ಕೆಂಗೇರಿಗೆ ಮೆಟ್ರೋ ಸಂಚಾರ ಆರಂಭದ ದಿನಾಂಕ ಪ್ರಕಟ

0
83

ನಮ್ಮ ಮೆಟ್ರೋದ ಮೈಸೂರು ರಸ್ತೆ-ಕೆಂಗೇರಿ ವಿಸ್ತರಿತ ಮಾರ್ಗ ಜನರ ಸಂಚಾರಕ್ಕೆ ಆಗಸ್ಟ್‌ನಲ್ಲಿ ಮುಕ್ತವಾಗಲಿದೆ. ಈಗಾಗಲೇ ಬಿಎಂಆರ್‌ಸಿಎಲ್ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗವನ್ನು ಪರಿಶೀಲನೆ ನಡೆಸಿ, ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಬೇಕು, ಜು.24ರಂದು ಸಿಆರ್‌ಎಸ್ ಪರಿಶೀಲನೆ ನಡೆಸಿದೆ. ಬಳಿಕ 15 ದಿನಗಳಲ್ಲಿ ವಾಣಿಜ್ಯ ಸಂಚಾರಕ್ಕೆ ಅನುಮತಿ ಸಿಗಲಿದೆ.

ನಮ್ಮ ಮೆಟ್ರೋ ಪೂರ್ವ ಪಶ್ಚಿಮ ಕಾರಿಡಾರ್‌ನಲ್ಲಿ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ತನಕ ಮೆಟ್ರೋ ಸಂಚಾರ ನಡೆಸುತ್ತಿದೆ. ಈ ಮಾರ್ಗವನ್ನು ಚಲ್ಲಘಟ್ಟ ತನಕ ವಿಸ್ತರಣೆ ಮಾಡಲಾಗಿದೆ.

ಕಾಮಗಾರಿಗೆ ಅಂದಾಜು ವೆಚ್ಚ 1,560 ಕೋಟಿ ರೂ.ಗಳಾಗಿದ್ದು, ಭೂಸ್ವಾಧೀನಕ್ಕೆ 360 ಕೋಟಿ ರೂ. ನೀಡಲಾಗಿದೆ. ಈ ವಿಸ್ತರಿಸಿದ ಮಾರ್ಗದಲ್ಲಿ ಸ್ವಯಂಚಾಲಿತ ಶುಲ್ಕ ಸಂಗ್ರಹ ವ್ಯವಸ್ಥೆಗಾಗಿ ‘ಒನ್‌ ನೇಷನ್‌ ಒನ್‌ ಕಾರ್ಡ್‌’ ಬಳಕೆಗೆ ಪೂರಕ ಕ್ರಮ ಕೈಗೊಳ್ಳಲಾಗಿದೆ. ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ ಹಾಗೂ ಕೆಂಗೇರಿ ಬಸ್‌-ಟರ್ಮಿನಲ್‌ ನಿಲ್ದಾಣದಲ್ಲಿ ಎರಡು ಅಂತಸ್ತಿನ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. ಕೆಂಗೇರಿಯಿಂದ ಚಲ್ಲಘಟ್ಟ ವರೆಗಿನ ವಿಸ್ತರಣೆ ಕಾಮಗಾರಿಯೂ ಪ್ರಗತಿಯಲ್ಲಿದೆ.

ನಾಯಂಡಹಳ್ಳಿ – ಕೆಂಗೇರಿ ಮೆಟ್ರೊ ಮಾರ್ಗ ಆರಂಭವಾದರೆ ಮೈಸೂರು ರಸ್ತೆಯಲ್ಲಿವಾಹನ ದಟ್ಟಣೆ ಕಡಿಮೆಯಾಗಲಿದೆ. ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ಮಾರ್ಗ 7.53 ಕಿ.ಮೀ. ಉದ್ದವಿದೆ. ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್‌ ಟರ್ಮಿನಲ್‌ ಮತ್ತು ಕೆಂಗೇರಿ ಸೇರಿದಂತೆ ಒಟ್ಟು ಆರು ನಿಲ್ದಾಣಗಳಿವೆ.

ಪ್ರತಿನಿತ್ಯ ಸುಮಾರು 75 ಸಾವಿರಕ್ಕೂ ಹೆಚ್ಚು ಜನರು ಪ್ರಯಾಣ ಮಾಡಲಿದ್ದಾರೆ. ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಪ್ರಯಾಣಿಸಲು 56 ರೂ. ದರ ನಿಗದಿಪಡಿಸಲಾಗಿದೆ. ಮೆಟ್ರೋ ಜಾಲದ ಅತಿ ಉದ್ದದ ಮಾರ್ಗ, ಕೆಂಗೇರಿಯಿಂದ ಸಿಲ್ಕ್ ಇನ್ಸ್‌ಟಿಟ್ಯೂಟ್‌ವರೆಗೆ 60 ರೂಪಾಯಿ ದರ ನಿಗದಿಪಡಿಸಲಾಗಿದೆ.

 

ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಕಳೆದ ತಿಂಗಳು ಪ್ರಾಯೋಗಿಕ ಸಮಚಾರವನ್ನು ಆರಂಭಿಸಲಾಗಿದೆ. ಸಿಆರ್‌ಎಸ್ ಪರಿಶೀಲನೆ ಮುಗಿದಿದ್ದು, ಕೆಲವೇ ದಿನಗಳಲ್ಲಿ ವಾಣಿಜ್ಯ ಸಂಚಾರಕ್ಕೆ ಅವಕಾಶ ಸಿಗಲಿದೆ. ಆಗಸ್ಟ್ 15ರಂದು ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here