ಸ್ಯಾಂಡಲ್ ವುಡ್ ನ ಜನಪ್ರಿಯ ನಟ ಲೂಸ್ ಮಾದ ಖ್ಯಾತಿಯ ಯೋಗಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವದಂಪತಿಗೆ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಸೇರಿದಂತೆ ಅನೇಕ ಜನ ಗಣ್ಯರು ಶುಭ ಹಾರೈಸಿದರು.
ದುನಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ನಟ ತನ್ನ ಮೊದಲಚಿತ್ರದಲ್ಲೇ ಅದ್ಭುತ ನಟನೆಯ ಮೂಲಕ ಗಮನಸೆಳೆದಿದ್ದರು. ದುನಿಯಾ ಚಿತ್ರದಲ್ಲಿ ಲೂಸ್ ಮಾದ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಯೋಗೇಶ್ ನಂತರದಲ್ಲಿ ಇದೇ ಹೆಸರಲ್ಲಿ ಗುರುತಿಸಿಕೊಂಡವರು. ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಯೋಗಿ ಇಂದು ಬಹುಕಾಲದ ಗೆಳತಿ ಸಾಹಿತ್ಯ ಜೊತೆಗೆ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಮೊದಲೇ ನಿಶ್ಚಯವಾದಂತೆ ಕೋಣನ ಕುಂಟೆಯಲ್ಲಿರೋ ಶ್ರೀ ಕನ್ವೆಂಷನ್ ಹಾಲ್ ನಲ್ಲಿ ಬೆಳಗ್ಗೆ 6 ಗಂಟೆಗೆ ಬಾಲ್ಯದ ಗೆಳತಿ ಸಾಹಿತ್ಯ ಜೊತೆಗೆ ನವಜೀವನಕ್ಕೆ ಎಂಟ್ರಿಕೊಟ್ಟರು.
ಯೋಗಿ ಮತ್ತು ಸಾಹಿತ್ಯ ಕುಟುಂಬದವರು, ಬಂಧು-ಮಿತ್ರರು , ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ನವಜೋಡಿಗೆ ಶುಭಹಾರೈಸಿದರು.