ಇಂದಿನಿಂದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ; ಮೂರು ಹಂತಗಳಲ್ಲಿ ಆಯೋಜನೆ
ಬೆಂಗಳೂರು: 2025–26ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಮೊದಲ ಹಂತದ ಪೂರ್ವ ಸಿದ್ಧತಾ ಪರೀಕ್ಷೆ ಇಂದಿನಿಂದ ಆರಂಭವಾಗಿದೆ. ಮುಖ್ಯ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಉದ್ದೇಶದಿಂದ ಈ ಪರೀಕ್ಷೆಗಳನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಪೂರ್ವ ಸಿದ್ಧತಾ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮಾರ್ಗದರ್ಶಿಯಾಗಲಿದೆ ಎಂದು ತಿಳಿಸಿದೆ.
ಮೊದಲ ಹಂತದ ಪರೀಕ್ಷೆ ಜನವರಿ 5ರಿಂದ 10ರವರೆಗೆ ನಡೆಯಲಿದೆ. ಎರಡನೇ ಹಂತದ ಪರೀಕ್ಷೆ ಜನವರಿ 27ರಿಂದ ಫೆಬ್ರುವರಿ 2ರವರೆಗೆ ಹಾಗೂ ಮೂರನೇ ಹಂತದ ಪರೀಕ್ಷೆ ಫೆಬ್ರುವರಿ 23ರಿಂದ 28ರವರೆಗೆ ನಡೆಯಲಿದೆ.
ವೇಳಾಪಟ್ಟಿಯನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಶಾಲೆಗಳ ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಪರೀಕ್ಷೆಯ ಮಾಹಿತಿಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ತಲುಪಿಸುವಂತೆ ಜಿಲ್ಲಾ ಉಪನಿರ್ದೇಶಕರಿಗೂ ನಿರ್ದೇಶನ ನೀಡಲಾಗಿದೆ.
ಪರೀಕ್ಷೆ ದಿನದ ಪ್ರಶ್ನೆಪತ್ರಿಕೆಗಳನ್ನು ಮುಖ್ಯ ಶಿಕ್ಷಕರ ಲಾಗಿನ್‌ಗೆ ಅಪ್‌ಲೋಡ್ ಮಾಡಲಾಗುತ್ತಿದ್ದು, ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಮುದ್ರಿಸಿ ಪರೀಕ್ಷೆ ನಡೆಸಬೇಕು ಎಂದು ಸೂಚಿಸಲಾಗಿದೆ. ಪೂರ್ವ ಸಿದ್ಧತಾ ಪರೀಕ್ಷೆಗಳು ಮುಖ್ಯ ಪರೀಕ್ಷೆಯಂತೆಯೇ ಪಾರದರ್ಶಕವಾಗಿ ನಡೆಯಲಿದ್ದು, ಯಾವುದೇ ಅಕ್ರಮಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಡಳಿ ಎಚ್ಚರಿಸಿದೆ. ಪರೀಕ್ಷೆ ಮುಕ್ತಾಯವಾದ ತಕ್ಷಣವೇ ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ ಮಾರ್ಚ್ 18ರಿಂದ ಆರಂಭವಾಗಲಿದೆ.






