ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ…!! Real Love Story

Date:

ಪ್ರತಿ ಮುಂಜಾನೆ 8 ಕ್ಕೆ ಶಿವಮೊಗ್ಗ ಬಸ್ ಹಾರನ್ ಸೌಂಡ್ ಆಯ್ತು ಅಂದ್ರೆ ಸಾಕು.. ಚಳಿ, ಗಾಳಿ, ಮಳೆ ಅಂತಾನೂ ನೋಡ್ದೆ ಅಡ್ಡ ದಾರಿಯಲ್ಲಿ ಬಸ್ ಹಿಡಿಯಲು ಹೋಗುವ ಹುಡ್ಗ, 7.45ಕ್ಕೆ ಸರಿಯಾಗಿ ಬಸ್ ಸ್ಟಾಂಡ್‍ಗೆ ಬಂದ್ಬಿಡ್ತಾ ಇದ್ದೆ..! ಎಲ್ಲಿ ಬಸ್ ಹೋಗಿಬಿಟ್ಟಿರುತ್ತೋ ಅಂತ ಜೀವ ಕೈಯಲ್ಲಿಡಿದು ಆಚೀಚೆನೂ ನೋಡ್ದೆ ನಿಟ್ಟುಸಿರು ಬಿಡುತ್ತಾ ಓಡುತ್ತಿದ್ದೆ, ಬಸ್ ಸ್ಟಾಂಡ್ ಕ್ರಾಸ್ ನಲ್ಲಿ ಬಸ್ ನಿಂತಿರುವುದು ನೋಡಿದ್ದೆ ಅರ್ಧ ಜೀವ ಬಂದಾಂಗೆ ಆಗುತಿತ್ತು. ಬಸ್ಸಿನ ಇಂದಿನ ಡೋರ್ ನಲ್ಲಿ ನಿಂತು ಜೋರಾಗಿ ಉಸಿರು ಬಿಡುತ್ತಾ ತಲೆ ಮೇಲೆತ್ತಿ ನೋಡುದ್ರೆ ತನ್ನ ಸುಂದ್ರಿ ಕಾಣ್ತಾ ಇದ್ಲು.. ಅಪ್ಪ, ಅಮ್ಮ ಇಡೀ ಜಗತ್ತನ್ನೇ ಮರೆತು ಕೇವಲ ಐದು ನಿಮಿಷ ಮಾತಾಡೋಕೆ ಆಕೆ ಕಾತರೆಯುತ್ತಿದ್ಲು, ಐದೇ ಐದು ನಿಮಿಷ ಕೈಮೇಲೆ ಕೈ ಇಟ್ಟು ಕಣ್ಣಿನ ಸನ್ನೆಯ ಮೂಲಕವೇ ಮಾತನಾಡುತ್ತಾ ಎರಡು ವರ್ಷ ಕಳೆದವು.
ಮಧ್ಯಾಹ್ನ 1 ಗಂಟೆಗೆ ಅವಳ ಕಾಲೇಜು ಮುಗಿದಿದ್ದೆ ಇಬ್ಬರು ಚಡ್ಡಿದೊಸ್ತ್ ಜೊತೆ ಅವಳ ಕಾಲೇಜಿನ ಮುಂದೆಯೇ ಸಾಗ್ತಾ ಇದ್ವಿ.. ನಾನಂತೂ ಲವ್ವಲ್ಲಿ ಬಿದ್ದು ಮನೆಮಠ, ಕಾಲೇಜು ಎಲ್ಲವನ್ನು ಮರೆತಿದ್ದೆ. ಇನ್ನು ನನ್ನಿಂದ ಹತ್ತು ಪೈಸೆ ಲಾಭವಿಲ್ಲದೆ ಇದ್ರೂ ನನ್ನ ಗೆಳೆಯರು ನನ್ನ ಜೊತೆ ಸದಾ ಇರ್ತಿದ್ರು.. ಆಕೆ ಯಾವ್ ಬಸ್ ಹತ್ತುತ್ತಾಳೆ..? ಆ ಬಸ್‍ನಲ್ಲಿ ಯಾರಾದ್ರೂ ಊರ್ನೋರು ಇದಾರಾ..? ಅಂತೆಲ್ಲಾ ಇನ್ಫರ್ಮೇಷನ್ ಕೊಡ್ತಾ ಇದ್ದಿದ್ದೇ ಈ ಕುಚುಕುಗಳು..! ನಾಲ್ಕು ತಿಂಗಳು ಅವಳ ಹಿಂದೆ ಮನೆ ಕಾಯೋ ನಾಯಿ ತರ ಸುತ್ತಿದ್ದೆ ನೋಡಿ..! ಟೈಪಿಂಗ್ ಕ್ಲಾಸ್ ನಿಂದ ಹಿಡಿದು ಕಂಪ್ಯೂಟರ್ ಕ್ಲಾಸ್, ಕಾಲೇಜ್ ವರೆಗೂ ಅವಳು ಮುಂದೆ ಮುಂದೆ ಹೊಗುತ್ತಿದ್ರೆ ನಾನು ಹಿಂದೆ ಕಳ್ಳನ ರೀತಿ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ಸಾಗುತ್ತಿದ್ದೆ. ಆದ್ರೆ ಆ ಪಾರ್ಟಿ ಸ್ಮೈಲ್ ಹೋಗ್ಲಿ ರೀ.. ನಾಲ್ಕು ತಿಂಗ್ಳು ನನ್ನುನ್ನ ತಲೆ ಎತ್ತಿ ಸಹ ನೋಡ್ಲೇ ಇಲ್ಲ..! ಅಷ್ಟೆ ಯಾಕೆ ಕಂಪ್ಯೂಟರ್, ಟೈಪಿಂಗ್ ಕ್ಲಾಸ್ ಅವಳು ಎಲ್ಲೆಲ್ಲಿ ಸೇರಿದ್ಲೋ ಅಲ್ಲೆಲ್ಲಾ ನಾನೂ ಜಾಯ್ನ್ ಆಗೋ ಪರಿಸ್ಥಿತಿಗೆ ಬಂದೆ ನೋಡಿ..! ಅವಳು ಹೋಗ್ತಾ ಇದ್ದ ಟೈಮ್‍ಗೆ ನಾನು ಹೋಗ್ತಿದ್ದೆ. ನಾಲ್ಕು ತಿಂಗಳು ಮನೆ, ಕಾಲೇಜು, ಊಟ ತಿಂಡಿ ಎಲ್ಲವನ್ನು ಮರೆತೇ ಬಿಟ್ಟೆ.
ಇವತ್ತೇನಾದ್ರೂ ಆಗ್ಲಿ ಅಂತ ಡಿಸೈಡ್ ಮಾಡ್ಕೊಂಡು ತಲೆತಗ್ಗಿಸ್ಕೊಂಡು ಟೈಪ್ ಮಾಡ್ತಾ ಇದ್ದ ಅವಳ ಬಳಿ ಹೋಗಿ ಹೇಗೋ ಕಷ್ಟ ಪಟ್ಟು ಭಯ ಪಡ್ತಾನೆ ನಿಮ್ಮ ಹೆಸ್ರು ವಿನಯ ಅಲ್ವಾ ನಾನು ನಿಮ್ಮ್ ಊರೆ ಕಣ್ರಿ ನೋಡಿದ್ದೀರಾ ನನ್ನ ಅಂದ್ಬಿಟ್ಟೆ..! ಆದ್ರೆ ಪಾರ್ಟಿ ಹೂ ಅಂದಿದ್ದು ಬಿಟ್ರೆ ಉಸ್ರೆ ಬಿಡ್ಲಿಲ್ಲ..! ಆದ್ರೂ ನಾನ್ ಬಿಡ್ತೀನಾ..? ಮರಳಿ ಪ್ರಯತ್ನವ ಮಾಡು ಅಂತ ದೊಡ್ಡೋರ್ ಗಾದೆನ ಫಾಲೋ ಮಾಡಿ ಅಂತೂ ಇಂತು ನಂಬರ್ ಎಕ್ಸ್ ಚೇಂಜ್ ಮಾಡಿಕೊಳ್ಳುವ ಹಂತಕ್ಕೆ ಮಾಡ್ಕೊಂಡೆ.. ನನ್ನ ಮನಸ್ಸಿನಲ್ಲಿರುವ ಹುಚ್ಚು ಭಾವನೆಗಳನ್ನ ಹೇಗೆ ಹೇಳ್ಕೊಳೋದು..? ಅಂತ ಪ್ರತಿನಿತ್ಯ ಯೊಚಿಸುತ್ತಿದ್ದೆ. ಫ್ರೆಂಡ್ ಆಗೋಕೆ ನಾಲ್ಕು ತಿಂಗ್ಳು ಅಲಿಬೇಕಾಯ್ತು ಇನ್ನು ಲವ್ ಅಂತಾ ಹೇಳುದ್ರೆ ಪಕ್ಕಾ ಹೊಗೆ ಅಂದುಕೊಂಡೆ. ಪ್ರತೀ ದಿನ ಸಣ್ಣದೊಂದು ಡೈರಿಮಿಲ್ಕ್ ಚಾಕ್ಲೇಟ್ ತಂದ್ಕೊಂಡ್ತಿದ್ದೆ.. ಇದೇ ಚಳಿಗಾಲ ಕಣ್ರಿ ನನ್ನ ಮನಸ್ಸನ್ನ ಹಾಳ್ ಮಾಡಿದ್ದು ಅವತ್ತು ಏನ್ ಆಯ್ತೋ ಗೊತ್ತಿಲ್ಲ ಏನಾದ್ರು ಆಗ್ಲಿ ಇವತ್ತು ಪ್ರಪೋಸ್ ಮಾಡ್ಲೇಬೇಕು ಅಂತಾ ಒಂದು ಡೈರಿಮಿಲ್ಕ್ ಜೊತೆ ಒಂದು ರೆಡ್ ರೋಸ್ ತಕ್ಕೊಂಡು ಹೊರಟೆ.. ವಿಚಿತ್ರ ಭಯ ಆದ್ರೂ ಛಲ ಬಿಡ್ಲಿಲ್ಲ. ದಿನಾ ಮಾಮೂಲಿ ಚಾಕ್ಲೇಟ್ ಕೊಡ್ತಿದ್ದೆ ಏನ್ ಇವತ್ತು ದೊಡ್ಡ್ ಡೈರಿಮಿಲ್ಕ್ ಅಂದ್ಲು ಮನಸ್ಸಲ್ಲೆ ನಿನ್ನ ಪೂಸಿ ಹೊಡಿಯೋಕೆ ಅಂದುಕೊಂಡೆ..
ನಿನಗೊಂದು ಸರ್ಪ್ರೈಸ್ ಇದೆ ಕಣ್ಣು ಮುಚ್ಚು ಅಂದೆ.. ಪಾಪಚ್ಚಿ ವಿನಯ ಎನ್ನುವ ಹೆಸರಿಗೆ ತಕ್ಕಂತೆ ವಿನಯತೆಯಿಂದಲೇ ಹೇಳಿದ್ಕೂಡ್ಲೆ ಕಣ್ಣು ಮುಚ್ಚಿದ್ಲು.. ಧೈರ್ಯ ಮಾಡಿ ಕೆನ್ನೆಗೊಂದು ಮುತ್ತಿಕ್ಕಿ ಐ ಲವ್ ಯು ಅಂದು ಕೈಗೊಂದು ರೊಸ್ ಕೊಟ್ಟೇಬಿಟ್ಟೆ..! ತಕ್ಷಣ ಕೆನ್ನೆಗೊಂದು ಚಟ್ ಅಂತ ಬಿತ್ತು.. ಅನ್ಕೊಂಡೆ..! ಆದ್ರೆ ಅಲ್ಲಾಗಿದ್ದೇ ಬೇರೆ..! ನನ್ನುನ್ನ ಗಟ್ಟಿಯಾಗಿ ತಬ್ಬಿ ನಾಚಿ ನೀರಾಗಿ ತಲೆತಗ್ಗಿಸಿ ಮನೆಗೆ ಹೊರಟೇಬಿಟ್ಲು..! ಒಂದು ಹತ್ತು ನಿಮಿಷದ ಬಳಿಕ ನೀನು ಈ ರೀತಿ ಮಾಡ್ತಿಯಾ ಅಂದ್ಕೊಂಡೆ ಇರ್ಲಿಲ್ಲಾ.. ಅಂತ ಒಂದೈದು ನಿಮಿಷ ಬೈದ್ಲು..! ನಾನು ಇನ್ನೇನ್ ಕ್ಲಾಸ್ ತಗೊಂಡ್ಲಪ್ಪಾ ಅನ್ನುವಷ್ಟ್ರಲ್ಲಿ ಅತ್ತ ಕಡೆಯಿಂದ ಐ ಲವ್ ಯು 2 ಅಂತ ಹೇಳೆ ಬಿಟ್ಲು..! ಅಲ್ಲಿಂದ ನಮ್ಮಿಬ್ರ ಲವ್ ಪಯಣ ಶುರುವಾಯ್ತು..! ಲವ್ ಆಗ್ದಲೇ ಅಷ್ಟೆಲ್ಲಾ ಸುತ್ತಾಡಿದ್ದೆ ಲವ್ ಆದ್ಮೇಲೆ ಕೇಳ್ಬೇಕಾ! ಅವಳ ಬೆನ್ನತ್ತಿದ್ದ ಬೇತಾಳದಂತಾದೆ.
ಪ್ರೀತಿ ಅಂತ ಆದ್ಮೇಲೆ ಅದಕ್ಕೆ ಒಬ್ರಾದ್ರು ವಿಲನ್‍ಗಳು ಇರ್ಲೇಬೇಕಲ್ವಾ..? ಹಾಗೆ ನಮ್ ಲವ್ ಸ್ಟೋರಿಲೂ ಕೂಡ ಮನೇಲಿ ಒಬ್ರು.. ಹೊರಗೆ ಸಾಕಷ್ಟು ಜನ ಇದ್ರು.. ಬಟ್ ಅವರ ಮನೇಲಿ ತಂಗಿಯೇ ನಮ್ಮ ಪಾಲಿಗೆ ದೊಡ್ಡ ಶತ್ರು ಆಗ್ಬಿಟ್ರು. ಆಗಾಗ ಲವ್‍ನಲ್ಲಿ ಏರುಪೇರು ಆಗುತಿತ್ತು ಸ್ವಲ್ಪದ್ರಲ್ಲೇ ಸರಿಯಾಗುತಿತ್ತು. ನಮ್ಮದೇ ಲೋಕದಲ್ಲಿ ಇಬ್ಬರೂ ಮುಳುಗಿದ್ವಿ.
ಪ್ರತಿದಿನ ಕಣ್ಣುಮುಚ್ಚಿದ್ರೆ ಅವಳಿಗೆ ನಾನು, ನನಗೆ ಅವಳು ಅಷ್ಟೆ ಕಾಣ್ತಾ ಇದ್ದಿದ್ದು. ಹೀಗೆ ಒಮ್ಮೆ ಮೂರು ದಿನ ಆದ್ರೂ ಮೆಸೇಜ್, ಕಾಲ್ ವಿನಯ ಕಡೆಯಿಂದ ಬಂದಿರ್ಲಿಲ್ಲ. ನನಗೆ ಭಯದ ಜೊತೆಗೆ ಹತ್ತಾರು ಪ್ರಶ್ನೆಗಳು ಕಣ್ಣಮುಂದೆ ಬಂದ್ವು. ಏನಾಯ್ತೋ ಏನೋ ಅಂದ್ಕೊಳ್ಳೋ ಟೈಮ್‍ಗೆ ಗೆಳೆಯನಿಂದ ತಿಳಿಯಿತು ನಮ್ಮುಡ್ಗಿ ತಂದೆ ಸತ್ತೊದ್ರು ಅಂತಾ..! ಆ ಟೈಮ್ನಲ್ಲಿ ನಾನು ಅವಳ ಜೊತೆ ಇರ್ಲಿಲ್ಲ ಎನ್ನುವ ಗಿಲ್ಟ್ ಇವತ್ತಿಗೂ ಕಾಡ್ತಾ ಇದೆ. ನನ್ನ ಪ್ರತಿಯೊಂದು ನೋವಿನ ಸಮಯದಲ್ಲಿ ತನ್ನ ನೋವಂತೆ ಸಮಾಧಾನಿಸುತ್ತಿದ್ಲು. ತಂದೆಯನ್ನು ಕಳೆದುಕೊಂಡು ದುಃಖದಲ್ಲಿದ್ದಾಗ ನನ್ನ ಕೈಲಾದಷ್ಟು ಪ್ರೀತಿಯನ್ನು ಕೊಟ್ಟು ಸಮಾಧಾನಿಸುತ್ತಿದ್ದೆ, ಅಂತಹ ಸಮಯದಲ್ಲಿ ನನ್ನ ಯಾರಿಗೂ ಬಿಟ್ಟುಕೊಡಬೇಡ ನಿನ್ನ ಬಿಟ್ಟು ಬದುಕುವ ಶಕ್ತಿ ನನಗಿಲ್ಲ ಅನ್ನುತ್ತಿದ್ಲು.. ಆ ಟೈಮ್ನಲ್ಲಿ ನನಗೆ ಆ ಮಾತುಗಳು ತಲೆಗೆ ಹೊಗುತ್ತಿರಲಿಲ್ಲ ಅವತ್ತು ಅವಳ ಮಾತನ್ನು ಕೇಳಿದ್ರೆ ಈ ಪರಿಸ್ಥಿತಿ ಬರುತ್ತಿರಲಿಲ್ಲವೋ.. ಏನೋ?
ಒಂದೆರಡು ಭಾರಿ ಲವ್ ಮಾಡುತ್ತಿರುವ ವಿಷಯ ತಿಳಿದು ಅವರಮ್ಮ ಕೆನ್ನೆಗೆ ಬಾರ್ಸಿರೋದು ಇದೆ ಆದ್ರೆ ಹೆಣ್ಣೆತ್ತಿರುವ ತಾಯಿ ನೋವಿನಲ್ಲಿ ಹೊಡೆದಿದ್ದಾರೆ ಎಂದುಕೊಂಡು ಸುಮ್ಮನಾಗುತ್ತಿದ್ದೆ. ಕಲ್ಲುಮುಳ್ಳುಗಳ ನಡುವೆಯೇ ನಮ್ಮ ಪ್ರೀತಿಗೆ 6 ವರ್ಷ ತುಂಬಿ ಬಿಡ್ತು. ನನಗೆ ಒಂದೊಳ್ಳೆ ಉದ್ಯೋಗವೂ ಸಿಕ್ತು, ದಿನಕ್ಕೆ ನೂರು ಬಾರಿ ಬೇಗ ಮದುವೆಯಾಗು ನನಗೆ ಮನೆಯಲ್ಲಿ ಇರಲು ಸಾಧ್ಯವಿಲ್ಲ ಅಂತಾ ಇದ್ಲು. ಆಗ ನನಗೆ ಅರ್ಥವೇ ಆಗ್ತಾ ಇರ್ಲಿಲ್ಲ.. ಮನೆಯವ್ರನೆಲ್ಲಾ ಎದ್ರಾಕೊಂಡು ಮಾತನಾಡುವಷ್ಟು ಧೈರ್ಯ ನನಗೂ ಇರ್ಲಿಲ್ಲ ಮನೆವ್ರ ಮುಂದೆ ಮಾತಾಡೋ ಧೈರ್ಯ ಅವಳೂ ಮಾಡ್ಲಿಲ್ಲ..!
ಕುಟುಂಬದಲ್ಲಿನ ಸಮಸ್ಯೆಗಳನ್ನೆಲ್ಲಾ ಬಗೆಹರಿಸಿ ನಂತರ ಮದುವೆಯಾಗೋಣ ಇನ್ನೆರಡು ವರ್ಷ ನನಗೆ ಟೈಮ್ ಕೊಡು ಆಮೇಲೆ ಲೈಫ್ ನಲ್ಲಿ ಒಂದು ಹಂತಕ್ಕೆ ಸೆಟಲ್ ಆಗಿರುತ್ತೇನೆ ಅಂದ್ರೂ ಕೂಡ ಪರಿಸ್ಥಿತಿ ಕೈ ಮೀರಿತ್ತು..! ಅವಳಿಗೆ ಮದ್ವೆ ಮಾಡ್ಸೋಕೆ ಎಲ್ಲಾ ಸಿದ್ಧತೆ ನಡೀತಾ ಇದೆ ಅನ್ನೋ ವಿಷಯ ವಿನಿಯನ್ನ ಊರಿಗೆ ಕರೆದುಕೊಂಡು ಹೋಗುವಾಗ್ಲೆ ಅರ್ಥವಾಗಿದ್ದು. ಊರಿಗೆ ಒತ್ತಾಯ ಮಾಡಿ ಕರೆದುಕೊಂಡು ಹೋಗುವ ಸಮಯದಲ್ಲಿ ಹತ್ತಾರು ಬಾರಿ ನನ್ನ ಕೈಬಿಡಬೇಡ, ಮತ್ತೊಬ್ಬರಿಗೆ ಬಿಟ್ಟುಕೊಡಬೇಡ ನೀನಿಲ್ಲ ಅಂದ್ರೆ ನಾನು ಬದ್ಕೋದಿಲ್ಲ ನನ್ನ ಕರೆದುಕೊಂಡೋಗು ಎನ್ನುತ್ತಿದ್ಲು. ಆದ್ರೆ ಮದುವೆ ಮಾಡಲು ಎಲ್ಲಾ ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವ ಸತ್ಯ ಮಾತ್ರ ತಿಳಿದಿದ್ದು ಹುಡ್ಗ ಹುಡುಗಿಯನ್ನು ನೊಡಲು ಬಂದ ದಿನವೇ..!
ನಮ್ಮ ಹುಡ್ಗಿ ಸೀರೆಯನ್ನುಟ್ಟು ಹುಡ್ಗನ ಮುಂದೆ ನಿಂತಿದ್ದಾಳೆ..! ಹುಡ್ಗ ಹುಡುಗಿಯನ್ನು ನೋಡಿ ಒಪ್ಪಿಕೊಂಡ ನಿನಗೆ ಹುಡ್ಗ ಇಷ್ಟಾವಾ ಎಂದು ಕೇಳಿದರೆ ಹೌದು, ಇಲ್ಲ ಎನ್ನುವಷ್ಟು ಶಕ್ತಿ ಸಹ ಆಕೆಗಿಲ್ಲ. ಮನೆಯವರೆಲ್ಲಾ ಒತ್ತಾಯದಿಂದ ಹೌದು ಎನ್ನಿಸಿದ್ದಾರೆ..! ಎಂಗೇಜ್ಮೆಂಟ್‍ಗೆ ಜಸ್ಟ್ ನಾಲ್ಕು ದಿನ ಮಾತ್ರ ಬಾಕಿ ಇದೆ ಅಂದು ಮೆಸೇಜ್ ಮಾಡಿದ್ದ ವಿನಿಯಾ ನನಗೆ ಬದುಕಲಾಗುತ್ತಿಲ್ಲ ನನ್ನ ಮರೆತುಬಿಡು ನಾನು ಸಾಯುತ್ತೇನೆ ನನಗೆ ಮದುವೆ ಇಷ್ಟವಿಲ್ಲ ಅಂತ ಮೆಸೇಜ್ ಹಾಕಿದ್ಲು. ತಕ್ಷಣ ಹುಡ್ಗನ ನಂಬರ್ ಹೇಗಾದ್ರು ಕಲೆಕ್ಟ್ ಮಾಡು ಎಂದೆ ಕಷ್ಟಪಟ್ಟು ಎರಡು ದಿನಗಳ ನಂತರ ಕೊಟ್ಲು ನನ್ನ ಸ್ನೇಹಿತ್ರು ಪಾಪ ಎಲ್ಲಾ ಕಷ್ಟವನ್ನು ತಮ್ಮ ಮೇಲೆ ಹಾಕಿಕೊಂಡು ಹುಡ್ಗನಿಗೆ ಜೊತೆಗೆ ಹುಡ್ಗಿಯ ಮನೆಯವರಿಗೆ ಈ ಮದ್ವೆ ಆಕೆಗೆ ಇಷ್ಟವಿಲ್ಲ ಎಂದಿದ್ದಾರೆ. ಹುಡ್ಗನದು ದೊಡ್ಡ ಮನಸ್ಸು ಕಣ್ರಿ ಇಷ್ಟವಿಲ್ಲ ಎಂದಿದ್ದೆ ಮದುವೆ ಬೇಡ ಎಂದಿದ್ದಾನೆ. ಆದರೂ ಸಹ ಜಾತಿ, ದುಡ್ಡಿನ ವ್ಯಾಮೋಹದಿಂದ ಹುಡ್ಗನಿಗೆ ಒತ್ತಾಯಿಸಿದ್ದಾರೆ ಆದ್ರೂ ಹುಡ್ಗ ಒಪ್ಪಿಲ್ಲ ಅನ್ನೋದು ಸಂತೋಷ.
ಸಂತೋಷದ ಹಿಂದೆಯೇ ಮತ್ತೊಂದು ದುಃಖದ ಸಂಗತಿ ಕಾದಿತ್ತು ನೋಡಿ..! ಹುಡ್ಗಿ ಮೆಸೇಜ್ ಕಾಲ್ ಮಾಡ್ದಲೆ ವಾರದ ಮೇಲಾಗಿತ್ತು, ಆಕೆಯ ಮಾವ ಕಾಲ್ ಮಾಡಿ ನೀನು ಆಕೆಗೆ ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ಮಾಡಿಕೊಡು ಅಂದ್ಬಿಟ್ರು..! ಆ ಮಾತು ಕೇಳಿದ್ದೆ ಕಣ್ಣೀರ ಹನಿಗಳು ಮನಸ್ಸಿನ ನಿಯಂತ್ರಣ ತಪ್ಪಿ ಕೆನ್ನೆಗೆ ಮುತ್ತಿಕ್ಕುತ್ತಾ ಭೂಮಿಗೆ ಅಪ್ಪಳಿಸಿದ್ವು.. ಅವಳ ಜೊತೆ ಮಾತನಾಡ್ಬೇಕು ಕೊಡಿ ಎಂದಿದ್ದೆ ಹಲೋ ಅಂದ್ಲು ಬಿಟ್ರೆ ಮತ್ತೊಂದು ಮಾತೇ ಹೊರಡಲಿಲ್ಲ..! ನನ್ನ ಮಾತು ಕೇಳಿದ್ದೆ ಜೋರಾಗಿ ಅಳಲು ಶುರುಮಾಡಿದ್ಲು ತಕ್ಷಣ ಫೋನ್ ಇಸ್ಕೊಂಡ್‍ಬಿಟ್ರು ಕಣ್ರಿ ನಿಜ್ವಾಗಲೂ ಅವ್ರು ಮನುಷ್ಯರೇ ಅಲ್ಲ ಅನ್ನಿಸಿಬಿಡ್ತು.
ಅದರ ಜೊತೆಗೆ ಮತ್ತೊಂದು ಶಾಕ್..! ಅವಳು ಮದುವೆಯಾಗಲು ಒಪ್ಪಿದ್ದಾಳೆ ಪ್ಲೀಸ್ ನೀವ್ ಒಪ್ಪಿ ಎಂದು ರಿಕ್ವೆಸ್ಟ್ ಮಾಡಿಕೊಂಡ್ರು. ಅವಳು ಒಪ್ಪಿರಲು ಸಾಧ್ಯವೇ ಇಲ್ಲ ಎನ್ನುವ ಸತ್ಯ ಗೊತ್ತು. ಜಾತಿ, ಹಣದ ಗುಂಗಿನಲ್ಲಿರುವ ರಾಕ್ಷಸರಿಗೆ ಪ್ರೀತಿಯ ಬೆಲೆ ಅರ್ಥವಾಗಬೇಕಲ್ಲ. ಕಣ್ಣೀರಾಕುತ್ತಾ ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ, ನಿಮ್ಮ ಬಿಡಿಗಾಸು ಸಹ ನನಗೆ ಬೇಡ ಅವಳನ್ನ ನನಗೆ ಕೊಟ್ಟುಬಿಡಿ ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲ ಎಲ್ಲಾದ್ರು ದೂರ ಹೋಗಿ ಬದುಕುತ್ತೇವೆ ಪ್ಲೀಸ್ ಅಂತ ಪರಿಪರಿಯಾಗಿ ಬೇಡಿಕೊಂಡೆ.. ವಿಷ ತುಂಬಿರುವ ಹಾವುಗಳನ್ನಾದ್ರು ನಂಬಬಹುದು ಇವರನ್ನ ನಂಬಲಾರದು ಎಂದುಕೊಂಡೆ. ಕೊನೆಗೂ ಮದ್ವೆ ನಿಂತು ಹೋಯ್ತು.. ಆದ್ರೆ ಅವಳಿಗೆ ಎಷ್ಟು ಚಿತ್ರಹಿಂಸೆ ಕೊಡುತ್ತಿದ್ದಾರೊ, ಅವಳ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ ಅವಳನ್ನು ನೋಡದೆ ತಿಂಗಳ ಮೇಲಾಯ್ತು ಮಾತನಾಡ್ದೆ ವಾರದ ಮೇಲಾಯ್ತು. ಜೀವ ಬದುಕಿದ್ದು ಸತ್ತಂತಾಗಿದೆ. ಅವಳಿಲ್ಲದ ಜೀವನವನ್ನು ಕಲ್ಪನೆ ಮಾಡಿಕೊಳ್ಳೋಕು ಸಹ ಸಾಧ್ಯವಾಗುತ್ತಿಲ್ಲ. ಅವಳಿಲ್ಲದೆ ನನ್ನ ಜೀವನ ಶೂನ್ಯ ಮುಂದೇನು ಮಾಡಲಿ ಎನ್ನುವುದೇ ತೋಚದಂತಾಗಿದೆ. ಆಕೆ ನನಗೆ ಸಿಕ್ಕೇ ಸಿಗುತ್ತಾಳೆ ಎನ್ನುವ ಭರವಸೆಯಲ್ಲಿದ್ದೇನೆ. ಇನ್ನು ಕಾಯುವಷ್ಟು ಶಕ್ತಿ ನನಗಿಲ್ಲ ಗೆಳತಿ ಬೇಗ ಬಂದುಬಿಡು..ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ….

  • ಹಾಲೇಶ್ ಎಂ.ಎಸ್ ಹುಣಸನಹಳ್ಳಿ

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಜನವರಿಯಿಂದ ಜಿಯೋ ಫ್ರೀ ಇಂಟರ್‍ನೆಟ್ ಕ್ಯಾನ್ಸಲ್..?!!

ಬ್ಯಾಂಕ್ ಜೊತೆ ಬ್ಯುಸಿನೆಸ್ ಮಾಡಲು ಅವಕಾಶ, ಪ್ರತಿ ತಿಂಗಳು 30,000 ತನಕ ಆದಾಯ

ಉತ್ತರ ಕೊರಿಯಾದಲ್ಲಿ ಕ್ರಿಸ್ಮಸ್ ಆಚರಿಸುವಂತಿಲ್ಲ..! ಅದರ ಬದಲು ಏನು ಮಾಡ್ಬೇಕು ಗೊತ್ತಾ..?

ಶಮಿ ಪತ್ನಿಯ ಡ್ರೆಸ್ ಬಗ್ಗೆ ಟೀಕೆ, ಟೀಕಾಕಾರರಿಗೆ ನಾಚಿಕೆಯಾಗಬೇಕು : ಮಹಮ್ಮದ್ ಕೈಫ್

ಬೇನಾಮಿ ಆಸ್ತಿ ಹೊಂದಿರುವರ ಮೇಲಿದೆ ಮೋದಿಯ ಹದ್ದಿನ ಕಣ್ಣು..!

ಆಧಾರ್ ಪೇಮೆಂಟ್ ಆ್ಯಪ್ ಬಳಸೋದಾದ್ರೂ ಹೇಗೆ..?

ಎಚ್ಚರ..! ಚೆಕ್ ಬೌನ್ಸ್ ಆದ್ರೆ ಅದು ಜಾಮೀನು ರಹಿತ ಅಪರಾಧ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...