ಕೊರೋನಾವೈರಸ್ ಎರಡನೇ ಅಲೆ ಭಾರತ ದೇಶವನ್ನು ಅಕ್ಷರ ಸಹ ನಲುಗಿಸಿಬಿಟ್ಟಿದೆ. ಕೊರೋನಾವೈರಸ್ ಎರಡನೆ ಅಲೆಯಿಂದ ದೇಶದಾದ್ಯಂತ ಸೋಂಕಿತರ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಏರುತ್ತಲೇ ಇದ್ದು ಆಕ್ಸಿಜನ್ ಸಮಸ್ಯೆ ಉಂಟಾಗಿ ಅಪಾರ ಮಂದಿ ಈಗಾಗಲೇ ಸಾವಿಗೀಡಾಗಿದ್ದಾರೆ.
ಇದೆಲ್ಲದರ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಈ ವರ್ಷ ಆರಂಭಿಸಲಾಗಿತ್ತು. ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರಿಗೆ ಪಂದ್ಯವನ್ನು ವೀಕ್ಷಿಸಲು ಅನುಮತಿಯನ್ನು ನೀಡದೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಐಪಿಎಲ್ ಟೂರ್ನಿಯನ್ನು ಆರಂಭ ಮಾಡಲಾಗಿತ್ತು. ಎಲ್ಲಾ ಅಂದುಕೊಂಡ ಹಾಗೆ 29 ಪಂದ್ಯಗಳು ಅತ್ಯಂತ ಯಶಸ್ವಿಯಾಗಿ ನಡೆದವು. ಆದರೆ ನಂತರದ ದಿನಗಳಲ್ಲಿ ಕೆಲ ಆಟಗಾರರಿಗೆ ಮತ್ತು ಸಿಬ್ಬಂದಿವರ್ಗದ ಸದಸ್ಯರಿಗೆ ಕೊರೋನಾ ಸೋಂಕು ತಗುಲಿದ ಕಾರಣ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ರದ್ದು ಮಾಡಲಾಗಿದೆ ಎಂಬ ಸುದ್ದಿ ಬಂತು.
ಆದರೆ ಇದೀಗ ಈ ವಿಚಾರದ ಕುರಿತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾತನಾಡಿದ್ದು ಪ್ರಸ್ತುತ ಐಪಿಎಲ್ ಟೂರ್ನಿ ಕೊರೋನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ ಹೊರತು ರದ್ದಾಗಿಲ್ಲ ಎಂದು ಹೇಳಿದ್ದಾರೆ. ಪರಿಸ್ಥಿತಿ ಹತೋಟಿಗೆ ಬಂದ ನಂತರ ಅರ್ಧಕ್ಕೆ ನಿಂತಿರುವ ಐಪಿಎಲ್ ಟೂರ್ನಿಯನ್ನು ಮುಂದುವರೆಸುತ್ತೇವೆ ಎಂದು ಕ್ರೀಡಾಭಿಮಾನಿಗಳಿಗೆ ರಾಜೀವ್ ಶುಕ್ಲಾ ಸುದ್ದಿಯನ್ನು ನೀಡಿದರು.