ಮಗ ವಿನೋದ್ಪ್ರಭಾಕರ್ ಈಗ ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾನೆ. ಎರಡನೇ ಪತ್ನಿ ಚಿತ್ರರಂಗದಲ್ಲಿ ಈಗಲೂ ಆಕ್ಟೀವ್ ಆಗಿದ್ದಾರೆ. ಎಲ್ಲಾ ಯಶಸ್ವಿ ಸೆಲೆಬ್ರಿಟಿಗಳಂತೆ ಪ್ರಭಾಕರ್ ಬದುಕಿನಲ್ಲೂ ಶನಿದೆಶೆ ಆರಂಭವಾಗಿತ್ತು. ವಿಪರೀತ ಕುಡಿತ ಕರುಳನ್ನು ಸುಟ್ಟುಹಾಕಿತ್ತು. ದಶಕಗಳ ಹಿಂದೆ ಅಪಘಾತದಲ್ಲಿ ಊನವಾಗಿದ್ದ ಕಾಲಿನ ನೋವು ಹೆಚ್ಚಾಗಿತ್ತು. ಜೊತೆಗೆ ತಾನೇ ನಿರ್ಮಿಸಿದ ಚಿತ್ರಗಳ ಸೋಲು ಕಂಗೆಡಿಸಿತ್ತು. ಈ ಎಲ್ಲಾ ನೋವನ್ನು ಮರೆಯಲು ವಿಪರೀತ ಕುಡಿಯಲಾರಂಭಿಸಿದರು. 1994ರ ಹೊತ್ತಿಗೆ ಎರಡನೇ ಪತ್ನಿಯೂ ಕೈಬಿಟ್ಟು ಹೋದರು. ಕಾಲಿಗೆ ಗ್ಯಾಂಗ್ರೀನ್ ಆವರಿಸಿ, ಕಾಲನ್ನು ಕತ್ತರಿಸದಿದ್ದರೇ ಜೀವಕ್ಕೆ ಗ್ಯಾರಂಟಿಯಿಲ್ಲ ಅಂದರು ವೈದ್ಯರು. ಒಪ್ಪಲಿಲ್ಲ ಪ್ರಭಾಕರ್.
ಮಾರ್ಚ್ 25, 2001, ಅವತ್ತು ಇಡೀ ನಾಡು ಯುಗಾದಿ ಸಂಭ್ರಮದಲ್ಲಿತ್ತು. ಮರುದಿನದ ಹಬ್ಬಕ್ಕೆ ಸಿದ್ದತೆ ನಡೆದಿತ್ತು. ಆದರೆ ಯುಗಾದಿ ನೋಡಲು ಆ ಅಜಾನುಬಾಹು ಬದುಕುಳಿಯಲಿಲ್ಲ. ಪ್ರಭಾಕರ್ ಅಂತಿಮ ದಿನಗಳಲ್ಲಿ ಯಾತನಮಯ ಬದುಕನ್ನು ಅನುಭವಿಸಿ ಇಹಲೋಕ ತ್ಯಜಿಸಿದ್ದರು. ಮೂವತ್ತು ವರ್ಷಗಳ ಕಾಲ ದಕ್ಷಿಣ ಭಾರತದ ಚಿತ್ರರಂಗದಲ್ಲಿ, ಅಚ್ಚಳಿಯದ ಹೆಸರು ಮಾಡಿದ ಹುಲಿಯೊಂದು ಭಯಾನಕವಾಗಿ ಘರ್ಜಿಸಿ, ನೀರಿನಂತೆ ತಣ್ಣಗೆ ಮಲಗಿತ್ತು.ಪ್ರಭಾಕರ್ ಮರಣವನ್ನಪ್ಪಿ ಹದಿನೈದು ವರ್ಷವಾಗಿದೆ. ಹೀ ಈಸ್ ನೋ ಮೋರ್ ಅಷ್ಟೇ..!
ನಿನ್ನೆ ಅವರ ಜನ್ಮದಿನ. ಅದೇಕೋ ತುಂಬಾ ನೆನಪಾದರು. ಅದಕ್ಕೆ ಇಷ್ಟು ಬರೆಯಬೇಕಾಯಿತು.
- ರಾ ಚಿಂತನ್
POPULAR STORIES :
ಅಮ್ಮನಿಗೆ ಸೇಟು ದುಡ್ಡು ಕೊಟ್ಟಿದ್ದು ಯಾಕೆ..? ಫ್ರಾಕ್ ಹುಡ್ಗೀಯ ಚಾಕೊಲೇಟ್ ಸ್ಟೋರಿ..!
ಈ ವೀಡಿಯೋ ನೋಡಿದ್ರೆ ನಿಮ್ಮ ತಲೆ ಕೆಟ್ಟು ಹೋಗುತ್ತೆ..! ಇದು ರುಂಡ ಮುಂಡ ಬೇರೆಯಾದ ಜೀವಂತ ಮೀನಿನ ಕಥೆ…
ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?
ಅಪಘಾತವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡ್ತೀರಾ..? ಅಪಲೋಡ್ ಮಾಡಿದ್ರೇ ಜೈಲ್ ಗ್ಯಾರಂಟಿ..!?
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
ಮುಸ್ಲಿಮರ `ಅಜಾನ್’ ವೇಳೆ ಅರ್ಧಕ್ಕೆ ಭಾಷಣ ನಿಲ್ಲಿಸಿದ ಮೋದಿ…! #Video
ಟೀಂ ಇಂಡಿಯಾ ಹಾಗೂ ಬಾಂಗ್ಲಾ ಅಭಿಮಾನಿಗಳ ವಿಡಿಯೋ ಫೈಟ್..!
ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?
ಜೈಲಿನಿಂದ ಕೈದಿಗಳು ಪರಾರಿ..! ಜೈಲಲ್ಲಿ ಏನೆಲ್ಲಾ ನಡೆಯುತ್ತೆ ಗೊತ್ತಾ..? ಡ್ರಗ್ಸು.. ಸೆಕ್ಸು.. ಫಿಕ್ಸು…
ಧೋನಿ ಪತ್ರಕರ್ತನ ಮೇಲೆ ಸಿಟ್ಠಾಗಿದ್ದೇಕೆ..? ನಾವು ಸ್ಕ್ರಿಪ್ಟ್ ಇಟ್ಟುಕೊಂಡು ಪಂದ್ಯವಾಡುವುದಿಲ್ಲ..!
ಖಂಡೀಲ್ ಬೆತ್ತಲಾಗದಿದ್ರೇ ಏನಂತೆ..? ಆರ್ಷಿ ಖಾನ್ ಬೆತ್ತಲಾದಳಲ್ಲ..!!