ಮೈಸೂರು: ಎಲ್ಲದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರಿನ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಈ ನಡವಳಿಕೆ ಬದಲಾವಣೆ ಮಾಡಿಕೊಳ್ಳಲಿ. ಮೊದಲು ನಿಮ್ಮ ಸಣ್ಣತನ ಬಿಟ್ಟುಬಿಡಿ. ಕೇಂದ್ರದ ವಿರುದ್ಧ ಸುಮ್ಮನೇ ಆರೋಪ ಮಾಡ್ತಾ ತಿರುಗಾಡುತ್ತಿದ್ದೀರಿ, ನೀವು ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಕೇಂದ್ರದ ಮುಂದೆ ಸಮರ್ಥವಾಗಿ ಇಡಬೇಕು. ಅದು ಬಿಟ್ಟು ಎಲ್ಲದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಇನ್ನೂ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಅನ್ಯಾಯ ಆಗುತ್ತಿಲ್ಲ. ರಾಜ್ಯವೇ ಅನ್ಯಾಯ ಮಾಡಿಕೊಳ್ಳುತ್ತಿದೆ. ಕೇವಲ ಬೈದಾಡಿಕೊಂಡು ತಿರುಗಾಡುವುದರಿಂದ ಪ್ರಯೋಜನವಾಗಲ್ಲ. ಯೋಜನೆಗಳ ಅನುಷ್ಠಾನಕ್ಕೆ ರಾಜ್ಯದ ಪಾಲಿನ ಹಣ ಮೀಸಲಿಡಬೇಕು. ಆಗ ಮಾತ್ರ ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡುತ್ತೆ. ಯೋಜನೆಗಳ ಅನುಷ್ಠಾನಕ್ಕೆ ರಾಜ್ಯದ ಪಾಲಿನ ಹಣ ಮೀಸಲಿಡದೆ, ಕೇಂದ್ರದ ವಿರುದ್ಧ ವಿನಾಕಾರಣ ಆರೋಪ ಮಾಡೋದು ಸರಿಯಲ್ಲ ಎಂದು ವಾಗ್ದಾಳಿ ಮಾಡಿದರು.