ಈಗ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹೆಚ್ಚಾಗುತ್ತಿದ್ದು, ರೈತರಲ್ಲಿಯೂ ಸಂತಸ ಮೂಡಿದೆ. ಆದರೆ ಈಗ ಕೊಯ್ಲು ಶುರುವಾಗಿದ್ದು, ಅಡಿಕೆ ಬೇಯಿಸುವುದು ಹಾಗೂ ಒಣಗಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಯಾಕೆಂದರೆ ಮಳೆ ಬಂತೆಂದರೆ ಸಂಪೂರ್ಣ ತೊಯ್ದು ಹೋಗುತ್ತದೆ. ಮತ್ತೆ ಬಿಸಿಲು ಬರುವವರೆಗೆ ಕಾಯಬೇಕು. ಇಂಥ ಪರಿಸ್ಥಿತಿಯಲ್ಲಿ ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿಯೊಂದು ಬಂದಿದೆ.
ಈ ವಿಚಾರ ಮನಗಂಡು ಚನ್ನಗಿರಿ ತಾಲೂಕಿನ ಹೊನ್ನೆಮರದಹಳ್ಳಿಯ ಸಾಫ್ಟ್‌ವೇರ್ ಇಂಜಿನಿಯರ್ ಹಾಗೂ ಖಡ್ಗ ಸಂಘಟನೆಯ ಪ್ರಮುಖರಾದ ಬಿ.ಆರ್. ರಘು ಅಡಿಕೆ ಬೇಯಿಸಲು ಪರಿಸರ ಸ್ನೇಹಿಯಾದ “ಸೋಲಾರ್ ಡ್ರಯರ್’ ತಯಾರಿಸಿದ್ದು, ಇದು ರೈತರ ಖುಷಿಗೂ ಕಾರಣವಾಗಿದೆ. ಮಾತ್ರವಲ್ಲ ಕೇವಲ 15 ಸಾವಿರ ರೂಪಾಯಿ ವೆಚ್ಚದಲ್ಲಿ ತಯಾರಿಸಿರುವುದು ವಿಶೇಷ. ಇವರ ಈ ಆವಿಷ್ಕಾರಕ್ಕೆ ಸಹೋದರರಾದ ನಾಗರಾಜ್, ಮಲ್ಲಿಕಾರ್ಜುನ್ ಸಾಥ್ ನೀಡಿದ್ದಾರೆ.
ಮೂರು ಅಡಿ ಉದ್ದದ ಪೆಟ್ಟಿಗೆ ಆಕಾರದ ಡ್ರಯರ್ ಇದ್ದು, ನಾಲ್ಕು ಅಡಿ ಎತ್ತರ ಹಾಗೂ ಮೂರು ಅಡಿ ಅಗಲ ಇದೆ. ಮರದ ಕಾರ್ಡ್ ಬೋರ್ಡ್‌ನಿಂದ ಆವೃತವಾಗಿರುವ ಇದಕ್ಕೆ ಹೊರಭಾಗದಿಂದ ಕಪ್ಪು ಬಣ್ಣ ಬಳಿಯಲಾಗಿದೆ. ಒಳಗಡೆ ಅಲ್ಯುಮಿನಿಯಂ ಹಾಳೆಗಳಿಂದ ಕಾರ್ಡ್ ಬೋರ್ಡ್ ಹೊದಿಕೆ ಮಾಡಲಾಗಿದೆ. ಮೇಲ್ಭಾಗದಲ್ಲಿ ತೆರೆದ ನಾಲ್ಕು ಅಂಚಿನಲ್ಲಿ ನಿಕ್ರೋಮ್ ಶೀಟ್‌ಗಳ ಅಳವಡಿಕೆ ಮಾಡಲಾಗಿದೆ. ಮುಕ್ಕಾಲು ಇಂಚು ದಪ್ಪವಾಗಿರುವುದನ್ನು ಮುಚ್ಚಳದ ಭಾಗದಲ್ಲಿ ಅಳವಡಿಕೆ ಮಾಡಲಾಗಿದೆ.
ಗಾಜಿನ ಮೇಲೆ ನಿಕ್ರೋಮ್ ಶೀಟ್‌ಗಳು ಬೆಳಕಿನ ಪ್ರತಿಫಲ ಉಂಟು ಮಾಡುತ್ತದೆ. ಇದರಿಂದಾಗಿ ಬೆಳಕಿನ ವಕ್ರೀಭವನದ ಮೂಲಕ ಒಳ ಪ್ರವೇಶಿಸುತ್ತದೆ. ಒಳಗೋಡೆಯಲ್ಲಿ ಅಲ್ಯುಮಿನಿಯಮ್ ಹಾಳೆಗಳಿಂದ ಹಲವು ಬಾರಿ ಪ್ರತಿಫಲನ ಆಗುವುದರಿಂದ ಉಷ್ಣಾಂಶ ಜಾಸ್ತಿಯಾಗುತ್ತದೆ. ಹೊರಭಾಗದಿಂದ ಕಪ್ಪು ವಸ್ತುವು ಸೂರ್ಯನ ಕಿರಣಗಳಿಂದ ಉಷ್ಣವನ್ನು ಪಡೆಯುತ್ತದೆ. ಸಾಧನದ ಒಳಭಾಗದಲ್ಲಿ ಸುಮಾರು 200 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆ ಹೆಚ್ಚಾಗುತ್ತದೆ.
‘ಇನ್ನು ಸುಲಿದ ಅಡಿಕೆ ಗೋಟುಗಳನ್ನು ನೇರವಾಗಿ ಈ ಯಂತ್ರಕ್ಕೆ ಹಾಕಬಹುದು. ಇನ್ನು ಬೇಯಿಸಲಿಕ್ಕೆ ನೀರು ಕೂಡ ಅವಶ್ಯಕತೆ ಇಲ್ಲ. ಡ್ರಯರ್‌ನಲ್ಲಿ ಎರಡರಿಂದ ಮೂರು ದಿನಗಳಲ್ಲಿ ಅಡಿಕೆ ಪೂರ್ತಿಯಾಗಿ ಬೆಂದು, ಒಣಗಿದ ಅಡಿಕೆ ಸಿಗುತ್ತದೆ,” ಎನ್ನುತ್ತಾರೆ ಇದನ್ನು ಆವಿಷ್ಕರಿಸಿರುವ ರಘು. ‘ಮಳೆಗಾಲದ ವೇಳೆ ಅಡಿಕೆ ಬೇಯಿಸುವುದು ತುಂಬಾನೇ ಕಷ್ಟ. ಮೋಡ ಕವಿದು ಬಿಸಿಲು ಬಾರದಿದ್ದರೂ ವಿದ್ಯುತ್ ನಿಯಂತ್ರಿತ ಸಾಧನದಿಂದ ಒಳ ಉಷ್ಣತೆಯನ್ನು ಹೆಚ್ಚಳ ಮಾಡಲು ಈ ಯಂತ್ರ ಅನುಕೂಲ ಆಗಲಿದೆ,” ಎಂದರು.