ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ದರ್ಬಾರ್..! ವೆಂಕಯ್ಯ ಸಾಕಯ್ಯ ಮತ್ತು ನಡುಗುತ್ತಿರುವ `ಕೈ'..!!

Date:

raaaಮೊದಲು ಬಿಜೆಪಿ ವಿಚಾರಕ್ಕೆ ಬನ್ನಿ. ದಕ್ಷಿಣ ಭಾರತದಲ್ಲಿ ಅದು ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುವುದಕ್ಕೆ ಹೆಣಗುತ್ತಲೇ ಇದೆ. ಆಂಧ್ರ, ತಮಿಳುನಾಡು, ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಹೊರತುಪಡಿಸಿ ಮಿಕ್ಕವರು ಕೆಮ್ಮುವುದಕ್ಕೂ ಸಾಧ್ಯವಿಲ್ಲ. ಇನ್ನು ಆಡಳಿತ ನಡೆಸುವುದು ದೂರದ ಮಾತು. ಹೀಗಿರುವಾಗ ಬಿಜೆಪಿಗೆ ತಕ್ಕಮಟ್ಟಿಗೆ ಬೆಲೆ ಅಂತ ಸಿಕ್ಕರೇ ಅದು ಕರ್ನಾಟಕದಲ್ಲಿ ಮಾತ್ರ. ದಕ್ಷಿಣ ಭಾರತದ ರಾಜಕಾರಣದಲ್ಲಿ ಕರ್ನಾಟಕದ ರಾಜಕಾರಣ ಮಾತ್ರ ರಾಷ್ಟ್ರೀಯ ಪಕ್ಷಗಳ ತಳಪಾಯದಲ್ಲಿ ನಿರ್ಮಾಣವಾಗುತ್ತದೆ. ಇಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್, ಆಗಾಗ್ಗೆ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮಿಕ್ಕಂತೆ ರಾಷ್ಟ್ರೀಯ ಪಕ್ಷಗಳೇ ಇಲ್ಲಿ ಸರ್ಕಾರ ರಚಿಸುತ್ತದೆ.

ಕಾಂಗ್ರೆಸ್ ಆಡಳಿತಕ್ಕೆ ಬರುವ ಮುನ್ನ ಬಿಜೆಪಿ ಈ ರಾಜ್ಯವನ್ನು ಆಳಿತ್ತು. ಐದು ವರ್ಷ ಪೂರೈಸುವಾಗ ಮೂರು ಮೂರು ಮುಖ್ಯಮಂತ್ರಿಗಳು ಈ ರಾಜ್ಯವನ್ನು ಆಳಿದ್ದರು. ಕೋಪಗೊಂಡಿದ್ದ ಯಡಿಯೂರಪ್ಪ ಕೆಜೆಪಿ ಅಂತ ಪ್ರಾದೇಶಿಕ ಪಕ್ಷವೊಂದನ್ನು ಕಟ್ಟಿದರು. ಇದರ ಪರಿಣಾಮ ಲಾಡು ಬಂದು ನೇರವಾಗಿ ಸಿದ್ದರಾಮಯ್ಯನವರ ಬಾಯಿಗೆ ಬಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂತು. ಇದಾದ ಮೇಲೆ ಬಿಜೆಪಿ ದಿನದಿಂದ ದಿನಕ್ಕೆ ಸೂಕ್ತ ನಾಯಕರಿಲ್ಲದೇ ಸೊರಗತೊಡಗಿತು. ಪ್ರಲ್ಹಾದ್ ಜೋಷಿ, ಅಶೋಕ್- ಅವರಿಂದ ಬಿಜೆಪಿ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣಿಸಲಿಲ್ಲ. ಹಿರಿಯರು, ಅನುಭವಿ ಅಂತ ಈಶ್ವರಪ್ಪನವರಿಗೆ ಮಣೆ ಹಾಕಿದರೇ ಅವರ ನಾಲಿಗೆಯೇ ಬಿಜೆಪಿಗೆ ಮುಜುಗರವುಂಟುಮಾಡುತ್ತಿತ್ತು. ಊರೆಲ್ಲಾ ಸುತ್ತಿದ ನಂತರ, ಇಲ್ಲಾ ಕಣ್ರೀ- `ಕರ್ನಾಟಕದಲ್ಲಿ ಯಡಿಯೂರಪ್ಪ ಇಲ್ಲದೇ ಬಿಜೆಪಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂಬ ತೀರ್ಮಾನಕ್ಕೆ ಬರಲಾಯಿತು.

ಇದಾದ ಮೇಲೆ ಯಡಿಯೂರಪ್ಪನವರನ್ನು ಬಿಜೆಪಿಗೆ ಕರೆತರುವ ಕಸರತ್ತು ಶುರುವಾಯಿತು. ಬಹಳ ಕಷ್ಟದ ಕೆಲಸವಾಗಿರಲಿಲ್ಲ. ಯಡಿಯೂರಪ್ಪ ತುದಿಗಾಲಲ್ಲಿ ನಿಂತಿದ್ದರು. ಯಾರಾದರು ಕರೆಯಲಿ ಎಂದೇ ಕಾಯುತ್ತಿದ್ದರು. ಕರೆಸಿಕೊಳ್ಳಿ ಎಂದು ಕೇಳಿಕೊಳ್ಳಲು ಸ್ವಾಭಿಮಾನದ ಅಡ್ಡಿ. ಹೀಗಾಗಿ ಒಂದು ಶುಭಸಂದರ್ಭದಲ್ಲಿ ಯಡಿಯೂರಪ್ಪನವರು ಬಿಜೆಪಿಗೆ ಪುನಾರಾಗಮನವಾದರು. ಏನೂ ಕಿಸಿಯಲಿಕ್ಕಾಗದವರಿಗೆ ಅವರ ಮರುಪ್ರವೇಶ ಇರಿಸುಮುರಿಸುಂಟಾದರೂ, ಹೈಕಮಾಂಡ್ ಯೋಗ್ಯತೆಯನ್ನು ಪ್ರಶ್ನಿಸಿದರೇ ಕಷ್ಟ ಅಂತ ಯಡಿಯೂರಪ್ಪ `ಯಾವತ್ತಿದ್ದರೂ ನಮ್ಮ ಜನನಾಯಕ’ ಎಂದರು. ಬಿಜೆಪಿಗೆ ಮರುಪ್ರವೇಶವಾದರೂ ಯಡಿಯೂರಪ್ಪನವರಿಗೆ ಆರಂಭದಲ್ಲಿ ತಕ್ಕಮನ್ನಣೆ ಸಿಗಲಿಲ್ಲ. ಇತ್ತೀಚೆಗೆ ಹೈಕಮಾಂಡ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟು ಕರ್ನಾಟಕದಲ್ಲಿ ಮತ್ತೆ ಕಮಲ ಅರಳಿಸಿ ಎಂದು ವೀಳ್ಯ ಕೊಟ್ಟಿದೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ನಾನೇ ಎಂದು ನಿರ್ಧರಿಸಿರುವ ಯಡಿಯೂರಪ್ಪ ಕೇದರನಾಥ ದೇವಸ್ಥಾನಕ್ಕೂ ಹೋಗಿಬಂದರು. ಅಲ್ಲಿಂದ ಬಂದಕೂಡಲೆ ಅವರಿಗೆ ಸಂಕಟ ಎದುರಾಗಿದೆ. ಆ ಸಂಕಟದ ಹೆಸರು ವೆಂಕಯ್ಯ ನಾಯ್ಡು.

ಮೊದಲನೆಯದ್ದು ರಾಜ್ಯಸಭೆಗೆ ಪರರಾಜ್ಯದವರೇಕೆ ನಮ್ಮ ರಾಜ್ಯದವರನ್ನು ಆರಿಸಿ ಕಳುಹಿಸಿ ಎಂಬ ಕೂಗು, ಎರಡನೆಯದ್ದು ವೆಂಕಯ್ಯನಾಯ್ಡು ಮೂರು ಟರ್ಮ್ ಅಂದರೇ, ಹದಿನೆಂಟು ವರ್ಷಗಳ ಕಾಲ ರಾಜ್ಯಸಭೆಗೆ ಆಯ್ಕೆಯಾಗಿ ಮಾಡಿರುವುದೇನು..? ಒಂದಿಷ್ಟು ಸ್ವಪಕ್ಷದ ಕಾಸ್ಟ್ಲೀ ರಾಜಿಪಂಚಾಯ್ತಿಯ ಹೊರತಾಗಿ ಅವರಿಂದ ರಾಜ್ಯಕ್ಕೇನು ಉಪಯೋಗವಾಗಿಲ್ಲ. ಆಂಧ್ರದವರಾದ ಅವರಿಗೆ ಈ ರಾಜ್ಯಕ್ಕೇನಾದರೂ ಮಾಡಬೇಕೆಂಬ ಮರ್ಜಿಯೂ ಇಲ್ಲ. ಹೀಗಿರುವಾಗ ಅವರನ್ನು ಮತ್ತೆ ಬಿಜೆಪಿ ನಾಲ್ಕನೇ ಅವಧಿಗೆ ರಾಜ್ಯಸಭೆಗೆ ಆಯ್ಕೆ ಮಾಡಲು ತೀರ್ಮಾನಿಸಿದೆ. ಜನರ ವಿರೋಧದ ನಡುವೆಯೂ ವೆಂಕಯ್ಯ ಬೇಕಯ್ಯ ಎಂಬ ತೀರ್ಮಾನಕ್ಕೆ ಬಂದಿದೆ. ಅಷ್ಟಕ್ಕೂ ವೆಂಕಯ್ಯನವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಸ್ವತಃ ರಾಜ್ಯ ಬಿಜೆಪಿ ನಾಯಕರಿಗೆ ಅಸಮಾಧಾನಗಳಿದ್ದರೂ ದೊಡ್ಡವರ ಒತ್ತಡಕ್ಕೆ ಈ ತೀರ್ಮಾನಕ್ಕೆ ಬಂದಿರಬಹುದು. ಬಿಜೆಪಿಯಲ್ಲಿ ಯಡಿಯೂರಪ್ಪ, ಅನಂತಕುಮಾರ್ ಎಂಬೆರಡು ಬಣಗಳಿವೆ. ಇವೆರಡು ಬಣದಲ್ಲಿ ಯಾರ ಕೈಮೇಲಾಗುವುದೋ ಅಲ್ಲಿ ವೆಂಕಯ್ಯನಾಯ್ಡು ಪ್ರತ್ಯಕ್ಷರಾಗುತ್ತಾರೆ. ಹೈಕಮಾಂಡ್ ಬಾಗಿಲಿನೊಳಗೆ ಸಲೀಸಾಗಿ ಹೋಗುವಷ್ಟು ಸದರ ಬೆಳೆಸಿಕೊಂಡಿರುವುದರಿಂದ, ಈ ಬಲಿಷ್ಠ ಬಣವನ್ನು ವರ್ಣರಂಜಿತವಾಗಿ ಅಲ್ಲಿ ಪ್ರಸ್ತುತಪಡಿಸುತ್ತಾರೆ. ವೆಂಕಯ್ಯ, `ಇದಕ್ಕಾದರೂ ಬೇಕಯ್ಯಾ’ ಅಂತ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಮಾಡಿಬಿಡುತ್ತಾರೆ. ಸವಾಲೊಡ್ಡುವವರನ್ನು ಪ್ರಬಲರೇ ಸುಮ್ಮನೇ ಕೂರಿಸುತ್ತಾರೆ. ಈ ಸುಮ್ಮನೇ ಕೂರಿಸುವ ಪ್ರವೃತ್ತಿಯಿಂದಲೇ ಹಾಗೇ ಸುಮ್ಮನೆಯೊಂದು ಹದಿನೆಂಟು ವರ್ಷಗಳ ಆಡಳಿತ ಮುಗಿಸಿದ ಮೇಲೂ ಮಿಕ್ಕ ಆರುವರ್ಷದ ಅಧಿಕಾರಕ್ಕೆ ಸರ್ವಸನ್ನದ್ಧವಾಗಿದೆ.

ವೆಂಕಯ್ಯನಾಯ್ಡು ಅವರಲ್ಲಿ ಅಡಗಿರುವ ಶಕ್ತಿ ಎಂದರೇ, ತಾವು ಪ್ರಬಲರು ಎಂದು ತೋರಿಸಿಕೊಳ್ಳುವುದು. ಅನಂತ್ಕುಮಾರ್, ಯಡಿಯೂರಪ್ಪ- ಇಬ್ಬರು ದೂರವಿದ್ದರೂ, ಒಂದಾದರೂ ಲಾಭ ತನಗೆ ಎಂದು ಅವರಿಗೂ ಗೊತ್ತಿದೆ. ಅತ್ತ ಆಂಧ್ರದಲ್ಲಿ ಒಂದೇ ಒಂದು ಲೋಕಸಭೆ ಚುನಾವಣೆಯನ್ನೂ ಗೆಲ್ಲದೇ, ರಾಜ್ಯದಿಂದ ಆಯ್ಕೆಯಾಗಿ ರಾಜ್ಯಸಭೆಯಲ್ಲಿ ಕೂರುವುದು ಸಣ್ಣ ಮಾತಲ್ಲ. ಎರಡು ಬಾರಿ ಆಂಧ್ರದ ನೆಲ್ಲೂರು ಜಿಲ್ಲೆಯ ಉದಯಗಿರಿ ವಿಧಾನಸಭಾ ಕ್ಷೇತ್ರದಿಂದ ಆರಿಸಿ ಹೋಗಿದ್ದನ್ನು ಬಿಟ್ಟರೆ ವೆಂಕಯ್ಯ ನಾಯ್ಡು ಯಾವ ಚುನಾವಣೆಯನ್ನೂ ಗೆದ್ದಿಲ್ಲ. ರಾಜ್ಯಸಭೆ ಸದಸ್ಯರಾದರು, ಬಿಜೆಪಿಯ ರಾಷ್ಟ್ರಾಧ್ಯಕ್ಷರಾದರು, ವಾಜಪೇಯಿ, ಮೋದಿ ಸರ್ಕಾರದ ಅವಧಿಯಲ್ಲಿ ಮಂತ್ರಿ ಪದವಿ ಸಿಕ್ಕಿದೆ. ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪುಕ್ಕಟೆಯಾಗಿ, ಏನೂ ಅರ್ಹತೆಯಿಲ್ಲದೇ ಅನುಭವಿಸಿದ್ದಾರೆ. ವೆಂಕಯ್ಯನಾಯ್ಡು ಮೋದಿಯವರಂತೆ ಮಾತಿನಲ್ಲೇ ಮನೆಕಟ್ಟುವಲ್ಲಿ ನಿಷ್ಣಾತರು. ಆದರೆ ಮೋದಿ ಬರೀ ಮಾತನಾಡುವುದಿಲ್ಲ. ಸ್ವಲ್ಪ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಾರೆ. ತೀರಾ ಲಾಭಕೋರ ಮನಃಸ್ಥಿತಿಯವರಲ್ಲ. ತಮ್ಮ ಪಕ್ಷದಲ್ಲಿ ಎಲ್ಲಿ ಅಸಮಾಧಾನಗಳು ಹೊಗೆಯಾಡುತ್ತದೋ ಅಲ್ಲಿ ನಾಯ್ಡು ಹಾಜರಿರುತ್ತಾರೆ. ಟಿಕೆಟ್ ಹಂಚಿಕೆಯಿಂದ ಹಿಡಿದು, ಬಂಡಾಯ ಶಮನದವರೆಗೂ ವೆಂಕಯ್ಯನವರ ಹಾಜರಾತಿಯಿರುತ್ತದೆ. ಬೊಕ್ಕಸ ಟರ್ನ್ ಓವರ್ ಆಗುತ್ತಲೇ ಇರುತ್ತದೆ. ಶಾಹಿರಿ ಮಾತನಾಡಿ, ಸಾಚಾರಂತೆ ಬಿಂಬಿಸಿಕೊಂಡು ಇಷ್ಟೊಂದು ಸುಧೀರ್ಘ ಅವಧಿಗೆ ಅಧಿಕಾರದಲ್ಲಿ ಉಳಿಯುವುದು ಸಣ್ಣ ಕಲೆಯೇನಲ್ಲ. ತಮಾಷೆಯೆಂದರೇ ವೆಂಕಯ್ಯ ನಾಯ್ಡು ಅವರ ಬಗ್ಗೆ ಸ್ವಪಕ್ಷದವರಿಗೆ ಗೊಂದಲಗಳಿವೆ. ಅವರು ಇಷ್ಟು ವರ್ಷ ಏನು ಮಾಡಿದ್ದಾರೆ ಎಂಬುದೇ ಅವರಿಗೆ ಗೊತ್ತಿಲ್ಲವಂತೆ. ಏನಾದರೂ ಮಾಡಿದ್ದಾರಾ ಎಂದು ಅವರನ್ನೇ ಕೇಳುವ ಪರಿಸ್ಥಿತಿಯಲ್ಲಿ ಅವರಿದ್ದಾರೆ. ಹೀಗಿರುವಾಗ ಯಡಿಯೂರಪ್ಪ ಮತ್ತೆ ರಾಜ್ಯದಲ್ಲಿ ಬಿಜೆಪಿ ಕಟ್ಟಬೇಕೆಂದರೇ ಈ ಧರ್ಮಸಂಕಟಗಳನ್ನು ಮೆಟ್ಟಿನಿಲ್ಲಲೇಬೇಕು. ಪ್ರಸ್ತುತತೆ ಆ ಸಾಧ್ಯತೆಯನ್ನು ಕಡಿಮೆಗೊಳಿಸಿದೆ. ಹಾಗಂತ ಬಿಜೆಪಿ ದೇಶದಲ್ಲಿ ಸುಭದ್ರವಾಗಿದೇ ಎಂದೇನಿಲ್ಲ. ಇತ್ತೀಚಿನ ದಿನಗಳಲ್ಲಿ ಅಚ್ಛೇದಿನ್ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಪ್ರಾದೇಶಿಕ ಪಕ್ಷಗಳ ದರ್ಬಾರ್ ಶುರುವಾಗಿದೆ. ಯಡಿಯೂರಪ್ಪ ಅಂದುಕೊಂಷ್ಟು ಸುಲಭವಾಗಿ ಏನೂ ಇಲ್ಲ.

ಬಿಜೆಪಿಯದ್ದು ಏನಕಯ್ಯ ಕಥೆಯಾದರೇ, ಇಡೀ ದೇಶದಲ್ಲಿ ಸತ್ತು ಮಲಗುತ್ತಿರುವ ಕಾಂಗ್ರೆಸ್ನದ್ದು ಮತ್ತೊಂದು ಕಥೆ. ಈಗಾಗಲೇ ಕಾಂಗ್ರೆಸ್ ದೇಶದಲ್ಲಿ ಇಪ್ಪತ್ತು ರಾಜ್ಯಗಳನ್ನು ಕಳೆದುಕೊಂಡಿದೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕೈ ಮುರಿದುಕೊಂಡಿದೆ. ಆದರೂ ಬುದ್ಧಿ ಕಲಿಯುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಅದೇ ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಪ್ರವೃತ್ತಿಯನ್ನು ಬಿಟ್ಟಿಲ್ಲ. ಜನರು ಉಲ್ಟಾ ಹೊಡೆಯುತ್ತಿರುವುದು ಸ್ಪಷ್ಟವಾಗುತ್ತಿದ್ದರೂ ಇವರು ಮಾತ್ರ ಆಡಳಿತದಲ್ಲಿ ಚುರುಕುಮುಟ್ಟಿಸುವ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ಬಗ್ಗೆ ಖುದ್ದು ಕಾಂಗ್ರೆಸ್ ಶಾಸಕ ರಮೇಶ್ಕುಮಾರ್ ಅಸಮಾಧಾನವ್ಯಕ್ತಪಡಿಸಿದ್ದಾರೆ. ಅವರ ಅಕ್ಕನ ಮನೆಯ ಎಮ್ಮೆಗೆ ಮನೆಯೊಳಗೆ ಬರುವುದಕ್ಕೆ ಮನೆ ಬಾಗಿಲು ಅಡ್ಡಿಯಾಗುತ್ತಂತೆ. ಹಾಗಿದೂ ಕೋಡನ್ನು ಸೈಡಿಂದ ತೂರಿ ಒಳಗೆ ಬರುವ ಬುದ್ದಿವಂತಿಕೆಯನ್ನು ಪ್ರದರ್ಶಿಸುತ್ತಿತ್ತಂತೆ. ಆ ಎಮ್ಮೆಗೆ ಇರುವಷ್ಟು ಬುದ್ಧಿ ಕಾಂಗ್ರೆಸ್ಗೆ ಇಲ್ಲ ಎಂದು ರಮೇಶ್ಕುಮಾರ್ ಕಾಂಗ್ರೆಸ್ ನಾಯಕರನ್ನು ಹೀಯಾಳಿಸಿರುವುದರಲ್ಲಿ ಯಾವ ತಪ್ಪು ಕಾಣಿಸುತ್ತಿಲ್ಲ. ನಮ್ಮ ಮನೆಯ ಸಂಗತಿ ಮೊದಲು ಅರ್ಥವಾಗಬೇಕಾಗಿದ್ದು ನಮ್ಮ ಮನೆಯವರಿಗೇ ಅಲ್ವೇ..!? ಕಾಂಗ್ರೆಸ್ ನಿಧಾನಗತಿ ಮುಂದಿನ ಅವಧಿಯಲ್ಲಿ ಸಂಪೂರ್ಣವಾಗಿ ಕೈ ಚೆಲ್ಲಾಬೇಕಾಗಿರುವುದರ ಸೂಚನೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಪ್ರಸ್ತುತ ಪರಿಸ್ಥಿತಿಯನ್ನು ಚರ್ಚಿಸುವುದಾದರೇ, ಕರ್ನಾಟಕ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ನಡುವೆಯೇ ರಾಜ್ಯಸಭಾ ಸದಸ್ಯ ಸ್ಥಾನಕ್ಕಾಗಿ ಲಾಬಿ ಆರಂಭವಾಗಿದೆ.

ಇನ್ನು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಅಂತ ಹೊರಟಿರುವುದು ಬಿಜೆಪಿ. ಅರುಣಾಚಲ ಪ್ರದೇಶದಲ್ಲಿ ಕೈ ಮುರಿದು, ಉತ್ತರಾಖಂಡದಲ್ಲೂ ಕೈ ಚಳಕ ತೋರಿಸುವ ಪ್ರಯತ್ನದಲ್ಲಿ ಬಿಜೆಪಿಗೆ ಹಿನ್ನಡೆಯಾದರೂ, ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗುತ್ತಿರುವುದು ಸತ್ಯ. ಅಸ್ಸಾಂನಲ್ಲಿ ಈ ಬಾರಿ ಬಿಜೆಪಿ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ನ ನೀರಸ ಆಡಳಿತ, ಅರಾಜಕತೆ ಕಾರಣ. ಮಿಕ್ಕಂತೆ ಕಾಂಗ್ರೆಸ್ ಮುಕ್ತ ಭಾರತದ ಬಿಜೆಪಿ ಅಜೆಂಡಾ ಯಶಸ್ವಿಗೊಳಿಸುತ್ತಿರುವುದು ಪ್ರಾದೇಶಿಕ ಪಕ್ಷಗಳು. ಇಷ್ಟು ಮಾತ್ರವಲ್ಲ ಕಾಂಗ್ರೆಸ್-ಬಿಜೆಪಿ ಮುಕ್ತ ಭಾರತದತ್ತ ಪ್ರಾದೇಶಿಕ ಪಕ್ಷಗಳು ದಿಟ್ಟ ಹೆಜ್ಜೆಯನ್ನಿಟ್ಟಿವೆ.

ಭಾರತದಲ್ಲಿ ಮೋದಿ ಅಲೆ ಸೃಷ್ಟಿಸಿದ್ದ ಹವಾವನ್ನು ಪೊರಕೆಯಲ್ಲಿ ಮೊದಲು ಗುಡಿಸಿದ್ದು ಅರವಿಂದ್ ಕೇಜ್ರಿವಾಲ್. ಆನಂತರ ನಿತೀಶ್ ಕುಮಾರ್ ಮೋದಿ ಅಲೆಯನ್ನು ತಡೆದು ತಮ್ಮ ಬೆಲೆಯನ್ನು ತೋರಿಸಿಕೊಂಡರು. ಇದಾದ ಮೇಲೆ ಮೋದಿ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ. ಪುದುಚೆರಿ, ಅಸ್ಸಾಂನಲ್ಲಿ- ಅಲೆ ಸೃಷ್ಟಿಸಲು ಪ್ರಯತ್ನಿದರು. ತಮಿಳುನಾಡಿನಲ್ಲಿ ಅಮ್ಮನ ಕೈತುತ್ತಿನ ಮುಂದೆ ಮೋದಿಯ ಸುಳ್ಳು ಭಕ್ಷ್ಯಗಳು ಫಲಪ್ರದವಾಗಲಿಲ್ಲ. ಕೇರಳದ ಜನ ತಮ್ಮ ಪಠ್ಯಪುಸ್ತಕದಲ್ಲಿ ಬಿಜೆಪಿಯ ಹೆಸರೇ ಇಲ್ಲ ಎನ್ನುವುದನ್ನು ತೋರಿಸಿದರು. ಪಶ್ಚಿಮಬಂಗಾಳದಲ್ಲಿ ಅಕ್ಕನ ಮುಂದೆ ಮೋದಿ ಮಂಡಿಯೂರಲೇಬೇಕಾಯಿತು. ಪುದುಚೆರಿಯಲ್ಲಿ ಕಾಂಗ್ರೆಸ್ ಒಕ್ಕೂಟದ ಮುಂದೆ ಅಲೆ ಬರ್ಬರ ಕೊಲೆಯಾಯಿತು. ಅತ್ತ ಉತ್ತರದಲ್ಲೂ ಅಲೆಯಿಲ್ಲ, ಇತ್ತ ದಕ್ಷಿಣದ ಸುನಾಮಿಯ ಮುಂದೆ ಅಲೆಗೆ ಬೆಲೆಯಿಲ್ಲ. ಅಷ್ಟೆಲ್ಲಾ ಏಕೆ, ಮೋದಿಯೇ ಹೇಳುವಂತೆ ಅವರ ಭವ್ಯ ಗುಜರಾತ್ನಲ್ಲಿಯೇ ಬಿಜೆಪಿಗೆ ಹಿನ್ನಡೆಯುಂಟಾಗುವ ಲಕ್ಷಣಗಳು ಕಾಣಿಸುತ್ತಿವೆ. ಕಾಂಗ್ರೆಸ್ನಂತೆ ಬಿಜೆಪಿಯೂ ಅವಸಾನದತ್ತ ದಾಪುಗಾಲಿಡುತ್ತಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಅಂದರೇ ದೇಶದ ಜನರಿಗೆ ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳು ಪಥ್ಯವೆನಿಸುತ್ತಿದೆ. ಸ್ಥಳೀಯ ನಾಯಕತ್ವವನ್ನು ನಂಬುತ್ತಿದ್ದಾರೆ. ಈ ನಡುವೆಯೂ ಮುಂದಿನ ಚುನಾವಣೆಯಲ್ಲಿ ಕಮಲ ಅರಳಿಸುವ ಕನಸಿನಲ್ಲಿರುವ ಬಿಜೆಪಿ ಕಾಂಗ್ರೆಸ್ ಅನ್ನು ಸೋಲಿಸುವ ಚಿಂತನೆಯಲ್ಲಿದೆಯೇ ಹೊರತು ಜೆಡಿಎಸ್ ಬಗ್ಗೆ ಸಣ್ಣ ಆಲೋಚನೆಯನ್ನೂ ಮಾಡುತ್ತಿಲ್ಲ. ದೇಶದಲ್ಲಿ ನಡೆಯುತ್ತಿರುವ ಕ್ರಾಂತಿ, ಪ್ರಾದೇಶಿಕ ಪಕ್ಷಗಳ ಬೆಳವಣಿಗೆಗಳನ್ನು ನೋಡುತ್ತಿದ್ದರೇ ಈ ಬಾರಿ ತೆನೆಹೊತ್ತ ಮಹಿಳೆ ಏನಾದರೂ ಮ್ಯಾಜಿಕ್ ಮಾಡಬಹುದೇನೋ ಎಂಬ ನಿರೀಕ್ಷೆಯಿದೆ.

ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಪಾತ್ರವಿಲ್ಲದೇ ತೆರೆಬೀಳುವುದಕ್ಕೆ ಸಾಧ್ಯವಿಲ್ಲ ಎಂಬುದು ಆಗಾಗ್ಗೆ ಸಾಬೀತಾಗಿದೆ. ಮೊನ್ನೆ ನಡೆದ ಕೇರಳ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಿತ್ತು. ಆ ಪೈಕಿ ಮೂರರಲ್ಲಿ ಜೆಡಿಎಸ್ ಕೈಮೇಲಾಗಿತ್ತು. ಆನಂತರ ದೇವೇಗೌಡರು ಎಲ್ಡಿಎಫ್ಗೆ ಬೆಂಬಲ ಘೋಷಿಸಿದ್ದರು. ದೇವೇಗೌಡರ ಹವಾದ ಮುಂದೆ ಅಲ್ಲಿ ಬಿಜೆಪಿಯ ಅಲೆಗಳು ಏಳಲಿಲ್ಲ. ಪಕ್ಕದ ರಾಜ್ಯದಲ್ಲಿ ಜೆಡಿಎಸ್ಗೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದು ಅದು ರಾಜ್ಯ ರಾಜಕಾರಣದಲ್ಲೂ ಮುಂದುವರಿಯುವ ಸಾಧ್ಯತೆಗಳಿವೆ. ಏಕೆಂದರೇ ಇಲ್ಲಾಗಲೇ ಆಡಳಿತ ಪಕ್ಷದ ಮೇಲೆ ಮತದಾರ ನಿರಾಸೆ ಹೊಂದಿದ್ದಾನೆ. ಬಿಜೆಪಿ ಸ್ಥಿತಿಗತಿಯೂ ಚೆನ್ನಾಗಿಲ್ಲ. ಪರಿಪೂರ್ಣವಾಗಿ ದೇವೇಗೌಡರು ಇಲ್ಲಿ ಗೆಲ್ಲುತ್ತಾರೆ ಎನ್ನುವುದಕ್ಕಿಂತ, ಹೆಚ್ಚು ಸ್ಥಾನಗಳನ್ನು ಗೆದ್ದು ಅವರಿವರ ಬೆಂಬಲದಿಂದ ಆಡಳಿತಕ್ಕೆ ನಡೆಸುವ ಸಾಧ್ಯತೆಯಿದೆ.

POPULAR  STORIES :

ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!

ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?

ಐಶ್ ಮೇಲೆ ಅಭಿ ಗುರ್ರ್ ಅಂದಿದ್ದು ಇದಕ್ಕಾ… ?

ಆಕ್ರಮಣಶೀಲ ಆಟಗಾರ ಕೋಹ್ಲಿ `ಪೇಂಟಿಂಗ್’ ಮೂಲಕ ಎಲ್ಲರನ್ನೂ ನಗಿಸಬಲ್ಲ!

ಅಜರ್ ಯಾಕೆ ತನ್ನ ಕಾಲರ್ ನ ಮೇಲಕ್ಕೆತ್ತಿ ಆಟವಾಡ್ತಿದ್ರು ಗೊತ್ತಾ..?

2012 ಕಟ್ಟುಕಥೆ..! 2050 ಅಸಲಿ ಕಥೆ..! ನಡುಗಿಸುತ್ತದೆ ಈ ವರದಿ..!

ಹುಲಿದೈವ ಸ್ಪರ್ಶಿಸಿದ್ರೆ ಸಾವು ಖಚಿತ….!

400 ವರ್ಷಗಳ ಹಿಂದಿನ ಶವಗಳು ಕೊಳೆತಿಲ್ಲ..! ಈ ಗುಹೆ ಪ್ರವೇಶಿಸುವುದಕ್ಕೆ ಎಂಟೆದೆ ಬೇಕು..!?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...