ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯ ಪರ್ಸೆಂಟ್ ಕಮಿಷನ್ ಇದೆ: ಸರ್ಕಾರದ ವಿರುದ್ಧ ಬೊಮ್ಮಾಯಿ ಕಿಡಿ
ಬೆಂಗಳೂರು: ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯ ಪರ್ಸೆಂಟ್ ಕಮಿಷನ್ ಇದೆ ಎಂದು ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈ ಸರ್ಕಾರ ಎಲ್ಲದರಲ್ಲಿ ಕಮಿಷನ್, ಭ್ರಷ್ಟಾಚಾರ ನಡೆಸುತ್ತಿದೆ. ಇದರಿಂದ ಜನ ಹೈರಾಣಾಗಿದ್ದಾರೆ. ಅಬಕಾರಿ ಗುತ್ತಿಗೆದಾರರು, ಪಿಡಬ್ಲ್ಯೂಡಿ, ನೀರಾವರಿ ಇಲಾಖೆಯ ಗುತ್ತಿಗೆದಾರರು ಕಷ್ಟ ಅನುಭವಿಸುತ್ತಿದ್ದಾರೆ.
ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಮಧ್ಯಮ ವರ್ಗದವರು ಹೈರಾಣಾಗಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಒಂದು ಸೈಟ್ ತೆಗೆದುಕೊಳ್ಳಲಾಗದ ವಾತಾವರಣವನ್ನು ಸರ್ಕಾರ ನಿರ್ಮಾಣ ಮಾಡಿದೆ. ಎಸ್‌ಸಿ, ಎಸ್ಟಿ ಬೋರ್‌ವೆಲ್‌ಗಳಿಗೂ ಕಮಿಷನ್ ಪಡೆಯುತ್ತಿದ್ದಾರೆ. ಭ್ರಷ್ಟಾಚಾರ ಪದೇ ಪದೇ ಮುನ್ನೆಲೆಗೆ ಬರುತ್ತಿದೆ.
ಇದನ್ನು ಸಿಎಂ ನಿರಾಕರಿಸಿರಬಹುದು, ಅವರಿಗೆ ಹಿಡಿತ ಕೈತಪ್ಪಿರಬಹುದು, ಅವರೇ ಭಾಗಿಯಾಗಿರಬಹುದು ಅಥವಾ ಅದರ ಬಗ್ಗೆ ಮಾತನಾಡಿದರೆ ಅಧಿಕಾರಕ್ಕೆ ಧಕ್ಕೆ ಬರುತ್ತದೆ ಎನ್ನುವ ಭಾವನೆ ಮೂಡಿದೆ. ಸರ್ಕಾರದಲ್ಲಿ ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯ ಪರ್ಸೆಂಟ್ ಕಮಿಷನ್ ಇದೆ. ಇಷ್ಟೇ ಇದೆ ಅಂತ ಹೇಳಲು ಆಗುವುದಿಲ್ಲ. ಆದರೆ, ಕುಮಾರಸ್ವಾಮಿಯವರು ಹೇಳಿರುವುದು ಭ್ರಷ್ಟಾಚಾರ ಮಿತಿಮೀರಿದೆ ಎಂದು ಕಿಡಿಕಾಡಿದರು.