ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೋದ್ಯಮ ಭಷ್ಟರ ಆಗರವಾಗುತ್ತಿದೆ…! ಇದರಿಂದ ವೃತ್ತಿಧರ್ಮ, ವೃತ್ತಿ ನೈತಿಕತೆ ಹೊಂದಿರುವ ಪ್ರಾಮಾಣಿಕ ಪತ್ರಕರ್ತರೂ ತಲೆತಗ್ಗಿಸಬೇಕಾಗಿರೋದು ವಿಪರ್ಯಾಸ. ಜನ ಪತ್ರಕರ್ತರನ್ನು ಉಗಿದು ಉಪ್ಪಿನ ಕಾಯಿ ಹಾಕ್ತಿರೋದು ಇದಕ್ಕೆ…!
ಭಷ್ಟ, ಅವಿವೇಕಿ ಹಾಗೂ ಪತ್ರಿಕೆ ಮತ್ತು ಪತ್ರಕರ್ತ ಎಂಬ ಹೆಸರಲ್ಲಿ ದಂದೆ ನಡೆಸುತ್ತಿರೋ ಪತ್ರಕರ್ತರ ವಿರದ್ಧ ಪತ್ರಕರ್ತರೇ ಚಾಟಿ ಬೀಸೋ ಅಗತ್ಯವಿದೆ. ಇಲ್ಲದಿದ್ದರೆ ಆ ಮಹಾನುಭಾವರ ಜೊತೆ ಪ್ರಾಮಾಣಿಕರಾಗಿ ಕೆಲಸ ಮಾಡ್ತಿರೋ ಪತ್ರಕರ್ತರು ಹಾಗೂ ಇಡೀ ಪತ್ರಿಕೋದ್ಯಮ ಕ್ಷೇತ್ರ ಅಪವಾದ ಎದುರಿಸಬೇಕಾದೀತು…!
ಪತ್ರಕರ್ತರೆಂದು ಅನಿಸಿಕೊಂಡ ಕೆಲವು ಪುಣ್ಯಾತ್ಮರು ನೆಟ್ಟಗೆ ಒಂದು ವರದಿ ಮಾಡ್ತಾರೋ ಇಲ್ಲವೋ ಗೊತ್ತಿಲ್ಲ…! ಪ್ರೆಸ್‍ಮೀಟ್, ಸಭೆ-ಸಮಾರಂಭಗಳಲ್ಲಿ ಏರುದನಿಯಲ್ಲಿ ಮಾತಾಡಿ ತನ್ನ ಅಸ್ಥಿತ್ವವನ್ನು ತೋರಿಸಿಕೊಂಡಿರುತ್ತಾರೆ. ಚುನಾವಣೆ ಹತ್ತಿರ ಬಂತು ಅಂದ್ರೆ ಎಲ್ಲಿಂದ ಎಲ್ಲಿಗೆ ಬೇಕಾದ್ರು ಹೋಗಿ ಕಾರ್ಯಕ್ರಮ ಅಟೆಂಡ್ ಮಾಡ್ತಾರೆ…! ರಾಜಕಾರಣಿಗಳು/ ಉದ್ಯಮಿಗಳು ನಡೆಸುವ ಔತಣಕೂಟ ಮಾತ್ರ ಮಿಸ್ ಮಾಡಲ್ಲ…! ಹೆಂಡ-ತುಂಡು, ಒಂದೊಳ್ಳೆ ಗಿಫ್ಟ್ ಜೊತೆಗೊಂದಷ್ಟು ದುಡ್ಡು ಎಲ್ಲ ಸಿಗುತ್ತೆ ಅಂತ ಹೋಗೋ ಕಿತ್ತೋದ ಪತ್ರಕರ್ತರಿಗೇನು ಬರವಿಲ್ಲ.
ನಿಜಕ್ಕು ಒಂದು ಮಾಧ್ಯಮದಲ್ಲಿದ್ದು ಕೊಂಡು, ಒಬ್ಬ ಪತ್ರಕರ್ತನಾಗಿ ಹೀಗೆ ಬರೆಯೋಕೆ ತುಂಬಾ ಬೇಜಾರಾಗುತ್ತೆ…! ಆದ್ರೆ, ಬರೀಲೆ ಬೇಕು. ಭ್ರಷ್ಟಚಾರ, ಭ್ರಷ್ಟ ರಾಜಕಾರಣಿಗಳ ಬಗ್ಗೆ ಪುಂಕಾನುಪುಂಕವಾಗಿ ಮಾತಾಡೋ ಮೊದಲು ನಾವಿರೋ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ. ಪತ್ರಕರ್ತರು ಪತ್ರಿಕೆ ಹೆಸರಲ್ಲಿ ಹಾದರ ನಡೆಸೋದನ್ನು ಪತ್ರಕರ್ತರೇ ಖಂಡಿಸಬೇಕು…! ಇಲ್ಲವಾದಲ್ಲಿ, ಜನ ಎಲ್ರಿಗೂ ಚಪ್ಪಲಿ ಕಿತ್ತೋಗ ರೀತಿ ಹೊಡೀತಾರೆ…! ಹುಷಾರ್.
ಇವತ್ತು ಇಷ್ಟೆಲ್ಲಾ ಮಾತಾಡೋಕೆ ಕಾರಣ ನಿನ್ನೆ ತುಮಕೂರಲ್ಲಿ ನಡೆದ ಘಟನೆ…! ಇದನ್ನು ವರದಿ ಮಾಡಿದ್ದು ‘ವಿಜಯವಾಣಿ’ ದಿನಪತ್ರಿಕೆ ಮಾತ್ರ……! ಬಹುತೇಕ ಪತ್ರಕರ್ತರೇ ಫಲಾನುಭವಿಗಳಾಗಿದ್ದರಿಂದ ಸುದ್ದಿ ವೈರಲ್ ಆಗಿಲ್ಲ…! ಕೆಲವು ಪತ್ರಕರ್ತರು ಗೊಚ್ಚೆ ಮೇಲೆ ಕಲ್ಲಾಕೋದು ಏಕೆ ಅಂತ ಸುಮ್ಮನಿದ್ದಾರೆ.
ಕಾನೂನು ಸಚಿವ ಟಿಬಿ ಜಯಚಂದ್ರ ಅವರ ತವರು ಕ್ಷೇತ್ರ ಸಿರಾದಲ್ಲಿ ಸರ್ಕಾರದ ಸಾಧನಾ ಸಮಾವೇಶ ನಡೆದಿತ್ತು. ಕಾರ್ಯಕ್ರಮ ಯಶಸ್ವಿಯಾದ ಖುಷಿಯಲ್ಲಿ ಟಿ. ಬಿ ಜಯಚಂದ್ರ ಅವರಿದ್ರು. ಸಿರಾ-ತುಮಕೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿರೋ ಕಂಟ್ರಿಕ್ಲಬ್ ನಲ್ಲಿ ಪತ್ರಕರ್ತರಿಗೆ ಔತಣ ಕೂಟ ಏರ್ಪಡಿಸಿದ್ರು…! ಬರೀ ಔತಣಕೂಟ ಆಗಿದ್ರೆ ಓಕೆ.. ಆದ್ರೆ, ಅದು ಚುನಾವಣೆಗೆ ಪೂರ್ವಭಾವಿಯಾಗಿ ಪತ್ರಕರ್ತರನ್ನು ಕೊಂಡುಕೊಳ್ಳುವ ಕೂಟವಾಗಿತ್ತು…!
ಕೆಲವೇ ಕೆಲವು ಪತ್ರಕರ್ತರನ್ನು ಹೊರತುಪಡಿಸಿ ಬಹುತೇಕ ಪತ್ರಕರ್ತರು 15 ಸಾವಿರ ರೂಪಾಯಿಗಳಿಗೆ ಮಾರಾಟವಾದ್ರು…! ಟಿ.ಬಿ ಜಯಚಂದ್ರ ಅವರ ಬೆಂಬಲಿಗರೆನಿಸಿಕೊಂಡವರಿಂದ ಸುಮಾರು 15 ಸಾವಿರ ರೂ ಬೆಲೆಬಾಳೋ ಜಿ7 ಪ್ರೈಮ್ ಸ್ಯಾಮ್‍ಸಂಗ್ ಮೊಬೈಲ್ ಪತ್ರಕರ್ತರಿಗೆ ಉಡುಗೊರೆ ರೂಪದಲ್ಲಿ ಸಿಕ್ತು…! ಇದರ ಫಲಾನುಭವಿಗಳು 65 ಮಂದಿ. ಇದರಲ್ಲಿ ಪ್ರತಿಷ್ಠಿತ ಸುದ್ದಿವಾಹಿನಿಗಳ ವರದಿಗಾರರು, ವೀಡಿಯೋ ಜರ್ನಲಿಸ್ಟ್ ಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರೆಂದು ತಿಳಿದುಬಂದಿದೆ.
ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಸೋಲುವ ಆತಂಕ ಕೂಡ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮಾಜಿ ಸಚಿವ ಜೆಡಿಎಸ್‍ನ ಬಿ. ಸತ್ಯನಾರಯಣ್ ಅವರ ವಿರುದ್ಧ ಹಾಲಿ ಸಚಿವ ಟಿಬಿಜೆ ಅವರು ಪರಾಭವಗೊಳ್ಳೋದು ಖಚಿತ ಎಂದು ಹೇಳಲಾಗುತ್ತಿದೆ. ಸೋಲಿನ ಭಯ ಆವರಿಸಿರೋದ್ರಿಂದ ಟಿಬಿಜೆ ಪತ್ರಕರ್ತರನ್ನು, ಮತದಾರರನ್ನು ಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಿನ್ನೆ ಟಿಬಿಜೆ ಅವರು ಪತ್ರಕರ್ತರಿಗೆ ಮೊಬೈಲ್ ನೀಡದೇ ಇರಬಹದು. ಆದ್ರೆ, ಇದರ ಖರ್ಚು ವೆಚ್ಚವನ್ನು ನೋಡಿಕೊಂಡಿದ್ದು ಅವರ ಪರಮಾಪ್ತ, ಜಿಪಂ ಮಾಜಿ ಸದಸ್ಯ ಪಿ.ಎನ್ ಕೃಷ್ಣಮೂರ್ತಿ…! ಮೊಬೈಲ್ ಹಂಚಿದ್ದು ಇವರ ಬೆಂಬಲಿಗರು ಎಂದು ಪ್ರತ್ಯಕ್ಷದರ್ಶಿ ಪತ್ರಕರ್ತರೇ ಹೇಳುತ್ತಿದ್ದಾರೆ.
ಮೊಬೈಲ್ ತೆಗೆದುಕೊಳ್ಳುವುದನ್ನು ಬಿಟ್ಟು, ಪತ್ರಕರ್ತರಿಗೆ ಆಮಿಷ ಎಂದು ಸುದ್ದಿ ಚಚ್ಚಿ ಬಿಸಾಕಬೇಕಿ, ನಾವು ಮಾರಾಟಕ್ಕಿಲ್ಲ ಅಂತ ಎದೆಯುಬ್ಬಿಸಿ ಹೇಳಬೇಕಿತ್ತು. ಆದ್ರೆ, ನೈತಿಕತೆಯೇ ಇಲ್ಲದೇ ಮೊಬೈಲ್ ತಗೊಂಡ್ರಲ್ಲ…? ಮೊಬೈಲ್ ಕಾಲಿ ಆಗಿ ತಮಗೆ ಸಿಗ್ದೆ ಇದ್ರೆ ಹೆಂಗಪ್ಪ ಅಂತ ಮುಗಿಬಿದ್ದು, ಕಿತ್ತಾಡಿ, ಜಗ್ಗಾಡಿದವರೂ ಇದ್ದಾರೆ…!
ಮೊಬೈಲ್ ದುಡ್ಡು ಕೃಷ್ಣಮೂರ್ತಿ ಬೆಂಬಲಿಗರು ತಮ್ಮ ಜೇಬಿನಿಂದ ಹಾಕಿದ್ದ…? ಟಿಬಿಜೆ ಆಪ್ತ ಕೃಷ್ಣಮೂರ್ತಿ ತಮ್ಮ ಹಣದಲ್ಲಿ ಮೊಬೈಲ್ ಕೊಂಡರೇ? ಟಿ. ಬಿ ಜಯಚಂದ್ರ ಅವರು ಹಣ ನೀಡಿ, ಕೃಷ್ಣಮೂರ್ತಿ ಬೆಂಬಲಿಗರ ಮೂಲಕ ಉಡುಗೊರೆ ಭಾಗ್ಯ ಕಲ್ಪಿಸಿದರೇ? ಅಥವಾ ಸಾಧನ ಸಮಾವೇಶದ ಖರ್ಚಲ್ಲೇ ಎಲ್ಲವೂ ಆಯಿತೇ…? ಅದೇನೇ ಇರಲಿ ಪತ್ರಕರ್ತರು ಸೇಲಾಗಿದ್ದಂತೂ ಖಂಡಿತಾ… ಪತ್ರಿಕೆ/ ಸುದ್ದಿವಾಹಿನಿಗಳ ಮುಖ್ಯಸ್ಥರಾದರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಸ್ಥೆಯ ಹೆಸರಲ್ಲಿ ಹಣ/ ಉಡುಗೊರೆ ಪಡೆಯುವ, ಕಿತ್ತುಕೊಳ್ಳುವ ಪತ್ರಕರ್ತರಿದ್ದಾರೆ. ಇವರಿಂದ ಸಂಸ್ಥೆಗೇ ಕೆಟ್ಟ ಹೆಸರು…! ಇದನ್ನು ಗಂಭೀರವಾಗಿ ಪರಿಗಣಿಸ ಬೇಕು.