ರಾಜೀನಾಮೆ ನೀಡಿದ ಬಳಿಕ ದೋಸ್ತಿ ನಾಯಕರು ಮನವೊಲಿಸುತ್ತಾರೆ ಎಂಬ ಕಾರಣದಿಂದ ಮುಂಬೈ, ಪುಣೆಯಲ್ಲಿ ತಂಗಿದ್ದ ಅತೃಪ್ತ ಶಾಸಕರು ವಾಪಸ್ ಬರಲು ಮುಂದಾಗಿದ್ದಾರೆ. ಈ ಹಿಂದೆ ಮಂಗಳವಾರ ಆಗಮಿಸಿ ಬುಧವಾರ ಪತ್ರಿಕಾಗೋಷ್ಠಿ ನಡೆಸುವುದಾಗಿ ಅತೃಪ್ತ ಶಾಸಕರು ಮಾಹಿತಿ ನೀಡಿದ್ದರು.
ಸೋಮವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಹುಮತ ಸಾಬೀತು ಪಡಿಸಿದ ಬಳಿಕ ವಾಪಸ್ ಬರಲು ಅತೃಪ್ತ ಶಾಸಕರು ನಿರ್ಧರಿಸಿದ್ದರು. ಆದರೆ, ವಿಧಾನಸಭೆ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಭಾನುವಾರವೇ ದಿಢೀರ್ ಪತ್ರಿಕಾಗೋಷ್ಠಿ ನಡೆಸಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ತೀರ್ಮಾನ ಪ್ರಕಟಿಸುತ್ತಿದ್ದಂತೆ ಅತೃಪ್ತ ಶಾಸಕರೆಲ್ಲ ಫ್ರೀ ಬರ್ಡ್ ಗಳಾಗಿದ್ದು ದೋಸ್ತಿ ನಾಯಕರ್ಯಾರೂ ಅವರ ಮನವೊಲಿಸುವುದಿಲ್ಲ.ಈ ಹಿನ್ನಲೆಯಲ್ಲಿ ಬೆಂಗಳೂರಿಗೆ ವಾಪಸ್ ಬರಲು ಶಾಸಕರು ಗಂಟು ಮೂಟೆ ಕಟ್ಟ ತೊಡಗಿದ್ದಾರೆ ಎನ್ನಲಾಗಿದೆ.