ಮನದ ಪುಟದಲಿ ಗೀಚಿದ ಆ ನೆನಪುಗಳು ಎಷ್ಟೊಂದು ಮಧುರಾ! ಅಷ್ಟೇ ಅಲ್ಲ ಬದುಕಿನ ಪಯಣದಲಿ ಅದೆಷ್ಟೊಂದು ನೋವು ನಲಿವುಗಳು, ಬದುಕೇ ಹಾಗೆ ನೆರಳು-ಬೆಳಕಿನಾಟ.
ಜೀವನವೆಂಬ ಕುದುರೆ ಮೇಲೆ ಒಂಟಿಯಾಗಿ ಸವಾರಿ ಮಾಡಬೇಕೆಂದಿದ್ದೆ. ಗೆಳೆತಿಯರಿಬ್ಬರ ಪ್ರೇಮದ ಕತೆ ತಿಳಿದಿದ್ದೆ.ಅದು ಕೇವಲ ಕತೆಯಾಗಿರಲಿಲ್ಲ ಜೀವನದ ಯಾತನೆಯಾಗಿತ್ತು. ನನಗೂ ಒಬ್ಬ ಗೆಳೆಯ ಬೇಕೆಂದೆನಿಸಿದರೂ ಮತ್ತದೆ ಗೆಳತಿಯರ ನೋವಿನ ಕತೆ ನನ್ನ ಎಚ್ಚರಿಸುತ್ತಿತ್ತು! ಇಡೀ ಹುಡುಗರ ಜಾತಿಯನ್ನೇ ದ್ವೇಷಿಸಲಾರಂಭಿಸಿದೆ.ಅಷ್ಟರಲ್ಲಿಯೇ ಒಂದು ದಿನ ಹುಡುಗರ ಗುಂಪಿನಲ್ಲೊಬ್ಬ ಧ್ರುವ ನಕ್ಷತ್ರದಂತೆ ಕಂಗೊಳಿಸಿವ ಹುಡುಗನೆಡೆಗೆ ನನ್ನ ಮನವು ಜಾರಿತು.
ಪರಿಚಿತರಾದೆವು ಪ್ರೀತಿಸಲಾರಂಭಿಸಿದೆವು. ಆತ ಪ್ರೀತಿ ಎಂದರೇನೆಂದು ಹೇಳಿಕೊಟ್ಟ. ಹುಡುಗರೆಂದರೆ ಸಿಡುಕುತ್ತಿದ್ದ ನನ್ನ ಹೃದಯ ಅವನಿಗಾಗಿ ಮಿಡಿಯುತ್ತಿತ್ತು. ಎಲ್ಲಾ ಪ್ರೇಮಕತೆಯಲ್ಲಿ ಸಾಮಾನ್ಯವಾಗಿ ಹುಡುಗರೇ ಮುಂದೆ ಬಂದು ಪ್ರೀತಿಯ ನಿವೇದನೆ ಮಾಡಿಕೊಂಡರೆ ನನ್ನ ಲವ್‍ಸ್ಟೋರಿ ಸ್ವಲ್ಪ ಡಿಫ್ರೆಂಟ್, ಪಾಪ ಅವನ ಪಾಡಿಗೆ ಅವನಿದ್ದ ನಾನೇ ಅವನಿಗೆ ಪ್ರಪೋಸ್‍ಮಾಡಿ ಅವನ ಹೃದಯದಲಿ ತಾಜ್‍ಮಹಾಲ್ ಕಟ್ಟಿಸಿಕೊಂಡೆ! ಪಾಪ ನನಗಾಗಿ ಎಷ್ಟೋ ನೋವನ್ನು ಸಹಿಸಿಕೊಂಡ. ನಾನೇನೆ ಅಂದರು ಕೇಳುತ್ತಿದ್ದ. ತುಂಬು ಕುಟುಂಬ ಅವನದು, ಮನೆಯಲ್ಲಿ ಸ್ವಲ ಕಷ್ಟ ಆದರೂ ನನ್ನ ಮಸ್ಸಿಗೆ ಎಂದು ನೋವು ಮಾಡಿದವನಲ್ಲ.
ಅಂತು ಇಂತು ಕಾಲೇಜು ಜೀವನ ಮುಗಿಯಿತು. ಕಾಕತಾಳಿಯವೆಂಬಂತೆ ಇಬ್ಬರಿಗೂ ಒಂದೆಡೆಯೇ ಉದ್ಯೋಗವೂ ದೊರೆಯಿತು. ನಾವು ಸಿಂಪಲ್ ಆಗಿ ರಿಜಿಸ್ಟರ್ ಆಫೀಸ್‍ನಲ್ಲಿ ಮದುವೆ ಮಾಡ್ಕೊಂಡು ನಂತರ ನಾಲ್ಕೈದು ಜನರಿಗೆ ಊಟ ಹಾಕೋದು ಅಂತ ತೀರ್ಮಾನ ಮಾಡ್ಕೊಂಡ್ವಿ.
ನಾಳೆ ಮದುವೆ ಅಂತ ಇವತ್ತು ಆತ ನನಗೆ ಬೇಕೆಂದಿದ್ದೆಲ್ಲಾ ಕೊಡಿಸಿದ.ಸರ, ಬಳೆ, ಸೀರೆ, ಹೀಗೆ ಅವನು ಕೊಟ್ಟ ಪ್ರೀತಿಯ ಉಡುಗೊರೆಯನ್ನು ಮನೆಗೆ ತೆಗೆದುಕೊಂಡು ಹೋದೆ. ಸಂತೋಷದಿಂದ ಕುಣಿಯುತ್ತ ಹೋದ ನನಗೆ ಮನೆಯಲ್ಲಿ ಗಲಾಟೆಯ ಸದ್ದು ಕೇಳಿಸುತ್ತಿತ್ತು. ನೋಡಿದರೆ ನಮ್ಮ ಹತ್ತಿರದ ಸಂಬಂಧಿಕರು ಅಪ್ಪ ಅಮ್ಮನ ಮೇಲೆ ರೇಗುತ್ತಿದ್ದರು.ದುಡ್ಡಿನ ಮದದಲ್ಲಿ ತೇಲುತ್ತಿದ್ದ ಅವರಿಗೆ ಈ ಮದುವೆ ಇಷ್ಟ ಇರಲ್ಲಿಲ್ಲ ಅಪ್ಪ ಅಮ್ಮ ಅವರ ಮಾತಿಗೆ ಕೊನೆಗೂ ಮರುಳಾದರು. ನನ್ನ ಕರೆದುಕೊಂಡು ಎತ್ತಲೋ ಪಯಣ ಬೆಳಿಸಿದರು. ಪಾಪ ಆ ನನ್ನ ಗೆಳೆಯ ನನಗಾಗಿ ಮಾರನೇ ದಿನ ಎಷ್ಟು ಕಾದನೋ ಏನೋ? ಅವನು ಹೇಗಿದ್ದಾನೋ ಎಲ್ಲಿದ್ದಾನೋ? ನಾನು ಮಾತ್ರ ಅವನ ನೆನಪಿನಲ್ಲಿ ಬೇರೊಬ್ಬನ ಬಾಳಸಂಗಾತಿಯಾಗಿ ಬಾಳ ಸವೆಸುತಲಿರುವೆ.
ಹುಡುಗರೇ ಹುಡುಗಿಯರಿಗೆ ಮೋಸ ಮಾಡುತ್ತಾರೆ ಅಂತ ಎಲ್ಲಾ ಹುಡುಗರನ್ನೂ ದ್ವೇಷಿಸುತ್ತಿದ್ದ ನಾನು ಆ ಹುಡುಗನಿಗೇ ಮೋಸ ಮಾಡಿದೆ. ಮನಸ್ಸಿನಲ್ಲಿ ವರಿಸದ್ದೇ ಬೇರೆ ಹುಡುಗನನ್ನು.. ಮದುವೆಯಾಗಿ ಬಾಳ್ವೆ ನಡೆಸುತ್ತಿರುವುದೇ ಇನ್ನೊಬ್ಬನ ಜೊತೆ! ಇದು ನನ್ನೊಬ್ಬಳ ಕತೆಯಲ್ಲ, ನನ್ನಂತ ಹಲವು ಹುಡುಗಿಯರ ಕತೆ,ವ್ಯಥೆ!
(ಇದು ನನ್ನ ಗೆಳತಿ ನನಗೆ ಬರೆದ ಪತ್ರದ ಸಾರ.. ನಿಮ್ಮ ಮುಂದಿಟ್ಟಿದ್ದೇನೆ..)
ಸುಕನ್ಯಾ