ಅವರ ಶಸ್ತ್ರಚಿಕಿತ್ಸೆಯನ್ನು ಅವರೇ ಮಾಡಿಕೊಂಡರು..!

0
645

ಆಪರೇಷನ್ ಅಂದ್ರೆ ಎದೆ ಝಲ್ ಅನ್ನುತ್ತೆ..! ಬೇರೆಯವರ ರಕ್ತ ಸಿಕ್ತ ದೇಹವನ್ನು ನೋಡುವುದಂತೂ ಸಿಕ್ಕಾಪಟ್ಟೆ ಕಷ್ಟ. ವೈದ್ಯರು ಅದೇಗೆ ಆಪರೇಷನ್ ಮಾಡ್ತಾರಪ್ಪಾ? ಅಂತ ಕೆಲವೊಮ್ಮೆ ನಾವುಗಳು ಯೋಚಿಸಿದ್ದು ಇರಬಹುದು..! ಶಸ್ತ್ರಚಿಕಿತ್ಸಕ ಆಪರೇಷನ್ ಟೈಮಲ್ಲಿ ಹೃದಯ ಮತ್ತು ಮನಸ್ಸನ್ನು ಕಲ್ಲು ಮಾಡಿಕೊಂಡರಲೇ ಬೇಕು. ಒಂದರ್ಥದಲ್ಲಿ ಇದು ನಿಜಕ್ಕೂ ಚಾಲೆಂಜಿಂಗ್ ವಿಷಯ..!

ಹೀಗಿರುವಾಗ ಅರೆ ಪ್ರಜ್ಞಾವಸ್ಥೆಯಲ್ಲಿ ವೈದ್ಯ ತನ್ನ ಆಪರೇಷನ್ ಅನ್ನು ತಾನೇ ಮಾಡಿಕೊಂಡರೆ..!? ಎಂತಹವನಿಗೂ ಕೂಡ ಇದು ಕಷ್ಟದ ಕೆಲಸವೇ ಸರಿ..! ಆದರೆ, ನಾನೀಗ ನಿಮಗೆ ತನ್ನ ಆಪರೇಷನ್ ಅನ್ನ ತಾನೇ ಮಾಡಿಕೊಂಡ ವೈದ್ಯರೊಬ್ಬರ ನೈಜ ಕತೆಯನ್ನಿಲ್ಲಿ ಹೇಳುವೆ, ಅಲ್ಲಅಲ್ಲ ಬರೆಯುವೆ.. ನೀವೇ ಓದಿ…
ಅದು 1960-61ರ ಅವಧಿ. ರಷ್ಯಾದ 13 ಮಂದಿ ಸಂಶೋಧಕರ ತಂಡ ಅಂಟಾರ್ಟಿಕಾದಲ್ಲಿ ಸಂಶೋಧನಾ ಪ್ರವಾಸದಲ್ಲಿದ್ದ ಸಂದರ್ಭವದು. ಆಗ ರಷ್ಯಾದ ಶಸ್ತ್ರಚಿಕಿತ್ಸಕ ಲಿಯೊನಿಡ್ ರೊಗೊಜೊವ್‍ಗೆ ಗಂಭೀರವಾದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಆ ವೇಳೆಯಲ್ಲಿ ಅವರ ತಂಡದಲ್ಲಿದ್ದ ಏಕಮಾತ್ರ ವೈದ್ಯ ರೋಗೊಜೊವ್.


ಇದ್ದಕ್ಕಿದ್ದಂತೆ ರೋಗೋಜೋವ್‍ಗೆ ಹೊಟ್ಟೆಯ ಬಲಭಾಗದಲ್ಲಿ ತಡೆದುಕೊಳ್ಳಲಾಗದ ನೋವು ಬರುತ್ತದೆ. ಅಷ್ಟೇ ಅಲ್ಲ, ಜೋರು ಜ್ವರ, ವಾಂತಿ, ತಲೆನೋವು, ಬದುಕಲಾಗದಷ್ಟು ಸುಸ್ತು ಆಗುತ್ತೆ. ಎಷ್ಟು ಮಾತ್ರೆ ತೆಗೆದುಕೊಂಡರೂ ಪ್ರಯೋಜನವಾಗಲ್ಲ. ನರಕ ಯಾತನೆ ಅನುಭವಿಸುತ್ತಾ ಒಂದೆರಡು ದಿನ ಕಳೆದರು.
ಇವರಿದ್ದ ನೊವೊಲಾಜರೆಸ್ಕ್ಯಾದಿಂದ ಬೇರೆಡೆ ಹೋಗಲು ವಿಮಾನ ವ್ಯವಸ್ಥೆ ಕೂಡ ಇರಲಿಲ್ಲ. ಕಾರಣ ಆ ಸಮಯದಲ್ಲಿ ಅಂಟಾರ್ಟಿಕದಲ್ಲಿ ಹಿಮ ಹೆಚ್ಚಾಗಿತ್ತು. ವಿಮಾನಗಳು ಸ್ಥಗಿತಗೊಂಡಿದ್ದವು. ಆದರೆ, 27ರ ರೋಗೋಜೊವ್‍ಗೆ ಶಸ್ತ್ರಚಿಕಿತ್ಸೆ ಆಗಲೇ ಬೇಕಿತ್ತು. ಶಸ್ತ್ರಚಿಕಿತ್ಸೆಗೆ ಯಾವ ಸರ್ಜನ್ ಕೂಡ ಜೊತೆಯಲ್ಲಿಲ್ಲ! ಬದುಕುಳಿಯಲು ಶಸ್ತ್ರಚಿಕಿತ್ಸೆ ಆಗಲೇ ಬೇಕಿತ್ತು. ತನ್ನ ಶಸ್ತ್ರಚಿಕಿತ್ಸೆಯನ್ನು ತಾನೇ ಮಾಡಿಕೊಳ್ಳಲು ನಿರ್ಧರಿಸಿದರು ರೋಗೋಜೋವ್.


ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದ 1961 ಏಪ್ರಿಲ್ 29ರ ಬೆಳಗ್ಗೆ. ಮರುದಿನ, ಅಂದರೆ ಏಪ್ರಿಲ್ 30ಕ್ಕೆ ನೋವು ಮಿತಿಮೀರುತ್ತೆ! ತಾನು ಬದುಕುಳಿಯುವುದೇ ಕಷ್ಟ ಎಂದೆನಿಸ ತೊಡಗುತ್ತೆ. ಗಟ್ಟಿ ಮನಸ್ಸು ಮಾಡಿ ಮೇ 1ರಂದು ತನ್ನ ಆಪರೇಷನ್ ತಾನೇ ಮಾಡಿಕೊಳ್ಳಲು ಮುಂದಾಗ್ತಾರೆ. ಚಾಲಕ ಮತ್ತು ಹವಮಾನ ತಂತ್ರಜ್ಞರ ಸಹಾಯದಿಂದ ತನ್ನ ಬಲ ಭಾಗದ ಹೊಟ್ಟೆಯನ್ನು ಕೊಯ್ಯಲು ಆರಂಭಿಸಿಯೇ ಬಿಟ್ಟರು!


ಅವರ ಜೊತೆಯಲ್ಲಿದ್ದ ಇಬ್ಬರು ಕನ್ನಡಿ ಹಿಡಿದರು. ಅರವಳಿಕೆ ಮಾತ್ರೆಯನ್ನು ತೆಗೆದುಕೊಂಡು ಅರೆಪ್ರಜ್ಞಾವಸ್ಥೆಯಲ್ಲೇ ಮಾಡಿಕೊಳ್ಳುತ್ತಿದ್ದ ಆಪರೇಷನ್ ಅದು! ಹೊಟ್ಟೆಯ ಬಳಿ 10ರಿಂದ 12 ಸೆಂಟಿಮೀಟರ್ ಅಷ್ಟು ಕೊಯ್ದುಕೊಂಡರು! ಅಷ್ಟರಲ್ಲಿ ಸಂಪೂರ್ಣ ಪ್ರಜ್ಞೆಯೇ ತಪ್ಪಿತು! ಮತ್ತೆ ಪುನಃ ಸ್ವಲ್ಪ ಹೊತ್ತಿಗೆ ಚೇತರಿಸಿಕೊಂಡು ಆಪೇರಷನ್ ಮುಂದುವರೆಸಿಯೇ ಬಿಟ್ಟರು. ಆಪರೇಷನ್ ಸಕ್ಸಸ್ ಆಯ್ತು! ಏಳೆಂಟು ದಿನಗಳಲ್ಲಿ ಚೇತರಿಸಿಕೊಂಡರು. ಹೊಲಿಗೆಯನ್ನು ಬಿಚ್ಚಿಕೊಂಡು ಕೆಲಸಕ್ಕೆ ಮರಳಿದರು ರೋಗೋಜೋವ್..!
ಕೆಲವೊಮ್ಮೆ ಬದುಕುಳಿಯಲು ಎಂತಹಾ ಕಠಿಣ ನಿರ್ಧಾರವನ್ನೂ ತೆಗೆದುಕೊಳ್ಳಬೇಕಾಗುತ್ತೆ ನಿಜ. ತನ್ನ ಹೊಟ್ಟೆ ತಾನೇ ಕೊಯ್ದುಕೊಳ್ಳುವುದು ತಮಾಷೆಯ ವಿಷಯವಂತೂ ಅಲ್ಲ..! ಆದರೆ, ಇಂತಹ ದೊಡ್ಡ ನಿರ್ಧಾರ ತೆಗೆದುಕೊಂಡ ರೋಗೋಜೋವ್ ಗಟ್ಟಿತನ, ಧೈರ್ಯಕ್ಕೆ ಯಾವುದನ್ನೂ ಹೋಲಿಕೆ ಮಾಡಲು ಆಗಲ್ಲ. ಇದು ಕಲ್ಪಿಸಿಕೊಳ್ಳಲೂ ಸಹ ಆಗದ ಘಟನೆ.

LEAVE A REPLY

Please enter your comment!
Please enter your name here