ಅಂತರರಾಷ್ಟ್ರೀಯ ಮಹಿಳಾ ದಿನವೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ: ಬಿಜೆಪಿ ಸಂಸದರು ಮಾತನಾಡಲಿ – ಡಿಕೆ ಶಿವಕುಮಾರ್
ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನದಂದೇ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರ 60 ರೂಪಾಯಿ ಏರಿಕೆ ಮಾಡಿರುವುದು ಖಂಡನೀಯ. ಈ ಬಗ್ಗೆ ಬಿಜೆಪಿ ಸಂಸದರು ಮಾತನಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ಮಂಗಳವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.
“ಚರ್ಚೆ ನಡೆಸಲು ಕೇಂದ್ರ ಸರ್ಕಾರಕ್ಕೆ ಏಕೆ ಭಯ? ಇದರಿಂದ ಕೇಂದ್ರ ಸರ್ಕಾರದ ವೈಫಲ್ಯ ಸ್ಪಷ್ಟವಾಗುತ್ತದೆ. ಸಂಸತ್ ಅಧಿವೇಶನದಲ್ಲಿ ಈ ವಿಷಯವನ್ನು ಚರ್ಚೆ ಮಾಡಬೇಕು. ಆದರೆ ಇದುವರೆಗೆ ಚರ್ಚೆಗೆ ಅವಕಾಶ ನೀಡಿಲ್ಲ. ಅದಕ್ಕಾಗಿ ಇಂಡಿಯಾ ಒಕ್ಕೂಟದ ಪ್ರತಿನಿಧಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ” ಎಂದು ಹೇಳಿದರು.
ಬೆಲೆ ಏರಿಕೆಯಿಂದ ಹೋಟೆಲ್ ಹಾಗೂ ಇತರೆ ಉದ್ದಿಮೆಗಳು ಸಂಕಷ್ಟಕ್ಕೆ ಸಿಲುಕಿವೆ. ಕೋಟ್ಯಂತರ ಮಹಿಳೆಯರ ಮೇಲೂ ಇದರ ಪರಿಣಾಮ ಬೀರಿದೆ. ಜಾಗತಿಕ ಯುದ್ಧ ಪರಿಸ್ಥಿತಿಯಿಂದ ಸೌದಿ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಉದ್ಯಮಿಗಳು ಮತ್ತು ಕಾರ್ಮಿಕರ ಮೇಲೂ ಪರಿಣಾಮ ಉಂಟಾಗಿದೆ ಎಂದು ತಿಳಿಸಿದರು.
ಇನ್ನೊಂದೆಡೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮೇಕೆದಾಟು ಹಾಗೂ ಎತ್ತಿನಹೊಳೆ ಯೋಜನೆಗಳ ಬಗ್ಗೆ ಮಾತನಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, “ಅವರ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಈ ವಿಚಾರಗಳ ಬಗ್ಗೆ ಮಾತನಾಡಲಿ. ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಅವರ ವಿರುದ್ಧ ವಾಗ್ದಾಳಿ ನಡೆಸುವುದು ಸರಿಯಲ್ಲ. ಅವರಿಗೆ ಪರಿಹಾರ ಸೂಚನೆಗಳಿದ್ದರೆ ಹೇಳಲಿ” ಎಂದು ಹೇಳಿದರು.






