ಕೇರಳದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿಯೂ ಏರಿಕೆ ಕಂಡಿದೆ. ಹೀಗಾಗಿ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಬೇಕಾದ ಸಾಧ್ಯತೆ ಕುರಿತು ಮಾತುಗಳು ಕೇಳಿಬರುತ್ತಿವೆ.

ಆದರೆ ಸಂಪೂರ್ಣ ಲಾಕ್‌ಡೌನ್ ಪ್ರಸ್ತಾಪವನ್ನು ಸಿಎಂ ಪಿಣರಾಯಿ ವಿಜಯನ್ ತಳ್ಳಿಹಾಕಿದ್ದಾರೆ. ಲಾಕ್‌ಡೌನ್ ದೊಡ್ಡ ಬಿಕ್ಕಟ್ಟನ್ನು ಸೃಷ್ಟಿಸಬಹುದು ಎಂಬುದನ್ನು ಉಲ್ಲೇಖಿಸಿ, ರಾಜ್ಯದಲ್ಲಿ ಲಾಕ್‌ಡೌನ್ ವಿಧಿಸುವುದಿಲ್ಲ ಎಂಬುದನ್ನು ಮುಖ್ಯಮಂತ್ರಿ ಕಚೇರಿ ದೃಢಪಡಿಸಿದೆ.
ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡುವುದಿಲ್ಲ. ಇದು ಜನರ ಆರ್ಥಿಕತೆ ಹಾಗೂ ಜೀವನೋಪಾಯಕ್ಕೆ ದೊಡ್ಡ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂದು ಹೇಳಿ ಲಾಕ್‌ಡೌನ್ ಮಾಡುವ ಚರ್ಚೆಗೆ ಪೂರ್ಣವಿರಾಮ ಹಾಕಿದ್ದಾರೆ.

ಆದರೆ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ಸರ್ಕಾರ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, ಕೇರಳ ರಾಜ್ಯ ಸಾಂಕ್ರಾಮಿಕ ಕಾಯ್ದೆ ಹಾಗೂ ಇತರೆ ಕಾನೂನು ನಿಬಂಧನೆಗಳನ್ನು ಅನ್ವಯಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೇರಳದಲ್ಲಿ ಕೊರೊನಾ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ನಡೆದಿವೆ. ಕಳೆದ ವಾರದಿಂದ ನಿರಂತರವಾಗಿ ದಿನ ನಿತ್ಯ ಮೂವತ್ತು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದ ಮೂರನೇ ಅಲೆ ಆತಂಕವೂ ಎದುರಾಗಿದೆ.