‘ಉಪ್ಪೆನಾ’ ಸೂಪರ್ ಹಿಟ್ ಆಗಿದ್ದೇ ತಡ ಕೃತಿ ಶೆಟ್ಟಿಯ ಹಣೆಬರಹನೇ ಬದಲಾಯಿಸಿಬಿಟ್ಟಿತು. ಇವಳ ಒಂದು ಸಣ್ಣ ನಗು ಲಕ್ಷಾಂತರ ಯುವಕರ ಹೃದಯದ ಬಡಿತವನ್ನು ಹೆಚ್ಚಿಸಿ ಬಿಟ್ಟಿದೆ. ನಾಯಕಿಯಾಗಿ ನಟಿಸಿದ್ದು ಇದುವರೆಗೆ ಒಂದೇ ಚಿತ್ರ. ಆದರೆ ಅದೊಂದೇ ಚಿತ್ರ ಕೃತಿ ಶೆಟ್ಟಿಗೆ ತೆಲುಗು ಚಿತ್ರರಂಗದಲ್ಲಿ ಸಕ್ಕತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದೆ. ದಿನ ಬೆಳಗಾಗುವುದರೊಳಗೆ ಈ ಕರಾವಳಿ ಚೆಲುವೆ ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ಬಿಟ್ಟಳು.
‘ಉಪ್ಪೆನಾ’ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರ ಹೃದಯವನ್ನು ಮುಟ್ಟಿದ ಕೃತಿ ಶೆಟ್ಟಿ ಈಗ ತನ್ನ ಸಂಭಾವನೆಯನ್ನು ಹೆಚ್ಚಿಸಿದ್ದಾಳೆ. ಪ್ರಸ್ತುತ ಚಿತ್ರವೊಂದಕ್ಕೆ ಆಕೆ 80 ಲಕ್ಷ ರೂ.ವರೆಗೂ ಬೇಡಿಕೆಯಿಡುತ್ತಿದ್ದಾಳೆ ಎಂಬ ಸುದ್ದಿ ಟಾಲಿವುಡ್ ಅಂಗಳದಿಂದ ಕೇಳಿಬಂದಿದೆ.
ಈ ನಮ್ಮ ಕನ್ನಡನಾಡಿನ ಚೆಲುವೆ ‘ಉಪ್ಪೆನಾ’ ಮೂಲಕ ತೆಲುಗು ಸಿನಿಮಾ ಪರದೆಯನ್ನು ‘ಪ್ರವಾಹ’ ದಂತೆ ಅಪ್ಪಳಿಸುವ ಮೂಲಕ ಯುವ ಪ್ರೇಕ್ಷಕರನ್ನು ಆಕರ್ಷಿಸಿದ್ದಾಳೆ. ನೋಡಲು ಪಕ್ಕದ ಮನೆಯ ಹುಡುಗಿಯಂತೆ ಕಾಣುವ ಕೃತಿ ತೆಲುಗು ಪ್ರೇಕ್ಷಕರ ಹೃದಯವನ್ನು ಮುಟ್ಟಿದ ತಡ, ಈ ಸಹಜ ಸೌಂದರ್ಯದ ಚೆಲುವೆಯ ಮೇಲೆ ನಿರ್ಮಾಪಕರ ಕಣ್ಣು ದೊಡ್ಡ ಮಟ್ಟದಲ್ಲೇ ಬಿದ್ದಿದೆ. ಹೀಗಾಗಿ ಈಗ ಆಕೆಗೆ ಸರಣಿ ಆಫರ್‌ಗಳು ಬರುತ್ತಿವೆ. ಅಲ್ಲದೆ ಈಗಾಗಲೇ ಹಲವಾರು ಚಿತ್ರಗಳಿಗೆ ಸಹಿ ಹಾಕಿದ್ದಾಳೆ ಮತ್ತು ಇನ್ನೂ ಅನೇಕ ನಿರ್ಮಾಪಕರು ಕೃತಿ ಕಾಲ್ ಶೀಟ್ ಗಾಗಿ ಕ್ಯೂನಲ್ಲಿ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆ ಸಹಜವಾಗಿಯೇ ತನ್ನ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾಳೆ.
ಬಾಲ ಕಲಾವಿದೆಯಾಗಿ ಮತ್ತು ಅನೇಕ ಜಾಹೀರಾತುಗಳಿಂದ ರೂಪದರ್ಶಿಯಾಗಿ ಗುರುತಿಸಿಕೊಂಡ ಕೃತಿ ಶೆಟ್ಟಿ, ‘ಉಪ್ಪೆನಾ’ ಚಿತ್ರದಲ್ಲಿ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾಳೆ ಮತ್ತು ಗ್ಲಾಮರ್ ಗೆ ಹೆಚ್ಚು ಒತ್ತು ಕೊಡದೆ ತನ್ನ ಸಹಜ ಸೌಂದರ್ಯದ ಜೊತೆಗೆ ನೈಸರ್ಗಿಕ ನಟನೆಯೊಂದಿಗೆ ಬೆಸೆದಿರುವ ಕೃತಿ ಶೆಟ್ಟಿಯ ಗುಣ ಸ್ವಭಾವವೇ ಆಕೆಯನ್ನು ತನ್ನ ಪ್ರತಿಸ್ಪರ್ಧಿಗಳಿಂದ ಭಿನ್ನವಾಗಿಸಿದೆ.ಆದಾಗ್ಯೂ, ‘ಉಪ್ಪೆನಾ’ ಚಿತ್ರಕ್ಕಾಗಿ ಅವಳು ಪಡೆದ ಬಹುಮಾನ ಕೇವಲ 6 ಲಕ್ಷಗಳು. ಈ ಚಿತ್ರದ ಹಿಟ್ ನಂತರ, ಅವಳು ಇನ್ನೂ 60 ಲಕ್ಷವನ್ನು ಉಡುಗೊರೆಗಳ ರೂಪದಲ್ಲಿ ಪಡೆದಳು.
ಪ್ರಸ್ತುತ `ಬಂಗಾರರಾಜು` ಚಿತ್ರದಲ್ಲಿ ನಾಗಚೈತನ್ಯ ಎದುರು ನಾಯಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ನಾನಿ ಜೊತೆ ‘ಶ್ಯಾಮ್ ಸಿಂಗ ರಾಯ್`, ಸುಧೀರಬಾಬು ಜೊತೆ `ಆ ಅಮ್ಮಾಯಿ ಗುರಿಂಚಿ ಚಪಾಲಿ’ ರಾಮ್ ಪೋತಿನೇನಿ ಜೊತೆ ಇನ್ನೊಂದು ಹೆಸರಿಡದ ಚಿತ್ರದ ಭಾಗವಾಗಿದ್ದಾಳೆ. ಇದಲ್ಲದೇ ನಿತಿನ್ ಜೊತೆ ‘ಮಾಚರ್ಲಾ ನಿಯೋಜಕವರ್ಗಮ್” ಚಿತ್ರದಲ್ಲಿ ಕೂಡ ನಾಯಕನಟಿಯಾಗಿ ನಟಿಸುತ್ತಿದ್ದಾಳೆ. ಈ ರೀತಿಯ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಈ ಕರಾವಳಿಯ ಮುದ್ದು ಗೊಂಬೆ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಥಟ್ಟನೆ ತನ್ನ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾಳೆ.
ಆಕೆಯ ಸಂಭಾವನೆಯು ಪ್ರಸ್ತುತ 80 ಲಕ್ಷ ರೂ.ಗಳಲ್ಲಿದೆ ಮತ್ತು ಭವಿಷ್ಯದಲ್ಲಿ ಆ ಸಂಭಾವನೆ ಕೂಡ ಹೆಚ್ಚಾಗುವ ಸಾಧ್ಯತೆಯಿದೆ. ಈ ಮುಂದಿನ ವರ್ಷದ ಹೊತ್ತಿಗೆ ಈ ಸಂಭಾವನೆಯ ಮೊತ್ತ ಒಂದು ಕೋಟಿ ದಾಟುವ ಸಾಧ್ಯತೆಗಳಿವೆ. ಅನುಷ್ಕಾ ಶೆಟ್ಟಿ, ರಶ್ಮಿಕಾ, ನಭಾ ನಟೇಶ್ ಸಾಲಿಗೆ ಈಗ ಕೃತಿ ಶೆಟ್ಟಿ ಕೂಡ ಸೇರ್ಪಡೆಯಾಗಿದ್ದು ಕನ್ನಡ ನಟಿಯರ ಮಧ್ಯೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಪೈಪೋಟಿ ನಡೆಯುತ್ತಿದೆ.