ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ತಂಗಿದ್ದ ವೇಳೆ ಹೊಸಪೇಟೆ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ಈಗ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ಜೈಲಿನಿಂದ ಬಿಡುಗಡೆಯಾಗುತ್ತಲೇ ಕುಟುಂಬ ಸದಸ್ಯರೊಂದಿಗೆ ತಮ್ಮ ಮನೆ ದೇವರ ದರ್ಶನ ಪಡೆದಿದ್ದ ಗಣೇಶ್ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಈ ಘಟನೆ ಆಕಸ್ಮಿಕವಾಗಿ ನಡೆದಿದ್ದು, ಇದರಿಂದಾಗಿ ಕಳೆದ ಎರಡು ತಿಂಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಗಮನ ನೀಡಲು ಸಾಧ್ಯವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದರು.
ಇದೀಗ ಶನಿವಾರದಂದು ಹೊಸಪೇಟೆಯ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಆನಂದ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.ಆನಂದ್ ಸಿಂಗ್ ಮತ್ತು ಅವರ ತಂದೆ ಪೃಥ್ವಿರಾಜ್ ಸಿಂಗ್ ದೇವಸ್ಥಾನದಲ್ಲಿರುವ ಮಾಹಿತಿ ಪಡೆದ ಗಣೇಶ್ ಅಲ್ಲಿಗೆ ತೆರಳಿ ಕ್ಷಮೆ ಯಾಚಿಸಿದ್ದಾರೆಂದು ಹೇಳಲಾಗಿದ್ದು, ಇದನ್ನು ಮುಂದುವರೆಸದಿರುವಂತೆ ಮನವಿ ಮಾಡಿದ್ದಾರೆನ್ನಲಾಗಿದೆ.