ದುರ್ಮುಖಿನಾಮ ಸಂವತ್ಸರ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು. ಬೇವು ಬೆಲ್ಲದ ಈ ಹಬ್ಬ ಬೇವಿನ ಕಹಿಯನ್ನು ಕಡಿಮೆ ಮಾಡಿ ಎಲ್ಲರ ಜೀವನದಲ್ಲೂ ಬೆಲ್ಲದ ಸಿಹಿಯೇ ತುಂಬಿರಲಿ. ನಮ್ಮ ಹಿಂದು ಧರ್ಮದಲ್ಲಿ ಹಬ್ಬಗಳಿಗೆ ಬರವಿಲ್ಲ . ಅದ್ರಲ್ಲೂ ಹಬ್ಬಗಳಲ್ಲೇ ಶ್ರೇಷ್ಠವಾದ ಹಬ್ಬ ಅಂದ್ರೆ ಅದು ಯುಗಾದಿ. ಪ್ರತಿ ಹಬ್ಬಕ್ಕೂ ವಿಶೇಷವಾದ ಹಿನ್ನೆಲೆ ಇರುತ್ತೆ.ಹಾಗೆಯೇ ಈ ಯುಗಾದಿ ಹಬ್ಬಕ್ಕೂ ಐತಿಹಾಸಿಕ ಹಿನ್ನೆಲೆ ಇದೆ.
ಈ ಯುಗಾದಿ ಹಬ್ಬ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುತ್ತೆ. ಯುಗಾದಿ ದಿನ ವಿಶೇಷವಾದ ದಿನವಾಗಿದ್ದು ಹಿಂದೂಗಳ ಪಾಲಿನ ಪವಿತ್ರದಿನವೂ ಹೌದು. ಯುಗಾದಿ ಅಂದ್ರೆ ‘ಯುಗದ ಆದಿ’ ಎಂದರ್ಥ. ಹಿಂದೂಗಳ ಪಾಲಿಗೆ ಯುಗಾದಿ ನಿಜವಾದ ಹೊಸ ವರ್ಷವೂ ಹೌದು.
ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕವಾದ ವಿಶೇಷ ಹಿನ್ನೆಲೆಯನ್ನೂ ಹೊಂದಿದೆ. ಸೃಷ್ಟಿಕರ್ತ ಬ್ರಹ್ಮದೇವನ ಸೃಷ್ಟಿಯಾಗಿದ್ದೇ ಯುಗಾದಿಯಂದು. ಚೈತ್ರಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದೂ, ಅಂದಿನಿಂದ ಕಾಲಗಣನೆಗಾಗಿ ಗ್ರಹ-ನಕ್ಷತ್ರ-ಮಾಸ-ಋತು-ವರ್ಷ ಇವುಗಳನ್ನು ಏರ್ಪಡಿಸಿದನೆಂದೂ ವ್ರತಖಂಡದಲ್ಲೂ, ಪುರಾಣಗಳಲ್ಲೂ ಉಲ್ಲೇಖವಿದೆ, ಪಂಚಾಂಗಗಳೂ ಇದನ್ನೇ ಹೇಳುತ್ತವೆ.
ವೇದಗಳ ಕಾಲದಿಂದಲೂ ಯುಗಾದಿಯ ಮಹಿಮೆ ಬಗ್ಗೆ ಉಲ್ಲೇಖವಿದೆ. ಶ್ರೀರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ದಿನ. ಅಲ್ಲದೆ ಮಹಾಭಾರತದಲ್ಲಿ ಬರುವ ಚೀದಿ ರಾಜ್ಯದ ಅರಸು ವಸುವಿನ ಉಗ್ರ ತಪಸ್ಸಿಗೆ ಮೆಚ್ಚಿದ ಇಂದ್ರನು ವೈಜಯಂತಿ ಮಾಲೆಯನ್ನು ಅವನಿಗೆ ಕೊಟ್ಟು, ಚಿನ್ನದ ಕಲಶವುಳ್ಳ ಚಕ್ರಾಧಿಪತ್ಯದ ಧ್ವಜವನ್ನು ರಾಜನ ತಲೆಯ ಮೇಲೆ ಇಟ್ಟಿರುವ ದಿನವೂ ಹೌದು.
ಪಂಚಾಂಗ ಮತ್ತು ಶಾಸ್ತ್ರದ ಪ್ರಕಾರ ಶುಭದಿನ ಹಾಗೂ ಅತ್ಯಂತ ಶುಭ ಮೂಹೂರ್ತದ ಮೂರುವರೆ ದಿನಗಳೆಂದರೆ ಯುಗಾದಿ, ವಿಜಯದಶಮಿ, ಬಲಿಪಾಡ್ಯಮಿ ಮತ್ತು ಅಕ್ಷಯ ತದಿಗೆ. ಅದರಲ್ಲಿ ಯುಗಾದಿ ಅತಿ ಶ್ರೇಷ್ಠ ಮುಹೂರ್ತ ಎಂದು ಭಾರತೀಯರು ನಂಬುತ್ತಾರೆ. ವರ್ಷದ ಶುಭ ದಿನವಾದ ಯುಗಾದಿ ಮಂಗಳ ಕಾರ್ಯವನ್ನು ಮಾಡಲು ಯೋಗ್ಯ ದಿನವೆಂದು ಹೇಳುವರು.
ಯುಗಾದಿಯನ್ನು ಚಂದ್ರಮಾನ-ಸೌರಮಾನ ಹೀಗೆ ಎರಡು ಬಗೆಯಲ್ಲಿ ಆಚರಿಸುವ ಪದ್ಧತಿ ಇದೆ. ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಪದ್ಧತಿಗೆ ಚಂದ್ರಮಾನ ಯುಗಾದಿ ಎನ್ನುವರು ಹಾಗೂ ಸೂರ್ಯ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿಯನ್ನು ಆಚರಿಸುವರು.
ಈ ಹಬ್ಬವನ್ನು ದೇಶದೆಲ್ಲೆಡೆ ಆಚರಿಸುತ್ತಾರೆ. ಅದರಂತೆ ಕರ್ನಾಟಕದಲ್ಲಿ `ಯುಗಾದಿ’ ಅಂದ್ರೆ, ಮಹಾರಾಷ್ಟ್ರದಲ್ಲಿ `ಗುಢಿಪಾಡವಾ’ಅಂತಾರೆ, ಆಂಧ್ರ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ `ಹೊಸ ವರ್ಷದ ಹಬ್ಬ’ವೆಂದು, ಉತ್ತರ ಭಾರತದಲ್ಲಿ `ಬೈಸಾಖಿ’ ಎಂದೂ ಈ ಹಬ್ಬವನ್ನು ಆಚರಿಸುತ್ತಾರೆ.
ಯುಗಾದಿಯ ದಿನ ಮುಂಜಾನೆ ಎಣ್ಣೆ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ಮನೆ ದೇವರನ್ನು ಪೂಜಿಸಿ, ಬೇವು ಬೆಲ್ಲವನ್ನು ಸೇವನೆ ಮಾಡೋದು ವಾಡಿಕೆ. ಬೇವು-ಬೆಲ್ಲ ಕೇವಲ ಈ ಹಬ್ಬದ ವಿಶೇಷ ಮಾತ್ರವಲ್ಲ. ಇದರಲ್ಲಿ ಜೀವನದ ಪಾಠವೇ ಅಡಕವಾಗಿದೆ. ಜೀವನದಲ್ಲಿ ಸುಖ-ದುಃಖ ಸಮವಾಗಿರಬೇಕು ಅನ್ನೋ ಸಂಕೇತವೇ ಈ ಬೇವು ಬೆಲ್ಲ.
ಯುಗಾದಿಯ ಮಾರನೆಯ ದಿನವೂ ಹಬ್ಬದ ವಾತಾವರಣವೇ ಇರುತ್ತದೆ. ಮುಂಜಾನೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ದೇವರನ್ನು ಪೂಜಿಸಿ ಗುರುಹಿರಿಯರಿಗೆ ನಮಸ್ಕರಿಸುವರು. ಅಂದು ‘ವರ್ಷ ತೊಡಕು’ ಎಂದು ಆಚರಿಸಲಾಗುತ್ತದೆ. ಅಂದರೆ ಸತ್ಕಾರ್ಯಗಳಿಗೋಸ್ಕರ ನಮ್ಮನ್ನು ತೊಡಗಿಸಿಕೊಳ್ಳುವ ದಿನ. ವರ್ಷವಿಡೀ ಸುಖ ನೀಡುವಂತೆ, ಕಷ್ಟ ನಿವಾರಿಸುವಂತೆ ದೇವರಲ್ಲಿ ಕೇಳಿಕೊಳ್ಳುವ ದಿವಸ. ಈ ದಿನ ಯಾರು ಏನನ್ನು ಪಡೆಯುವರೋ ಅದು ಇಡೀ ವರ್ಷದವರೆಗೆ ಇರುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೆ ಅಂದು ಬಿದಿಗೆಯ ದಿನ ಚಂದ್ರದರ್ಶನ ಮಾಡುವರು. ಕೆಲವರು ಭರ್ಜರಿ ಬಾಡೂಟ ಮಾಡ್ತಾರೆ.
- ಶ್ರೀ
POPULAR STORIES :
ಹಾಯ್ ಸ್ವೀಟು… ನಿನ್ನಲ್ಲಿರೋ ಪ್ರಶ್ನೆಗಳಿಗೆ ನನ್ನ ಹತ್ತಿರ ಉತ್ತರ ಇಲ್ಲ..!
100% ಕಾಮಿಡಿ, ಸಖತ್ ಮೂವಿ ಈಗಲೇ ನೋಡಿ ಸ್ವಾಮಿ..!
ಐಪಿಎಲ್ ಸೀಸನ್ 9ರಲ್ಲಿ ಪ್ರೇಕ್ಷಕನೇ 3ನೇ ಅಂಪೈರ್ ಅಂತೆ..!
ಟ್ಯಾಂಕರ್ ಮುಷ್ಕರದ ಎಫೆಕ್ಟ್..! ಪೆಟ್ರೋಲ್ ಸಿಗ್ದಿದ್ರೇ ಏನಾಗುತ್ತೆ ಗೊತ್ತಾ..?
ಆರು ಪ್ರಶ್ನೆ ಪತ್ರಿಕೆಗಳು `ಲೀಕ್’, ಬೆಚ್ಚಿಬೀಳಿಸಿದ ಸಿಐಡಿ ತನಿಖೆ..!?
ಭಾರತೀಯ ನಟಿ ಜೊತೆ ಒಬಾಮಾ ಡಿನ್ನರ್..!
ಭಾರತದ ಮೇಲೆ ಗೂಬೆ ಕೂರಿಸಿದ ಪಾಕಿಸ್ತಾನ..!? ಈ ಜನ್ಮದಲ್ಲಿ ಇವ್ರಿಗೆ ಬುದ್ಧಿ ಬರಲ್ಲ ಬಿಡಿ..!!
ಅಶ್ಲೀಲ ಚಿತ್ರಗಳನ್ನು ನೋಡುವುದು ತಪ್ಪಲ್ಲ..!? ಲವ್ ಗೇಮ್ ಚಿತ್ರದಲ್ಲಿ ಅಂಥದ್ದೇನಿದೆ..?