ಇಂದು RCB vs PBKS ಪಂದ್ಯ: ಪಂಜಾಬ್ ವಿರುದ್ಧದ ಸೇಡಿಗೆ ಸಿದ್ಧವಾಗಿರುವ ಬೆಂಗಳೂರು ತಂಡ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ದ್ವಿತೀಯಾರ್ಧಕ್ಕಾಗಿ ಸಜ್ಜಾಗುತ್ತಿದೆ. ಇಂದು ಚಂಡೀಗಢ್ನಲ್ಲಿ ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕ ಆರ್ಸಿಬಿ ತನ್ನ ದ್ವಿತೀಯ ಸುತ್ತನ್ನು ಆರಂಭಿಸಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಒಂದು ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.
ಶುಕ್ರವಾರದ ಮಳೆಯಿಂದಾಗಿ ಅಚಡಣೆಗೊಳಗಾದ ಪಂದ್ಯವನ್ನು 14 ಓವರ್ಗೆ ಸೀಮಿತಗೊಳಿಸಲಾಗಿತ್ತು. ಆದಾಗ್ಯೂ ಟಿಮ್ ಡೇವಿಡ್ (Tim David) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ ನೀಡಿದ್ದ 96 ರನ್ಗಳ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡ ಇನ್ನೂ 11 ಎಸೆತಗಳು ಬಾಕಿ ಉಳಿದಿರುವಂತೆ 5 ವಿಕೆಟ್ ಕಳೆದುಕೊಂಡು ತಲುಪಿತು.
ಪಂಜಾಬ್ ತಂಡದ ಮೊದಲೆರಡು ವಿಕೆಟ್ಗಳು 32 ರನ್ ಗಳಿಗೆ ಉರುಳಿದಾಗ ಆರ್ಸಿಬಿ ಗೆಲುವಿನ ಆಸೆಯಲ್ಲಿತ್ತು. ಬಳಿಕ 53 ರನ್ ಗಳಿಗೆ 4 ವಿಕೆಟ್ಗಳನ್ನು ಕಳೆದುಕೊಂಡಾಗಲೂ ಗೆಲ್ಲುವ ಅವಕಾಶವಿತ್ತು. ಆದರೆ ಅಂತಿಮ ಹಂತದಲ್ಲಿ ನೇಹಾಲ್ ವಧೇರಾ ಕೇವಲ 19 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಗಳನ್ನೊಳಗೊಂಡ ಅಜೇಯ 33 ರನ್ ಗಳಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು.
ಆರ್ಸಿಬಿ ಪರ ಜೋಶ್ ಹೇಜಲ್ವುಡ್ 3 ವಿಕೆಟ್ ಮತ್ತು ಭುವನೇಶ್ವರ್ ಕುಮಾರ್ 2 ವಿಕೆಟ್ ಕಬಳಿಸಿದ್ದರು. ಇನ್ನೂ ಸ್ಫೋಟಕ ಪ್ರದರ್ಶನ ನೀಡಿ, 2 ಕ್ಯಾಚ್ ಪಡೆದಿದ್ದ ಆರ್ಸಿಬಿ ಟಿಂ ಡೇವಿಡ್ಗೆ ತಂಡ ಸೋತ ಹೊರತಾಗಿಯೂ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಶುಕ್ರವಾರ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ನಡೆದ ಪಂದ್ಯದಲ್ಲಿ 5 ವಿಕೆಟ್ಗಳಿಂದ ಸೋಲು ಅನುಭವಿಸುವ ಮೂಲಕ ತವರಿನಲ್ಲಿ ಹ್ಯಾಟ್ರಿಕ್ ಸೋಲು ಕಂಡ ಆರ್ಸಿಬಿ ಇಂದು ಪಂಜಾಬ್ಗೆ ತವರಿನಲ್ಲೇ ಬಗ್ಗು ಬಡಿಯಲು ಕಾತರದಿಂದ ಕಾಯುತ್ತಿದೆ.