ವಾಟ್ಸಪ್ ನಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡುವವರಿಗೆ ಇನ್ನು ಮುಂದೆ ಕಾದಿದೆ ಆಪತ್ತು. ಸುಳ್ಳು ಸುದ್ದಿ ಹರಿಬಿಟ್ಟು ವಾಟ್ಸಪ್ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲಿ ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನಗಳಿಗೆ ಗೆಲುವು ಸಿಕ್ಕಿದೆ.
ವಾಟ್ಸಪ್ ಉಪಾಧ್ಯಕ್ಷ ಕ್ರಿಸ್ ಡೇನಿಯಲ್ಸ್ ಅವರು ಕೇಂದ್ರ ಐಟಿ ಸಚಿವ ರವಿಶಂಕರ್ ಅವರನ್ನು ಭೇಟಿಯಾಗಿ ಭಾರತಕ್ಕಾಗಿಯೇ ಹೊಸ ಮುಖ್ಯಸ್ಥರನ್ನು ನೇಮಿಸುವುದಾಗಿ ಪ್ರಕಟಿಸಿದ್ದಾರೆ.
ರವಿಶಂಕರ್ ಮತ್ತು ಡೇನಿಯಲ್ಸ್ ವಾಟ್ಸಪ್ ದುರ್ಬಳಕೆ , ಸುಳ್ಳು ಸುದ್ದಿಗಳು ಹಬ್ಬುವುದು ಹಾಗೂ ಅದರಿಂದಾಗುವ ಪರಿಣಾಮಗಳ ಬಗ್ಗೆ ಚರ್ಚಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ವರ್ಷಾಂತ್ಯದೊಳಗಾಗಿ ಭಾರತ ಕಾರ್ಯನಿರ್ವಹಣೆಗಾಗಿ ಹೊಸ ಮುಖ್ಯಸ್ಥರನ್ನು ನೇಮಿಸುವುದಾಗಿ ಡೇನಿಯಲ್ಸ್ ಹೇಳಿದ್ದಾರೆ.
ಸುಳ್ಳುಸುದ್ದಿಗಳನ್ನು ಹುಟ್ಟುಹಾಕುವವರನ್ನು ಪತ್ತೆಹಚ್ಚಲು ಸರ್ಕಾರದ ಪ್ರಯತ್ನಕ್ಕೆ ಇದು ಸಹಕಾರಿಯಾಗಲಿದೆ. ಆದರೆ ಬಳಕೆದಾರರು ಕಳುಹಿಸುವ ಎನ್ಕ್ರಿಪ್ಟೆಡ್ ಸಂದೇಶಗಳನ್ನು ಡಿಕ್ರಿಪ್ಟ್ ಮಾಡುವ ಯಾವುದೇ ಇರಾದೆ ಸರ್ಕಾರಕ್ಕಿಲ್ಲ, ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಸುಳ್ಳುಸುದ್ದಿಗಳನ್ನು ಕಳುಹಿಸಿ, ಅಪರಾಧ ಮತ್ತು ಹಿಂಸೆಗೆ ಕಾರಣವಾಗುವವರ ಸ್ಥಳ ಮತ್ತು ಗುರುತು ಕಂಡುಹಿಡಿಯುವುದಕ್ಕೆ ಸರ್ಕಾರ ಮುಂದಾಗಿದೆ.