ಕೆಲವೊಂದು ಜಾಗಗಳ ನೆನಪು ಮಾಸುವುದಿಲ್ಲ. ಆ ಜಾಗದಲ್ಲಿ ಅನೇಕ ನೆನಪುಗಳು ಇರುತ್ತವೆ. ಅದೇರೀತಿ ಅದೊಂದು ಜಾಗದ ನೆನಪು ಆ ಸ್ಟಾರ್ ನಟಗಿದೆ..! ಅಂದು ಅವರ ಅಪ್ಪ 30 ವರ್ಷ ದುಡಿದ ಆ ಸ್ಥಳದಲ್ಲಿ ಇಂದು ಆ ಸ್ಟಾರ್ ನಟನ ಸಿನಿಮಾದ ಚಿತ್ರೀಕರಣ ನಡೆದಿದೆ.
ಹೌದು, ನಾವಿಲ್ಲಿ ಹೇಳ್ತಿರೋದು ಡೈನಾಮಿಕ್ ಸ್ಟಾರ್ ದೇವರಾಜ್ ಮತ್ತು ಅವರ ಮಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಬಗ್ಗೆ. ದೇವರಾಜ್ ಅವರು 30 ವರ್ಷಗಳ ಕಾಲ ಕೆಲಸ ಮಾಡಿದ್ದ ಎಚ್ಎಂಟಿ ಫ್ಯಾಕ್ಟರಿಯಲ್ಲಿ ಪ್ರಜ್ವಲ್ ದೇವರಾಜ್ ಅವರ ಸಿನಿಮಾವೊಂದರ ಶೂಟಿಂಗ್ ನಡೆದಿದೆ.
ಈ ಬಗ್ಗೆ ಮಾತನಾಡಿರುವ ಪ್ರಜ್ವಲ್, ಅಂದು ಅಪ್ಪ 30 ವರ್ಷ ಕಷ್ಟಪಟ್ಟು ಕೆಲಸ ಮಾಡಿದ್ದ ಎಚ್ಎಂಟಿ ಫ್ಯಾಕ್ಟರಿಯಲ್ಲಿ ನನ್ನ ಸಿನಿಮಾ ಶೂಟಿಂಗ್ ನಡೆದಿದೆ. ಅಂದು ಅವರು ಕಷ್ಟ ಪಟ್ಟುದುಡಿದಿದ್ದರಿಂದ ಇಂದು ನನ್ನ ಜೀವನ ಚೆನ್ನಾಗಿದೆ. ಅವರಂದು ಕೆಲಸ ಮಾಡುತ್ತಿದ್ದ ಆ ಸಮಯದಲ್ಲಿ ‘ಮುಂದೊಮ್ಮೆ ತಾವು ಇಷ್ಟು ದೊಡ್ಡ ಸ್ಟಾರ್ ಆಗುತ್ತೇನೆ ಎಂದಾಗಲೀ ಅಥವಾ ನನ್ನ ಮಗ ಮುಂದೆ ನಟನಾಗಿ ಇಲ್ಲಿ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಾನೆ ಎಂದಾಗಲಿ ಕನಸಲ್ಲೂ ಎಣಿಸಿರಲಿಲ್ಲ ಎಂದು ಹೇಳಿದ್ದಾರೆ.
ಪ್ರಜ್ವಲ್ ಅಭಿನಯದ ಚೌಕ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ, ಆ ಸಿನಿಮಾದ ಬಳಿಕ ಪ್ರಜ್ವಲ್ ಅವರ ಬೇರೆ ಸಿನಿಮಾಗಳು ಅಷ್ಟೊಂದು ದೊಡ್ಡ ಮಟ್ಟಿನ ಯಶಸ್ಸು ಪಡೆದಿಲ್ಲ. ಆದರೆ, ಈಗ ಪ್ರಜ್ವಲ್ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಕಮ್ ಬ್ಯಾಕ್ ಆಗುವ ವಿಶ್ವಾಸದಲ್ಲಿದ್ದಾರೆ.