ಮಂಡ್ಯದ ಗಂಡು ಅಂಬರೀಶ್ ಅವರ ಮಗ ಅಭಿಷೇಕ್ ಅಂಬರೀಶ್ ಸಿನಿಮಾ ಜರ್ನಿ ಆರಂಭಿಸಿರುವುದು ಹಳೆ ವಿಚಾರ. ನಾಗಶೇಖರ್ ನಿರ್ದೇಶನದ ಅಮರ್ ಸಿನಿಮಾ ಮೂಲಕ ಸಿನಿಮಾ ಜರ್ನಿ ಆರಂಭಿಸಿರುವ ಜೂನಿಯರ್ ಜಲೀಲ ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದಾರೆ.
2019ರಲ್ಲಿ ರಿಲೀಸ್ ಆದ ಅಮರ್ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ಚಿತ್ರ ಕೂಡ ಒಂದು ಮಟ್ಟಿಗೆ ಸಕ್ಸಸ್ ಕಂಡಿದೆ. ಅಂಬರೀಷ್ ಅವರ ವಾಯ್ಸ್ ಅಭಿಯಲ್ಲಿದೆ! ಅದು ಒಂದರ್ಥದಲ್ಲಿ ಅವರಿಗೆ ಪ್ಲಸ್ ಪಾಯಿಂಟ್.. ಅಂಬಿ ಅಗಲಿಕೆ ನಂತರ ಸಿನಿಮಾ ರಿಲೀಸ್ ಆಗಿದ್ದು ಮಾತ್ರ ಬೇಸರದ ವಿಷಯವಾದರೂ ಅಭಿಷೇಕ್ ಚಿತ್ರರಂಗದಲ್ಲಿ ನೆಲೆ ನಿಲ್ಲುವ ಭರವಸೆ ಮೂಡಿಸಿದ್ದಾರೆ.
ಅಮರ್ ನಂತರ ಅಭಿಷೇಕ್ ಅವರ ಯಾವುದೇ ಸಿನಿಮಾ ಅನೌನ್ಸ್ ಆಗಿಲ್ಲ. ಅದಕ್ಕೆ ಕಾರಣ ಹುಡುಕುತ್ತಾ ಹೋದರೆ ಸಿಗುವುದು ಅಭಿಷೇಕ್ ಅಂಬರೀಶ್ ಅವರು ಸಿನಿಮಾ ಕಥೆಯಲ್ಲಿ ತುಂಬಾ ಚ್ಯೂಸಿ ಆಗಿರುವುದು. ಅಭಿಷೇಕ್ ವರ್ಷಕ್ಕೆ ಒಂದು ಸಿನಿಮಾ ಮಾಡಿದರೂ ಪರವಾಗಿಲ್ಲ.. ನೀಡುವ ಸಿನಿಮಾಕ್ಕೆ ನ್ಯಾಯ ಒದಗಿಸಬೇಕು ಎಂಬ ನಿಲುವು ಹೊಂದಿದ್ದಾರೆ. ಅಲ್ಲದೆ ಆ ಒಂದೇ ಒಂದು ಸಿನಿಮಾಕ್ಕೆ ಕಂಪ್ಲೀಟ್ ಎಫರ್ಟ್ ಹಾಕಬೇಕು ಎಂದಿದ್ದಾರೆ. ಹಾಗಾಗಿ ಎರಡನೇ ಸಿನಿಮಾ ಅನೌನ್ಸ್ ಆಗುವುದು ತಡವಾಗುತ್ತಿದೆ.
ಇದೀಗ ಅಭಿಷೇಕ್ ಮುಂದಿನ ಸಿನಿಮಾ ಅನೌನ್ಸ್ ಮಾಡುವ ಸೂಚನೆ ಸಿಕ್ಕಿದೆ. ಈಗಾಗಲೇ ಐದು ಕಥೆಗಳನ್ನು ಕೇಳಿರುವ ಅವರು ತಂದೆ ರೆಬೆಲ್ ಸ್ಡಾರ್ ಅಂಬರೀಶ್ ಅವರ ಹುಟ್ಟುಹಬ್ಬದಂದು ಹೊಸ ಸಿನಿಮಾ ಘೋಷಿಸಲಿದ್ದಾರೆ. ಅಮರ್ ಸಿನಿಮಾದಲ್ಲಿ ಲವರ್ ಬಾಯಿಯಾಗಿ ಅಭಿನಯಿಸಿದ್ದ ಅಭಿಷೇಕ್ ಅಂಬರೀಶ್ ಅವರ ಎರಡನೇ ಸಿನಿಮಾದಲ್ಲಿ ಪಕ್ಕಾ ಕಮರ್ಷಿಯಲ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಶತದಿನೋತ್ಸವ ಕಾರ್ಯಕ್ರಮದಲ್ಲಿ ನಿರ್ಮಾಪಕ ಮುನಿರತ್ನ ದರ್ಶನ್ ಅವರೊಂದಿಗೆ ವಿಂಗ್ ಕಮಾಂಡರ್ ಅಭಿನಂದನ್ ಬಗ್ಗೆ ಸಿನಿಮಾ ಮಾಡುವ ವಿಷಯವನ್ನು ಪ್ರಸ್ತಾಪಿಸಿದ್ದರು. ಆಗ ಅಭಿಷೇಕ್ ಆ ಸಿನಿಮಾದಲ್ಲಿ ತಾವು ಕೂಡ ನಟಿಸುವ ಇಂಗಿತ ವ್ಯಕ್ತಪಡಿಸಿ, ನಿರ್ಮಾಪಕರಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದನ್ನೂ ಸ್ಮರಿಸಬಹುದು.
ಆದರೆ ಆ ಸಿನಿಮಾ ಬರುವುದು ಇನ್ನೂ ತಡವಿದ್ದು, ಅದಕ್ಕೂ ಮೊದಲು ಮತ್ತೊಂದು ಅಭಿಷೇಕ್ ಅವರ ಮತ್ತೊಂದು ಸಿನಿಮಾ ಬರಲಿದೆ. ಆ ಸಿನಿಮಾ ಯಾವುದೆಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗುತ್ತೆ.