ಕೇಂದ್ರಕ್ಕೆ ಹೀಗಂತ ಪ್ರಾಮಿಸ್ ಮಾಡಿದ ವಾಟ್ಸ್ ಆ್ಯಪ್

0
25

ಹೊಸದಿಲ್ಲಿ: ಬಳಕೆದಾರರ ಖಾಸಗಿ ಮಾಹಿತಿ ರಕ್ಷಣೆಗೆ ತಾನು ಬದ್ಧವಾಗಿರುವುದಾಗಿ ವಾಟ್ಸ್‌ಆ್ಯಪ್‌ ಸಂಸ್ಥೆ ಭಾರತ ಸರಕಾರಕ್ಕೆ ಮತ್ತೊಮ್ಮೆ ಭರವಸೆ ನೀಡಿದೆ. ತನ್ನ ನಿಯಮಗಳು ಮತ್ತು ಗೌಪ್ಯತೆ ನೀತಿಯಲ್ಲಿ ಬದಲಾವಣೆ ಮಾಡಿದರು ಕೂಡ ಅದರಿಂದ ಯಾವುದೇ ತಾಪತ್ರಯ ಉಂಟಾಗುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಫೇಸ್‌ಬುಕ್‌ ಜತೆಗೆ ಬಳಕೆದಾರರ ಡೇಟಾ ಹಂಚಿಕೊಳ್ಳುವ ದಿಸೆಯಲ್ಲಿ ವಾಟ್ಸ್‌ಆ್ಯಪ್‌ ತನ್ನ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಮುಂದಾಗಿದೆ. ಹೆಚ್ಚಿನ ಮಾಹಿತಿ ಒದಗಿಸಲು ಇದನ್ನು ಮಾಡಲಾಗುತ್ತಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಆದರೂ ಈ ಬಗ್ಗೆ ಬಳಕೆದಾರರು ಕಳವಳ ವ್ಯಕ್ತಪಡಿಸಿದ ನಂತರ ಪ್ರಸ್ತಾವಿತ ಬದಲಾವಣೆಗಳನ್ನು ಹಿಂತೆಗೆದುಕೊಳ್ಳುವಂತೆ ಸರಕಾರ ವಾಟ್ಸ್‌ಆ್ಯಪ್‌ ಸಂಸ್ಥೆಗೆ ಆದೇಶ ನೀಡಿತ್ತು.

“ಏನೇ ಅಡೆತಡೆಗಳು ಬಂದರೂ ಸರಕಾರದ ಜತೆಗಿನ ಸೌಹಾರ್ದಯುತ ಸಂಪರ್ಕವನ್ನು ನಾವು ಮುಂದುವರಿಸಲು ಇಚ್ಚಿಸುತ್ತೇವೆ. ಸರಕಾರದಿಂದ ನಾವು ಪಡೆದ ಸಂಶಯದ ಪ್ರಶ್ನೆಗಳಿಗೆ ಉತ್ತರಿಸುವ ಅವಕಾಶಕ್ಕಾಗಿ ಆಭಾರಿಯಾಗಿದ್ದೇವೆ. ಭಾರತದಾದ್ಯಂತ ಖಾಸಗಿ ಸಂಭಾಷಣೆಯ ಗೌಪ್ಯತೆಯನ್ನು ನಾವು ಇದುವರೆಗೆ ರಕ್ಷಿಸಿದ್ದೇವೆ. ಮುಂದೆಯೂ ರಕ್ಷಿಸುತ್ತೇವೆ. ಈ ವಿಷಯದಲ್ಲಿ ಕಿಂಚಿತ್ತೂ ಸಂಶಯ ಪಡುವ ಅಗತ್ಯ ಇಲ್ಲ. ವಾಟ್ಸ್‌ಆ್ಯಪ್‌ ಎಲ್ಲರ ಪಾಲಿನ ಸುರಕ್ಷಿತ ವೇದಿಕೆಯಾಗಿ ಉಳಿದಿದೆ ಎಂದು ಖಚಿತಪಡಿಸುತ್ತೇವೆ,” ಎಂದು ವಾಟ್ಸ್‌ಆ್ಯಪ್‌ ವಕ್ತಾರರು ಹೇಳಿದ್ದಾರೆ.

“ಒಂದೇ ಒಡೆತನದ ಫೇಸ್‌ಬುಕ್‌ ಜತೆ ಬಳಕೆದಾರರ ಮಾಹಿತಿ ಹಂಚಿಕೊಳ್ಳುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಖಾಸಗಿ ಮಾಹಿತಿಗಳು ಬೇರೆಡೆಗೆ ಸೋರಿಕೆಯಾಗಿ ಅನಾಹುತವಾಗುತ್ತದೆ ಎನ್ನುವುದೆಲ್ಲ ಕಪೋಲಕಲ್ಪಿತ ಭೀತಿಯಷ್ಟೇ ಆಗಿದೆ. ಈ ವಿಷಯದಲ್ಲಿ ಬಳಕೆದಾರರು ಎತ್ತುವ ಎಲ್ಲಾ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ನೀಡಲು ಸಂಸ್ಥೆ ಸಿದ್ಧವಿದೆ. ದಾರಿ ತಪ್ಪಿಸುವ ತಪ್ಪು ಮಾಹಿತಿಗಳಿಗೆ ಕಿವಿಗೊಡಬೇಡಿ,” ಎಂದು ವಕ್ತಾರರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here