ವಿಜಯಪುರದ ವಿದ್ಯಾರ್ಥಿನಿಯಿಂದ ಪಾಕ್ ಪರ ಪೋಸ್ಟ್: ದೂರು ದಾಖಲು
ವಿಜಯಪುರ: ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದ ಬಳಿಕ ಭಾರತ ʻಆಪರೇಷನ್ ಸಿಂಧೂರʼ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಭಿಕಾರಿಸ್ತಾನದ ಮೇಲೆ ಮಿಸೈಲ್‌ಗಳ ಸುರಿಮಳೆಗೈದಿದೆ. ಈ ನಡುವೆ ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಪಾಕಿಸ್ತಾನದ ಜನರ ಪರ ಹಾಗೂ ಅವರ ಸುರಕ್ಷತೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೇಶ ವಿರೋಧಿ ಪೋಸ್ಟ್ ಹಂಚಿಕೊಂಡಿದ್ದಾಳೆ. ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪೆಹೆಲ್ಗಾಮ್ನಲ್ಲಿ ಪಾಕ್ ಉಗ್ರರಿಂದ 26 ಭಾರತೀಯ ಪ್ರವಾಸಿಗರ ಹತ್ಯೆ ವಿಚಾರವಾಗಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡುವ ಮೂಲಕ ಭಾರತೀಯ ಸೇನೆ ಈಗಾಗಲೇ ಪ್ರತೀಕಾರ ತೀರಿಸಿಕೊಂಡಿದೆ. ಸದ್ಯ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದೆ. ಈ ಮಧ್ಯೆ ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ತಷಾವುದ್ದ ಫಾರೂಖಿ ಶೇಖ್ ಎಂಬ ವಿದ್ಯಾರ್ಥಿನಿ ಪಾಕಿಸ್ತಾನದ ಪರ ಪೋಸ್ಟ್ ಹರಿಬಿಟ್ಟಿದ್ದಾಳೆ.
ವಿದ್ಯಾರ್ಥಿನಿ ತಷಾವುದ್ದ ಫಾರೂಖಿ ಶೇಖ್ ಪೋಸ್ಟ್ ವೈರಲ್ ಬೆನ್ನಲ್ಲೇ ಆಕೆಯ ವಿರುದ್ಧ ಕಾನೂನು ಕ್ರಮಕ್ಕೆ ಹಿಂದೂ ಪರ ಸಂಘಟನೆಗಳಿಂದ ಒತ್ತಾಯಿಸಲಾಗಿದೆ. ಬಳಿಕ ಪಿಎಸ್ಐ ವಿನೋದ ದೊಡಮನಿಯಿಂದ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.
ಪಾಕ್ ಪರ ಪೋಸ್ಟ್ ಹಾಕಿದ್ದಕ್ಕೆ ದೇಶದ ಸಾರ್ವಭೌಮತ್ವದ ಘನತೆಗೆ ಅಪಾಯಕಾರಿಯಾಗುವ ರೀತಿಯಲ್ಲಿ, ದೇಶದ ಏಕತೆಗೆ ಧಕ್ಕೆ ತರುವಂತಹ ಪೋಸ್ಟ್ ಹಾಕಿದ ಕಾರಣ ದಂತ ವೈದ್ಯಕೀಯ ವಿದ್ಯಾರ್ಥಿನಿ ತಷಾವುದ್ದ ಮೇಲೆ BNS 152. 197.3(5) ಅಡಿ ದೂರು ದಾಖಲಾಗಿದೆ.