ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ 2025ರ ಫೈನಲ್ ಪಂದ್ಯದಲ್ಲಿ ಭಾರತ ತಂಡ ಐತಿಹಾಸಿಕ ಗೆಲುವು ಸಾಧಿಸಿದೆ. ಆತಿಥೇಯ ಭಾರತ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ ಮೊದಲ ಬಾರಿಗೆ ಮಹಿಳಾ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 288 ರನ್‌ಗಳನ್ನು ಕಲೆಹಾಕಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 45.3 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲೌಟ್ ಆಯಿತು.
ಭಾರತದ ಗೆಲುವಿನ ರೂವಾರಿ ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ಆಗಿದ್ದರು. ಬದಲಿ ಆಟಗಾರ್ತಿಯಾಗಿ ವಿಶ್ವಕಪ್‌ಗೆ ಆಯ್ಕೆಯಾಗಿದ್ದ ಶಫಾಲಿ ಬ್ಯಾಟಿಂಗ್‌ನಲ್ಲಿ 87 ರನ್‌ಗಳ ಸಿಡಿಲಬ್ಬರದ ಇನ್ನಿಂಗ್ಸ್ ಆಡಿದರು ಹಾಗೂ ಬೌಲಿಂಗ್‌ನಲ್ಲಿ 2 ವಿಕೆಟ್ ಪಡೆದರು. ದೀಪ್ತಿ ಶರ್ಮಾ ಆಲ್‌ರೌಂಡರ್ ಪ್ರದರ್ಶನ ನೀಡಿ 58 ರನ್‌ಗಳಿಸಿದರು ಹಾಗೂ ಐದು ವಿಕೆಟ್ ಕಿತ್ತುಕೊಂಡರು.
ಆರಂಭಿಕ ಬ್ಯಾಟ್ಸ್‌ವುಮನ್‌ಗಳು ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಮೊದಲ ವಿಕೆಟ್‌ಗೆ 104 ರನ್‌ಗಳ ಜೊತೆಯಾಟ ನೀಡಿದರು. ಸ್ಮೃತಿ 45 ರನ್‌ಗಳಿಸಿದರು. ನಂತರ ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ (58) ಹಾಗೂ ವಿಕೆಟ್‌ಕೀಪರ್ ರಿಚಾ ಘೋಷ್ (34) ತಂಡದ ರನ್‌ಗಳನ್ನು ಹೆಚ್ಚಿಸಿದರು.
ದಕ್ಷಿಣ ಆಫ್ರಿಕಾ ಪರ ನಾಯಕಿ ಲೌರಾ ವೋಲ್ವಾರ್ಡ್ 101 ರನ್‌ಗಳ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ತಲುಪಿಸಲು ವಿಫಲರಾದರು.
ಈ ಗೆಲುವಿನಿಂದ ಭಾರತ ಮಹಿಳಾ ತಂಡ 52 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಇದು ಅತ್ಯಂತ ವಿಶೇಷ ಕ್ಷಣವಾಗಿದ್ದು, ತಮ್ಮ 13ನೇ ಐಸಿಸಿ ಟೂರ್ನಮೆಂಟ್‌ನಲ್ಲಿ ಅವರು ಕೊನೆಗೂ ಪ್ರಶಸ್ತಿ ಗೆದ್ದಿದ್ದಾರೆ.






