ಕೆಲ ರಾಜ್ಯಗಳಲ್ಲಿ ಕೊರೊನಾ ಮೂರನೇ ಅಲೆ ಆತಂಕ ಶುರು

0
45

ಕೊರೊನಾ ಎರಡನೇ ಅಲೆಯ ಗಂಭೀರ ಪರಿಣಾಮ ಎದುರಿಸದ ಕೆಲವು ರಾಜ್ಯಗಳಲ್ಲಿ ಈಗ ಕೊರೊನಾ ಸೋಂಕು ಹೆಚ್ಚುತ್ತಿರುವ ಪ್ರವೃತ್ತಿ ಕೊರೊನಾ ಮೂರನೇ ಅಲೆಯ ಆರಂಭಿಕ ಸೂಚನೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಮೀರನ್ ಪಾಂಡಾ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಪ್ರಕರಣಗಳ ವಿಷಯವಾಗಿ ಪ್ರಸ್ತಾಪ ಮಾಡುವಾಗ ಒಟ್ಟಾರೆ ಭಾರತದ ಕೊರೊನಾ ಪ್ರಕರಣಗಳನ್ನು ಇಟ್ಟುಕೊಂಡು ಮಾತಾಡುವುದಕ್ಕಿಂತ ರಾಜ್ಯ ನಿರ್ದಿಷ್ಟ ಅಂಕಿ ಅಂಶಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಏಕೆಂದರೆ ಎಲ್ಲಾ ರಾಜ್ಯಗಳೂ ಏಕರೂಪವಾಗಿರುವುದಿಲ್ಲ ಎಂದು ಹೇಳಿದ್ದಾರೆ.

 

‘ಕೊರೊನಾ ಎರಡನೇ ಅಲೆಯಲ್ಲಿ ದೆಹಲಿ ಹಾಗೂ ಮಹಾರಾಷ್ಟ್ರದ ಕೊರೊನಾ ಪರಿಸ್ಥಿತಿಯಿಂದ ಪಾಠ ಕಲಿತ ಹಲವು ರಾಜ್ಯಗಳು ಕೊರೊನಾ ನಿರ್ಬಂಧಗಳನ್ನು ವಿಧಿಸಲು ಆರಂಭಿಸಿದವು. ಈ ಕಾರಣದಿಂದಾಗಿ ಹಲವಾರು ರಾಜ್ಯಗಳಲ್ಲಿ ಎರಡನೇ ತರಂಗ ತೀವ್ರವಾಗಲಿಲ್ಲ. ಇದೀಗ ಮೂರನೇ ಅಲೆಯ ಲಕ್ಷಣಗಳು ಕಂಡುಬರುತ್ತಿವೆ. ಕೆಲವು ರಾಜ್ಯಗಳಲ್ಲಿ ಹೆಚ್ಚುತ್ತಿರುವ ಸೋಂಕಿನ ಪ್ರಮಾಣ ಮೂರನೇ ತರಂಗವನ್ನು ಸೂಚಿಸುತ್ತಿವೆ’ ಎಂದು ಹೇಳಿದರು.

‘ಪ್ರತಿ ರಾಜ್ಯಗಳು ತಮ್ಮ ರಾಜ್ಯದ ಕೊರೊನಾ ಅಂಕಿ ಸಂಖ್ಯೆಯನ್ನು ಹಾಗೂ ಕೊರೊನಾ ಮೊದಲ ಹಾಗೂ ಎರಡನೇ ತರಂಗದಲ್ಲಿನ ತೀವ್ರತೆಯನ್ನು ಗಮನಿಸಬೇಕು. ಮೂರನೇ ತರಂಗದ ಸಾಧ್ಯತೆಗೆ ಮುನ್ನವೇ ಸಕಲ ಸಿದ್ಧತೆಗಳನ್ನು ನಡೆಸಬೇಕು’ ಎಂದು ಸಲಹೆ ನೀಡಿದ್ದಾರೆ.

ಮೂರನೇ ಅಲೆ ಆತಂಕದ ನಡುವೆ ಶಾಲೆಗಳ ಪುನರಾರಂಭದ ಕುರಿತು ಭಯಪಡುವ ಅಗತ್ಯವಿಲ್ಲ ಎಂದು ಹೇಳಿರುವ ಡಾ. ಪಾಂಡಾ, ‘ನಾಲ್ಕನೇ ರಾಷ್ಟ್ರೀಯ ಸೆರೋ ಸರ್ವೇ, ವಯಸ್ಕರಿಗಿಂತ ಮಕ್ಕಳಲ್ಲಿ ಸೋಂಕಿನ ಸ್ವರೂಪ ಸೌಮ್ಯವಾಗಿರುತ್ತದೆ ಎಂಬುದನ್ನು ಸ್ಪಷ್ಟವಾಗಿ ತೋರಿದೆ. ಹೀಗಾಗಿ ಅನಗತ್ಯ ಭಯ ಪಡುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.

ಶಾಲೆಗಳನ್ನು ತೆರೆಯುವುದು ಸುರಕ್ಷಿತವೇ ಇಲ್ಲವೇ ಎಂದು ಯೋಚಿಸುವುದಕ್ಕಿಂತ ಹೆಚ್ಚು ಮುಖ್ಯವಾದ ವಿಷಯವೆಂದರೆ, ಸೋಂಕಿಗೆ ಸಕಲ ಸಿದ್ಧತೆಗಳನ್ನು ಮಾಡುವುದು. ‘ಶಿಕ್ಷಕರು, ಪೋಷಕರು, ಸಿಬ್ಬಂದಿ, ಬಸ್ ಚಾಲಕರು, ಕಂಡಕ್ಟರ್‌ಗಳು ಎಲ್ಲರೂ ಲಸಿಕೆ ಪಡೆದಿರುವುದು ಅವಶ್ಯಕವಾಗಿದೆ. ಕೊರೊನಾ ನಿಯಮಗಳ ಪಾಲನೆ ಕಡ್ಡಾಯವಾಗಬೇಕಿದೆ’ ಎಂದಿದ್ದಾರೆ. ಎರಡನೇ ಅಲೆಯಲ್ಲಿ ತೀವ್ರತೆ ಕಂಡಿದ್ದ ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯುವುದರಿಂದ ಯಾವುದೇ ಅಪಾಯವಿಲ್ಲ. ಸೂಕ್ತ ಎಚ್ಚರಿಕೆಯೊಂದಿಗೆ ಶಾಲೆಗಳನ್ನು ತೆರೆಯುವುದು ಸೂಕ್ತ ಎಂದಿದ್ದಾರೆ.

 

 

 

 

LEAVE A REPLY

Please enter your comment!
Please enter your name here