ರಾಹುಲ್‍ಗಾಂಧಿ ಅವರು ಎರಡನೇ ಬಾರಿಗೆ ಕರ್ನಾಟಕದ ಚುನಾವಣಾ ಪ್ರಚಾರದಲ್ಲಿಂದು ಭಾಗವಹಿಸಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೊಮ್ಮೆ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ಕಲಬುರ್ಗಿಯಲ್ಲಿಂದು ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಚೌಕಿದಾರ್ ಎಂದು ಹೇಳಿಕೊಂಡು ಪ್ರಧಾನಿ ನರೇಂದ್ರ ಮೋದಿ ಶ್ರೀಮಂತ ಉದ್ಯಮಿಗಳ ಕಾವಲಿಗೆ ನಿಂತಿದ್ದಾರೆ ಎಂದು ಹೇಳಿದರು.
ಚೌಕಿದಾರ್‍ನಿಂದಾಗಿ ನಿರುದ್ಯೋಗಿಗಳು, ಬಡವರು, ಸಣ್ಣ ಉದ್ಯಮಿಗಳು ಹಾಗೂ ರೈತರಿಗೆ ಯಾವುದೇ ಅನುಕೂಲವಾಗಿಲ್ಲ. ಅನಿಲ್ ಅಂಬಾನಿ, ನೀರವ್ ಮೋದಿಯಂತಹ ಶ್ರೀಮಂತ ಉದ್ಯಮಿಗಳಿಗೆ ಲಾಭವಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿದಾಗಲೆಲ್ಲಾ ರೈತರ ಸಾಲ ಮನ್ನಾ ಮಾಡಿದೆ. ಆದರೆ, ಮೋದಿ ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ಬ್ಯಾಂಕುಗಳ ಸಾಲ ಸೌಲಭ್ಯ ಯೋಜನೆ ಸಣ್ಣಪುಟ್ಟ, ಮಧ್ಯಮವರ್ಗದವರ ಬದಲಾಗಿ ಶ್ರೀಮಂತರ ಪಾಲಾಗಿದೆ. ನೋಟು ಅಮಾನೀಕರಣದಿಂದ ಆರ್ಥಿಕ ವ್ಯವಸ್ಥೆಯೇ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‍ನಿಂದ ಮಾತ್ರ ಎಲ್ಲಾ ವರ್ಗದ ಮತ್ತು ಸಮುದಾಯಗಳ ಜನರ ಹಿತರಕ್ಷಣೆ ಸಾಧ್ಯ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಾಗುವುದು. ಮಧ್ಯಮ ವರ್ಗದವರಿಗೆ ಆದಾಯ ಖಾತ್ರಿ ಯೋಜನೆ ಜಾರಿಗೆ ತರಲಾಗುವುದು. ಉದ್ಯೋಗ ಸೃಷ್ಟಿಸಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಶೈಕ್ಷಣಿಕ ಸಂಸ್ಥೆಗಳನ್ನು ಬಲಪಡಿಸಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.